ಕರ್ನಾಟಕ ಕ್ರಿಕೆಟ್ - ೭
ಈಗಾಗಲೇ ರಾಜ್ಯ ತಂಡವನ್ನು ರಣಜಿ ಪಂದ್ಯಾಟಗಳಲ್ಲಿ ಪ್ರತಿನಿಧಿಸಿದ ಮತ್ತು ಮುಂದೆ ಪ್ರತಿನಿಧಿಸಬಹುದಾದ ಕೆಲವು ಪ್ರತಿಭಾವಂತ ಯುವ ಆಟಗಾರರೆಡೆ ಒಂದು ನೋಟ.
ಸುಧೀಂದ್ರ ಪ್ರಕಾಶ್ ಶಿಂದೆ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಸೋಷಲ್ ಕ್ರಿಕೆಟರ್ಸ್ ಪರವಾಗಿ ಆಡುವ ೨೬ ವರ್ಷ ವಯಸ್ಸಿನ ಸುಧೀಂದ್ರ ಶಿಂದೆ ಭರವಸೆ ಮೂಡಿಸಿದ ಉತ್ತಮ ದಾಂಡಿಗ. ಪ್ರಭಾವೀ ಸಂಪರ್ಕವುಳ್ಳ ಅಪ್ಪಂದಿರು ತಮ್ಮ ಮಕ್ಕಳನ್ನು ಆಡಿಸಲು ಮಾಡಿದ ಕುತಂತ್ರಗಳಿಂದಾಗಿ ಶಿಂದೆಗೆ ಸತತ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಬಹಳಷ್ಟು ಮಟ್ಟಿಗೆ ಸದುಪಯೋಗವೂ ಮಾಡಿಕೊಳ್ಳಲಿಲ್ಲ. ಪ್ರಸಿದ್ಧ ಆಪ್ಪಂದಿರ ತಗಡು ಮಕ್ಕಳನ್ನು ಆಡಿಸುವ ಅನಿವಾರ್ಯತೆ ಇದ್ದಿದ್ದರಿಂದ ಶಿಂದೆ ತನ್ನ ಚೊಚ್ಚಲ ಪಂದ್ಯವನ್ನು ಆಡಲು ಒಂದು ವರ್ಷ ಕಾಯಬೇಕಾಯಿತು. ಪರೀಕ್ಷೆಯಲ್ಲಿ ಅನುತ್ತೀರ್ಣನಾಗದೆ ಮುಂದಿನ ಹಂತಕ್ಕೆ ತೆರಳಲು ಒಂದು ವರ್ಷ ಕಾಯಬೇಕಾದ ಅಸಹನೀಯ ಅನಿವಾರ್ಯತೆ! ೨೦೦೨-೦೩ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಪ್ಲೇಟ್ ಲೀಗ್ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ ರಣಜಿಗೆ ಪಾದಾರ್ಪಣ ಮಾಡಿದ ಶಿಂದೆ, ೮೪ ಓಟಗಳನ್ನು ಗಳಿಸುವುದರೊಂದಿಗೆ ಪ್ರಥಮ ಪಂದ್ಯದಲ್ಲೇ ಉತ್ತಮ ನಿರ್ವಹಣೆ ತೋರಿದ್ದರು. ೨೦೦೩-೦೪ ಋತುವಿನಲ್ಲಿ ೪ ಪಂದ್ಯಗಳಲ್ಲಾಡಿದ ಶಿಂದೆ, ೧೮.೧೬ ಸರಾಸರಿಯಲ್ಲಿ ಕೇವಲ ೧೦೯ ಓಟಗಳನ್ನು ಗಳಿಸಿ ವಿಫಲರಾದರು. ೨೦೦೪-೦೫ರಲ್ಲಿ ಆಡಿದ ೩ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷ ಪ್ರದರ್ಶನ ಶಿಂದೆ ಮಾಡಲಿಲ್ಲ. ನಂತರ ೨೦೦೫-೦೬ರಲ್ಲಿ ಎಲ್ಲಾ ೭ ಪಂದ್ಯಗಳಲ್ಲೂ ಆಡಿದ ಶಿಂದೆ ೨೦.೭೭ ಸರಾಸರಿಯ ಕಳಪೆ ಪ್ರದರ್ಶನ ನೀಡಿದರು. ಈ ಋತುವಿನಲ್ಲಿ ಸಿಕ್ಕಿದ ಅವಕಾಶಗಳ ಸದುಪಯೋಗ ಮಾಡಿಕೊಂಡಿದ್ದರೆ ಶಿಂದೆ ಕರ್ನಾಟಕ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳಬಹುದಾಗಿತ್ತು. ಪ್ರಸಕ್ತ ಋತುವಿನಲ್ಲಿ ಶಿಂದೆ ತಂಡಕ್ಕೆ ಆಯ್ಕೆಯಾಗಲಿಲ್ಲ.
