ನನ್ನ ಡೈರಿ - ಸತ್ಯ ಕಥೆ

ನನ್ನ ಡೈರಿ - ಸತ್ಯ ಕಥೆ

ಇದೊಂದು ಸತ್ಯ ಘಟನೆಯನ್ನಾಧಾರಿತ ಆಂಗ್ಲ ಕಥೆ. ಮಿಂಚಂಚೆಯಲ್ಲಿ ಬಂದದ್ದು. ಕನ್ನಡದ ಸಹಜಗೆತೆ ಸ್ವಲ್ಪ ತಿದ್ದುಪಡಿ ಮಾಡಿ ಅನುವಾದಿಸಿದ್ದೇನೆ.
ಜನವರಿ ೨ - ನಿನಗೆ ನಮ್ಮಿಬ್ಬರ ಮೊದಲ ದಿನ ಭೇಟಿ ನೆನಪಿದೆಯ? ಕಾಲೇಜಿನಲ್ಲಿ ಅಂದು ನನ್ನ ಮೊದಲ ದಿನ.  ತಡವಾದರಿಂದ ನಾನು ಅವಸರವಾಗಿ ಓಡಿ ಬರುತ್ತಿದ್ದೆ ನಾನು. ನೀನು ಆಗಷ್ಟೇ ಬೆಲೆಬಾಳುವ ಕಾರೊಂದರಿಂದ ಕೆಳಗಿಳಿದು ಒಳಗಡೆ ಅಡಿಯಿಡುತ್ತಿದ್ದೆ. ನಾನು ಓಡಿ ಬಂದು ನಿನಗೆ ಡಿಕ್ಕಿ ಹೊಡೆದು ನಿನ್ನ ಕೈಯಲ್ಲಿದ್ದ ಪುಸ್ತಕಗಳು ಕೆಳಗಡೆ ಬಿದ್ದವು.  ನಾನು ನಿನ್ನ ಕ್ಷಮೆ ಕೇಳಿದೆ ಆದರೆ ನೀ ನನ್ನೆಡೆಗೆ ಬೀರಿದ ನೋಟ ನನಗೆ ನಿನ್ನ ಮೇಲೆ ಒಂದು ರೀತಿ ತಿರಸ್ಕೃತ ಭಾವನೆ ಹುಟ್ಟಿಸಿತು. ನೀನೊಬ್ಬಳು ಶ್ರೀಮಂತ ಮನೆತನದ ದುರಹಂಕಾರದ ಹುಡುಗಿಯೆಂಬ ಭಾವನೆ ಹುಟ್ಟಿ ಇನ್ನೆಂದೂ ನಿನ್ನನ್ನು ನೋಡಬಾರದೆಂದು ತೀರ್ಮಾನಿಸಿದೆ. ಆದರೆ ನೀನು ನನ್ನದೇ ಕ್ಲಾಸಿನಲ್ಲಿದ್ದೆ.
 
ಮಾರ್ಚ್ ೨೨ - ದಿನಗಳು ಕಳೆದಂತೆ ನಾನು ನಿನ್ನ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದೆ. ನಿನ್ನ ಮೇಲಿದ್ದ ತಿರಸ್ಕೃತ ಭಾವನೆ ಕಡಿಮೆಯಾಗುತ್ತ ಬಂತು. ನೀನೊಂದು ಶ್ರೀಮಂತ ಕುಟುಂಬದಿಂದ ಬಂದ ಹುಡುಗಿಯೇ ಆಗಿದ್ದರೂ ನಿನ್ನಲ್ಲಿ ಅಹಂಕಾರವಿರಲಿಲ್ಲ. ನೀನೊಬ್ಬಳು ಸರಳ ಸಹೃದಯಿ ಸ್ನೇಹಜೀವಿ ಎಂದು ತಿಳಿದುಕೊಂಡೆ. ನಮ್ಮಿಬ್ಬರ ಮೊದಲ ಭೇಟಿಯ ದಿನ ನೀ ನನ್ನೆಡೆಗೆ ಬೀರಿದ ನೋಟಕ್ಕೆ ಕಾರಣ ನೀನು ಅತ್ಯಂತ ಪ್ರೀತಿಯಿಂದ ಬರೆದಿದ್ದ ಕವನದ ಹಾಳೆ ಮೇಲೆ ನಾನು ಕಾಲಿಟ್ಟಿದ್ದೆ. ನಂತರದ ದಿನಗಳಲ್ಲಿ ನಾವಿಬ್ಬರೂ ಪ್ರತಿದಿನ ಊಟದ ಸಮಯದಲ್ಲಿ ಭೇಟಿಯಾದಾಗಲೆಲ್ಲ ನೀನು ಬೇರೆ ಹುಡುಗಿಯರಿಗಿಂತ ಭಿನ್ನ ಎನಿಸುತ್ತಿದ್ದೆ. ನಿನಗೆ ಕನ್ನಡ ಕವನಗಳೆಂದರೆ ತುಂಬಾ ಅಚ್ಚುಮೆಚ್ಚು. ಯಾವಾಗಲೂ ಯಾವುದಾದರೂ ಒಂದು ಕವನ, ಹಾಡನ್ನು ಗುನುಗುನಿಸಿರುತ್ತಿದ್ದೆ. ನಿನ್ನ ಕವನ,ಕವಿತೆಗಳ ಪ್ರೀತಿ ಕಂಡು ನಿನ್ನೆಡೆಗೆ ಹೆಚ್ಚು ಆಕರ್ಷಿತನಾದೆ.
 
