ಹೊಟ್ಟೆ ಕೆರೆಯ ಮೇಲಿನ ಕಟ್ಟೆ....

ಹೊಟ್ಟೆ ಕೆರೆಯ ಮೇಲಿನ ಕಟ್ಟೆ....

ನನ್ನ ಅಕ್ಕನ ಮಗಳ ಮದುವೆಗೆ ಎಂದು ಧಾರವಾಡಕ್ಕೆ ಹೋಗಿದ್ದೆ. ಅಲ್ಲಿ ಕೆಲ ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವ ದೃಶ್ಯ ನನಗೆ ಕಾಣಿಸಿತು. ನಾನು ಹೋದೊಡನೆಯೆ, ನನಗೆ ಅಮ್ಮ, ಇವರು ನನ್ನ ಮಾವನ ಮಗ ಎಂದು ಪರಿಚಯ ಮಾಡಿಕೊಟ್ಟರು. ಈಗ ನಾನು ಅವ್ರಿಗೆ ನಮಸ್ಕಾರ ಮಾಡಬೇಕೋ ಅಥವಾ ಅವರು ನನಗೆ ನಮಸ್ಕಾರ ಮಾಡಬೇಕೋ ಎಂಬುದು ಸೋಜಿಗದ ಸಂಗತಿ. ಕಡೆಗೆ ಅವರೇ ನನಗೆ ನಮಸ್ಕಾರ ಮಾಡಲು ಬಂದರು. ಅದಕ್ಕೆ ನನ್ನ ಅಮ್ಮ ಲೇ ಅವನು ದೊಡ್ಡವನು ಕಣೋ ನೀನೆ ನಮಸ್ಕಾರ ಮಾಡು ಎಂದು ಫರ್ಮಾನು ಹೊರಡಿಸಿದರು. ನಾನು ಮನಸಿನಲ್ಲಿ ಇದೊಳ್ಳೇ ಸಂಪ್ರದಾಯ ಎಂದು ಬಗ್ಗಿ ನಮಸ್ಕರಿಸಿದೆ.

