ವಿಸ್ಮರಿಷ್ಟಳ ಹಾವುಏಣಿಯಾಟ--ಫಿನ್ಲೆಂಡ್ ಪ್ರವಾಸ ಭಾಗ ೧೫
ಫಿನ್ಲೆಂಡ್ ಅನ್ನು ನಾನು ಬಹುವಾಗಿ ಗ್ರಹಿಸಿದ್ದು ಹೆಲ್ಸಿಂಕಿಯ ಮೂಲಕ ಮತ್ತು ಮೂಲಕವಷ್ಟೇ. ಬ್ಯಾಡಗಿ ಮೆಣಸಿನಕಾಯಿಯ ಸೊಗಡು, ಧಾರವಾಡದ ಪೇಡ, ಮೈಸೂರು ಪಾಕಿನ ನಂತರ ಮೈಸೂರು ಮಲ್ಲಿಗೆಯ ಸ್ವಾದ, ದಾವಣಗೆರೆಯ ಬೆಣ್ಣೆ ಮಂಡಕ್ಕಿ--ಮುಂತಾದುವೆಲ್ಲವನ್ನು, ಬೆಂಗಳೂರನ್ನೇ ಕರ್ನಾಟಕವೆಂದು ಭಾವಿಸಿ ಗ್ರಹಿಸುವ ಪರದೆಶೀಯನೊಬ್ಬ ಹೇಗೆ ಮಿಸ್ ಮಾಡುತ್ತಾನೋ ಹಾಗೆ ಇರಬಹುದು, ಹೆಲ್ಸಿಂಕಿಯನ್ನು ಹೊರತುಪಡಿಸಿದ ಫಿನ್ಲೆಂಡ್", ಎಂದು ಹೇಳಿದೆ ಕೇತನ್ ಭುಪ್ತನಿಗೆ ಒಮ್ಮೆ.
"ನಾನು ಭಾರತೀಯನಾದರೂ ಸಹ ಕರ್ನಾಟಕದ ಬಗ್ಗೆ ಅಷ್ಟೇನೂ ಗೊತ್ತಿಲ್ಲದಿದ್ದರೂ ಸಹ, ಫಿನ್ಲೆಂಡಿನಲ್ಲಿ ಖಂಡಿತ ನೀನು ಹೇಳುವ ವೈವಿಧ್ಯತೆ ಇರಲಾರದೇನೋ", ಎಂದು ಭೂಪತ ಅನುಮಾನದಿಂದ ಮುಂದುವರೆಸಿದ, "ಇಲ್ಲಿನ ಬುಡಕಟ್ಟು ಜನರನ್ನು 'ಸಾಮಿ'ಗಳೆಂದು ಕರೆಯುತ್ತಾರೆ. ನೀನವರನ್ನು ನೋಡಿರಬಹುದು. ಸಾಂಪ್ರದಾಯಿಕ ವಸ್ತ್ರತೊಟ್ಟಿದ್ದರೂ, ನಗರವಾಸಿಗಳು ಬಳಸುವ ಎಲ್ಲ ತಾಂತ್ರಿಕ ಸಲಕರಣೆಗಳೂ ಅವರ ಬಳಿ ಇವೆ. ವಾಚು, ಮೊಬೈಲು, ಕಾರು, ಹೀಟರು ಇತ್ಯಾದಿ. ನಮ್ಮ ಲಂಬಾಣಿಗಳಂತಲ್ಲ ಇಲ್ಲಿನ ಜಿಪ್ಸಿಗಳು. ಇವರನ್ನು ಗ್ರಹಿಸುವುದೂ ಅಷ್ಟು ಸರಳವೇನಲ್ಲ," ಎಂದು, ಹೆಚ್ಚು ಆತ್ಮವಿಶ್ವಾಸ ಹೊಂದುತ್ತಿರುವವನಂತೆ.
"ಬಡತನಕ್ಕೂ ಅಲೆಮಾರಿತನಕ್ಕೂ ಸಂಬಂಧವಿದೆ ಅಂದುಕೊಂಡುಬಿಟ್ಟಿರುವ ನಾವು ಭಾರತೀಯರ ಪರಿಕಲ್ಪನೆಗೆ ಸಾಮಿ ಬುಡಕಟ್ಟಿನವರು ಒಳ್ಳೆಯ ವ್ಯತಿರಿಕ್ತ ಉದಾಹರಣೆಗಳು" ಎಂದೆ. ಭುಪ್ತ ಮಾತು ಮುಂದುವರೆಸಲಿಲ್ಲ. ಅದ್ಭುತ ನಾಟಕ, ಸಂಗೀತ, ಕೃತಿ ರಚಿಸುವಾಗ ರೋಮಾಂಚನವಾದರೂ ಸಹ ಸೃಜನಶೀಲಕ್ರಿಯೆ ನಡೆವಾಗ ಮೌನವಾಗಿದ್ದು ಅದು ಪೂರ್ಣವಾದ ನಂತರವೇ ಮೆಚ್ಚುಗೆ ಸೂಸುವ ಫಿನ್ನಿಶ್ ಜನರೊಂದಿಗೆ ಎರಡು ದಶಕಗಳ ಕಾಲ ಬದುಕಿ ಭುಪ್ತ ಹಾಳಾಗಿದ್ದಾನೆ ಎಂದುಕೊಂಡು, ಆತ ಸುಮ್ಮನಾದುದಕ್ಕೆ ನನಗೆ ನಾನೇ ಕಾರಣವನ್ನು ಹುಡುಕಿಕೊಂದು ಸುಮ್ಮನಾದೆ.
ನಾವಿಬ್ಬರೂ ಮೊದಲ ಪಬ್ನಲ್ಲಿ--ಅಕಿ ಕೌರಸ್ಮಾಕಿ ಒಡೆತನದ್ದು--ಮಾತನಾಡುವಾಗ ಆತ ತನ್ನ ಜೀವನಗಾಥೆಯನ್ನು ರಾತ್ರಿಯಿಡೀ ಹೇಳಿದ ದಿನದ ಉಪಕಥೆಗಳೂ ಅನೇಕ. ಆಗಿನ ಉಪಕಥೆಗಳಲ್ಲಿ ಮೆಲಿನದ್ದೂ ಒಂದು. ಆಗ ನಾವಿಬ್ಬರೂ ಮಾತನಾಡುವಾಗ, ಪಕ್ಕದ ಟೇಬಲ್ಲಿನಲ್ಲಿ ('ಅದರ ಸುತ್ತಲೂ' ಎಂದರ್ಥ) ಇಬ್ಬರು ಗಂಡಸರು ಮತ್ತು ಒಂದು ಹೆಣ್ಣು ಕುಳಿತು ಜೋರುಜೋರಾಗಿ ವಾದ, ವಾಗ್ಯುಧ್ಯ, ವಿಚಾರ-ವಿನಿಮಯದಲ್ಲಿ ಒಮ್ಮೆಲೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರಲ್ಲೊಬ್ಬ ಮಹಾನ್ ತರಲೆಯಂತೆ ಕಂಡುಬಂದ. ಅಂತಹವರನ್ನು ನೋಡಿದ ಕೂಡಲೆ ಗುರ್ತಿಸಿಬಿಡಬಲ್ಲೆ--ಅಭ್ಯಾಸಬಲ ಮತ್ತು ಸಹವಾಸ ದೋಷದ ಪರಿಣಾಮವದು. ಅವರುಗಳ ಮಾತುಕತೆಯ ಒಂದು ಸ್ಯಾಂಪಲ್ ಗಮನಿಸಿ:
"ಹೌದು, ನಾನು ನಾಸ್ತಿಕ. ಹಾಗಿರಲು ದೇವರೇ ನನಗೆ ಅನುಮತಿ ನೀಡಿದ್ದಾನೆ", ಎಂದ ತರಲೆ.
