ಭುಪ್ತ ಎಂಬ ಭೂಪತಿ --ಫಿನ್ಲೆಂಡ್ ಪ್ರವಾಸ ಕಥನ--ಭಾಗ ೧೪
ಫಿನ್ಲಂಡಿನಲ್ಲಿ ಮೊರು ತಿಂಗಳು ಇರುವುದು ಒಂದೇ, ಲಾಸ್ ವೆಗಾಸಿನಲ್ಲಿ ಮೊರು ವರ್ಷವಿರುವುದು ಒಂದೇ. ನಿಮ್ಮ ಮನರಂಜನೆಯನ್ನು ನೀವೇ, ನಮ್ಮದನ್ನು ನಾವೇ ಹುಡುಕಿಕೊಳ್ಳಬೇಕು--ಹೆಲ್ಸಿಂಕಿಯಲ್ಲಿ. ಬೆಳಿಗ್ಗೆ ಸೂರ್ಯೋದಯವಾದ ಕೂಡಲೇ, ಆರು ಗಂಟೆಗೆಲ್ಲ ಮಲಗಿಬಿಡುತ್ತಿದ್ದೆ. ಏಳುವುದು ಮಧ್ಯಾಹ್ನ ಹನ್ನೆರೆಡು ಗಂಟೆಗೆ. ಅಡುಗೆ, ಸ್ನಾನ, ಊಟ, ಸೈಕಲ್, ಛತ್ರಿ, ಕ್ಯಾಮರ ಹಿಡಿದು ಗ್ಯಾಲರಿ-ಮ್ಯೂಸಿಯಂಗಳ ಸುತ್ತಾಟ. ಸಂಜೆ ಕಲಾಶಾಲೆಗಳೆಲ್ಲ ಮುಚ್ಚಿದ ನಂತರ 'ತಾಯ್ದೆಹಳ್ಳಿ' ಹೆಸರಿನ ಸಂಗ್ರಹಾಲಯಕ್ಕೆ ಅಂಟಿದಂತಿದ್ದ ಪಬ್ಬಿನಲ್ಲಿ ಎಲ್ಲ ಕಲಾವಿದರ ಒಕ್ಕೂಟ--ರಾತ್ರಿ ಹನ್ನೆರೆಡು, ಒಂದು ಗಂಟೆಯವರೆಗೂ. ಈಗ ಹೇಳಿ 'ತಾಯ್ದೆಹಳ್ಳಿ' ಅನ್ನುವುದು ಕನ್ನಡ ಪದವಾ ಅಥವಾ ಫಿನ್ನಿಶ್ ಪದವೇ ಎಂದು. ಅದಕ್ಕೂ ಮುನ್ನ, ಕಲಾಕೃತಿಗಳು ನನ್ನ ಬಗ್ಗೆ ಬೇಸರಗೊಂಡಾಗಲೆಲ್ಲ ಗ್ಯಾಲರಿಗಳಿಂದ ಹೊರಗೆ ಬಂದು 'ಕಿಯಾಸ್ಮ' ನಾಮಾಂಕಿತ ಸಂಗ್ರಹಾಲಯದ ಕಾಫಿಹೌಸಿನಲ್ಲಿ, ಅದೇ ಮ್ಯಾನರ್^ಹಿಮ್^ಕಾತುವಿನ ಆ ಕಡೆಗಿದ್ದ ಹೆಲ್ಮಟ್ ಗ್ರಂಥಾಲಯದ (ನೋಡಿ: www.helmut.fi) ಕೆಫೆಯಲ್ಲಿ ಅಥವ ಆದರೆ ಪಕ್ಕಕ್ಕಿದ್ದ ಮುಖ್ಯ ಬಸ್ ನಿಲ್ದಾಣದ ಕೆಫೆಯಲ್ಲಿ ಕಾಫಿ ಕುಡಿವುದು.