ಆಮೇಲೆ ನಾನು ಅಮ್ಮನಿಗೆ, ನಾನು ಯಾರಿಗೂ ನಮಸ್ಕಾರ ಮಾಡುವುದಿಲ್ಲ... ನನಗೆ ಯಾರು ಮಾಡುವುದು ಬೇಡ ಎಂದು ಹೇಳಿದೆ. ಅದು ಹೇಗೆ? ಆಗುತ್ತೆ ನೀನು ನಮಸ್ಕಾರ ಮಾಡಲೇ ಬೇಕು ಎಂದರು. ನಮಸ್ಕಾರ ಮಾಡಿ ಮಾಡಿ ಸಾಕಾಗಿತ್ತು. ಹೊಟ್ಟೆ ತಾಳ ಅನ್ನುವುದಕ್ಕಿಂತ ತಮಟೆ ಬಾರಿಸುತಿತ್ತು. ಕೆಲವೊಮ್ಮೆ ಹಸಿವು ಆದಾಗ ನಾದಮಯವಾಗಿ ಹಾಡುವುದು ಕೂಡ, ಸಧ್ಯ ಆಕಾಶವಾಣಿಯವರಿಗೆ ಗೊತ್ತಿಲ್ಲ. ಚಿಕ್ಕವನಿಗಿದ್ದಾಗ ಲೌಡ್ ಸ್ಪೀಕರ್ ಏನಾದರೂ ನುಂಗಿದ್ದೆ ಅಂತ ಕಾಣುತ್ತೆ. ಅಕ್ಕ ಪಕ್ಕದವರಿಗೂ ನನ್ನ ಹೊಟ್ಟೆ ಹಾಡಿದ್ದು ತಿಳಿಯುತ್ತೆ. ಎಲ್ಲರಿಗಿಂತ ಬೇಗನೆ ತಿಂಡಿಗೆ ಹೋಗಿ ನಿಂತೆ. 20 ಬಿಳಿ ಗುಳಿಗೆ (ಇಡ್ಲಿ) , ಎರಡು ಕೇಸರಿ ಬಾತ ತಿಂದೆ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲೇ ಇಲ್ಲ. ಹೊಟ್ಟೆ ತುಂಬಾ ಜಾಗ ಇರುವದರಿಂದ ಇಡ್ಲಿ, ಕೇಸರಿ ಬಾತ್ ಅಲ್ಲಿ.. ಇಲ್ಲಿ.. ಜೋಗಿಂಗ್ ಮಾಡುತ್ತಿರಬಹುದೋ ಏನೋ. ಮತ್ತೆ ಹೋಗಿ ಇಡ್ಲಿ ಎಂದೆ. ಅಲ್ಲಿ ಇಡ್ಲಿ ಹಾಕುವ ಮನುಷ್ಯ ಖಾಲಿ ಪಾತ್ರೆ ನೋಡಿ, ಎಲ್ಲ ಇಡ್ಲಿ ನಾನೇ ಖಾಲಿ ಮಾಡಿದ್ದೇನೋ ಎಂಬ ರೀತಿಯಲ್ಲಿ, ನನ್ನನ್ನು ದುರುಗುಟ್ಟಿ ನೋಡಿದ. ಮತ್ತೆ ಹತ್ತು ಇಡ್ಲಿ ತಂದು ಹಾಕಿದ. ಅದರಲ್ಲಿ ಒಂದು ಇಡ್ಲಿ ಮುರಿದಿತ್ತು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದು. ಇದೇನು ಸರ್ ಇಡ್ಲಿ ಯಾರೋ ತಿಂದಿರೋ ಹಾಗಿದೆ ಎಂದು ತಮಾಷೆ ಮಾಡಿದೆ. ಓ... ಅದಾ ತೆಗೆಯುವ ಸಮಯದಲ್ಲಿ ಮುರಿದಿದೆ ಎಂದು ನಗುತ್ತಾ ನಿಂತ. ನಾನು ಮತ್ತೊಂದು ಇಡ್ಲಿ ಹಾಕುತ್ತಾನೆ ಎಂದು ಎಣಿಸಿದರೆ ಹಾಕಲೆ ಇಲ್ಲ. ಮತ್ತೆ ಎರಡು ಲೋಟ ಕಾಫೀ ಕುಡಿದು ಜಾಗ ಖಾಲಿ ಮಾಡಿದೆ.

ಬೇಗನೆ ಆರಕ್ಷತೆ, ಊಟ ಮುಗಿಸಿ ಟ್ರೈನ್ ಹತ್ತಿದೆ. ಟ್ರೈನ್ ಹೆಸರು ಜನಶತಾಬ್ದಿ ಅನ್ನುವುದಕ್ಕಿಂತಲೂ ಜನಾಹಿತಾಬ್ದಿ.. ಟ್ರೈನ್ ನಲ್ಲಿ ಐದೈದು ನಿಮಿಷಕ್ಕೆ ತಿಂಡಿ ಕಾಫೀ ಬರೋದು. ಆದರೂ ಈ ಬಾರಿ ಏನೂ? ತಿನ್ನಬಾರದು ಎಂದು ತೀರ್ಮಾನಿಸಿ ಬಂದಿದ್ದೆ. ಆದರೂ ಎಲ್ಲಾ ಸಪ್ಲೈಯರ್ ನನ್ನ ಹೊಟ್ಟೆ ನೋಡಿ, ಸರ್.. ಇಡ್ಲಿ ಬೇಕಾ?, ದೋಸೆ ಬೇಕಾ? ಎಂದು ಕೇಳುತ್ತಾ ಹೋಗುತ್ತಿದ್ದರು. ಬೇಡ.. ಬೇಡ.. ಎಂದು ಹೇಳಿ ಸಾಕಾಗಿ ಮತ್ತೆ ಹೊಟ್ಟೆ ತಾಳಮಯವಾಗಿ ನಾದ ಲಹರಿ ಶುರು ಮಾಡಿತ್ತು. ಪಕ್ಕದ ಸೀಟ್ ನಲ್ಲಿ ಇರುವ ಮನುಷ್ಯ ಎದ್ದು ಪಿಳಿ.. ಪಿಳಿ.. ಎಂದು ಅತ್ತ.. ಇತ್ತ.. ನೋಡಿ, ಮತ್ತೆ ಸುಮ್ಮನೇ ನಿದ್ದೆಗೆ ಜಾರಿದ. ಹೀಗೆ ಒಮ್ಮೆ ಪಕ್ಕದ ಮನೆಯ ಆಂಟಿ, ನನ್ನ ಹೊಟ್ಟೆ ಸಂಗೀತ ಕೇಳಿ, ನಲ್ಲಿಯಲ್ಲಿ ನೀರು ಬಂದಿದೆ ಎಂದು, ಕೊಡ ತೆಗೆದುಕೊಂಡು ಹೋಗಿ ನಿರಾಸೆಯಲ್ಲಿ ತೇಲುತ್ತ ಬಂದಿದ್ದರು ಪಾಪ...