ಕೇಕಡ ಶ್ಯಾಮ್ ಪೊನ್ನಪ್ಪ: ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ವಿಜಯಾ ಬ್ಯಾಂಕ್ ಪರವಾಗಿ ಆಡುವ ಶ್ಯಾಮ್ ಒಬ್ಬ ಆರಂಭಿಕ ದಾಂಡಿಗ. ಬೌಲರ್ ಗಳನ್ನು ಬೇಕಾಬಿಟ್ಟಿ ದಂಡಿಸುವುದೇ ದಾಂಡಿಗರ ಪ್ರಥಮ ಕರ್ತವ್ಯ ಎಂಬುದು ೨೭ರ ಹರೆಯದ ಶ್ಯಾಮ್ ಪೊನ್ನಪ್ಪನ ಬಲವಾದ ನಂಬಿಗೆ. ಅವರು ಆಡುವುದೇ ಹಾಗೆ. ಹಾಗಾಗಿಯೇ ಇವರಿಂದ ಚಚ್ಚಿಸಿಕೊಂಡ ಬೆಂಗಳೂರು ಲೀಗ್ ನ ಬೌಲರ್ ಗಳು 'ಅತ್ತ ಉತ್ತಪ್ಪ ಇತ್ತ ಪೊನ್ನಪ್ಪ ರಕ್ಷಣೆ ಎಲ್ಲಪ್ಪ' ಎನ್ನುತ್ತಾರೆ. ಲೀಗ್ ಪಂದ್ಯಗಳಲ್ಲಿ ಮನಸೋ ಇಚ್ಛೆ ಓಟಗಳನ್ನು ಸೂರೆಗೈದ ಶ್ಯಾಮ್ ಅದೇಕೋ ಕರ್ನಾಟಕದ ಪರವಾಗಿ ರಣಜಿ ಪಂದ್ಯಾಟಗಳಲ್ಲಿ ಆಡುವಾಗ ವೈಫಲ್ಯವನ್ನು ಕಂಡರು. ಚೊಚ್ಚಲ ಪಂದ್ಯವನ್ನು ೨೨ರ ಹರೆಯದಲ್ಲಿ ೨೦೦೧-೦೨ ಋತುವಿನಲ್ಲಿ ಅಂಧ್ರದ ವಿರುದ್ಧ ಕರ್ನೂಲ್ ನಲ್ಲಿ ಆಡಿದ ಶ್ಯಾಮ್ ೧೬ ಮತ್ತು ಅಜೇಯ ೯ ಓಟಗಳನ್ನು ಗಳಿಸಿದರು. ಆಡಿದ ೩ ಪಂದ್ಯಗಳಲ್ಲಿ ೨೮.೨೫ ಸರಾಸರಿಯೊಂದಿಗೆ ೧೧೩ ಓಟಗಳು. ೨೦೦೨-೦೩ರಲ್ಲಿ ೨ ಪಂದ್ಯಗಳಲ್ಲಿ ೧೨.೦೦ ಸರಾಸರಿ. ಈ ವೈಫಲ್ಯಗಳಿಂದ ಶ್ಯಾಮ್ ೨೦೦೩-೦೪ರಲ್ಲಿ ಆಯ್ಕೆಯಾಗಲಿಲ್ಲ. ಲೀಗ್ ನಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ೨೦೦೪-೦೫ರಲ್ಲಿ ಮತ್ತೆ ಆಯ್ಕೆಯಾದ ಶ್ಯಾಮ್ ಆಡಿದ ೨ ಪಂದ್ಯಗಳಲ್ಲಿ ೧೩.೦೦ ಸರಾಸರಿಯಂತೆ ೫೨ ಓಟಗಳನ್ನು ಗಳಿಸಿ ಮತ್ತೆ ವಿಫಲರಾದರು. ನಂತರ ಅವರು ಅಯ್ಕೆಯಾಗಿಲ್ಲ. ಸ್ವಲ್ಪ ಸಂಯಮದಿಂದ ಆಡಿ ಸಿಕ್ಕ ಅವಕಾಶಗಳ ಸದುಪಯೋಗ ಮಾಡಿಕೊಂಡಿದಿದ್ದರೆ ಕರ್ನಾಟಕಕ್ಕೆ ಒಬ್ಬ ಹೊಡೆಬಡಿಯ ಆರಂಭಿಕ ದಾಂಡಿಗ ಸಿಗುತ್ತಿದ್ದ.