"ಇದ್ಯಾವುದೋ ಟೀನೇಜರ್ ಒಬ್ಬನ ಟೀ-ಶರ್ಟಿನ ಮೇಲೆ ಬರೆದ ವಾಕ್ಯದಂತಿದೆ. ಸ್ವಲ್ಪ ಪ್ರೌಢನಾಗು ಗೆಳೆಯ, " ಎಂದು ಛೇಡಿಸಿದಳಾಕೆ.
"ಹಾಗಿದ್ದರೆ ಕೇಳು. ನಾನು ದೇವರೆಂಬ ಪ್ರಶ್ನೆಯನ್ನು ಬಗೆಹರಿಸಿರುವೆ!" ಎಂದನೀತ.
"ಏನು ಆತನ ಗುಟ್ಟು?"
"ಆತನೇ ನಿಜವಾದ ಸಮಸ್ಯೆ", ಎಂದಾತ ನಗತೊಡಗಿದ. ದೇವರಾಣೆಗೂ ಮಿಕ್ಕುಳಿದವರಿಬ್ಬರೂ ತರಲೆಯನ್ನು ದೇವರ ಬಳಿಯೇ ಕಳಿಸಿಕೊಡಲು ತಯಾರಾದವರಂಹ ಮೂಡಿನಲ್ಲಿದ್ದಂತೆ ಕಂಡರು. ನಾನು ಮತ್ತು ಭುಪ್ತ ಮಾತನಾಡುತ್ತುಲಿರುವುದನ್ನೇ ಆ ತರಲೆ ಗಮನಿಸುತ್ತಲಿದ್ದ. ಕ್ರಮೇಣ ನಮ್ಮೊಂದಿಗೆ ಮಾತನಾಡಲು ತೊಡಗಿದ,
“ಬಾಂಗ್ಲಾದೇಶದವರೆ ನೀವು?”
“ಅಲ್ಲ. ಭಾರತೀಯರು” ಎಂದೆ.
“ಅಕ್ಕಪಕ್ಕದ ದೇಶದವರಲ್ಲವೆ. ಏನೂ ವ್ಯತ್ಯಾಸವಿಲ್ಲ ಬಿಡಿ, “ ಎಂದ—ತರಲೆ ಮಾಡುತ್ತ.
"ಹೌದು. ನಿಜ. ನೀವು ಜರ್ಮನರಾಗಿರುವುದಕ್ಕೂ ಫಿನ್ನಿಶ್ ಆಗಿರುವುದಕ್ಕೂ ವ್ಯತ್ಯಾಸವೇ ಇಲ್ಲವೇ? ಹಾಗಿದ್ದರೆ ಹಿಟ್ಲರ್ ನಿಮಗೆ ಆದರ್ಶವೇ?" ಎಂದು ಕೇಳಿದೆ.
"ಅದು ಹೇಗೆ ಸಾಧ್ಯ?!" ಎಂದು ಗಾಬರಿಯಾದಂತೆ ನಟಿಸಿದ.
"ಹಾಗೆ ನಾವು. ನಾನು ದಕ್ಷಿಣ ಭಾರತೀಯ. ಹಾಗಂತ 'ಸಮಗ್ರ' ಭಾರತೀಯರು ನಮ್ಮನ್ನು ಪರಿಗಣಿಸಿಬಿಟ್ಟಿದ್ದಾರೆ. ಈತ ಉತ್ತರ ಭಾರತೀಯ. ಹಾಗಂತ ದಕ್ಷಿಣ ಭಾರತೀಯನಾದ ನಾನು ಪರಿಗಣಿಸುತ್ತೇನೆ. ಸ್ವತಃ ಈತ ತಾನು 'ಸಮಗ್ರ ಭಾರತೀಯ' ಎಂದು ಭಾವಿಸಿಕೊಂದಿದ್ದಾನೆ", ಎಂದೆ.
"ಇಲ್ಲಿಗೇಕೆ ಬಂದಿರುವೆ?"
ವಿವರವೆಲ್ಲವನ್ನೂ ಆತನಿಗೆ ಹೇಳಿದೆ. ಇಬ್ಬರಿಗೂ ಯುನೆಸ್ಕೋ ಸ್ಕಾಲರ್ಶಿಪ್ ಸಿಕ್ಕಿದೆಯೇ ಎಂದಾತ ತರಲೆ ಮಾಡಿದ. ಇಲ್ಲವೆಂದ. "ಈತ ಯಾರು" ಎಂದು ಭುಪ್ತನ ಕಡೆ ಬೊಟ್ಟು ಮಾಡಿ ಕೇಳಿದ.
"ನಾನು ಇಲ್ಲಿನವ, ಫಿನ್ನಿಶ್ ಎಂದು ಆತನಿಗೆ ಹೇಳಬೇಡ. ತಲೆ ತಿನ್ನುತ್ತಾನೆ," ಎಂದು ಭುಪ್ತ ಸಂಜ್ಞೆ ಮಾಡಿದ ನನಗೆ.
"ಈತ ಭಾರತೀಯ. ಸುಮ್ಮನೆ ಇಲ್ಲಿಗೆ ಬಂದಿದ್ದಾನೆ" ಎಂದೆ.
"ಸುಮ್ಮನೆ ಇಷ್ಟು ದೂರ ಏಕೆ ಬರಬೇಕು? ನೀವಿಬ್ಬರೂ ಗೇ-ಗಳೇ?" ಎಂದು ಕೇಳಿದ.
ಇಬ್ಬರೂ ಗಾಭರಿಯಾದೆವು--ನಾನು ಮತ್ತು ಭುಪ್ತ. ಸ್ವಲ್ಪ ಬಿಟ್ಟರೆ ಈ ಫಿನಿಶ್ ತರಲೆ ಮಾತಿನಲ್ಲೇ ನಮ್ಮಿಬ್ಬರನ್ನು ವಿವಸ್ತ್ರನನ್ನಾಗಿಸಿಬಿಡುತ್ತಾನೆ ಎನ್ನಿಸಿಬಿಟ್ಟಿತು. ತರಲೆಯ ಗೆಳತಿ ಮತ್ತು ಗೆಳೆಯ ನಮಗಿಂತಲೂ ಗಾಭರಿಗೊಂಡರು.
"ಅಲ್ಲ" ಎಂದೆ.