ಕಾಫಿ ಇಷ್ಟವಿಲ್ಲದಿದ್ದರೂ ಅಲ್ಲಿ ಕಾಫಿಯನ್ನೇ ಕುಡಿಯುತ್ತಿದ್ದುದಕ್ಕೆ ಕಾರಣ ಚಹಾ ಕೆಟ್ಟದಾಗಿದ್ದರಿಂದ. ತಯಾರಾದ, ರೆಡಿಮೇಡ್ ಕಾಫಿ-ಟೀ ಅಲ್ಲಿ ಸಿಗುತ್ತಿರಲಿಲ್ಲ. ನಾವೇ ತಯಾರಿಸಿಕೊಳ್ಳಬೇಕಾಗುತ್ತಿತ್ತು. ಚಹಾ ಬೆರೆಸಲು ಅಲ್ಲಿ ಬಿಸಿನೀರು ದೊರಕುತ್ತಿತ್ತೆ ವಿನಃ ಕುದಿವ ನೀರಲ್ಲ. ಕಾಫಿಕಪ್ಪುಗಳ ಅಳತೆ ಏನಿಲ್ಲವೆಂದರೂ ಅರ್ಧ ಲೀಟರ್ ಇರುತ್ತಿತ್ತು. ವಿಪರೀತ ಹಾಲನ್ನು ಅದಕ್ಕೆ ನಾನು ಬೆರೆಸಿಕೊಳ್ಳುತ್ತಿದ್ದುದ್ದರಿಂದ, "ಕಾಫಿಯ ಬೆಲೆಯಲ್ಲಿ ಹಾಲು ಕುಡಿಯುತ್ತಿರುವೆಯಲ್ಲ, ಬೆಕ್ಕೇ" ಎಂದು ತಮಾಷೆ ಮಾಡಿದ್ದ ಪರಿಚಿತ ಕೇತನ್ ಭುಪ್ತ ಒಮ್ಮೆ, ಕೇಬಲ್ ಫ್ಯಾಕ್ಟರಿಯಾ 'ಹಿಮಸಾಲಿ' ಎಂಬ ಕೆಫೆಯಲ್ಲಿ ಕುಳಿತು. ಕೇಬಲ್ ಫ್ಯಾಕ್ಟರಿ ಸುಮಾರು ಮುನ್ನೂರು ಕಲಾ ಸ್ಟುಡಿಯೋ, ರೇಡಿಯೋ ಸ್ಟೇಷನ್, ಗ್ಯಾಲರಿಗಳು ಮತ್ತು ಥಿಯೇಟರುಗಳನ್ನು ಒಳಗೊಂಡ, ಮುಂಚೆ ನೋಕಿಯ ಟಿವಿ ಫ್ಯಾಕ್ಟರಿಯಾಗಿದ್ದ, ಅದಕ್ಕೂ ಮುನ್ನ ಕೇಬಲ್ಲುಗಳನ್ನು ತಯಾರಿಸುವ ಫ್ಯಾಕ್ಟರಿಯಾಗಿದ್ದ, ನನ್ನ ಸ್ಟುಡಿಯೋವನ್ನು ಐದನೇ ಮಹಡಿಯಲ್ಲಿ ಹೊಂದಿದ್ದ, ಇಂಗ್ಲಿಷಿನ 'ಯು' ಅಕ್ಷರದ ಆಕಾರದ ಬೃಹತ್ ಕಟ್ಟಡ ಎಂದು ಈ ಮೊದಲೇ ಹೇಳಿದ್ದೇನೆ ಎಂಬ ನೆನಪು, ಅಥವ ನೀವದನ್ನು ಮರೆತುಬಿಟ್ಟಿದ್ದೀರಿ ಅನ್ನುವ ಗ್ಯಾರಂಟಿ ಅಥವ ನಾನೇ ತಪ್ಪು ತಿಳಿದಿರಬಹುದು ಎಂಬ ನಂಬಿಕೆಯ ಪರಿಣಾಮ ಈ ಪುನರಾವರ್ತನೆ. ಕೇತನ್ ಭುಪ್ತ ಎಲ್ಲಿಗೋ, ಯಾವ ದೇಶಕ್ಕೊ ಹೋಗಲು ಹೋಗಿ ಇಲ್ಲಿಗೆ ಬಂದದ್ದನ್ನು ಈಗಾಗಲೇ ಹೇಳಿರುವೆ.
