ಕಾಮಧೇನು

ಕಾಮಧೇನು

ಕವನ

ಕಾಮಧೇನು

 


ಬ್ರಹ್ಮನ ಮುಖದಿಂದ ಜನಿಸಿ 
ಸುರಲೋಕವನ್ನು ಸೇರಿ
ನಂದಿಯನು ಶಿವಗಿತ್ತೆ
ಇಷ್ಟಾರ್ಥ ಸುರಪತಿಗೆ
ಒಲಿದವರ ಸಂತೈಸಿ
ಕಾಮನೆಯ ಪೂರೈಸಿ
ಸ್ವರ್ಗ ಸಿರಿ ಘನತೆ ನೀನು
    ಕಾಮಧೇನು ಕಾಮಧೇನು ||೧||

 


ಕಾಮನೆಗೆ ಕೊನೆಯಿಲ್ಲವಲ್ಲ
ನೀ ಕೊಡುವೆ ಎಂತಿವುಗಳೆಲ್ಲ
ಕರೆಕರೆದು ಕೊಟ್ಟರೂ
ಸಾಕೆಂದು ನುಡಿಯದಿರೆ
ಎಂತವರ ಸಂತೈಸಿ
ನಿನ್ನಸುವ ನಿಲಿಸಿರುವೆ
ಹೇಳವ್ವ ಬಲವದೇನು ?
   ಕಾಮಧೇನು ಕಾಮಧೇನು ||೨||

 


ಇಳಿದು ಬಾರವ್ವ
ಭೂಮಿಗಿಂದು 
ನಾವೆಲ್ಲ ಬಳಲಿದೆವು ಎಂದು
ಮನುಕುಲಕೆ ಕರುಣಿಸುತ
ಶಾಂತಿ ಸುಕ್ಷೇಮಗಳ
ವಿಶ್ವಸೋದರಭಾವ
ನೆಲೆಗೊಳ್ಳೆ ವರವೀಯೆ   
ನಂದಿನಿಯ ತಾಯಿ ನೀನು

 ಕಾಮಧೇನು ಕಾಮಧೇನು ||

ಬಾರವ್ವ ಕಾಮಧೇನು
  ಕಾಮಧೇನು ಕಾಮಧೇನು ||೩||


                                                                              - ಸದಾನಂದ