ತರಲೆ ಮುಂದುವರೆಯಿತು, "ಹಾಗಿದ್ದರೆ ಭಾರತದಿಂದ ಇಷ್ಟು ದೂರ ಈತ ನೀನಿರುವಾಗಲೇ, ನಿನ್ನನ್ನೇ ಏಕೆ ಹುಡುಕಿಕೊಂಡು ಬಂದಿದ್ದಾನೆ?" ಎಂದು.
ಆಗ ಭುಪ್ತ ಫಿನ್ನಿಶ್ ಮಾತನಾಡತೊಡಗಿದ. ತರಲೆಯ ಗೆಳೆಯ ಮತ್ತು ಗೆಳತಿ ಮತ್ತೂ ಗಾಭರಿಯಾದರು. ಫಿನ್ನಿಶ್ ನಿಯಮಗಳು ವಿಕ್ಷಿಪ್ತವಾದುವು. ತೀರ ಸಂಕೋಚದ್ದವೂ ಸಹ. ಮಿಸ್ತರಲೆ ಮತ್ತು ಮಿಸ್ಟರ್ತರಲೆಗಳು ಬಾಲ ಮುದುಡಿಕೊಂಡು ಕುಳಿತುಬಿಟ್ಟಿದ್ದವು. ಮೂರನೆಯ ಕಾಫಿ ಕುಡಿದೆ. ಎರಡನೆಯ ಕಾಫಿ ಮೊದಲನೆಯದರ ಅರ್ಧ ಬೆಲೆ. ಮೂರನೆಯ ಕಾಫಿ ಎರಡನೆಯದರ ಇನ್ನರ್ಧ. ಅಂದರೆ ಮೂರನೆಯ ಕಾಫಿ ಫ್ರೀ!
"ನನಗೆ ಗೊತ್ತಿಲ್ಲದೇ ಎಷ್ಟೋ ಬಾರಿ ಮೂರು ಮೂರು ಕಾಫಿ, ಮೂರನೆಯ ಕಾಫಿ ಎಲ್ಲ ಕಾಸು ಕೊಟ್ಟು ಕುಡಿದಿದ್ದೆ ಇದೆ, ಇದೇ ಅಕಿ ಕೌರಸ್ಮಾಕಿಯ ಬಾರಿನಲ್ಲಿ. ಭುಪ್ತ ಕೌಂಟರಿನ ಬಳಿ ಬಂದು ವಾದ ಮಾಡತೊಡಗಿದ, "ಮೂರನೆಯ ಕಾಫಿ ಫ್ರೀಯಲ್ಲವೇ?"
"ಇರಬಹುದು" ಎಂದಳು ಕೌಂಟರಿನಲ್ಲಿದ್ದಾಕೆ.
"ಇಷ್ಟು ದಿನ ಮೂರನೆಯ ಕಾಫಿಗೆ ಕಾಸು ತೆಗೆದುಕೊಂಡದ್ದು ಏಕೆ?"
"ಇರಬಹುದು, ಮೇ ಬಿ" ಅಂದಳು.
"ಛೆ" ಎಂದುಕೊಂಡು ಸುಮ್ಮನಾದೆವು. ಸುಮ್ಮನಾಗಿಬಿಟ್ಟರೆ ನಿಯಮ ಬದಲಾಗಿಬಿಡುವುದೆ? ಫಿನ್ನಿಶ್ ಜನ ಮತ್ತು ಸರ್ಕಾರ ಗ್ಸೆನೋಫೋಬಿಯದಿಂದ ನರಳುತ್ತಿದೆಯೇ? ವಲಸಿಗರನ್ನು ನಿಯಮದ ಪ್ರಕಾರ ತಡೆಯಲಾಗದಿದ್ದರೆ ಮತ್ತೊಂದು ರೀತಿಯಲ್ಲಿ ಮಟ್ಟಹಾಕುವುದು ಎಲ್ಲ ನಾಗರೀಕತೆಯ ಲಕ್ಷಣ. ಇದೇ ಮುಂತಾದ ಅನೇಕ ವಿಷಯಗಳ ನಡುವೆ ಭುಪ್ತ ಮತ್ತು ನಾನು ಕೆಲಸಕ್ಕೆ ಬಾರದ ವಿಷಯ ಯಾವುದು, ಬರುವಂತಹುದು ಯಾವುದು ಎಂದು ಮಾತನಾಡತೊಡಗಿದೆವು. ಈಗ ಮಾತನಾದುತ್ತಿರುವುದೂ ಸಹ ಆ ಪಟ್ಟಿಯಲ್ಲಿ ಸೇರಿಹೋಗಿತ್ತು ಎಂದು ಹೇಳಬೇಕಿಲ್ಲವಷ್ಟೇ. ಅವುಗಳ ನಡುವೆ ಭುಪ್ತನ ಆಟೋಬಯಾಗ್ರಫಿಯ ವಿವರವೂ ಸೇರಿತ್ತು.
*
ಗೇ ಪ್ರಶ್ನೆ ಎತ್ತಿದಾತ ಮತ್ತು ಆತನ ಗೇಯಲ್ಲದ ಸ್ನೇಹಿತರು ಕದ್ದು ಮುಚ್ಚಿ ನಮ್ಮನ್ನೇ ನೋಡುತ್ತಿದ್ದರು. ಅಥವಾ ಹಾಗೆಂದು ನಾವು ಭಾವಿಸಲು ಪ್ರಯತ್ನಿಸುತ್ತಿದ್ದೆವು. ಇದ್ದಕ್ಕಿದ್ದಂತೆ ಎಲ್ಲವೂ ಎಲ್ಲರೂ ಮೌನವಾಗಿಬಿಟ್ಟಿತು, ಮೌನವಾಗಿಬಿಟ್ಟರು. ಆಗಾಗ ಹೀಗಾಗುವುದು ಸಹಜ. ನಮ್ಮಲ್ಲಿ ಒಂದು ನಂಬಿಕೆ ಇದೆ. ಬಿರುಗಾಳಿ, ಚಂಡಮಾರುತ ಬರುವ ಮುನ್ನದ ಅಗಾಧ ಮೌನದಂತೆ. ಎಂಥಹ ಮೌನವದೆಂದರೆ, ಪಬ್ಬಿನಲ್ಲಿನ ಸಂಗೀತವೂ ಸೈಲೆಂಟ್ ಮೋಡಿಗೆ ಹೋಗಿ ಸೇರಿಬಿಟ್ಟಿತು. ಕಾಲವೇ ಸ್ಥಿರವಾಗುವಂಥಹ ವಾತಾವರಣ. ಆಗ ಮೂಲೆಯಲ್ಲಿ ಕಂಡಳು ಆ ಹೆಂಗಸು. ಮುಂದಿನ ಒಂದೆರೆಡು ಗಂಟೆಗಳ ಕಾಲ ಆಕೆ ಎಬ್ಬಿಸಲಿರುವ ಬಿರುಗಾಳಿಯ ಪರಿಕಲ್ಪನೆಯೂ ನನಗಿರಲಿಲ್ಲ.
ನಾನು ನಾಲ್ಕಾರು ಕಾಫಿ ಕುಡಿದ ನಂತರ, ಭುಪ್ತ ಅಷ್ಟೇ ನಿರ್ದಿಷ್ಟ ಸಂಖ್ಯೆಯ ಬಿಯರ್ ಕುಡಿದ ನಂತರ ಆತ ಬಾತ್ ರೂಮಿಗೆ ಹೋದ. ನಾನು ಒಬ್ಬನೇ ಕುಳಿತಿದ್ದೆ. ಮೂಲೆಯಲ್ಲಿ ಮೂಲೆಗುಂಪಾಗಿ ಕುಳಿತಿದ್ದ ಆ ಒಬ್ಬಳೇ ಹೆಂಗಸು--ಐವತ್ತು ವರ್ಷದಾಕೆ, ಅರವತ್ತರಂತೆ ಕಾಣುತ್ತಿದ್ದಳು--ಎದ್ದು ನಾನು ಕುಳಿತಿದ್ದ ಟೇಬಲ್ಲಿನಲ್ಲಿ ಬಂದು ಕುಳಿತಳು. ಜೀರೋ ಫಿಗರ್ ಅನ್ನುತ್ತೇವಲ್ಲ ಹಾಗೆ, ಆಥವ ಬೆನ್ನುಮೂಳೆ ಹೊಟ್ಟೆಯಲ್ಲಿ ಕಾಣುವಂತೆ ಇದ್ದಳು, ಕಾಣದಿದ್ದರೂ ಸಹ.
"ಹಲೋ"
"ಹಲೋ"
"ನಾನಿಲ್ಲಿ ಕುಳಿತುಕೊಳ್ಳಬಹುದೇ?" ಎಂದು ಕೇಳಿದಳು, ಕುಳಿತಾದ ಮೇಲೆ, "ನನ್ನ ಹೆಸರು ಕಿರ್ಸಿ ವಾಕಿಪರ್ಥ" ಎಂದಳು.
"ನಾನು ಅನಿಲ್"
"ಭಾರತೀಯ?!"
"ಹೌದು ಇಲ್ಲ ಎಂಬ ಎರಡು ವಿರುದ್ದ ಭಾವಗಳಿಗೂ ಒಂದೇ ರೀತಿ ಭುಜ ಆಡಿಸುವುದನ್ನು ನೋಡಿದ ತಕ್ಷಣ ತಿಳಿಯಿತು ನೀನು ಭಾರತೀಯ ಎಂದು" ಎಂದಾಕೆ ನಗತೊಡಗಿದಾಗ ಗಮನಿಸಿದೆ ಆಕೆ ಒಬ್ಬ ಜಿಪ್ಸಿ ಎಂದು. ಜಿಪ್ಸಿಗಳ ಬಗ್ಗೆ, ಜಿಪ್ಸಿಗಳಲ್ಲಿ ಒಂದು ನಂಬಿಕೆ ಇದೆ. ಅದು ಸತ್ಯವೂ ಇರಬಹುದು ಅಥವಾ ಇಲ್ಲದಿರಬಹುದು. ನಂಬಿಕೆಯ ಶಕ್ತಿಯೇ ಅಂತಹದ್ದು. ನಿಜದ ಬದ್ದತೆ, ನಿಜಕ್ಕೆ ಬದ್ಧವಾಗಿರುವ ಬದ್ದತೆ ಅದಕ್ಕಿಲ್ಲ. ಜಿಪ್ಸಿಗಳೆಲ್ಲ ತಾವು ಭಾರತೀಯರು ಅಥವಾ ಭಾರತ ಮಾತೆಯ ಸಂಜಾತರು ಎಂದೇ ನಂಬುತ್ತಾರೆ. ನೋಡಲು ಸ್ವಲ್ಪ ರಾಜಸ್ಥಾನಿಗಳಂತೆಯೂ, ವಸ್ತ್ರ-ವಿನ್ಯಾಸವೂ ಹಾಗೆಯೇ
ಫಿನ್ನಿಶ್ ಪ್ರಜೆಗಳಲ್ಲಿ ಜಿಪ್ಸಿಗಳೇ ಹೆಚ್ಚು ಮಾತುಗಾರರು. ರೊಮೇನಿಯದಿಂದ ಬಂದವರೇ ಹೆಚ್ಚು ಅಲ್ಲಿ. ಆದರೆ ನಂಬಿಕೆ ಮಾತ್ರ ನಾವು ಭಾರತೀಯರು ಎಂಬುದು!
"ಜಿಪ್ಸಿಗಳಲ್ಲಿ ನರ್ತಕಿಯರು ಹಾಡುಗಾರರೆ ಹೆಚ್ಚು. ನೀವು ಯಾವ ವೃತ್ತಿಯವರು?" ಎಂದು ಕೇಳಿದೆ.
"ನಾನೊಬ್ಬ ಮೆಸ್ಮೆರಿಸ್ಟ್" ಎಂದಳಾಕೆ.
"ಮೆಸ್-ಮೆರಿಸ್ಟ್?"
"ಹೌದು" ಎಂದಳಾಕೆ.
"ಸ್ವಲ್ಪ ಬಿಡಿಸಿ ಹೇಳಿ"
"ನಾವು ಮಾಯಾ ಮಂತ್ರ ಮಾಡುವುದಿಲ್ಲ. ಆದರೆ ಎಲ್ಲರಿಗೂ ನಿಜದಿಂದ ದೂರ ಹೋಗಿಬಿಡಬೇಕು ಅನ್ನಿಸುವುದಿಲ್ಲವೇ, ಪ್ರತಿ ದಿನಕ್ಕೊಮ್ಮೆಯಂತೆ?"
"ಹೌದು?"
"ಆ ನಿಜದಿಂದ ದೂರ ಓಡಬೇಕು ಎಂಬ ಮನುಷ್ಯರ ವೀಕ್ನೆಸ್ ಅನ್ನು ಕ್ರಿಯಾತ್ಮಕವಾಗಿ ಬಳಸುತ್ತೇವೆ ನಾವುಗಳು, ಮೆಸ್ಮೆರಿಸ್ಟುಗಳು. ಸೊ, ನಿನ್ನ ಬಗ್ಗೆಯೇ ಹೇಳು" ಎಂದು ಒತ್ತಾಯಿಸಿದಳು. ಸುತ್ತಲೂ ನೋಡಿದೆ. ಒಂದಿಬ್ಬರು ಕುಡಿಯುತ್ತಿದ್ದುದು ಬಿಟ್ಟರೆ ಇದ್ದ ಆರೇಳು ಟೇಬಲ್ಲುಗಳಲ್ಲಿ ಒಂದಿಬ್ಬರು ಕುಳಿತಿದ್ದರು. ಸಪ್ಲೈಯರ್ಗಳು ಸಹ ಕುಡಿಯಲು ಪ್ರಾರಂಭಿಸಿದ್ದರು. ಭುಪ್ತ ಬಾತ್ರೂಮಿನಿಂದ ಹೊರಗೆ ಹೋಗಿ ಯಾರೊಂದಿಗೋ ಮಾತನಾಡುತ್ತಿದ್ದ. ಇಷ್ಟರಲ್ಲೇ ಒಳಬರುವ ಸಾಧ್ಯತೆ ಇಲ್ಲ. 'ಜಿಪ್ಸಿಗಳು ಮಹಾನ್ ಕಳ್ಳರು ಎಂದು ಕೇಳಿದ್ದೆ' ಎಂದು ಅಂದುಕೊಳ್ಳುತ್ತಿರುವಾಗಲೇ "ಸುಳ್ಳು" ಎಂದುಬಿಟ್ಟಳು ಕಿರ್ಸಿ.
