ಜನ ಸಾಮಾನ್ಯರ ಮನದಲ್ಲಿ ಮರೆಯಾದ ಕರ್ನಾಟಕ ಭೂ ಸುದಾರಣೆ ಕಾನೂನಿನ ಮಹತ್ವ
ಕರ್ನಾಟಕ ಭೂ ಸುದಾರಣೆ ಕಾನೂನು ಎಂದರೆ ಮೊದಲಿಗೆ ಅರ್ಥೈಸಿ ಹೇಳುವವರ ಅದೇ ಸಾರ್ ಉಳುವವನಿಗೆ ಭೂಮಿ ಅಂತ ಆ ದೇವರಾಜ್ ಅರಸ್ ಕಾಲದಲ್ಲಿ ಆಗಿತ್ತಲ್ಲ ಅದನ್ನ ಈಗ ಮಾತಾಡುತಾವರೆ ಅನ್ನುವರು. ಅದು ಮೇಲ್ನೋಟದ ಮಾತಾದರೂ ಕಾಯ್ದೆಯ ಇನ್ನೊಂದು ಮುಖವನ್ನು ಸರಿಯಾಗಿ ಜಾರಿ ಮಾಡದೆ ಅಲ್ಲಲ್ಲಿ ಕುಂತು ತಿಂದವರೆ ಕಂದಾಯ ಇಲಾಖೆಯವರು. ವಿಪರ್ಯಾಸವೆಂದರೆ ೦೧-೦೩-೧೯೭೪ ರಿಂದ ಪ್ರಾರಂಬವಾದ ಉಳುವವನಿಗೆ ಭೂಮಿ ನೀಡುವ ಪ್ರಕ್ರಿಯೆ ಇಲ್ಲಿವರೆಗೆ ಸಂಪೂರ್ಣ ಗೊಂಡಿರುವುದಿಲ್ಲ. ಅಂದು ಟ್ರೈಭ್ಯೂನಲ್ ಗಳಿಗೆ ಸದಸ್ಯರಾಗಿ ನೇಮಕ ಗೊಂಡವರು ಬಹುತೇಕರು ಎಂ.ಎಲ್.ಎ ಎಂ.ಪಿ ಗಳಾಗಿದ್ದಾರೆ. ಆದರೆ ಎಷ್ಟೋ ಬಾವಿ ಸದಸ್ಯರಿಗೆ ಈ ಕಾನೂನಿನ ಬಗ್ಗೆ ಅಕ್ಷರ ಸಹ ಗೊತ್ತಿರುವುದಿಲ್ಲ. ಇಲ್ಲಿವರೆಗೆ ಉಳುವವ ಅರ್ಜಿ ಹಿಡಿದು ಕೋರ್ಟು ಅಲೆದರೆ ಅವನ ಹೆಸರಲ್ಲಿ ಅವನಿಗಾಗಿ ಟ್ರೈಭೂನಲ್ ಸದಸ್ಯರಾದವರು ಕೋಟ್ಯಾಧಿಪತಿಗಳಾಗಿ ರಾಜ್ಯವನ್ನು ಆಳಿದ ಉದಾಹರಣೆಗಳು ಇವೆ.
