ತಮ್ಮಣ್ಣನವರ ದಿನಚರಿ

ತಮ್ಮಣ್ಣನವರ ದಿನಚರಿ

ಪ್ರೇಮಕವಿ ತಮ್ಮಣ್ಣನವರು ತಮ್ಮ ದಿನಚರಿಯನ್ನು ನನ್ನ ಬಳಿ ಹೇಳಲು ಶುರು ಮಾಡಿದರು."ಅದೊಂದು ಕಾಲವಿತ್ತು...ಒಂದ್ನಿಮಿಷ..." ಎಂದು, ಎರಡು ಗ್ಲಾಸ್ ತೆಗೆದು ನಮ್ಮ ನಡುವೆ ಇಟ್ಟು, ಬಾಟಲು ಬಗ್ಗಿಸಿದರು. ಕೂಡಲೇ "ಸಾರ್, ನಾನು ಕುಡಿಯುವುದಿಲ್ಲ" ಅಂದೆ.

"ನೋಡೋ, ನಾನೂ ಸಹ ಕುಡಿಯದವರಿಗೆ ಒತ್ತಾಯ ಮಾಡುವುದಿಲ್ಲ. ಆದರೆ ಒಬ್ಬನೇ ಕುಡಿಯುವುದು ಸನ್ನಡತೆಯಲ್ಲ. ಅದಕ್ಕೇ ನಿನ್ನ ಎದುರು ಸಹ ಲೋಟ ಇಟ್ಟಿರುವೆನು. ಕುಡಿಯುವ ಮೊದಲು ನೀನು ಲೋಟ ಎತ್ತಿ 'ಚಿಯರ್ಸ್' ಅನ್ನು. ನಂತರ ನಾನೇ ಎರಡೂ ಲೋಟನೂ ಖಾಲಿ ಮಾಡುವೆ. ಆಯಿತಾ" ಅಂದರು. ನನಗೆ ಸಮಾಧಾನವಾಯಿತು. ನನ್ನ ಲೋಟವೆತ್ತಿ 'ಚಿಯರ್ಸ್' ಅಂದು ಕೆಳಗಿಟ್ಟೆ. ತಕ್ಷಣ ಅದನ್ನೆತ್ತಿ ಕುಡಿದು "ರಾತ್ರಿ ಹೊತ್ತು ಈ ದ್ರವ ಹೊಟ್ಟೆ ಸೇರಿದರೆ ಪ್ರೇಮ ಕವಿತೆಗಳ ನದಿಯನ್ನೇ ಹರಿಸುವೆ" ಅಂದರು. "ಸಾರ್, ತಮ್ಮ ಕವಿತೆಗಳಿಗೆ ತಮ್ಮ ಹೆಂಡತಿ ಸ್ಫೂರ್ತಿಯಲ್ಲವಾ?" ಅಂದೆ. "ಹೆಂಡತಿ ಸ್ಫೂರ್ತಿ,ಹೆಂಡ ಅತಿ ಸ್ಫೂರ್ತಿ..ಹ್ಹ..ಹ್ಹ" ಅಂದರು. (ಕದ್ದ ಜೋಕು). "ನನ್ನ ದಿನಚರಿ ಬಗ್ಗೆ ಹೇಳುತ್ತಿದ್ದೆ ಅಲ್ಲವಾ? ರಾತ್ರಿ ಬರೆದ ಕವಿತೆಗಳನ್ನು ಬುದ್ಧಿಜೀವಿ ಚೀಲದಲ್ಲಿ ತುಂಬಿಸಿ ಬೆಳ್ಳಂಬೆಳಗ್ಗೆ ಹೊರಡುತ್ತಿದ್ದೆ. ಮಾರ್ಕೆಟ್ ಬಳಿಯ ಟೀ ಅಂಗಡಿಯೆದುರು ನಿಂತು ಒಮ್ಮೆ ಸುತ್ತಲೂ ನೋಡುವೆ. ಪರಿಚಿತರು ಯಾರೂ ಕಾಣಿಸದಿದ್ದರೆ, ಒಂದು ಟೀಗೆ ಆರ್ಡರ್ ಕೊಟ್ಟು, ಅಂಗಡಿಯೆದುರು ಓರೆಯಾಗಿ ನೇತು ಹಾಕಿರುವ ಪತ್ರಿಕೆಗಳನ್ನು, ಓರೆಯಾಗಿ ನಿಂತು ಚಾ ಕುಡಿಯುತ್ತಾ ಓದುವೆ. ನ್ಯೂಸ್‌ನ ಕುರಿತು ಅಲ್ಲಿಯೇ ಒಂದು ಕವಿತೆ ಹೊಸೆದು ಹೇಳುವಾಗ,ಆತ ವಾರಪತ್ರಿಕೆ ಓದಲು ಕೊಡುತ್ತಿದ್ದ. ಹಾಗೇ ತರಕಾರಿ ಅಂಗಡಿಗಳಿಗೂ ಒಂದು ರೌಂಡ್ ಹೋಗುವೆ. ನಾನು ಆದಿನ ಬರೆದ ಕವಿತೆಗಳನ್ನು ತೆಗೆಯುವ ಮೊದಲೇ 'ಕವಿಗಳು ಬಂದರು' ಅಂದು ಗೌರವದಿಂದ ತರಕಾರಿಗಳನ್ನು ಚೀಲಕ್ಕೆ ತುಂಬಿಸುತ್ತಿದ್ದರು. ಎಷ್ಟೊಂದು ಗೌರವವಿತ್ತು ಅಂದರೆ ಹಣ ಸಹ ತೆಗೆದುಕೊಳ್ಳುತ್ತಿರಲಿಲ್ಲ. ಈರುಳ್ಳಿಯನ್ನು ಗೋಣಿಯಲ್ಲಿ ಸುರಿದು,ಆಪ್‌ಲ್‌ನ್ನು ಗಾಡಿಯಲ್ಲಿ ನೀಟಾಗಿ ಜೋಡಿಸಿಟ್ಟಿರುವ ಬಗ್ಗೆ "ಚಂದುಳ್ಳಿ ಈರುಳ್ಳಿ-ನಿನಗೂ ಕಾಲ ಬರ್ತೈತಿ" ಅಂತ ಕವಿತೆ ಆ ಕಾಲದಲ್ಲೇ ಬರೆದಿದ್ದೆ. ಆ ಕೊನೆಯಲ್ಲಿರುವ ಕೆಂಪು ಪುಸ್ತಕ ತೆಗಿ" ಅಂದರು.

