ದುಬಾರಿಯಲ್ಲಿ ದೈವಪೂಜೆ!
ರಾಜ್ಯ ಮುಜಾರಾಯಿ ಇಲಾಖೆಯ ನಂ. ಒನ್, ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿನ ಸೇವಾದರ ವರ್ಷದಲ್ಲಿ ದುಪ್ಪಟ್ಟು, ದಶಕದಲ್ಲಿ ಎಂಟು ಪಟ್ಟು ಏರಿರುವ ಬಗ್ಗೆ “ವಿಜಯ ಕರ್ನಾಟಕ”, ಮುಖಪುಟ ವರದಿ ಪ್ರಕಟಿಸಿದೆ. ಈ ಕಳಕಳಿ, ಸಾಂಪ್ರದಾಯಕ ಆಸ್ತಿಕರಿಗೆ ಸಹಜ, ಸಮಂಜಸ ಎಂದೂ ಅನ್ನಿಸಬಹುದು. ಆದರೆ ಪದಾರ್ಥಗಳ ಧಾರಣೆವಾಸಿ ಸಂಕಷ್ಟ ಸಹ ಅಷ್ಟೇ ಸಹಜ-ಸಮಂಜಸವಾಗಿ ಊರ್ಧ್ವಮುಖಿಯಾಗಿದ್ದು ಅಡಳಿತ ಮಂಡಲಿ ಅದನ್ನು ಸರಿದೂಗಿಸಬೇಕಲ್ಲಾ?! ಬಾಹ್ಯ ಕ್ರೀಯನ್ನೇ ಅಧ್ಯಾತ್ಮವಾಗಿ ಬೊಬ್ಬಿರಿವ ಎಲ್ಲ ಧರ್ಮತಾಣಗಳ ತಾಕಲಾಟವೂ ಇದೇ.
‘ದೇವರೇ, ಸಂಕಷ್ಟದಿಂದ ಕಾಪಾಡು’ ಎಂದು ಭಕ್ತ ಸಮೂಹವೇನೋ ಆರ್ತವಾಗಿ ಭಗವಂತನಲ್ಲಿ ಮೊರೆಯಿಟ್ಟೀತು. ಆದರೆ ಈ ಸಮೂಹದ ಬಿಡಿ ಬಿಡಿ ಭಕ್ತರು ಅವರವರ ವೈಯಕ್ತಿಕ ದುಃಖ-ದುಮ್ಮಾನಗಳಲ್ಲಿ ತಲ್ಲೀನರಾಗಿ ಆರ್ತರಾಗಿರುವವರೇ ಹೊರತು ಸಾಮುದಯಕ, ಸಾಮಾಜಿಕ ದುಃಖಗಳಾದ ಭ್ರಷ್ಟಾಚಾರ, ದುರಾಡಳಿತ, ತತ್ಪರಿಣಾಮವಾದ ಬೆಲೆಯೇರಿಕೆಗಳಿಂದ ಬಿಡುಗಡೆಗಾಗಿ ಸ್ವಾಮಿಯಲ್ಲಿ ಸಾಮೂಹಿಕ ಮೊರೆಯಿಡುವ ಸ್ಪೃಹೆಯಾದರೂ ಅವರಿಗಿರುವುದೇ? ಅಷ್ಟು ಪ್ರಭುದ್ಧತೆ-ಪ್ರಜ್ಞಾವಂತಿಕೆಗಳು ಸರ‍್ವಜನಿಕರಲ್ಲಿರುತ್ತಿದ್ದಲ್ಲಿ, ನಮ್ಮ ಪ್ರಜಾಸತ್ತೆ ಇಷ್ಟು ಕಂಗಾಲಾಗಿ ಕಣ್ಣು-ಕಣ್ಣು ಬಿಡಬೇಕಾಗುತ್ತಿತ್ತೇ?!