ಕೆ.ಬಿ.ಪವನ್: ೧೯ರ ಹರೆಯದ ಮೈಸೂರಿನ ಹುಡುಗ ಪವನ್ ಒಬ್ಬ ವಿಕೆಟ್ ಕೀಪರ್ ಬ್ಯಾಟ್ಸ್ ಮನ್. ಕರ್ನಾಟಕದ ಪರವಾಗಿ ಅಂಡರ್-೧೫, ಅಂಡರ್-೧೭ ಮತ್ತು ಅಂಡರ್-೧೯ ಹೀಗೆ ಎಲ್ಲಾ ವಯಸ್ಸಿನ ಕಿರಿಯರ ಪಂದ್ಯಾಟಗಳಲ್ಲಿ ಆಡಿ ಅತ್ಯುತ್ತಮ ನಿರ್ವಹಣೆ ನೀಡಿ ಆಯ್ಕೆಗಾರರ ಗಮನ ಸೆಳೆದರು. ಕರ್ನಾಟಕ ತಂಡದಲ್ಲಿ ಇಬ್ಬರು ರೆಗ್ಯುಲರ್ ವಿಕೆಟ್ ಕೀಪರ್ ಗಳಿದ್ದರೂ (ತಿಲಕ್ ನಾಯ್ಡು ಮತ್ತು ದೇವರಾಜ್ ಪಾಟೀಲ್) ತನ್ನ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಒಬ್ಬ ದಾಂಡಿಗನಾಗಿಯೇ ರಣಜಿ ತಂಡಕ್ಕೆ ಆಯ್ಕೆಯಾಗಿದ್ದು ಪವನ್ ಹೆಗ್ಗಳಿಕೆ. ಕೆ.ಎಸ್.ಸಿ.ಎ ಮೈಸೂರು ಲೀಗ್ ನಲ್ಲಿ ಸರಸ್ವತಿಪುರಮ್ ಕ್ರಿಕೆಟ್ ಕ್ಲಬ್ ಪರವಾಗಿ ಆಡುವ ಪವನ್ ಅಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದ ಮೈಸೂರು ವಲಯಕ್ಕೆ ಆಯ್ಕೆಯಾದರು. ಕೆ.ಎಸ್.ಸಿ.ಎ ನಡೆಸುವ ಶಫಿ ದಾರಾಶಾಹ ಟ್ರೋಫಿಗಾಗಿ ನಡೆಯುವ ಅಂತರ್ ವಲಯ ಪಂದ್ಯಾಟಗಳಲ್ಲಿ ಮೈಸೂರು ವಲಯದ ಪರವಾಗಿ ಆಡಿ ತೋರಿದ ಉತ್ತಮ ನಿರ್ವಹಣೆ ಆಯ್ಕೆಗಾರರಿಗೆ ಪವನ್ ಬಗ್ಗೆ ಇದ್ದ ಅಲ್ಪ ಸ್ವಲ್ಪ ಶಂಕೆಗಳನ್ನು ಕೂಡಾ ದೂರ ಮಾಡಿತು. ಸರಸ್ವತಿಪುರಮ್ ಕ್ರಿಕೆಟ್ ಕ್ಲಬ್, ಮೈಸೂರು ವಲಯ ಮತ್ತು ರಾಜ್ಯ ಕಿರಿಯರ ತಂಡದ ಪರವಾಗಿ ಆಡುವ ಎಲ್ಲಾ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಆಡಿದ್ದ ಪವನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಒಬ್ಬ ಬ್ಯಾಟ್ಸ್ ಮನ್ ಆಗಿ ಆಡಿದ್ದು ವಿಶೇಷ. ಇಲ್ಲಿ ಆಯ್ಕೆಗಾರರನ್ನು ಮೆಚ್ಚಬೇಕು. ರಣಜಿ ಸೆಮಿಫೈನಲ್ ನಂತಹ ಪ್ರಮುಖ ಪಂದ್ಯದಲ್ಲಿ ೧೯ರ ಹರೆಯದ ಹುಡುಗನೊಬ್ಬನಿಗೆ ಆಡಿಸಿದ್ದು ಪವನ್ ಆಟದ ಮೇಲೆ ಆಯ್ಕೆಗಾರರಿಗಿರುವ ನಂಬಿಕೆಯನ್ನು ತೋರಿಸುತ್ತದೆ. ಪವನ್ ತನ್ನ ಪ್ರಥಮ ಪಂದ್ಯದಲ್ಲಿ ಎಷ್ಟೇ ಓಟಗಳನ್ನು ಗಳಿಸಲಿ ಅದು ಮುಖ್ಯವಲ್ಲ. ಆ ಪಂದ್ಯದ ಪ್ರಾಮುಖ್ಯತೆ, ಗೆಲ್ಲಲೇಬೇಕಾದ ಅನಿವಾರ್ಯತೆ ಇರುವುದರಿಂದ ಚೆನ್ನಾಗಿ ಆಡಲೇಬೇಕಾದ ಒತ್ತಡ (ಲೀಗ್ ಹಂತದಲ್ಲಾದರೆ ಒಂದು ಪಂದ್ಯ ಸೋತರೆ ಮುಂದಿನ ಪಂದ್ಯ ಗೆಲ್ಲುವ ಪ್ರಯತ್ನ ಮಾಡಬಹುದು) ಮತ್ತು ದೂರದ ಬಂಗಾಲದಲ್ಲಿ ಆಡುವ ಅನುಭವ ಇವೆಲ್ಲಾ ಪವನ್ ಗೆ ತನ್ನ ಚೊಚ್ಚಲ ಪಂದ್ಯದಲ್ಲೇ ಅನುಭವವಾಗುತ್ತಿರುವುದು ಆತನ ಕ್ರಿಕೆಟ್ ಬೆಳವಣಿಗೆ ದೃಷ್ಟಿಯಲ್ಲಿ ಒಳ್ಳೆಯದು.
ಶ್ರೀನಿವಾಸ ಧನಂಜಯ: ೨೪ರ ಹರೆಯದ ಧನಂಜಯ್ ಮೈಸೂರಿನವರು. ಸ್ವಲ್ಪ ತಡವಾಗಿ ಕ್ರಿಕೆಟ್ ನಲ್ಲಿ ಯಶಸ್ಸು ಕಂಡವರು. ಕೆ.ಎಸ್.ಸಿ.ಎ ಮೈಸೂರು ಲೀಗ್ ನಲ್ಲಿ ಇವರು ಮೈಸೂರು ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ (ಕ್ಲಬ್) ಪರವಾಗಿ ಆಡುತ್ತಾರೆ. ಇವರ ಆಯ್ಕೆ ಅನಿರೀಕ್ಷಿತ. ತಂಡದಲ್ಲಿ ಈಗಾಗಲೇ ೩ ವೇಗದ ಬೌಲರ್ ಗಳಿರುವಾಗ ಇವರ ಆಯ್ಕೆಯ ನಿರೀಕ್ಷೆ ಇರಲಿಲ್ಲ. ಅಖಿಲ್ ಮತು ರಾಜು ಭಟ್ಕಲ್ ಇಬ್ಬರದ್ದೂ ಮಧ್ಯಮ ವೇಗದ ಬೌಲಿಂಗ್. ಕೋಚ್ ವೆಂಕಿಗೆ ವಿನಯ್ ಕುಮಾರ್ ರಂತೆಯೇ ವೇಗದ ಬೌಲರ್ ಬೇಕಿತ್ತು ಮತ್ತು ಅದಕ್ಕಾಗಿಯೇ ಅವರು ಹಟ ಮಾಡಿದಾಗ ಆಯ್ಕೆಗಾರರು ಅಂತರ್ ವಲಯ ಪಂದ್ಯಾಟಗಳಲ್ಲಿ ಮೈಸೂರು ವಲಯದ ಪರವಾಗಿ ಆಡಿ ಉತ್ತಮ ನಿರ್ವಹಣೆ ತೋರಿದ್ದ ಧನಂಜಯರನ್ನು ಆಯ್ಕೆ ಮಾಡಿ ಕೋಲ್ಕತ್ತಾಗೆ ಕಳಿಸಿದರು. ಕಿರಿಯರ ಪಂದ್ಯಾಟಗಳಲ್ಲಿ ರಾಜ್ಯದ ಪರವಾಗಿ ಧನಂಜಯ ಆಡಿರುವುದು ನನಗೆ ತಿಳಿದಿಲ್ಲ. ಆದರೆ ಶಫಿ ದಾರಾಶಹ ಅಂತರ್ ವಲಯ ಪಂದ್ಯಾಟಗಳಲ್ಲಂತೂ ಉತ್ತಮ ಬೌಲಿಂಗ್ ಪ್ರದರ್ಶನ ಕಳೆದ ೨-೩ ವರ್ಷಗಳಿಂದ ನೀಡಿದ್ದರು. ಮೈಸೂರು ಮತ್ತು ಧಾರವಾಡ ಲೀಗ್ ತಂಡಗಳ ಕೆಲವು ಉತ್ತಮ ಆಟಗಾರರನ್ನು ಒಳಗೊಂಡ ತಂಡವನ್ನು 'ಬ್ಯಾಂಗಲೋರ್ ಒಕೇಶನಲ್ಸ್' ಎಂಬ ಹೆಸರಿನಡಿ ಕೆಲವೊಮ್ಮೆ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಆಡಿಸಲಾಗುತ್ತದೆ. ಈ ತಂಡದ ಪರವಾಗಿ ಆಡಿ ಧನಂಜಯ ಬೆಂಗಳೂರು ಲೀಗ್ ನ ತಂಡಗಳ ನುರಿತ ಬ್ಯಾಟ್ಸ್ ಮನ್ ಗಳನ್ನು ತೊಂದರೆಗೆ ಸಿಲುಕಿಸಿದ್ದನ್ನೂ ಆಯ್ಕೆಗಾರರು ಗಮನಿಸಿದ್ದಿರಬಹುದು. ಅದೇನಿದ್ದರೂ ಧನಂಜಯ ತನ್ನ ಚೊಚ್ಚಲ ಪಂದ್ಯದಲ್ಲಿ ಉತ್ತಮ ನಿರ್ವಹಣೆಯನ್ನೇ ನೀಡಿದ್ದಾರೆ.
ಅಮಿತ್ ವರ್ಮ: ೧೯ರ ಹರೆಯದ ಅಮಿತ್ ಒಬ್ಬ ಬಲಗೈ ದಾಂಡಿಗ ಮತ್ತು ಉಪಯುಕ್ತ ಲೆಗ್ ಬ್ರೇಕ್ ಎಸೆಗಾರನೂ ಹೌದು. ಈತ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಆಡುವುದು ಸ್ವಸ್ತಿಕ್ ಯುನಿಯನ್ ಎರಡನೇ ತಂಡಕ್ಕಾಗಿ. ಕಳೆದ ಒಂದೆರಡು ವರ್ಷಗಳಿಂದ ಅತ್ಯುತ್ತಮ ನಿರ್ವಹಣೆ ನೀಡಿರುವ ಅಮಿತ್ ರನ್ನು ಆಯ್ಕೆಗಾರರು ಈ ಋತುವಿನ ರಣಜಿ ಸೆಮಿಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಿದ್ದಾರೆ. ಅಮಿತ್ ತನ್ನ ಚೊಚ್ಚಲ ಪಂದ್ಯಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಕಿರಿಯರ ಪಂದ್ಯಾಟಗಳಲ್ಲಿ (ಅಂಡರ್-೧೫,೧೭,೧೯,೨೨) ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ನಿರ್ವಹಣೆ ತೋರಿದ್ದಾರೆ. ಇವರ ಆಯ್ಕೆಯ ಉದ್ದೇಶ ತನ್ನ ಪ್ರತಿಭೆಗೆ ತಕ್ಕದಾಗಿ ಆಡದೇ ಇರುವ್ ದೀಪಕ್ ಚೌಗುಲೆಗೆ ಸ್ವಲ್ಪ ನಯವಾದ ಎಚ್ಚರಿಕೆ ನೀಡುವುದಿರಬಹುದು ಮತ್ತು ಜೊತೆಗೆ ಒಂದು ಪ್ರಮುಖ ಪಂದ್ಯವನ್ನು ಹತ್ತಿರದಿಂದ ವೀಕ್ಷಿಸಿ ಸ್ವಲ್ಪ ಅನುಭವ ಗಳಿಸುವ ಇರಾದೆಯೂ ಇರಬಹುದು. ಮುಂದಿನ ಋತುವಿನಲ್ಲಂತೂ ಅಮಿತ್ ಕರ್ನಾಟಕಕ್ಕಾಗಿ ಆಡುವ ಎಲ್ಲಾ ಸಾಧ್ಯತೆಗಳಿವೆ.