ಕೊಯ್ಯದೇ ಕಣ್ಣೀರು ಬರಿಸುತ್ತಿರುವ ಈರುಳ್ಳಿ ಬಗ್ಗೆ ಕವನ ಕೊಯ್ಯುವುದನ್ನು ತಪ್ಪಿಸಲು, " ಸರ್, ನೀವು ಕವಿಸಮ್ಮೇಳನಗಳಲ್ಲಿ ತಮ್ಮ ಕವಿತಾವಾಚನ ಯಾಕೆ ಮಾಡಬಾರದು?" ಎಂದೆ. " ನಾನೂ ಒಮ್ಮೆ ಹೆಸರು ಕೊಟ್ಟಿದ್ದೆ. ೫೦ ಜನ ಚಪ್ಪಾಳೆ ತಟ್ಟುವವರನ್ನೂ ಕರಕೊಂಡು ಬನ್ನಿ ಅಂತ ನನಗೆ ಮಾತ್ರ ಹೇಳಿದರು. ಕರಕೊಂಡೂ ಹೋಗಿದ್ದೆ. ಅವರು ತಪ್ಪು ಲೆಕ್ಕ ಮಾಡಿ ಕವಿತಾ ವಾಚನಕ್ಕೆ ಅವಕಾಶನೇ ಕೊಡಲಿಲ್ಲ."

"ಛೇ..ಛೇ..ಅನ್ಯಾಯ! ಬಿಡೀ ಸರ್..ಅವರಿಗೇ ಒಳ್ಳೆಯ ಕವನ ಕೇಳುವ ಭಾಗ್ಯವಿಲ್ಲ" ಎಂದೆ. ದುಃಖ ಮರೆಯಲು ಲೋಟ ಕೈಗೆತ್ತಿದರು.ಖಾಲಿಯಾಗಿತ್ತು. ನಾನು ಬಾಟಲಿಂದ ಎರಡೂ ಲೋಟಕ್ಕೆ ಹಾಕುತ್ತಾ ಇರುವಾಗ ಅವರು ರಾಗವಾಗಿ ಕವಿತೆ ಹೇಳಿದರು.

-ಇಳಿದು ಬಾ ರಮ್ಮೇ....ಇಳಿದು ಬಾ.... (ಇದೂ ಕದ್ದ ಕವಿತೆಯೇ..)

ಕೋಡಿಯಾಗಿ ಹರಿದು ಬಾ........

ಬಾಟಲೊಳಗಿಂದ ನುಸುಳಿ ಬಾ... (ಪರವಾಗಿಲ್ಲವೇ..)

ಆಹಾ ಮಕ್ಕಳ ಮೂಡ್ ಚೇಂಜ್ ಆಗುತ್ತದೆ... (ಮಕ್ಕಳನ್ನು ಈ ಹಾಡಲ್ಲಿ ತರುವುದು ಸರಿಯಲ್ಲ..)

ಎರಡು ದಿನ ಹಾಯಾಗಿದ್ದು ಬಾ..( ಪುನಃ ಪ್ರಾಸಕ್ಕೆ ಬಂದರು..)

@%#&**&%$#@&*##@@.. (ಛೇ..ಈ ಜನಕ್ಕೆಕುಡಿದದ್ದು ನೆತ್ತಿಗೇರಲು ಶುರುವಾಗಿದೆ..) ಎಂದು ಯೋಚಿಸುತ್ತಾ ಲೋಟವನ್ನೆತ್ತಿ 'ಚಿಯರ್ಸ್' ಹೇಳಲು ನೋಡುತ್ತೇನೆ............................................................

ಕೊನೆಯ ಎರಡು+ ಲೈನ್ ಕವಿತೆ ಹೇಳಿದಾಕೆ ನನ್ನಾಕೆ!!!!!

-ಗಣೇಶ.

ಇದಕ್ಕೆ ಸಂಬಂಧಿಸಿದ ಮೊದಲೆರಡು ಬ್ಲಾಗ್‌ಗಳು-

ಸಾಹಿತಿ ಸಹವಾಸ- http://sampada.net/blog/%E0%B2%97%E0%B2%A3%E0%B3%87%E0%B2%B6/23/12/2010/29671

ತೆರೆಯೋ ಬಾಗಿಲನು- http://sampada.net/blog/%E0%B2%97%E0%B2%A3%E0%B3%87%E0%B2%B6/26/12/2010/29710

 

Rating
No votes yet

Comments