ಕರ್ನಾಟಕದಲ್ಲಿ ಬಂದ ಭೂ ಸುದಾರಣೆ ಕಾನೂನಿಗೆ ೦೧-೦೩-೧೯೭೪ ರಿಂದ ಮಹತ್ವ ಬಂದದ್ದು ನಿಜ. ಆದರೆ ಅದರ ಬಗ್ಗೆ ಅನೇಕರಲ್ಲಿ ಗೊಂದಲ ಇರುವುದು ಒಂದು ಸೋಜಿಗದ ಸಂಗತಿ. ಸಾಮಾನ್ಯ ಜನತೆಯನ್ನು ಬಿಡಿ ಇತ್ತೀಚೆಗೆ ಭೂಸುದಾರಣೆ ಕಾನೂನಿನ ಬಗ್ಗೆ ಕಾನೂನು ತಿಳುವಳಿಕೆಯನ್ನು ಜಿಲ್ಲಾಧಿಕಾರಿಗಳಿಗೆ ಹೇಳಲು ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಕಕ್ಕಾಗಿ ಕರೆದಿರುವ ಬಗ್ಗೆ ತುಮಕೂರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ನೋಡಿದಾಗ ಅಯ್ಯೋ ಕಾಯ್ದೆ ಜಾರಿ ಮಾಡುವವರು ಅಂದಕಾರದಲ್ಲಿ ಇದ್ದಾರಲ್ಲ ಅನ್ನಿಸಿತು. ಕಾನೂನು ಎಂದರೆ ಹಾಗೆ ಬಿಡಿ ಯಾರೂ ಅದರಲ್ಲಿ ಸಂಪೂರ್ಣ ಮೇದಾವಿಗಳಲ್ಲ. ಆದರೆ ಕಾನೂನಿನ ಕನಿಷ್ಟ ಜ್ಞಾನವನ್ನಾದರೂ ಹೊಂದಿರಬೇಕಿರುತ್ತದೆ, ಅನೇಕ ಕಡೆಗಳಲ್ಲಿ ಈಗಲೂ ವ್ಯವಸಾಯ ಜಮೀನನ್ನು ಕೊಳ್ಳುವವರು ಸರಿಯಾದ ತಿಳುವಳಿಕೆ ಪಡೆಯದೆ ಕರ್ನಾಟಕದಲ್ಲಿ ಜಮೀನು ಕ್ರಯಕ್ಕೆ ಪಡೆದು ಸಂಕಷ್ಟಕ್ಕೆ ಸಿಲುಕಿರುವವರು ಇದ್ದಾರೆ. ಅನೇಕ ಅಧಿಕಾರಿಗಳು ಈ ಬಗ್ಗೆ ಬ್ರಷ್ಟತೆಯಲ್ಲಿ ನಿರತರಾಗಿ ಕಾನೂನು ಉಲ್ಲಂಘಿಸಿ ಜನರಿಗೆ ಅನುಕೂಲ ಮಾಡುತ್ತಿದ್ದಾರೆ ಆದರೂ ಅವೆಲ್ಲ ಬಹಿರಂಗಗೊಳ್ಳುತ್ತವೆ. ಪಾರದರ್ಶಕತೆಯ ಈ ಯುಗದಲ್ಲಿ ಎಲ್ಲರೂ ಬೆತ್ತಲೆ ಆಗಲೇ ಬೇಕಾದ ಕಾಲ ಬಂದಿರುವುದರಿಂದ ಉಪ್ಪು ತಿಂದವರು ನೀರು ಕುಡಿಯಲೇ ಬೇಕಾದ ಪರಿಸ್ಥಿತಿ ಬಂದೊದಗಿದೆ.
ಉಪ್ಪು ತಿನ್ನುವ ಮುಂಚೆಯೇ ಈ ಬಗ್ಗೆ ತಿಳಿಯುವುದು ಲೇಸಲ್ಲವೆ, ಅರ್ಥಾತ್ ಕಾರ್ನಾಟಕದಲ್ಲಿ ವ್ಯವಸಾಯ ಭೂಮಿಯನ್ನು ಕೊಳ್ಳುವ ಮುಂಚೆ ಬಹಳ ಜಾಗ್ರತೆ ವಾಹಿಸಬೇಕಾದ ಕಾನೂನಿನ ಬಗ್ಗೆ ಬೆಳಕು ಚೆಲ್ಲಲು ಈ ಕೆಳಗೆ ನಿಮ್ಮ ಮಾರ್ಗದರ್ಶನಕ್ಕೆ ಕಾನೂನಿನ ಮಾಹಿತಿಯನ್ನು ಒದಗಿಸ ಪ್ರಯತ್ನಿಸಿದ್ದೇನೆ. ಇದು ಕೇವಲ ಮಾರ್ಗದರ್ಶನಕ್ಕಷ್ಟೆ ಬಳಸಿ ನಿಮ್ಮ ಸಂಪೂರ್ಣ ದಾಖಲೆಯೊಂದಿಗೆ ಸ್ಥಳೀಯ ವಕೀಲರನ್ನು ಸಂಪರ್ಕಿಸುವುದು ಒಳಿತು.