ಅಷ್ಟರಲ್ಲಿ ಹರಿಹರ ಸ್ಟೇಶನ್ ಬಂತು ನನ್ನ ಪಕ್ಕದ ಸೀಟ್ ಗೆ ಒಂದು ಸುಂದರ ಹುಡುಗಿ ಬಂದು ಕುಳಿತಳು. ನಾನು ಸುಮ್ಮನೇ ನಿದ್ದೆ ಮಾಡಿದರೆ ಆಗುತ್ತೆ ಎಂದು ನಿದ್ದೆ ಮಾಡಹತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಭುಜ, ಹೊಟ್ಟೆ ಸ್ಪರ್ಶಿಸಿದ ಹಾಗೆ ಅನ್ನಿಸಿತು. ಆಹಾ.. ಹುಡುಗಿ ಎಂದು ಸುಮ್ಮನೇ ಕಣ್ಣು ಮುಚ್ಚಿ ಮಲಗಿಕೊಂಡಿದ್ದೆ. ಮತ್ತೆ ಅದೇ ಮಿಸುಗಾಟ... ಕಡೆಗೆ ಕಣ್ಣು ತೆಗೆದೆ. ನನ್ನದೇ ತದ್ರೂಪ ಎಂದನಿಸಿ ಬಿಟ್ಟಿತು. ಆಮೇಲೆ ತಿಳಿಯಿತು ಅವರು ಆ ಹುಡುಗಿಯ ಅಪ್ಪ. ಅವರಿಬ್ಬರೂ ಸೀಟ್ ಚೇಂಜ್ ಮಾಡಿದ್ದಾರೆ ಎಂದು.

ಕಡೆಗೆ ಇನ್ನೂ ಈ ಸಂಗೀತ ಕೇಳಲು ಆಗುವುದಿಲ್ಲ ಎಂದು ಯೋಚಿಸಿ, ದೋಸೆ ತೆಗೆದುಕೊಂಡೆ. ಸಪ್ಲೈಯರ್ ದೋಸೆನಾ ಸ್ನ್ಯಾಕ್ ಟ್ರೇ ಬದಲು ಹೊಟ್ಟೆ ಮೇಲೆ ಇಟ್ಟು ದುಡ್ಡು ತೆಗೆದುಕೊಂಡು ಹೋದ. ಮತ್ತೆ ಇಡ್ಲಿ, ವೆಜಿಟೆಬಲ್ ಪಲಾವ್, ವೇಜ್ ಕಟ್ಲೇಟ್ ...ಕಾಫೀ,ಟೀ,ಟೊಮ್ಯಾಟೋ ಸೂಪ್ ಎಲ್ಲವೂ ಸ್ವಾಹ ಮಾಡಿದ್ದೆ. ಕಡೆಗೆ ಸಪ್ಲೈಯರ್ ನನ್ನನ್ನು ಕೇಳದೇ ಒಂದು ಪ್ಲೇಟ್ ಇಟ್ಟು ಹೋಗಿಬಿಡುತ್ತಿದ್ದ. ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಬಾಯಲ್ಲಿ ತುರುಕಿ, ಕಿಸಿಯಿಂದ ದುಡ್ಡು ತೆಗೆದುಕೊಂಡು ಹೋಗುವ ಆಸಾಮಿ...