"ಏನು?" ಎಂದೇ ಗಾಭರಿಯಾಗಿ.
"ಏನಿಲ್ಲ" ಎಂದು ನಕ್ಕಳು.
\"ನಿನ್ನ ಭವಿಷ್ಯ ಹೇಳಲೇ?"
"ಬೇಡ"
"ನಿನ್ನ ಪೂರ್ವಾಪರ ತಿಳಿಸಲೇ"
"ಬೇಡ" ಎಂದೆ, ಆಕೆ ಕಾಸು ಕೀಳಬಹುದು ಎಂದು ಭಾವಿಸುತ್ತ.
"ಭಾರತದಲ್ಲಿ ಭವಿಷ್ಯ ಹೇಳುವವರು ಯಾವಾಗಲೂ ಫೂಟ್ಪಾತಿನ ಮೇಲೆ ಇರುತ್ತಾರೆ" ಎಂದೆ.
"ಭವಿಷ್ಯ ಹೇಳುವವರ ಹಣೆಯಬರಹವೇ ಅಷ್ಟು" ಎಂದು ನಕ್ಕಳಾಕೆ, "ಆದರೆ ನಾನು ಕೇವಲ ಭವಿಷ್ಯ ಹೇಳುವವಳು ಮಾತ್ರವಲ್ಲ. ಐ ಆಮ್ ಅ ಮೆಸ್-ಮರಿಸ್ಟ್" ಎಂದಳು.
"ಏನು ಹಾಗೆಂದರೆ?"
"ಈಗಷ್ಟೇ ಹೇಳಿದೆನಲ್ಲ. ಭ್ರಮೆ ಸೃಷ್ಟಿ ಮಾಡುವುದು, ಈಗಾಗಲೇ ಸೃಷ್ಟಿಯಾಗಿರುವ ನಿಮ್ಮ ಭ್ರಮೆಯನ್ನು ನಿಮಗೆ ತೋರಿಸುವದು. ಅದರಿಂದ ಹೊರಕ್ಕೆ ಬರುವ ಪ್ರಯತ್ನವೂ ಎಂತಹ ಭ್ರಮೆ ಎಂದು ತಿಳಿಸುವುದು. ಇಂತಹ ತಪ್ಪಿಸಿಕೊಳ್ಳಲಾಗದ ಭ್ರಮೆಗಳಿಂದ ನೀವು ದಿಗ್ಬ್ರಮೆಗೊಂಡು ಖುಷಿಗೊಂಡಾಗ ನಿಮ್ಮಂಥವರಿಂದ ಹಣ ಸಂಪಾದಿಸುವುದು. ಅಷ್ಟೇ" ಎಂದಳು.
"ಜನ ಇನ್ನೂ ಅಂತಹವನ್ನೆಲ್ಲ ನಂಬುತ್ತಾರ?" ಎಂದು ಕೇಳಿದೆ. ಇನ್ನೂ ಭುಪ್ತ ಬಂದಿರಲಿಲ್ಲ.
"ನೀನು ಈಗಾಗಲೇ, ಈ ಕ್ಷಣದಲ್ಲಿಯೂ ಭ್ರಮೆಯ ವರ್ತುಲದಲ್ಲಿ ಇದ್ದೀಯ. ಟೇಬಲ್ಲಿನ ಕೆಳಗಿನ ಹಾವು ನಿನ್ನನ್ನು ತುಳಿಯದಿರಲಿ" ಎಂದು ತುಂಟತನದಿಂದ ನಕ್ಕಳು.
ಏನೋ ಅನುಮಾನ ಬಂದು ಕಣ್ಣಂಚಿನಲ್ಲೇ ನೋಡಿದೆ, ಟೇಬಲ್ಲಿನ ಕೆಳಗೆ. ಅಲ್ಲೇನೂ ಇರಲಿಲ್ಲ.
"ಅರೆ ನಿಜವೆಂದು ನಂಬಿ ಬಿಟ್ಟೆಯ. ಇಂತಹ ಚಳಿಪೂರಿತ ನಗರಪ್ರದೇಶದಲ್ಲಿ ಹಾವೆಂಬ ಹಾವು ಎಲ್ಲಿಂದ ಬಂದೀತು ಮಹರಾಯ" ಎಂದು ನಗತೊಡಗಿದಳು, "ಆದರೆ ಚಳಿಗೆ ನೆಲದ ಮೇಲೆ ಹರಿಯಲೋಲ್ಲದ ಹಾವು ಬೆಚ್ಚನೆಯ ಕಾವಿರುವ ಗೋಡೆಯ ಮೇಲೆ ನೆಲೆಸಬಾರದು ಎಂದೇನಿಲ್ಲವಲ್ಲ" ಎಂದಳು. ನಾನು ಕೌರಸ್ಮಾಕಿ ಪಬ್ಬಿನ ಎಲ್ಲ ಗೋಡೆಗಳನ್ನೂ ಪರಾಂಬರಿಸಿ ನೋಡಿದೆ.
"ಬಾ ಎಂದಾಗ ಬಂದು ಹೋಗು ಎಂಬಾಗ ಹೋಗಲು ನಾನು ಹೇಳುತ್ತಿರುವ ಹಾವು ನಿಜದ ನಾವೆನಲ್ಲವಲ್ಲ" ಎಂದು ಇನ್ನೂ ಜೋರಾಗಿ ನಗತೊಡಗಿದಳು. ಇದ್ದಬದ್ದ, ಕುಡಿತದಿಂದ ಅಳಿದುಳಿದಿದ್ದವರೆಲ್ಲ ತಿರುಗಿ ಆಕೆಯನ್ನೇ ನೋಡುತ್ತಿದ್ದರು. ಭುಪ್ತ ಹೊರಗಿನಿಂದಲೇ 'ಏನಾಗುತ್ತಿದೆ' ಎಂಬಂತೆ ನಮ್ಮತ್ತ ನೋಡಿದ.
"ಎಂಥಹ ಸ್ವಾರ್ಥಿ ನೀನು, ಕಾಸಿಲ್ಲದೆ ಬಿಟ್ಟಿಯಾಗಿ ಮೆಸ್-ಮರೈಸೆ ಆಗಬೇಕು ಅಂದುಕೊಂಡಿರುವೆಯಲ್ಲ. ಒಂದು ಬಿಯರ್ ಕೊಡಿಸು" ಎಂದು ಕಿರ್ಸಿ ಪೀಡಿಸತೊಡಗಿದಳು.
ಕೌಂಟರಿನ ಬಳಿ ಹೋಗಿ ಬಿಯರ್ ಕೊಂಡು ತಂದು ಕೊಟ್ಟೆ ಆಕೆಗೆ. ಕಿರ್ಸಿ ಖುಷಿಯಾದಳು.