ಚಳಿಪ್ರದೇಶಗಳು ಮತ್ತು ಚಳಿ ದೇಶಗಳಲ್ಲಾಗುವಂತೆ ಹೆಲ್ಸಿಂಕಿಯಲ್ಲಿ ಹೋಟೆಲ್-ಕೆಫೆಗಳು ಜನರಿಗೆ ಎರಡನೇ ಮನೆ ಅಥವಾ ಮೊದಲ ಮನೆ ಇದ್ದ ಹಾಗೆ. ಚಳಿ ತಡೆಯಲು, ಅಥವಾ ಅದನ್ನು ತೊಲಗಿಹಾಕಲು, ಯಾರಿಗೋ ಕಾಯಲು, ಯಾರನ್ನೋ ಕಾಯಿಸಲು, ಅದೊಂದು ದೇವಸ್ಥಾನ. ಹಿಂದೆಲ್ಲ ಇದೇ ಕಾರ್ಯವನ್ನು ಚರ್ಚು, ಇಗರ್ಜಿ, ದೇವಾಲಯ, ಸ್ಥೂಪ ಮುಂತಾದ ಪೂಜಾ ಸ್ಥಳಗಳು ನಿರ್ವಹಿಸುತ್ತಿದ್ದವು. ಇಂದಿನ ಶಾಪಿಂಗ್ ಮಾಲುಗಳು ಅಂದಿನ ದೇವಾಲಯಗಳು. ಬಹುಮುಖಿ ಕಾರ್ಯ ನಿರ್ವಹಿಸುವುದೇ ಅದರ ಆದ್ಯ ಕರ್ತವ್ಯ!
*
"ಕಾಫಿಯ ಕಾಸಿನಲ್ಲಿ ಹಾಲು ಕುಡಿಯುತ್ತೀಯ ಏಕೆ?" ಎಂದು ಕೇಳಿದ್ದ ಕೇತನ್ ಭುಪ್ತ ಭಾರತದಿಂದ ಈ ಹೆಲ್-ಸಿಂಕ್-ಐಗೆ (Hell-sink-I) ಹೇಗೆ ಬಂದು ನೆಲೆ ನಿಂತ ಎಂಬ ಕುತೂಹಲ ನನಗೆ ಇದ್ದೇ ಇತ್ತು, ಎಂದಿನಿಂದಲೂ. ಕೇಳಲು ಆಗದಂತಹ ಅಂತರ್ಮುಖಿಯೂ ಅಲ್ಲ ಆತ. ಆತ ಹೇಳಿದ ಪ್ರವರವನ್ನು ಈಗಾಗಲೇ ಹೇಳಿರುವೆ. "ಒಂದು ಸಂಜೆ ಸಿಗುವ, ಓವರ್ ಅ ಡ್ರಿಂಕ್. ಡ್ರಿಂಕ್ ಓವರ್ ಆದ ಮೇಲೆ ನನ್ನ ಸುದೀರ್ಘ ಕಥೆ ಹೇಳುವೆ" ಎಂದಿದ್ದನಷ್ಟೇ. ಆತ ಆಗಾಗ ಕಿಯಾಸ್ಮ ಸಂಗ್ರಹಾಲಯದಲ್ಲಿ ಏಲಿ ಎಂಬ ಕರಿಯ ಕಲಾವಿದನೊಂದಿಗೆ ಸಿಗುತ್ತಿದ್ದ. ಯಾವುದೋ ಏನ್.ಜಿ.