ಮತ್ತೆ ಹಲವು ಬಾರಿ ನನ್ನ ಮಡದಿಗೆ ಊಟದ ಸಮಯದಲ್ಲಿ, ನಾನು ಸಂಜೆಗೆ ತಿಂಡಿ ಏನೇ? ಎಂದು ಕೇಳಿದ್ದು ಇದೆ. ಅದಕ್ಕೆ ನನ್ನ ಮಡದಿ ಮುಸುರಿ ಕೈ ಎಂದು ಯೋಚಿಸದೇ ಹಣಿ.. ಹಣಿ.. ಗಟ್ಟಿಸಿ ಕೊಳ್ಳುತ್ತಾಳೆ. ಇದಕ್ಕೆ ಇರಬೇಕು ನನ್ನ ಮಡದಿ ನಿಮ್ಮ "ಹೊಟ್ಟೆ ಕೆರೆಯ ಮೇಲಿನ ಕಟ್ಟೆ" ಎಂದು ಅನ್ನುತ್ತಿದಿದ್ದು. ಮತ್ತೆ ಅಮ್ಮ ನೀನು "ಕಸಾ ತಿನ್ನುವವನು, ನಿನಗೆ ತುಸಾ ಏನು ಈಡು" ಎಂದು ಹೇಳುತ್ತಾರೆ.

ಮತ್ತೆ ಬೆಂಗಳೂರು ಸ್ಟೇಶನ್ ಬಂತು. ಮನೆಗೆ ಹೋದವನೆ ಬಹಿರ್ದೇಸೆಗೆ ಹೋಗಬೇಕು ಎಂದು ಅಂದುಕೊಂಡಾಗ, ಮಗ ಟು.. ಟು.. ಎಂದ, ನಾನು ಆಯಿತು ಎಂದು, ಅವನ ಚಡ್ಡಿ ಕಳೆಯುತ್ತಿದ್ದೆ. ಅಷ್ಟರಲ್ಲಿ ನನ್ನ ಮಡದಿ ರೀ ಅವನು ನಿಮ್ಮ ಜೊತೆ ಚಾಳಿ ಬಿಟ್ಟಿದ್ದಾನೆ ಎಂದು ಹೇಳುತ್ತಿದ್ದಾನೆ ಎಂದಳು. ಕಡೆಗೆ ಸರಾಗವಾಗಿ ನನ್ನ ಕೆಲಸ ಮಾಡಿ ಬಂದು ಮತ್ತೆ ಊಟಕ್ಕೆ ಹಾಜಾರ್ ಆದೆ.

ಅದೇನೋ ಗೊತ್ತಿಲ್ಲ, ದೇವರು ನನಗೆ ಸಾಕಷ್ಟು ತಿನ್ನ'ಲಿ' ಎಂಬ 'ವರ' ಕೊಟ್ಟು ಈ "ಲಿವರ್" ಕರುಣಿಸಿದ್ದಾನೋ ಗೊತ್ತಿಲ್ಲ... ಇನ್ನೂ ಡೌಟ್ ಪಡುವ ಅವಶ್ಯಕತೆ ಇಲ್ಲ. ಇಷ್ಟೊತ್ತು ನಿಮ್ಮ ತಲೆ ತಿಂದಿದ್ದೇನೆ...ಆದರೂ ಹೊಟ್ಟೆಯಲ್ಲಿ ಸ್ವಲ್ಪ ತಾಳ ಹಾಕುತ್ತಿದ್ದೆ, ಮತ್ತೇನಾದರೂ ಸಿಗುತ್ತಾ ಎಂದು ಫ್ರಿಡ್ಜ್ ತೆಗೆದೆ....

Rating
No votes yet

Comments