ಕರ್ನಾಟಕದಲ್ಲಿ ವ್ಯವಸಾಯ ಭೂಮಿಯನ್ನು ಕೊಳ್ಳುವ ಮೊದಲು ಕೊಳ್ಳುವವನು ಕೆಲವು ಅರ್ಹತೆಯನ್ನು ಉಳ್ಲವನಾಗಿರಬೇಕಿರುತ್ತದೆ. ಸದರಿ ಕೊಳ್ಳುವವರಿಗೆ ವ್ಯವಸಾಯೇತರ ಆಧಾಯ ವಾರ್ಷಿಕ ಐದು ವರ್ಷದ ಸರಾಸರಿ ರೂ ೨,೦೦,೦೦೦-೦೦ (ಎರಡು ಲಕ್ಷ ರೂಪಾಯಿ) ಮತ್ತು ಅದಕ್ಕಿಂತ ಹೆಚ್ಚಿಗೆ ಇರಬಾರದು. ಇಲ್ಲಿ ಕೊಳ್ಳುವವರೊಬ್ಬರ ಆಧಾಯ ಮಾತ್ರ ಲೆಕ್ಕಕ್ಕೆ ಬರುವುದಿಲ್ಲ ಅವನು ಮತ್ತು ಅವನ ಕುಟುಂಬದ ಆಧಾಯ ಲೆಕ್ಕ ಹಾಕಲಾಗುತ್ತದೆ. ಒಟ್ಟು ಕುಟುಂಬದ ಆಧಾಯ ಎರಡು ಲಕ್ಷ ವ್ಯವಸಾಯೇತರ ಉದ್ದಿಮೆಯಿಂದ ಹೊಂದಿರುವ ಕುಟುಂಬ ಜಮೀನನ್ನು ಕೊಳ್ಳುವುದಕ್ಕೆ ಮಾತ್ರ ಅನರ್ಹವಲ್ಲ, ಅವರ ಬಳಿ ಜಮೀನು ಹಾಲಿ ಇದ್ದರೆ ಅದನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದು ಕಾನೂನು ಹೇಳುತ್ತದೆ. ಕಲಂ ೭೯ಎ ಈ ಬಗ್ಗೆ ಸ್ವಷ್ಟವಾಗಿದೆ ಈ ಕಲಂ ಪ್ರಕಾರ ೦೧-೦೩-೧೯೭೪ ರಿಂದ ೧೯೯೫ ರವರೆಗೆ ಆಧಾಯ ಪರಿಮಿತಿ ರೂ ೫೦,೦೦೦-೦೦ ಇದ್ದದ್ದನ್ನು ರೂ ೨,೦೦,೦೦೦-೦೦ ಕ್ಕೆ ಏರಿಸಿರುತ್ತಾರೆ. ನಂತರ ಈ ಬಗ್ಗೆ ಯಾವುದೇ ತಿದ್ದುಪಡಿಯಾಗಿರುವುದಿಲ್ಲ. ಸದರಿ ವ್ಯವಸಾಯೇತರ ಆಧಾಯ ರೂ ೨,೦೦,೦೦೦-೦೦ ಮೀರಿರುವವರು ವ್ಯವಸಾಯ ಜಮೀನನ್ನು ಕೊಂಡುಕೊಳ್ಳಲಾಗಲೀ ಹಾಲಿ ಅವರ ಬಳಿ ಇರುವ ಜಮೀನು ಮಾಲೀಕರಾಗಿ ಇಟ್ಟುಕೊಳ್ಳಲಾಗಲೀ ಬರುವುದಿಲ್ಲ. ಅರೆ ಇದೇನ್ರಿ ಹಿಗೆ ಹೇಳ್ತೀರಿ ನಮ್ಮ ಊರಾಗೆ ಈ ಕಾನೂನು ಇಲ್ಲ ಎಂದು ಯಾರೂ ಬೀಗುವ ಅವಶ್ಯಕತೆ ಇಲ್ಲ. ಈ ಕಾನೂನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಏಕರೂಪವಾಗಿ ಅನ್ವಯವಾಗುತ್ತದೆ. ಈ ಕಾನೂನಿನ ಮಿತಿಗೆ ಒಂದು ಬಗೆಯ ಜಮೀನು ಮಾತ್ರ ಹೊರತಾಗಿರುತ್ತದೆ ಅದೆಂದರೆ ಪ್ಲಾಂಟೇಷನ್ ಜಮೀನು. ಪ್ಲಾಂಟೇಷನ್ ಜಮೀನು ಎಂದರೆ ಯಾವ ಜಮೀನಿನಲ್ಲಿ ಏಲಕ್ಕಿ, ಕಾಫಿ, ಟೀ, ರಬ್ಬರ್, ಮೆಣಸ್ಸು, ಬೆಳೆಯುತ್ತಾರೋ ಅಂತಹ ಜಮೀನು ಮಾತ್ರ ಈ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ.
