ಆರಿಸಿ ಕಳಿಸಿದ ಮಹಾಜನತೆಯೇ ಮೂರ್ಖರೇ...?!

ಆರಿಸಿ ಕಳಿಸಿದ ಮಹಾಜನತೆಯೇ ಮೂರ್ಖರೇ...?!

ಭಾಷಣ ಮಾಡಲು ಬಂದ ರಾಜ್ಯಪಾಲರಿಗೆ ಕಿವಿಕೊಡದೆ ಪ್ರತಿಕ್ಷದ ಮುತ್ಸದ್ದಿಗಳು ಅವರನ್ನು ಅಟ್ಟಿಬಡೆದರು. ಬೇಡಬೇಡವೆಂದು ಬೇಡಿಕೊಂಡಿದ್ದನ್ನವರು ಮಾಡಿಯೇ ತೀರಿದರು!


ವಿಧಾನ ಮಂಡಲದ ಕಲಾಪಗಳಿಗೆ ಅಡ್ಡಿ ಪಡಿಸುವ ಈ ವರಸೆ, ರಾಜಕೀಯ ರಣತಂತ್ರವಲ. ಇದಕ್ಕೆ ತರ್ಕದ ನೆಲೆಗಟ್ಟೇ ಇಲ್ಲ! ಸರಕಾರದ ವೈಖರಿ ಪ್ರತಿಭಟಿಸಿ ಸಭಾತ್ಯಾಗ ಮಾಡಲಿ. ಆದರೆ ಸದನವನ್ನೇ ತಿರಸ್ಕರಿಸುವುದಕ್ಕೆ, ಅದೇನು ಮುಖ್ಯಮಂತ್ರಿಗಳ ಸ್ವಂತದ್ದೂ ಅಲ್ಲ, ಅಥವಾ ಸರಕಾರದ ಭಾಗವೂ ಅಲ್ಲ! ಅದು ಪ್ರತಿಪಕ್ಷಗಳ ಮಹೋನ್ನತ ವೇದಿಕೆಯೂ ಆಗಿದ್ದು ಅದರ ಗಳ ಹಿರಿಯಹೊಗುವುದು ವಿವೇಕವೆನಿಸೀತೇ? ವಿಧಾನಸಭೆ, ಪರಿಷತ್ತುಗಳು, ರಾಜ್ಯದ ಪ್ರೌಢ ಪ್ರಜೆಗಳೆಲ್ಲರ ಮಹಾ ಪ್ರಾತಿನಿಧಿಕ ವ್ಯವಸ್ಥೆ. ಇದಕ್ಕೆ ಮಾಡುವ ಅವಮಾನ, ಸಂವಿಧಾನದ ಅಪಚಾರ; ಸಾರ್ವಜನಿಕರ ಅವಹೇಳನ. ಇದು ಕಾಮನ್‌ಸೆನ್ಸ್!


          ಸಣ್ಣ-ಪುಟ್ಟ ತಪ್ಪುಗಳನ್ನೆಸಗಿದ ಸರಕಾರ, ಪ್ರತಿಪಕ್ಷದ ನೈತಿಕ ತೀಕ್ಷ್ಣತೆಗಂಜಿ ಅಧಿವೇಶನ ಕರೆಯುವುದಕ್ಕೇ ಕೊಸರಾಡುತ್ತಿದ್ದ ಕಾಲವೂ ಒಂದಿತ್ತು. ಈಗ ನೋಡಿದರೆ, ಪ್ರತಿಪಕ್ಷಗಳೇ ಅಧಿವೇಶನಕ್ಕೆ ಹೋಗಲು ಹೇಡಿತನ ತೋರುತ್ತವೆ!


          ಇದನ್ನು ಬ್ಲಾಗ್ ಒಂದರಲ್ಲಿ ಬರೆದಾಗ, ಕಲಾಪಗಳನ್ನು ಬಹಿಷ್ಕರಿಸುವವರು ತಮ್ಮ ದಿನಗೂಲಿಯನ್ನೂ ಬಹಿಷ್ಕರಿಸಲಿ ಎಂದೊಬ್ಬರು ಪ್ರತಿಕ್ರಿಯಿಸಿದರು. ಅವರು ಪಡೆಯುವ ಆ ಅಪಾತ್ರ ಹಣಕ್ಕೆ ಕೂಲಿ ಎಂಬ ಮರ‍್ಯಾದೆಯೂ ಬೇಕಾಗುವುದಿಲ್ಲ. ಅದು ಭಕ್ಷೀಸು-ಟಿಪ್ಸ್! ಶ್ರಮದಿಂದ "ಸಂಪಾದನೆ" ಮಾಡುವ ಸಂಪತ್ತಾದರೆ ಕೂಲಿಯೆನಿಸುತ್ತದೆ. ಆ ಶ್ರಮದಿಂದ ಸಮಾಜಕ್ಕೆ ವಸ್ತು, ಸೇವೆ, ಸೌಲತ್ತುಗಳ "ಉತ್ಪಾದನೆ"ಯಾಗುತ್ತದೆ. ಅಂತಹ "ಅರ್ಥ"ಪೂರ್ಣ, "ಅನುಭಾವ"ಯುಕ್ತ ಚರ್ಚೆ ಇತ್ತೀಚೆಗೆ ಸಂಸತ್ತಿನಲ್ಲಾಗಲೀ, ಶಾಸನಸಭೆಗಳಲ್ಲಾಗಲೀ ನಡೆದಿರುವ "ಅಪವಾದ"ವೂ ಕಾಣಸಿಗುವುದಿಲ್ಲ!