ಕನ್ನಡ ಕಸ್ತೂರಿ

ಕನ್ನಡ ಕಸ್ತೂರಿ

ಕವನ

  ಕನ್ನಡ ಕಸ್ತೂರಿ

 

 


ಘನ ಕದಂಬ ಗಂಗ ಚಾಲುಕ್ಯ ರಾಷ್ಟ್ರಕೂಟ ಹೋಯ್ -
- ಸಳರ ಘನತೆಗೊಂಡು ಮೆರೆದು
ವಿಜಯನಗರದರಸುಗಳ ವೈಭವದೊಳು ಹೊಳಪುಗೊಂಡು 
ಹಲ್ಮಿಡಿ ಹಂಪೆ ಬಾದಾಮಿಯಮರ ಚಿತ್ರಗಳ
ಬೇಲೂರು ಬೆಳಗೊಳ ಮೈಸೂರಿನ ಸಿರಿಗಳ
ಐಹೊಳೆಗಳ ಮಡಿಲಿಂದ ಹೊಳೆಯಾಗಿ ಹರಿದಿದೆ
ಕನ್ನಡ ಕಸ್ತೂರಿ    ಕನ್ನಡ ಕಸ್ತೂರಿ    ಕನ್ನಡ ಕಸ್ತೂರಿ   ||1||

 

 


ಪಂಪ ರನ್ನ ನೃಪತುಂಗ ಹರಿಹರ ರಾಘವಾಂಕ
ವ್ಯಾಸವಾಲ್ಮೀಕಿ ಕುವರ -
- ರೊಡಲ ಕಾವ್ಯಧಾರೆ ಮೊಳೆತು ದಾಸವಾಣಿಯಿಂದ ಗಳಿತು
ಶರಣ ವಚನ ಸರ್ವಜ್ಞರ ಅನುಭಾವಗಳಿಂದ ಬೆಳೆದು
ಶಾಸ್ತ್ರಜ್ಞರ ಅಭಿಮತ ಜನಪದವೂ ಸನುಮತ
ಗಾಯನ ಸಂಭ್ರಮದಿಂದ ಎಲ್ಲೆಡೆಯೂ ತುಂಬಿದೆ
ಕನ್ನಡ ಕಸ್ತೂರಿ    ಕನ್ನಡ ಕಸ್ತೂರಿ    ಕನ್ನಡ ಕಸ್ತೂರಿ   ||2||

 

 


ಲೋಕ ಪಾವನೆಯರಾದ ಕೃಷ್ಣೆ ಕಾವೇರಿಯರನು
ತುಂಗಭದ್ರೆ ಕೂಡಿಕೊಂಡು
ವರದೆ ಕಾಳಿ ಶರಾವತಿ ಭೀಮೆ ಕಪಿಲೆ ಅಘನಾಶಿನಿ 
ಅರ್ಕಾವತಿ ನೇತ್ರಾವತಿ ಹೇಮಾವತಿ ಕುಮದ್ವತಿ
ತುಂಬಿ ಹರಿವ ನದಿಗಳಿಂದ ನಳನಳಿಸುವ ಹೊಲಗಳ
ಹಸಿರಾಗಿ ಉಸಿರಾಗಿ ಹೊರಹೊಮ್ಮುತ ಬಂದಿದೆ
ಕನ್ನಡ ಕಸ್ತೂರಿ    ಕನ್ನಡ ಕಸ್ತೂರಿ    ಕನ್ನಡ ಕಸ್ತೂರಿ   ||3||



                                                                                                              -  ಸದಾನಂದ   

Comments