ಇನ್ನೊಂದು ಮಹತ್ತರ ಅರ್ಹತೆ ಎಂದರೆ ಕೊಳ್ಳುವವನು ವ್ಯವಸಾಯಗಾರನಾಗಿರಬೇಕಿರುತ್ತದೆ, ಆತನ ಹೆಸರಲ್ಲಿ ಅಥವ ಆತನ ಮನೆಯವರ ಹೆಸರಿನಲ್ಲಿ ಜಮೀನು ಇದ್ದು ಅವನು ವ್ಯವಸಾಯ ಕುಟುಂಬಕ್ಕೆ ಸೇರಿದವನಾಗಿರಬೇಕಿರುತ್ತದೆ. ಆತ ಬೇರೆ ಯಾವುದೇ ರಾಜ್ಯದಲ್ಲಿ ವ್ಯವಸಾಯಗಾರ ನಾಗಿದ್ದರೂ ಪರವಾಗಿಲ್ಲ ಎನ್ನುತ್ತದೆ ಕಾನೂನು. ಸಂಘ ಸಂಸ್ಥೆಗಳಾಗಲೀ, ಟ್ರಸ್ಟುಗಳಾಗಲೀ, ವಿಧ್ಯಾಸಂಸ್ಥೆಗಳಾಗಲೀ, ವ್ಯಾಪಾರಿ ಸಂಸ್ಥೆ ಮತ್ತು ಕಂಪನಿಗಳಾಗಲೀ ಅವುಗಳ ಪರವಾಗಿಯಾಗಲೀ ವ್ಯವಸಾಯ ಜಮೀನನ್ನು ಕೊಳ್ಳುವ ಹಾಗಿಲ್ಲ ಮತ್ತು ಹೊಂದುವ ಹಾಗಿಲ್ಲ ಎಂದು ಕಲಂ ೭೯ಬಿ ಮತ್ತು ೮೦ ಸ್ವಷ್ಟವಾಗಿ ಹೇಳುತ್ತದೆ. ಹಾಗೊಂದು ವೇಳೆ ಅಂತಹ ಸಂಸ್ಥೆಗಳು ಜಮೀನು ಖರೀದಿಸಲು ಇಚ್ಚಿಸಿದಲ್ಲಿ ಕಲಂ ೧೦೯ ರಲ್ಲಿ ತಿಳಿಸಿರುವ ಪ್ರಕ್ರಿಯೆ ಅನ್ನು ಅನುಸರಿಸಿ ನಮೂನೆ ೧೫ಎ ಅರ್ಜಿ ಅನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಿ ಸರ್ಕಾರದಿಂದ ಅನುಮತಿಯನ್ನು ಪಡೆಯಬೇಕಿರುತ್ತದೆ ಮತ್ತು ಅಂತಹ ಅನುಮತಿಯನ್ನು ಗೆಜೆಟ್ ಪ್ರಕಟಣೆ ನೀಡಿ ನೀಡುವುದು ಕಡ್ಡಾಯವಾಗಿರುತ್ತದೆ.
ವ್ಯವಸಾಯಗಾರನಲ್ಲದವನು ವ್ಯವಸಾಯವನ್ನು ಮಾಡಲಾಗದೆ? ಎಂಬ ಪ್ರಶ್ನೆ ಹಲವರಲ್ಲಿದೆ, ವ್ಯವಸಾಯಗಾರ ನಲ್ಲದವನು ಆಂದರೆ ಆತನ ಹೆಸರಿನಲ್ಲಿ ಆಗಲೀ ಆತನ ಮನೆಯವರ ಹೆಸರಿನಲ್ಲಿ ಆಗಲೀ ಪಹಣಿ ಇಲ್ಲದಿದ್ದಾಗ, ಆತನಿಗೆ ಮತ್ತು ಆತನ ಕುಟುಂಬಕ್ಕೆ ವಾರ್ಷಿಕ ಆಧಾಯ ೨ ಲಕ್ಷ ರೂ ಮಿತಿಯಲ್ಲಿದ್ದಾಗ ಮಾತ್ರ ಅನುಮತಿಯನ್ನು ಸ್ಥಳೀಯ ಉಪವಿಭಾಗಾಧಿಕಾರಿಗಳಿಂದ ಪಡೆಯಬಹುದಾಗಿರುತ್ತದೆ. ಆಧಾಯ ಮಿತಿ ಹೆಚ್ಚಿಗೆ ಇರುವವರು ಸಂಸ್ಥೆಯೊಂದನ್ನು ರಚಿಸಿಕೊಂಡು ಅಥವ ವಯುಕ್ತಿಕವಾಗಿ ನಮೂನೆ ೧೫ಎ ಅರ್ಜಿಯನ್ನು ಸಲ್ಲಿಸಿ ತೋಟಗಾರಿಕೆ, ಅಗ್ರೋ ಇಂಡಸ್ಟ್ರೀಗೆ ಮತ್ತು ಪುಷ್ಪೋತ್ಪಾದನೆಗೆ ಮಾತ್ರ ಜಮೀನನ್ನು ಕೊಳ್ಳಲು ಅನುಮತಿ ಪಡೆಯಬಹುದಿರುತ್ತದೆ. ಇಲ್ಲಿ ಜಮೀನಿಗೆ ಮಾತ್ರ ಈ ಕಾನೂನು ಅನ್ವಯವಾಗುವುದನ್ನು ಮಾಫಿ ಮಾಡಲಾಗುತ್ತದೆ ಹೊರತು ವ್ಯಕ್ತಿಗೆ ಅನುಮತಿ ನೀಡುವುದಿಲ್ಲ. ಕೊಳ್ಳುವ ಪ್ರತಿ ಸಾರಿಯಲ್ಲೂ ಅನುಮತಿಯ ಅವಶ್ಯಕತೆ ಇರುತ್ತದೆ. ಜಮೀನು ನಿರ್ದಿಷ್ಟ ಮಿತಿಯಲ್ಲಿ ಹೊಂದಿರಬೇಕು ಮತ್ತು ಅದಕ್ಕೆ ಮಾತ್ರ ಅನುಮತಿಯನ್ನು ಕೊಡಬಹುದು ಎಂಬ ಕಾನೂನು ಇರುತ್ತದೆ.
ಜಮೀನನ್ನು ಕೊಳ್ಳುವುದಕ್ಕೆ ಬರುವುದಿಲ್ಲ ಎಂದಿರಿ ಬೇರೆ ರೀತಿಯಲ್ಲಿ ನಾವು ಬರೆಸಿಕೊಂಡರೆ ವಿಲ್ಲ್ ಮುಖೇನ ಪಡೆದರೆ? ಎಂಬ ಹತ್ತು ಹಲವು ಪ್ರಶ್ನೆಗಳು ಪ್ರತಿ ದಿನವೂ ಈಮೇಲ್ ನಲ್ಲಿ ಬರುತ್ತಿರುತ್ತವೆ. ಇಲ್ಲಿ ಕೊಳ್ಳುವುದಕ್ಕೆ ಮಾತ್ರ ಈ ಅರ್ಹತೆಯನ್ನು ಕಾನೂನು ನಿಗದಿ ಮಾಡಿಲ್ಲ. ಬೋಗ್ಯದ ರೂಪದಲ್ಲಿ ಸ್ವಾಧೀನ ಪಡೆಯಲು, ಬಾಡಿಗೆ ರೂಪದಲ್ಲಿ ಸ್ವಾಧೀನ ಪಡೆಯಲು, ದಾನದ ರೂಪದಲ್ಲಿ ಸ್ವಾಧೀನ ಪಡೆಯಲು, ಪವತಿ ವಾರಸ್ಸು ಮೂಲಕ ಸ್ವಾಧೀನ ಪಡೆಯಲು ಈ ಮೇಲೆ ಹೇಳಿದ ಅರ್ಹತೆ ಇರಬೇಕಿರುತ್ತದೆ. ಹಾಗೆ ನೀವು ಪವತಿ ವಾರಸ್ಸು ಅಲ್ಲದೆ ಬೇರೆ ರೀತಿಯಲ್ಲಿ ಸ್ವಾಧೀನವನ್ನು ಕಾನೂನು ಅನುಮತಿ ಇಲ್ಲದೆ ಪಡೆದರೆ ಸದರಿ ಜಮೀನು ಸರ್ಕಾರದ ಮುಟ್ಟುಗೋಲಿಗೆ ಒಳಪಡುತ್ತದೆ, ನಿಮಗೆ ಯಾವುದೇ ಪರಿಹಾರ ಇಲ್ಲ. ಪವತಿ ವಾರಸ್ಸು ಮುಖೇನ ಸ್ವಾಧೀನವನ್ನೇನೋ ಪಡೆಯಬಹುದು ಆದರೆ ಆಧಾಯ ಮಿತಿ ಹೆಚ್ಚಿದ್ದಲ್ಲಿ ಅದನ್ನು ಸರ್ಕಾರಕ್ಕೆ ಬಿಟ್ಟು ಕೊಡಬೇಕಿರುತ್ತದೆ. ಇದಕ್ಕೆ ನಿಮಗೆ ದೊರೆಯುವ ಪರಿಹಾರ ಶೇಖಡ ೧೦ ರಿಂದ ೧೫ ರಷ್ಟು ವಾರ್ಷಿಕ ಜಮೀನಿನ ವರಮಾನದ ಮೊತ್ತ ಅಥವ ಗರಿಷ್ಟ ರೂ ೨ ಲಕ್ಷದ ವರೆಗೆ ಮಾತ್ರ ಅದು ದೇವನಹಳ್ಳಿಯಲ್ಲಿ ಇರಲಿ ದೂರದ ಕೊಂಪೆಯಲ್ಲಿ ಇರಲಿ ಅಷ್ಟೆ. ಇದು ಉಳ್ಳವರಿಂದ ಇಲ್ಲದವರಿಗೆ ಹಂಚಲು ಮಾಡಿರುವ ಸಾಮಾಜಿಕ ನ್ಯಾಯವನ್ನು ನೀಡುವ ಕಾನೂನು. ನಿಮಗೆ ವ್ಯವಸಾಯೇತರ ಆಧಾಯ ಎರಡು ಲಕ್ಷ ಮೀರಿದ್ದರೆ ನಿಮಗೆ ಕೃಷಿ ಜಮೀನು ಏಕೆ ಬೇಕು, ಹಾಗೆ ನಿಮ್ಮ ಬಳಿ ಚೈತನ್ಯವಿದ್ದರೆ ಪ್ಲಾಂಟೇಷನ್ ಹೊಂದಿ ಎಂದು ಲೆಕ್ಕಾಚಾರವಾಗಿ ರೂಪಿಸಿರುವ ಕಾನೂನು ಈ ಭೂ ಸುದಾರಣೆ ಕಾನೂನು.
ಇನ್ನೊಂದು ಮಹತ್ತರ ವಿಚಾರವೆಂದರೆ. ಒಂದು ಕುಟುಂಬ ಎಷ್ಟು ಜಮೀನು ಹೊಂದಬಹುದು ಸಾವಿರಾರು ಎಕರೆ ಹೊಂದಬಹುದೆ. ಈ ಗಾಗಲೇ ಹೇಳಿರುವಂತೆ ಸಾವಿರಾರು ಎಕರೆ ಪ್ಲಾಂಟೇಷನ್ ಜಮೀನು ಹೊಂದಬಹುದೆ ಹೊರತು ವ್ಯವಸಾಯ ಜಮೀನನ್ನು ಕರ್ನಾಟಕದಲ್ಲಿ ೧೦ ಎಕರೆ ಯಿಂದ ೧೦೮ ಎಕರೆ ಮಾತ್ರ ಒಂದು ಕುಟುಂಬ ಹೊಂದಬಹುದಿರುತ್ತದೆ. ಈ ರೀತಿಯ ಇತಿಮಿತಿ ನಿರ್ದರಿಸಲು ಕರ್ನಾಟಕದಲ್ಲಿ ನಾಲ್ಕು ದರ್ಜೆ ಜಮೀನು ಇರುತ್ತದೆ ಎ,ಬಿ,ಸಿ,ಡಿ ಕಂದಾಯ ಎಷ್ಠಿದೆ ಎಂಬ ಮಾನದಂಡದ ಅನುಸಾರ ಎ ದರ್ಜೆ ಸರ್ಕಾರಿ ನೀರಾವರಿ ಹೊಂದಿರುವ ವಾರ್ಷಿಕ ಎರಡು ಬೆಳೆ ಹೊಂದಿರುವ ಜಮೀನು ೧೦ ರಿಂದ ೧೩ ಎಕರೆ ಮಾತ್ರ ಒಂದು ಕುಟುಂಬ (ಐದು ಜನರಿರುವ) ಹೊಂದಬಹುದಿರುತ್ತದೆ. ಒಬ್ಬರು ಕುಟುಂಬ ಸದಸ್ಯರು ಹೆಚ್ಚಿದ್ದರೂ ೨ ಎಕರೆ ಯಿಂದ ೨.೬ ಎಕರೆ ಹೆಚ್ಚುವರಿ ಹೊಂದಬಹುದಿರುತ್ತದೆ. ಈ ರೀತಿಯಾಗಿ ಕುಟುಂಬ ಸದಸ್ಯರ ಲೆಕ್ಕದಲ್ಲಿ ಒಂದು ಕುಟುಂಬ ಗರಿಷ್ಟ ಒಟ್ಟು ೨೦ ರಿಂದ ೨೬ ಎಕರೆ ವರೆಗೆ ಮಾತ್ರ ಎ ದರ್ಜೆ ಜಮೀನು ಹೊಂದಬಹುದಿರುತ್ತದೆ. ಹಾಗೆಯೇ ಬಿ ದರ್ಜೆ ೧೫ ರಿಂದ ೨೦ ಮತ್ತು ಸದಸ್ಯರ ಲೆಕ್ಕದಲ್ಲಿ ಒಂದು ಕುಟುಂಬ ಗರಿಷ್ಟ ೩೦ ರಿಂದ ೪೦ ಎಕರೆ, ಸಿ ದರ್ಜೆ ಜಮೀನು ೨೫ ರಿಂದ ೩೦ ಎಕರೆ ಮತ್ತು ಸದಸ್ಯರ ಲೆಕ್ಕದಲ್ಲಿ ಒಂದು ಕುಟುಂಬ ಗರಿಷ್ಟ ೫೦ ರಿಂದ ೬೦ ಎಕರೆ, ಡಿ ದರ್ಜೆ ಜಮೀನು ೫೪ ಎಕರೆ ಮತ್ತು ಸದಸ್ಯರ ಲೆಕ್ಕದಲ್ಲಿ ಒಂದು ಕುಟುಂಬ ಗರಿಷ್ಟ ೧೦೮ ಎಕರೆ ವರೆಗೆ ಮಾತ್ರ ಒಂದು ಕುಟೂಂಬ ಜಮೀನು ಹೊಂದಬಹುದಿರುತ್ತದೆ.
ಮೇಲೆ ಹೇಳಿದ ಸೀಲಿಂಗ್ ಲಿಮಿಟ್ ವ್ಯಕ್ತಿಗಳಿಗೆ ಆಯಿತು. ಅದು ವ್ಯವಸಾಯ ಜಮೀನಿನ ಸೀಲಿಂಗ್ ಲಿಮಿಟ್ ಎನ್ನುವುದು ಮರಿಯಬಾರದು, ಇದು ಕಲಂ ೬೩ ರಿಂದ ೬೭ ರವರೆಗೆ ಬರುತ್ತದೆ. ಸಂಸ್ಥೆಗಳಿಗೂ ಪ್ರತ್ಯೇಕ ಸೀಲಿಂಗ್ ಲಿಮಿಟ್ ಹೇಳಲಾಗಿದೆ. ಸಾರ್ವಜನಿಕ ಟ್ರಸ್ಟ್, ಶಿಕ್ಷಣ ಸಂಸ್ಥೆ, ಧಾರ್ಮಿಕ ಸಂಸ್ಥೆ, ಧರ್ಮದತ್ತಿ ಸಂಸ್ಥೆ, ಸೊಸೈಟಿ ಗಳು ವ್ಯವಸಾಯ ಜಮೀನನ್ನು ಹೊಂದಲು ಅನುಮತಿ ಪಡೆದಿದ್ದರೆ ೨೦ ಎಕರೆ ಯಿಂದ ೨೧೬ ಎಕರೆ ವರೆಗೆ ವಿವಿದ ವರ್ಗಗಳ ಜಮೀನು ಹೊಂದಬಹುದಿರುತ್ತದೆ, ಆದರೆ ಅಂತಹ ಸಂಸ್ಥೆಗಳು ಸದರಿ ಜಮೀನಿನ ಆಧಾಯದಿಂದ ತಮ್ಮ ಸಂಸ್ಥೆಯ ದ್ಯೇಯೋದೇಶಗಳಿಗೆ ಮಾತ್ರ ಉಪಯೋಗಿಸಬೇಕಿರುತ್ತದೆ. ಖಾಸಗಿ ಟ್ರಸ್ಟ್ ವ್ಯಕ್ತಿಯ ಹಾಗೆಯೇ ಸೀಲಿಂಗ್ ಲಿಮಿಟ್ ಹೊಂದಿರುತ್ತದೆ.