"ನೀನು ಮೆಸ್-ಮರಿಸ್ಟ್ ಎಂದು ನಂಬುವುದು ಹೇಗೆ?" ಕೇಳಿದೆ ಬಿಯರ್ ಕೊಡಿಸಿದ ಅಧಿಕಾರದ ಆಧಾರದಿಂದ.
"ನಿಜ. ಈಗಾಗಲೇ ನನ್ನ ಕೈಚಳಕ ಚಾಲನೆಗೊಂಡಿದೆ ಎಂಬುದನ್ನೇ ನೀನು ಗಮನಿಸಿಲ್ಲವಲ್ಲ. ನೆಲದ ಚಳಿಗೆ ಹೆದರುವ ಹಾವು ಗೋಡೆಯ ಕಾವಿಗೆ ಆಕರ್ಷಿತವಾಗಿರುವುದನ್ನು ನೀನು ಗಮನಿಸಲೇ ಇಲ್ಲವೇ?" ಎಂದಳು.
ವಚನಸಾಹಿತ್ಯದ ಪದಗುಚ್ಛಗಳಂತೆ ಕೇಳುತ್ತಿದ್ದವು ಆಕೆಯ ಮಾತನಾಡುವ ಇಂಗ್ಲೀಷ್ ಪದಗಳು. ಏನೋ ಬಡಬಡಿಸುತ್ತಿದ್ದಾಳೆ ಎಂದುಕೊಂಡು ಸುಮ್ಮನಾದೆ. ಕ್ರಮೇಣ ಆಕೆಯೊಂದಿಗೆ ಮಾತನಾಡುತ್ತ ಇದುರಿನ ಗೋಡೆಯ ಕಡೆ ನೋಡಿದೆ.
ಸತ್ಯಜಿತ್ ರೇ ಛಾಯಾಚಿತ್ರದ ಬಳಿ ಜೀವಂತ ಹಾವೊಂದು ಗೋಡೆಯ ಮೊಳೆಗೆ ನೇತು ಹಾಕಲಾಗಿದ್ದ ಹಗ್ಗದಂತೆ ತೂಗಾಡುತ್ತಿತ್ತು!
"ಕಾಣುತ್ತಿದೆಯ ಹಾವು, ನನ್ನ ವೃತ್ತಿಸಾಮರ್ಥ್ಯಕ್ಕೆ ಸಾಕ್ಷಿಯಾಗಿ?" ಎಂದು ಆತ್ಮವಿಶ್ವಾಸದಿಂದ ಕೇಳಿದಳು.
"ಇಲ್ಲ" ಎಂದು ಸುಳ್ಳು ಹೇಳಿದೆ," ನನ್ನ ಭ್ರಮೆಯೂ ಇತರರಿಗೆ ಗೋಚರವಾಗುವದು ಹೇಗೆ ಸಾಧ್ಯ ಎಂದು ಭಾವಿಸಿ.
"ಕಾಲ ಬಳಿ ಇರುವುದು ಸುಳ್ಳಾದರೆ, ಗೋಡೆಯ ಮೇಲಿನದು ನಿಜ. ಅಥವ ಗೋಡೆಯ ಮೇಲಿನದು ಭ್ರಮೆ ಎಂದಾದರೆ ಕಾಲ ಬಳಿ ಇರುವುದು ಸತ್ಯ. ನೀನೆ ನಿರ್ಧರಿಸು" ಎಂದು ಗಂಭೀರವಾಗಿ ಕುಡಿಯತೊಡಗಿದಳು.
ನಾನು ಸ್ವಲ್ಪ ಹೊತ್ತು ಮೌನವಾಗಿ ಕುಳಿತೆ. ನೇರವಾಗಿ ನೋಡುವ ಧೈರ್ಯವಿಲ್ಲದೆ ಕಣ್ಣಂಚಿನಲ್ಲೇ ರೇ ಛಾಯಾಚಿತ್ರದ ಮೇಲೆ ಕಣ್ಣಾಡಿಸುತ್ತಿದ್ದೆ. ಹಾವು ಅಲ್ಲಿಯೇ ನುಲಿಯುವಂತೆ, ವೃತ್ತಾಕಾರವಾಗಿಯೇ, ಎಲ್ಲಿಗೂ ಹೋಗಲೋಲ್ಲದಂತೆ ಚಲಿಸುತ್ತಿತ್ತು. ಕಾಲಿನ ಬಳಿ ಏನೋ ಸರಸರ. ಖಂಡಿತ ಅದೇನೆಂದು ಗೊತ್ತಿದ್ದರೂ ನೋಡುವ ಧೈರ್ಯವಾಗಲಿಲ್ಲ.
"ಇನ್ನೂ ನಿನ್ನ ಹಠ ಬಿಡಲಿಲ್ಲವೇ," ಎಂದು ಗಂಭೀರವಾದಳು. ನಾನು ಪಕ್ಕಕ್ಕೆ ನೋಡಿದೆ. ಹೊರಗೆ ಭುಪ್ತ ಇನ್ನೂ ಯಾರೊಂದಿಗೋ ಮಾತನಾಡುತ್ತಲೇ ಇದ್ದ. ಆಶ್ಚರ್ಯವೆಂದರೆ ಆತನ ಎದಿರು ಯಾರೂ ಇರಲಿಲ್ಲ! ರಾತ್ರಿ ಒಂದು ಗಂಟೆ ಸಮಯವಿರಬಹುದು. ಭ್ರಮೆಯ ಮಾಯೆ ಎಂತಹುದೆಂದರೆ, ಆತನಿಗೂ ಭ್ರಮೆ ಹಿಡಿದಿರಬಹುದೇ ಅನ್ನಿಸತೊಡಗಿತು. ಏಕಾಂಗಿಯಾಗಿ, ಚಳಿಯಲ್ಲಿ ಆತ ಇಲ್ಲದವರೊಂದಿಗೆ ಮಾತನಾಡುತ್ತಿದ್ದ. ಒಂದೆರೆಡು ನಿಮಿಷ ಆತನನ್ನೇ ದಿಟ್ಟಿಸಿ ನೋಡುತ್ತಿದ್ದೆ. ಆತ ಇತ್ತ ತಿರುಗಿ ನನ್ನ ಕಡೆ ನೋಡಿದ. ಆಗ ಕಾಣಿಸಿತು--ಮೊಬೈಲಿನಲ್ಲಿ ಬ್ಲೂ ಟೂತ್ ಸಹಾಯದಿಂದ ಆತ ಯಾರೊಂದಿಗೋ ಮಾತನಾಡುತ್ತಿದ್ದ! ಭ್ರಮೆಯ ಮಾಯೆ ಅಂತಹದ್ದು!