ದೇವರ ಆರಾಧನೆಯಲ್ಲಿ ನಾವು ಕಾಣಬೇಕಾದ್ದು ಆನಂದವನ್ನು; ಆಸೆಗಳ ಈಡೇರಿಕೆಯನ್ನೋ, ಸಂಕಷ್ಟುಗಳು ಮಂಜಿನಂತೆ ಕರಗಿಹೋಗುವ ಪವಾಡ-ಚಮತ್ಕಾರಗಳನ್ನೋ ಅಲ್ಲ. ಪ್ರತಿ ಆರಾಧನೆಗೆ ಅದರದರದೇ ಸೌಂದರ‍್ಯದ ಆವರಣ-ಮಜಲುಗಳಿರುತ್ತವೆ. ಪೂಜೆ, ಸಮಾನ್ಯ ನಮರಂಜನೆಯ ಪರಮ ಪಾರಮಾರ್ಥಿಕತೆಯ ಸಾಧನ! ದುಡ್ಡುಳ್ಳವರು, ದುರಹಂಕಾರದಿಂದಲ್ಲ, ಸಹಜ ಶ್ರದ್ಧೆಯಿಂದ, ಕೈಂಕರ‍್ಯ ಮಾಡಿಸಲಿ; ತಾವು ಪ್ರಾಮಾಣಿಕವಾಗಿ ಆನಂದ ಅನುಭವಿಸಲಿ; ಭಾವುಕ ಭಕ್ತಗಣಕ್ಕೂ ಅದು ಲಭಿಸುವಂತೆ ಮಾಡಲಿ. ದುಡ್ಡಿಲ್ಲದವರು, ಹರಕೆಗಾಗಿ ಸಾಲ-ಸೊಲ ಮಾಡಿ, ಆ ಶೂಲಬಾಧೆಯಿಂದ ಚಡಪಡಿಸುತ್ತಾ ಮಾಡಿಸುವ ಪೂಜೆಯಲ್ಲಿ, ಸೌಂದರ‍್ಯವನ್ನನುಭವಿಸುವ ನಿರಾಳವೂ ಇರುವುದಿಲ್ಲ; ತನಗೆ ಲಭ್ಯವಿಲ್ಲದ ಸೌಭಾಗ್ಯವನ್ನು, ಮುಂದೆಂದೋ ಈ ಪೂಜೆ, ದೊರಕಿಸಿಕೊಡುವ ಗ್ಯಾರಂಟಿಯೂ ಇರುವುದಿಲ್ಲ!
ಆದ್ದರಿಂದ ಹಣದುಬ್ಬರದಿಂದಾಗಿ ಏರಿರುವ ”ಪೂಜಾರೇಟಿ”ನ ಬಗ್ಗೆ ಬಡಭಕ್ತರು ತಲೆ ಚಚ್ಚಿಕೊಳ್ಳಬೇಕಾದ ಆವಶ್ಯಕತೆ ಇರುವುದಿಲ್ಲ; (ದೇವರು ನಮಗೆ ಕೊಡದಿದ್ದನ್ನು ಅವನಿಗೆ ಕೊಡಲಾಗದ್ದಕ್ಕೆ ಸಂಕಟವೇಕೆ?) ಹಾಗಂತ ಸಾಂಪ್ರದಾಯಕ ಪೂಜಾ ಸಾಮಗ್ರಿಯ ಗಾತ್ರ-ಗುಣಮಟ್ಟಗಳಲ್ಲಿ ರಾಜಿ ಮಾಡಿಕೊಂಡು “ಪೂಜಾನಂದ”ವನ್ನು ಮೊಟಕುಗೊಳಿಸಬೇಕಾದ್ದೂ ಇಲ್ಲ. ಪೂಜಾರಿಗಡಣಕ್ಕೆ ಕೊಟ್ಟರೂ, ಕೊಡದಿದ್ದರೂ, ದೇವರು ಯಾರನ್ನು ಹೇಗೆ ಕಾಪಾಡಬೇಕೊ ಹಾಗೇ ಕಾಪಾಡುತ್ತಾನೆ. ಆಸ್ತಿಕತೆಗೆ ಈ ನಂಬಿಕೆ ಸಾಕು!