ಏಪ್ರಿಲ್ ೫ - ಆದಿನ ನಿನ್ನನ್ನು ಗ್ರಂಥಾಲಯದಲ್ಲಿ ಭೇಟಿ ಆದೆ. ಅಂದು ನೀನು  ಕುವೆಂಪು ಅವರ ಕವನ ಸಂಕಲನವೊಂದನ್ನು ಓದುತ್ತಿದ್ದೆ. ನಿನ್ನ ಆಸಕ್ತಿ ಶ್ರದ್ಧೆ ಕಂಡು ನಾನು ಮೂಕವಿಸ್ಮಿತನಾದೆ.
 
ಮೇ ೫ - ಅಂದಿನಿಂದ ಹೆಚ್ಚು ಕಮ್ಮಿ ದಿನಾಲೂ ಕಾಲೇಜು ಮುಗಿದ ಮೇಲೆ ಗ್ರಂಥಾಲಯದಲ್ಲಿ ಭೇಟಿ ಮಾಡುತ್ತಿದ್ದೆವು. ಕನ್ನಡ ಸಾಹಿತ್ಯದ ಬಗ್ಗೆ ದಿನಾಲೂ ಚರ್ಚಿಸುತ್ತಿದ್ದೆವು. ಕೆಲವೊಮ್ಮೆ ಆ ಚರ್ಚೆ ನಮ್ಮಿಬ್ಬರ ಕಿತ್ತಾಟದಲ್ಲಿ ಕೊನೆಯಾಗುತ್ತಿತ್ತು. ಹಾಗೆ ಕಿತ್ತಾಡಿದಾಗಲೆಲ್ಲ ನೀನು ನನ್ನೊಡನೆ ಮಾತನಾಡುತ್ತಿರಲಿಲ್ಲ. ಆದರೆ ಶುಕ್ರವಾರದ ದಿನ ಮತ್ತೆ ಗ್ರಂಥಾಲಯದಲ್ಲಿ ಭೇಟಿಯಾಗಿ ನಾವು ಕಿತ್ತಾಡಿದ ವಿಷಯ ನೆನಪಿಸಿಕೊಂಡು ಜೋರಾಗಿ ನಕ್ಕು ಮತ್ತೆ ಹೊಸ ಚರ್ಚೆ ಶುರು ಮಾಡುತ್ತಿದ್ದೆವು.
 
ಆಗಸ್ಟ್ ೭ - ನನ್ನೊಳಗಾಗುತ್ತಿದ್ದ ಭಾವನೆಗಳನ್ನು ಏನೆಂದು ಬಣ್ಣಿಸಲಿ. ನೀನು ನನ್ನ ಬಿಟ್ಟು ಬೇರೊಬ್ಬರ ಜೊತೆ ನಗು ನಗುತ್ತ ಮಾತನಾಡಿದರೆ ನನಗೆ ಏನೋ ಒಂದು ರೀತಿ ನೋವುಂಟಾಗುತ್ತಿತ್ತು. ಅದೇ ಅಸೂಯೆ. ಆ ಅಸೂಯೆಗೆ ಕಾರಣ ನನ್ನೊಳಗೆ ಉಂಟಾಗಿದ್ದ ಪ್ರೀತಿ.  ಎಷ್ಟೋ ಬಾರಿ ನಿನ್ನಲ್ಲಿ ನನ್ನ ಪ್ರೇಮ ನಿವೇದನೆ ಮಾಡೋಣ ಎಂದುಕೊಂಡರೂ ಆಗಲಿಲ್ಲ. ಎಲ್ಲಿ ನೀ ನನ್ನ ಪ್ರೇಮವನ್ನು ನಿರಾಕರಿಸಿಬಿಡುತ್ತೀಯೋ ಎಂಬ ಭಯ, ಎಲ್ಲಿ ನಮ್ಮಿಬ್ಬರ ಸ್ನೇಹ ಮುರಿದುಬೀಳುತ್ತದೋ ಎಂಬ ಭಯದಲ್ಲಿಯೇ ಇದ್ದೆ.
 