ಆದರೆ ನನ್ನ ಕಾಲ ಬಳಿ ಸರಿದಾಡುತ್ತಿದ್ದನ್ನು ನಾನು ನೋಡಲು ಒಪ್ಪಲಿಲ್ಲ. ಎಡಗಾಲಿನಿಂದ ಬಲಗಾಲಿಗೆ, ಹಗ್ಗದಂತಹ ಚಲಿಸುವ 'ಅದರ' ಭಾವ ಹಾಗೆಯೇ ಮುಂದುವರೆದಿತ್ತು. ಯಾರನ್ನೂ ನೋಡುವುದು ಬೇಡವೆಂದು, ಭುಪ್ತನಿಂದ, ಕಿರ್ಸಿ ವಾಕಿಪಾರ್ಥಳಿಂದ, ಗೋಡೆಯ ಮೇಲಿನ ಹಾವಿನಿಂದ ತಪ್ಪಿಸಿಕೊಳ್ಳುವಂತೆ ನನ್ನ ಕಣ್ಣ ದೃಷ್ಟಿಯನ್ನು ಹರಿದಾಡಿಸತೊಡಗಿದೆ, ಫೀಲ್ಡರ್ಗಳ ನಡುವೆ ಚಂಡನ್ನು ತೂರಿಸುವವರಂತೆ.
"ಸಾರಿ ಅನಿಲ್. ಯಾರೋ ಹಳೆಯ ಸ್ನೇಹಿತ. ಫೋನ್ ಮಾಡಿದರೆ ಆಫ್ ಮಾಡುವ ಬಟನನ್ನು ಮರೆತುಬಿಡುತ್ತಾರೆ ಮೊಬೈಲಿಗರು. ತಡವಾಯಿತು. ಮತ್ತೊಂದು ಕಾಫಿ ಕುಡಿವೆಯ? ಈ ಪಬ್ ಮುಚ್ಚುವ ಸಮಯವಾಯಿತು. ನಾನು ಮತ್ತೊಂದು ಲ್ಯಾಪಿನ್ ಕುಲ್ತ ಬಿಯರ್ ಕುಡಿವೆ, " ಎಂದು ಬೆನ್ನುತಟ್ಟಿ ಎದುರಿಗೆ ಬಂದು ಕುಳಿತ ಕೇತನ್ ಭುಪ್ತ. ನಿಧಾನವಾಗಿ ತಲೆಎತ್ತಿ ನೋಡಿದೆ. ಆತನ ಪಕ್ಕ ಇರಬೇಕಿದ್ದ ಕಿರ್ಸಿ ವಾಕಿಪಾರ್ಥ ಎಂಬ ಮೆಸ್-ಮರಿಸ್ಟ್ ಇರಲಿಲ್ಲ! ಗೋಡೆಯ ಮೇಲೆ ನೋಡಿದೆ: ಹಾವು ಇರಲಿಲ್ಲ, ರೇ ಛಾಯಾಚಿತ್ರ ಹಾಗೆ ಇದ್ದಿತು. ನನ್ನ ಕಾಲಿನ ಬಳಿ, ಟೇಬಲ್ಲಿನ ಕೆಳಗೆ ನೋಡಿದೆ. ಏನೂ ಇರಲಿಲ್ಲ!
ದಡಾರನೆ ಯಾರೋ ಪಬ್ಬಿನ ಬಾಗಿಲು ಧೂಡಿಕೊಂಡು ಒಳಬಂದರು, "ಬಿಯರ್ ಪ್ಲೀಸ್" ಎನ್ನುತ. ಪರಿಚಿತ ಧ್ವನಿ ಎಂದುಕೊಂಡು ಆಕೆಯನ್ನು ನೋಡಿದೆ. ಆಕೆ ಕೌಂಟರಿನ ಸಮೀಪ ಹೋಗಿ ಬಿಯರ್ ಕೊಂಡು, ಕಾಸು ಪಾವತಿ ಮಾಡಿ ಕುಡಿಯುತ್ತ ಪಬ್ಬಿನೊಳಗೆಲ್ಲ ಒಮ್ಮೆ ಸಿಂಹಾವಲೋಕನ ಮಾಡಿದಳು. ಭುಪ್ತನನ್ನು ನೋಡುತ್ತಲೇ, "ಹಾಯ್ ಭುಪ್ತ. ಎಷ್ಟು ದಿನಗಳ ನಂತರ", ಎಂದು ಬಂದು ಬಾಚಿ ತಬ್ಬಿಕೊಂಡಳು. ಹಸ್ತಲಾಘವ ಮಾಡುವ ಪದ್ಧತಿಯು ತಬ್ಬಿಕೊಳ್ಳುವ ಪದ್ದತಿಯಾಗಿ ಬದಲಾದದ್ದು ಚಳಿಪೀಡಿತ ದೇಶಗಳ ಥನ್ಡಿಯಿಂದಲೇ ಇರಬೇಕು ಎಂದುಕೊಂಡೆ. ಅವರಿಬ್ಬರೂ ಪರಸ್ಪರ ಸ್ವಲ್ಪ ಹೊತ್ತು ಔಪಚಾರಿಕವಾಗಿ ಮಾತನಾಡಿದರು. ನಾನು 'ಏನಾಗುತ್ತಿದೆ ನನಗೆ' ಎಂದುಕೊಂಡು ಗಾಭರಿಯಾದೆ. ಭುಪ್ತ ಆಕೆಯನ್ನು ನನಗೆ ಮತ್ತು ನನ್ನನ್ನು ಆಕೆಗೆ ಪರಿಚಯಿಸಿದ.
“ನನ್ನ ಹೊಸ ಪರಿಚಿತ. ಭಾರತದವ. ಕಲಾ ಇತಿಹಾಸಕಾರ. ಕಲಾ ವಿಮರ್ಶಕ. ಆರ್ಟ್ ಮಾಡುತ್ತಾರಲ್ಲ. ಅವರ ಹಣೆಯ ಬರಹಗಳನ್ನು ನಿರ್ಧರಿಸುವಾತ. ಭಾತರದಲ್ಲೇ ಈತ ವರ್ಲ್ದ್ ಫೇಮಸ್,” ಎಂದು ನನಗೆ ನಾನೇ ಗುರುತಿಸಲಾಗದಂತೆ ನನ್ನನ್ನು ಪರಿಚಯ ಮಾಡಿಕೊಟ್ಟ.
"ಅಂದ ಹಾಗೆ ನಿಮ್ಮ ಪರಿಚಯವಾಗಲಿಲ್ಲ" ಎಂದೆ ಆಕೆಯನ್ನು ನೋಡುತ್ತ.
"ಹೆಸರಿನಲ್ಲೇನಿದೆ ಬಿಡಿ. ಅಂದ ಹಾಗೆ ನಿಮ್ಮ ಅಂಗೈ ಮುಷ್ಠಿಯಲ್ಲಿ ಏನಿದೆ?" ಎಂದಾಕೆ ಕೇಳಿದಾಗಲೇ ನನಗೆ ತಿಳಿದದ್ದು, ನನ್ನ ಕೈ ಮುಷ್ಠಿಯಾಗಿದೆ ಮತ್ತು ಅದರೊಳಗೆ ಏನೋ ಇದೆ, ಅದೂ ನನ್ನ ಗಮನಕ್ಕೆ ಬರದಂತೆ ಎಂದು. ಅಂಗೈ ಅಗಲಿಸಿ ನೋಡಿದೆ. ಅದರೊಳಗೆ ಒಂದು ರುದ್ರಾಕ್ಷ ಮಣಿ ಇದ್ದಿತು. ಫಿನ್ಲೆಂಡಿನಲ್ಲಿ ರುದ್ರಾಕ್ಷ ಮಣಿ!