ಓ ಅಂತಹ ಸಾಮಾಜಿಕ ಸಂಸ್ಥೆಯಲ್ಲಿ ಕೆಲಸ, ಕೂರ್ಗಿನ ಜೋಸೆಫನಂತೆ. ಕೆಲಸವಿಲ್ಲದವರೆಲ್ಲ, ನಿರುದ್ಯೋಗಿಗಳೆಲ್ಲ, ತಾವು ಸಮಾಜ ಸೇವೆಯಲ್ಲಿ ತೊಡಗಿದ್ದೇವೆ ಎಂದು ಹೇಳುವುದು ವಾಡಿಕೆ ಎಂದು ತಡವಾಗಿ ನನಗೆ ತಿಳಿದುಬಂದಿತು. ಬಸ್ ಸ್ಟಾಪಿನ ಕೆಫೆಯಲ್ಲಿ ಯಾವಾಗಲೂ ಪರಿಚಿತ ಮೊರೊಕ್ಕೋದವರು, ಆಫ್ರಿಕನ್ ಮುಸಲ್ಮಾನರು--ಎಲ್ಲರೂ ಸಿಗುತ್ತಿದ್ದರು. ಅವರೆಲ್ಲ "ಫಿನ್ಲೆಂಡ್ ಬಿಟ್ಟು ಹೋದರೆ ಸಾಕು ನಾವುಗಳು. ಗೊತ್ತಿಲ್ಲದೇ ಇಲ್ಲಿಗೆ, ಈ ಸ್ಮಶಾನಕ್ಕೆ ಬಂದುಬಿಟ್ಟೆವು" ಎಂದುಕೊಳ್ಳುತ್ತಿದ್ದರು. ಲಂಡನ್, ನ್ಯೂ ಯಾರ್ಕ್, ಪ್ಯಾರಿಸ್, ಬರ್ಲಿನ್ ಅಂತಹ ಕಡೆ ಹೋಗಬೇಕು ಎಂಬುದು ಅವರ ಇಚ್ಛೆ. ಏಕೆಂದರೆ ಅವರೆಲ್ಲ ನಾನು ಈಗಾಗಲೇ ಹೇಳಿದ ಅರ್ಥದ 'ಸಮಾಜ ಸೇವಕ'ರಾಗಿದ್ದರು--ಅಂದರೆ ನಿರುದ್ಯೋಗಿಗಳಾಗಿದ್ದರು. ಎಲ್ಲರೂ ಭವಿಷ್ಯದಿಂದ, ಎಲ್ಲಿಂದಲೋ ಬರಲಿರುವ ಯಾವುದಕ್ಕೋ ನಿರಂತರವಾಗಿ ಕಾಯ್ದುಕುಳಿತವರಂತೆ ಕಾಣುತ್ತಿದ್ದರು.
ಇದ್ದಕ್ಕಿದ್ದಂತೆ ಯಾರೋ ಒಬ್ಬ ನನಗೆ ಕ್ಯಾಮರ ಒಂದನ್ನು ಮಾರಲು ಬಂದುಬಿಡುತ್ತಿದ್ದ. ಮುಂಚಿನ ದಿನದ ಭೇಟಿಯಲ್ಲಷ್ಟೇ ಗೆಳೆಯರಾಗಿದ್ದಂತವರು ಈಗ ಶುದ್ಧ ವ್ಯವಹಾರಸ್ಥರಂತೆ ಮಾತನಾಡುವ 'ಭಾವಪಲ್ಲಟ' ನನ್ನನ್ನು ಗಾಭರಿಗೊಳಿಸಿಬಿಡುತ್ತಿತ್ತು. 'ಪರಿಚಿತರನ್ನು' ನಾವುಗಳು ಶೀಘ್ರವಾಗಿ 'ಸ್ನೇಹಿತರೆಂದು' ಅವಸರದ ತೀರ್ಮಾನಕ್ಕೆ ಪರಿಗಣಿಸಿಬಿಡಲು ಮುಖ್ಯ ಕಾರಣ 'ಎರಡನೇ' ಬಗೆಯವರು ದೊರಕುವ ಕಾಲ ಮುಗಿದುಹೋಗಿರುವುದೇ ಇರಬೇಕು.