ಅಕ್ಟೋಬರ್ ೧ - ಅಂದು ನಾನು ತರಗತಿಯ ಆಚೆ ಇದ್ದಾಗ ಯಾರೋ ಒಬ್ಬ ಬಂದು ನೀನು ಕ್ಯಾಂಟೀನ್ ಅಲ್ಲಿ ತಲೆ ಸುತ್ತಿ ಬಿದ್ದೆ ಎಂದು ಹೇಳಿದಾಗ ನನಗೆ ಕಂಗಾಲಾಗಿ ಅಲ್ಲಿ ಬರುವ ಅಷ್ಟರಲ್ಲಿ ನಿನ್ನನ್ನು ambulance ಅಲ್ಲಿ ಕರೆದುಕೊಂಡು ಹೋಗುತ್ತಿದ್ದರು.
 
ಅಕ್ಟೋಬರ್ ೨ - ಅಂದು ತರಗತಿಯಲ್ಲಿ ಕುಳಿತಿದ್ದಾಗ ಆಚೆ ಸಣ್ಣನೆ ಮಳೆ ಬೀಳುತ್ತಿತ್ತು. ಅಷ್ಟರಲ್ಲಿ ಪ್ರಾಧ್ಯಾಪಕರು ಒಂದು ಆಘಾತಕಾರಿ ಸುದ್ದಿ ಹೇಳಿದರು. ಅದೇನೆಂದರೆ ನಿನಗೆ ಕ್ಯಾನ್ಸರ್ ಎಂದು. ಆ ಸುದ್ದಿ ಕೇಳಿದ ತಕ್ಷಣ ಆಚೆ ಬೀಳುತ್ತಿದ್ದ ಸಣ್ಣ ಮಳೆ ನನಗೆ ಕುಂಭದ್ರೋಣ ವಾಗಿ ಕಂಡಿತು. ಮಳೆಯ ಸದ್ದು ಬಿಟ್ಟು ಬೇರೇನೂ ಕೇಳಿಸುತ್ತಿರಲಿಲ್ಲ. ತರಗತಿ ಮುಗಿದ ತಕ್ಷಣ ಆಸ್ಪತ್ರೆಯ ಕಡೆ ಓಡಿ ಬಂದೆ. ನೀನು ICU ನಲ್ಲಿ ಮಲಗಿದ್ದೆ. ನಿನ್ನ ಮುಖ ಬಿಳುಚಿಕೊಂಡಿತ್ತು. ಕೆಲವೇ ಗಂಟೆಗಳ ಕೆಳಗೆ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದಿದ್ದೆ. ನಿನ್ನ ಹಾಸಿಗೆಯ ಪಕ್ಕದಲ್ಲೇ ಅದೆಂತದೋ ಪೆಟ್ಟಿಗೆ ಇಟ್ಟಿದ್ದರು ಅದರಿಂದ ಬಂದ ಪೈಪುಗಳು ನಿನ್ನ ಕೈಗೆ ಚುಚ್ಚಿದ್ದರು. ನನ್ನನ್ನು ನೋಡಿ ನಿಧಾನವಾಗಿ ಕಣ್ಣು ಬಿಟ್ಟ ನೀನು ಇದೇನು ದೊಡ್ಡ ಖಾಯಿಲೆಯಲ್ಲ..ನನ್ನ ಅಪ್ಪ ಅಮ್ಮ ಹೇಳಿದ್ದಾರೆ ನಿನಗೇನೂ ಆಗಿಲ್ಲ ನೀನು ಹುಶಾರಾಗುತ್ತೀಯ ಎಂದು ನೀನಂದೆ. ನನ್ನ ಸಮಾಧಾನಕ್ಕಾಗಿ ನೀನು ಹಾಗೆ ಹೇಳಿದ್ದು ಎಂದು ನನಗೆ ಗೊತ್ತು. ಆದರೆ ನಾನು ಏನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸುಮ್ಮನೆ ಬಲವಂತದ ನಗೆ ನಕ್ಕು ಆಚೆ ಬಂದೆ.
 