"ಇದು ಮೆಸ್-ಮರಿಸ್ಮ್ ಅಭ್ಯಸಿಸುವವರು ಮಾತ್ರ ಬಳಸುವ ರುದ್ರಾಕ್ಷ. ನಿನಗೆ ಹೇಗೆ ಸಿಕ್ಕಿತು? ಇದನ್ನು ಕೈಯಲ್ಲಿ ಹಿಡಿದು, ಬೆಳಕಿನಿಂದ ದೂರ ಮಾಡಿದರೆ ಕಣ್ಣೆದುರಿಗೆ ಭ್ರಮೆ ಸೃಷ್ಟಿಯಾಗತೊಡಗುತ್ತದೆ. ಇಲ್ಲದ ಹಾವು ಕಾಣತೊಡಗುತ್ತದೆ, ಕಾಲಿಗೆ ತೊಡಕಾಗುತ್ತದೆ," ಎಂದು ಆಕೆ ಹೇಳಿದ್ದು ಆಗ ನನ್ನ ಗ್ರಹಿಕೆಗೆ ಬರಲಿಲ್ಲ. ಏಕೆಂದರೆ ಕೆಲವೇ ನಿಮಿಷಗಳ ಹಿಂದೆ ಭೇಟಿ ಮಾಡಿದ್ದ ಕಿರ್ಸಿ ವಾಕಿಪಾರ್ಥಳನ್ನೇ ಆಕೆ ಶೇಕಡ ನೂರು ಹೋಲುತ್ತಿದ್ದಳು. ವಸ್ತ್ರ-ವಿನ್ಯಾಸ ಮಾತ್ರ ಬದಲಾಗಿತ್ತು. ಆಕೆ ಮಾತ್ರ ನನ್ನ ಪರಿಚಯವೇ ಇಲ್ಲದಂತೆ, ನಾನಾಕೆಗೆ ಬಿಯರ್ ಕುಡಿಸಿದ್ದರೂ ಗುರ್ತಿಲ್ಲದಂತೆ ಇದ್ದುಬಿಟ್ಟಿದ್ದಳು.
ಭುಪ್ತ ಆಕೆಯ ರಕ್ಷಣೆಗೆ ಬಂದು ಆಕೆಯನ್ನು ಪರಿಚಯಿಸಿದ, "ಈಕೆ ಸಮಕಾಲೀನ ಕಲೆಯ ಕ್ಯುರೆಟರ್. ತುರ್ಕು ವಿಶ್ವವಿದ್ಯಾಲಯದಲ್ಲಿ ಕ್ಯುರೆಶನ್ ವಿಭಾಗದಲ್ಲಿ ಪಾಠ ಹೇಳುತ್ತಿದ್ದಾಳೆ. ಈಕೆಯ ಹೆಸರು ಪ್ರೊಫೆಸರ್ ಕಿರ್ಸಿ ವಾಕಿಪಾರ್ಥ," ಎಂದು!!!
"ಏನೋ ಕೇಳಬೇಕೆಂದು ಪ್ರಯತ್ನಿಸುತ್ತಿರುವಂತಿದೆ?" ಎಂದು ಕಿರ್ಸಿ (ಎಂಬಾಕೆ) ನನ್ನ ಕೇಳಿದಳು.
"ನಾನು ಅಂಗೈ ಮುಷ್ಠಿ ತೆಗೆವ ಮುನ್ನ ಅದರೊಳಗೆ ರುದ್ರಾಕ್ಷ ಇದೆ ಎಂಬುದು ನಿಮಗೆ ಮೊದಲೇ ತಿಳಿದಿತ್ತೆ?" ಎಂದು ಕೇಳಿದೆ.
"ಹೌದು ಮತ್ತು ಇಲ್ಲ. ಮೆಸ್-ಮೆರಿಸ್ಟರು ತಮ್ಮ ಕೆಲಸ ಮುಗಿದ ಮೇಲೆ, ಮೆಸ್-ಮರೈಸೆ ಮಾಡಿದ ಮೇಲೆ ತಮ್ಮ ಕಕ್ಷೀಧಾರರ ಕೈಯಲ್ಲಿ ಬಿಟ್ಟು ಹೋಗುವುದು ರುದ್ರಾಕ್ಷವನ್ನೇ. ನೀನು ಮುಷ್ಠಿ ಹಿಡಿದೇ ಇದ್ದುದನ್ನು ನೋಡಿ ಇದು ಮೆಸ್-ಮರಿಸ್ಟಳ ಕೆಲಸವೇ ಇರಬೇಕು ಎಂದು ಅರ್ಥಮಾಡಿಕೊಂಡೆ" ಎಂದಳು.
"ಆಕೆಯ ಹೆಸರೂ ನಿನ್ನ ಹೆಸರೂ, ಆಕೆಯ ಮತ್ತು ನಿಮ್ಮ ನಡುವಣ ನೂರು ಶೇಕಡ ಹೋಲಿಕೆ--ಇವೆಲ್ಲ ಕೇವಲ ಕಾಕತಾಳೀಯವಲ್ಲ ಅಲ್ಲವೇ?"
"ಅದಕ್ಕೆ ಕಾರಣವಿದೆ. ಆಕೆಯೇ ನಾನಿರಬಹುದು ಎಂದು ನೀನು ಕೇಳಲಿಲ್ಲ, ಸಧ್ಯ. ರುದ್ರಾಕ್ಷ ಇನ್ನೂ ನಿನ್ನ ಕೈಯಲ್ಲೇ ಇದೆಯಲ್ಲ" ಎಂದಾಕೆ ಮುಸಿ ಮುಸಿ ನಕ್ಕಳು.
ಕೂಡಲೇ ರುದ್ರಾಕ್ಷವನ್ನು ಟೇಬಲ್ಲಿನ ಮೇಲೆ ಹಾಕಿದೆ. ಎದುರಿಗೆ ಇದ್ದದನ್ನು ಅಥವಾ ಇಲ್ಲದುದನ್ನು ಕಂಡು ಗಾಭರಿಯಾದೆ: ನಾನು ಮತ್ತು ಭುಪ್ತ ಮಾತನಾಡುತ್ತ ಅಳಿದುಳಿದ ಕಾಫಿ ಮತ್ತು ಬಿಯರ್ ಬಾಟಲಿಗಳನ್ನು ಫುಟ್ಪಾತಿನ ಮೇಲೆ ಇರಿಸಿಕೊಂಡು, ಕೌರಸ್ಮಾಕಿ ಪಬ್ಬಿನ ಹೊರಗೆ ಕುಳಿತಿದ್ದೆವು! ಪಬ್ ಮುಚ್ಚಿತ್ತು. ಒಳಗಿನ ಲೈಟ್ಗಳೆಲ್ಲ ಆರಿಸಲ್ಪಟ್ಟಿತ್ತು!
ಇದುರಿಗೆ ಕಿರ್ಸಿ ವಾಕಿಪಾರ್ಥ ಇರಲಿಲ್ಲ. ಆಕೆ ಇರಲಿಲ್ಲ ಎಂಬುದನ್ನೂ ಆಮೇಲೆ ಗಮನಿಸಿದೆನಷ್ಷ್ಟೆ!! //