ಆಂಟಿ-ಉಪದ್ರವ ಆಯುಧ (ಆಉಆ) ಸಂಶೋಧನೆ

ಆಂಟಿ-ಉಪದ್ರವ ಆಯುಧ (ಆಉಆ) ಸಂಶೋಧನೆ

ಬೊಗಳೂರು, ಜ.25- ಉಪಗ್ರಹಗಳನ್ನು ಕೊಲ್ಲುವ ಆಯುಧವೊಂದನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಕೊನೆಗೂ ಒಪ್ಪಿಕೊಂಡಿರುವುದು ಇಡೀ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲವರು ಹರ್ಷಚಿತ್ತರಾಗಿದ್ದರೆ, ಮತ್ತೆ ಕೆಲವರು ರೋಷಾಕುಲರಾಗಿದ್ದಾರೆ. (bogaleragale.blogspot.com)

ಚೀನಾದ ಈ ಆಯುಧವು ಹೊಸದಾದ ಆಯುಧ ಸಂಶೋಧನೆಗೆ ಹೇತುವಾಗಿದೆ. ಅದುವೇ ಆಂಟಿ-ಉಪದ್ರವ ಆಯುಧ.

ಹತಾಶ ಮತ್ತು ಪೀಡಿತ ಸಂಶೋಧಕರು ಕಂಡುಹುಡುಕಿರುವ ಆಂಟಿ-ಉಪದ್ರವ (ನಿವಾರಣೆ) ಆಯುಧ (ಆಉಆ)ಕ್ಕೆ ಈಗಾಗಲೇ ಭಾರತದಲ್ಲಿ ಭರ್ಜರಿ ಮಾರುಕಟ್ಟೆ ಸೃಷ್ಟಿಯಾಗಿದ್ದು, ಮೇಡ್ ಇನ್ ಚೀನಾ ಲೇಬಲ್ ಇರುವ ಈ ಉಪಕರಣ ಯಾವಾಗ ಭಾರತಕ್ಕೆ ಕಾಲಿಡುತ್ತದೆ ಎಂದು ಕುಕ್ಕುರುಗಾಲಿನಲ್ಲಿ ಕೂತು ಕಾಯುತ್ತಿದ್ದಾರೆ.

ಪಕ್ಕದ ಮನೆಯಲ್ಲಿದ್ದುಕೊಂಡು ನಮ್ಮ ಮನೆ ವಿಷಯಗಳಿಗೆ ಮೂಗು ತೂರಿಸುತ್ತಾ ಧರ್ಮಕ್ಷೇತ್ರವಾಗಿರುವ ಮನೆಯನ್ನು ಯುದ್ಧಕ್ಷೇತ್ರವಾಗಿಸುವ ಮಾದರಿಯ ಉಪದ್ರವಗಳನ್ನು ನೀಡುತ್ತಿರುವವರನ್ನು ಹದ್ದುಬಸ್ತಿನಲ್ಲಿರಿಸಲು ಈ ಉಪಕರಣ ಸೂಕ್ತ ಪ್ರಯೋಜನಕ್ಕೆ ಬರಲಿದೆ ಎಂದು ಬೊಗಳೆ ರಗಳೆ ಬ್ಯುರೋ ಜಾಹೀರಾತು ಪ್ರಕಟಿಸಲು ನಿರ್ಧಸಿರಿಸಿರುವುದು ಚೀನಾಕ್ಕೆ ಹರ್ಷ ತಂದಿದೆ ಎಂದು ಚೀನಾದ ಅಧಿಕಾರಿ ಚಿನ್ ಮಿನ್ ಕುನ್ ಕೈಂಯ್ಯ (ಅಕ್ಷರಗಳನ್ನು ಬರೆಯುವುದು ಇಲ್ಲಿ ಸರಿಯಾಗುತ್ತಿಲ್ಲವಾದುದರಿಂದ ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್‌ಗೆ ಕೈಯಲ್ಲಿ ಪತ್ರ ಬರೆದು ರವಾನಿಸಲಾಗಿದೆ) ಎಂಬವರು ಹೇಳಿದ್ದಾರೆ.

ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಆಧುನೀಕರಣದ ಪ್ರಭಾವಕ್ಕೆ ಸಿಲುಕಿಕೊಂಡಿರುವ ಆಂಟಿ-ಉಪದ್ರವಗಳು ಜಾಸ್ತಿಯಾಗುತ್ತಿರುವುದರಿಂದ ಮನೆ ಮನೆಗಳಲ್ಲಿ "ಇಲ್ಲಿ ಆಂಟಿ-ಉಪದ್ರವ ಆಯುಧವಿದೆ, ಎಚ್ಚರಿಕೆ" ಎಂಬ ಬೋರ್ಡ್‌ಗಳನ್ನು ತೂಗುಹಾಕಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿರುವ ಬ್ಯುರೋ ಒದರಿಗಾರರು, ಆ ಬೋರ್ಡನ್ನು ಕದಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಇದರ ಹಿಂದೆ ಉಪದ್ರವ ನೀಡುವವರ ಕೈವಾಡವಿದೆಯೇ ಅಥವಾ ಉಪದ್ರವ ಸಹಿಸಲಾರದೆ ಹೇಗಾದರೂ ಮಾಡಿ ತಮ್ಮ ಮನೆಗೂ ಈ ಬೋರ್ಡ್ ತಗುಲಿಸಬೇಕು ಎಂದುಕೊಂಡಿರುವ ಅವಿವಾಹಿತರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

Rating
No votes yet