ಒಂದು ಚಳಿಗಾಲ ಸಂಜೆ ಬೇಗನೆ ಭೇಟಿಮಾಡಿದೆ ಕೇತನ್ ಭುಪ್ತನನ್ನು. ಫಿನ್ಲೆಂಡಿನ ಜನಪ್ರಿಯ ಅಥವಾ ಗಂಭೀರ ಸಿನೆಮ ನಿರ್ದೇಶಕ ಕೌರಸ್ಮಾಕಿ ಸಹೋದರರಲ್ಲಿ ಒಬ್ಬನಾದ ಅಕಿ ಕೌರಸ್ಮಾಕಿ ನಡೆಸುತ್ತಿದ್ದ ಪಬ್ ಅದು. ಇದನ್ನು ಈಗಾಗಲೇ ತಿಳಿಸಿರುವೆ. ಅದರಲ್ಲಿ ದೊಡ್ಡದಲ್ಲದಿದ್ದರೂ ಆತ್ಮೀಯವೆನಿಸುವ ಪಬ್. ಅದರೊಳಗೆ ಜಗತ್ಪ್ರಸಿದ್ಧವಾದ ಸಿನೆಮ ನಿರ್ದೇಶಕರ ಭಾವ-ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಸತ್ಯಜಿತ್ ರೇ ಅವರಲ್ಲೊಬ್ಬರು. ಅವರನ್ನು ಮಿಕ್ಕು ಬೇರೊಬ್ಬ ಭಾರತೀಯ ನಿರ್ದೇಶಕನ ಭಾವಚಿತ್ರ ಅಲ್ಲೆಲ್ಲೂ ಕಾಣಲಿಲ್ಲ. ನನಗೆ 'ಅವಕಾಶ' ನೀಡಿದ್ದಲ್ಲಿ ರೇ ಜೊತೆಗೆ ರಿತ್ವಿಕ್ ಘಟಕ್ ಹಾಗೂ ಪುಟ್ಟಣ್ಣ ಕಣಗಾಲರ ಭಾವಚಿತ್ರಗಳನ್ನೂ, 'ಕೆಟ್ಟ ಮೋಡಿನಲ್ಲಿದ್ದಿದ್ದರೆ' ರೇ ಬದಲು ಘಟಕ್-ಪುಟ್ಟಣ್ಣನವರನ್ನೂ, ನನ್ನ 'ವೈಯಕ್ತಿಕ ಆಯ್ಕೆ' ಮಾತ್ರವೇ ಮುಖ್ಯವಾಗುವಂತಿದ್ದಲ್ಲಿ ಕೇವಲ ಪುಟ್ಟಣ್ಣ-ಗುರುದತ್ತರ ಭಾವಚಿತ್ರಗಳನ್ನಲ್ಲಿ ಇರಿಸಿಬಿಟ್ಟಿರುತ್ತಿದ್ದೆ. ಅದೊಂದು ಭಯಂಕರ ವಿಕ್ಷಿಪ್ತವಾದ ಪಬ್ ಆಗಿತ್ತು. ಬಹಳ ಪುಟ್ಟದಾಗಿದ್ದು, ತೀರ ಹಳೆಯ ಫಿನ್ನಿಶ್ ಹಾಡುಗಳನ್ನು ಹಾಕುತ್ತಿದ್ದರು, ಜ್ಯೂಕ್ ಬಾಕ್ಸಿನಲ್ಲಿ. ಫಿನ್ನಿಶ್ ಬರದಿದ್ದರೂ ಅದು ಹಳೆಯ ಹಾಡುಗಳೆಂದು ನನಗೆ ತಿಳಿಯುತ್ತಿದ್ದುದು ಅದರ ಮಾಸಿದ ಕಂಠದಿಂದಲೇ. ಜೊತೆಗೆ ವಯಸ್ಸಾದವರು ಮತ್ತು ವಯಸ್ಕರು ಮಾತ್ರ (ಅಥವಾ ಹೆಚ್ಚಾಗಿ) ಅದಕ್ಕೆ ಪ್ರತಿಕ್ರಿಯಿಸುತ್ತಿದ್ದರು ಎಂದು ನನಗನ್ನಿಸುತ್ತಿದ್ದುದಕ್ಕೆ ಕಾರಣ ನನಗೂ ವಯಸ್ಸಾಗುತ್ತಿದೆ ಎಂಬ ತಿಳಿವಳಿಕೆಯೇ ಇರಬಹುದೇನೋ. //