ಅಕ್ಟೋಬರ್ ೫ - ಅದೊಂದು ಸಾಧಾರಣ ದಿನ, ಆದರೆ ನನಗೆ ತುಂಬಾ ಅಮೂಲ್ಯವಾದ ದಿನ ಏಕೆಂದರೆ ಅಂದು ನಾನು ನನ್ನ ಪ್ರೀತಿಯನ್ನು ನಿನಗೆ ಹೇಳಬೇಕೆಂದು ಕೊಂಡಿದ್ದೆ. ಸೀದಾ ಆಸ್ಪತೆಗೆ ಬಂದು ನಿನ್ನ ಪಕ್ಕದಲ್ಲಿ ಕುಳಿತು ನಿನ್ನ ಕೈ ಹಿಡಿದುಕೊಂಡು ನಾನು ಹೇಗೆ ಒಂದು ಕವನ ಕವಿತೆಗಳನ್ನು ಇಷ್ಟ ಪಡುವ ಹುಡುಗಿಗೆ ಮನಸೋತೆ ಎಂಬ ಕಥೆಯನ್ನು ಹೇಳಬೇಕಾದರೆ ನನ್ನ ಕಣ್ಣುಗಳು ತೇವಗೊಂಡಿದ್ದವು. ಆದರೆ ಹೆಚ್ಚು ಕಾಲ ನನ್ನ ಅಳುವನ್ನು ತಡೆದುಕೊಳ್ಳಲಾಗಲಿಲ್ಲ. ಮಾತುಗಳು ಗದ್ಗತಿತವಾಗಿ ಗಳಗಳನೆ ಅಳಲು ಶುರುಮಾಡಿಬಿಟ್ಟೆ. ನೀನು ನನ್ನ ತಲೆಯನ್ನು ನಿನ್ನ ಭುಜದ ಮೇಲಿರಿಸಿಕೊಂಡು ಸಮಾಧಾನ ಪಡಿಸಿ ನಿನ್ನ ಪ್ರೀತಿ ನನಗೆ ಅರ್ಥವಾಗುತ್ತೆ ಎಂದೇ.
 
ಅಕ್ಟೋಬರ್ ೨೬ - ಅಂದು ನನ್ನ ಪರೀಕ್ಷೆಯ ಕೊನೆಯ ದಿನ. ಪರೀಕ್ಷೆ ಮುಗಿದ ಕೂಡಲೇ ಆಸ್ಪತ್ರೆಗೆ ಬಂದೆ. ನೀನು ಮಲಗಿದ್ದ ಹಾಸಿಗೆ ಖಾಲಿಯಾಗಿತ್ತು. ನರ್ಸ್ ಹಾಸಿಗೆಯನ್ನು ಸರಿಪಡಿಸುತ್ತಿದ್ದಳು. ಏನೆಂದು ಕೇಳಿದಾಗ ಆಕೆ ನಿರ್ಭಾವುಕಳಾಗಿ ಇಂದು ಬೆಳಿಗ್ಗೆ ನೀನು ತೀರಿಕೊಂಡಿದ್ದಾಗಿ ತಿಳಿಸಿದಳು. ಆಕಾಶವೇ ಕಳಚಿ ಮೇಲೆ ಬಿದ್ದಂತಾಯಿತು. ಸುಮಾರು ಹೊತ್ತು ಹಾಗೆ ನಿಂತು ಬಿಟ್ಟಿದ್ದೆ. ಕಳೆದ ಕೆಲವು ದಿನಗಳಿಂದ ಪರೀಕ್ಷೆಯ ಕಡೆ ಹೆಚ್ಚು ಗಮನ ಕೊಟ್ಟು ನಿನ್ನೊಡನೆ ಇರಲಿಲ್ಲವಾಗಲೆಂದು ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿತು. ಕಡೆ ಪಕ್ಷ ಕಡೆ ಗಳಿಗೆಯಲ್ಲದರೂ ನಿನ್ನೊಡನೆ ಕಳೆಯಲಿಲ್ಲ ಎಂದು ಅಸಹ್ಯ ಹುಟ್ಟಿತು. ಅಂದು ಅದು ಹೇಗೆ ನಾನು ಮನೆಗೆ ಬಂದು ತಲುಪಿದೇನೋ ನನಗೆ ಗೊತ್ತಿಲ್ಲ. ಬೆಳಿಗ್ಗೆ ಎದ್ದು ಕಣ್ಣು ಬಿಟ್ಟಾಗ ನಾನು ನನ್ನ ರೂಮಿನಲ್ಲಿದ್ದೆ. ತಲೆದಿಂಬು ಪೂರ್ತಿ ಒದ್ದೆಯಾಗಿತ್ತು. ಅಂದು ನಿನ್ನನ್ನು ಕಡೆ ಬಾರಿ ನೋಡಲು ಮನೆಗೆ ಬಂದಾಗ ನಿಮ್ಮ ತಂದೆಯವರು ನನ್ನ ಬಳಿ ಹೇಳಿದರು ನೀನು ಸಾಯುವ ಮುನ್ನ ನಾನು ನಿನ್ನ ಹುಟ್ಟು ಹಬ್ಬದ ದಿನ ಕೊಡುಗೆಯಾಗಿ ನೀಡಿದ್ದ ಕವನ ಸಂಕಲನವನ್ನು ಓದುತ್ತ ಪ್ರಾಣ ಬಿಟ್ಟೆ ಎಂದರು.