ಈ ರೀತಿಯ ಮಹತ್ತರ ಕಾನೂನು ಜಾರಿ ಮಾಡಲು ಕೇಂದ್ರ ಸರ್ಕಾರದ ಅಡಿಯಲ್ಲಿ ಒಂದು ಸಮಿತಿಯು ಕಾರ್ಯನಿರತವಾಗಿದೆ. ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆದು ಎಲ್ಲಾ ಜಿಲ್ಲೆಯ ಪಹಣಿ ಗಣಕೀಕೃತವಾಗಿರುವುದು ಭೂಸುದಾರಣೆಯನ್ನು ಮಾಡಲು ಮತ್ತು ಪಾರದರ್ಶಕತೆಯಿಂದ ಯಾರ ಬಳಿ ಎಷ್ಟು ಜಮೀನಿದೆ ಎಂದು ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಎಂಬುದು ಈಗ ಆಡಳಿತದಲ್ಲಿ ಜ್ಞಾನೋದಯವಾಗುತ್ತಿದೆ.
ರಾಜಕಾರಣಿಗಳು ಎಂ.ಎಲ್.ಎ ಮತ್ತು ಎಂ.ಪಿಗಳು ತಮ್ಮ ಆಸ್ತಿಯ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ, ಮಾನ್ಯ ಲೋಕಾಯುಕ್ತರಿಗೆ ನೀಡಿದ್ದಾರೆ, ಅವುಗಳನ್ನು ಒಮ್ಮೆ ಗಮನಿಸುತ್ತ ಬನ್ನಿ ಎಲ್ಲರೂ ಕರ್ನಾಟಕ ಭೂಸುದಾರಣಾ ಕಾನೂನು ಉಲ್ಲಂಘಿಸಿರುತ್ತಾರೆ. ಈ ವಿಚಾರದಲ್ಲಿ ಏಕೆ ಪ್ರಾಯಾಸ ಪಡುತ್ತೀರಿ ಮೊದಲಿಗೆ ನಿಮ್ಮ ನಿಮ್ಮ ಕ್ಷೇತ್ರದ ರಾಜಕಾರಣಿಗಳ ಆಸ್ತಿಗಳನ್ನು ಮುಟ್ಟೊಗೋಲಿಗೆ ಅರ್ಜಿಯನ್ನು ಸಲ್ಲಿಸಿದರೆ ಜನರಿಂದಲೇ ಭೂಸುದಾರಣೆ ಆಗುವುದು ನಿಶ್ಚಿತ. ಈ ಬಗ್ಗೆ ದಲಿತ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು. ಏಕೆಂದರೆ ಭೂ ಸುದಾರಣೆಯಲ್ಲಿ ಮುಟ್ಟುಗೋಲಿಗೆ ಒಳಪಡುವ ಜಮೀನು ಪೈಕಿ ಶೇಖಡ ೫೦ ಬಾಗ ದಲಿತರಿಗೆ ವಿತರಣೆಯಾಗಬೇಕು. ಇನ್ನುಳಿದಿದ್ದು ಭೂರಹಿತರಿಗೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಯಡಿಯೂರಪ್ಪನವರೋ ಕುಮಾರಸ್ವಾಮಿಗಳೋ, ಇವರಿಬ್ಬರೂ ರಾಜಿಯದರೆ ಸಾರ್ವಜನಿಕರು ಕಾನೂನು ಜಾರಿ ಮಾಡಲು ಅರ್ಜಿ ಸಲ್ಲಿಸಿ ಉಪವಿಭಾಗಾದಿಕಾರಿಗಳ ಮುಂದೆ ಪ್ರಕ್ರಿಯೆ ಚಾಲನೆ ನೀಡಲು ಯಾವ ಕಾನೂನು ಅಡ್ಡಿ ಇಲ್ಲ. ಉಚಿತವಾಗಿ ಪಹಣಿಯನ್ನು http://bhoomi.karnataka.gov.in/home.aspx ಈ ವೆಬ್ಸೈಟಲ್ಲಿ ನೋಡಬಹುದು ಮತ್ತು ರಾಜಕಾರಣಿಗಳ ಆಸ್ತಿ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್ ನಲ್ಲಿ ವೀಕ್ಷಿಸಬಹುದು ಪರಿಶೀಲಿಸಿ ದೂರು ನೀಡಬಹುದು. ಸುದಾರಣೆಗೆ ಕಾನೂನು ಇದೆ ಆದರೆ ಜಾರಿಯಾಗಲು ಮಾತ್ರ ಜನತೆ ನಿದ್ದೆಯಿಂದ ಮೇಲೇಳಬೇಕಿದೆ ಅಷ್ಟೆ.