ಹೊಸ ವರುಷದ ಹೊಸ ಕ್ಯಾಲೆಂಡರ್..

ಹೊಸ ವರುಷದ ಹೊಸ ಕ್ಯಾಲೆಂಡರ್..

"ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿಂದು ಬರಬೇಕು" ಎಂದು ಈ ಕಾಲದಲ್ಲಿ, ಅದೂ ನಮ್ಮ ಮನೆಯಲ್ಲಿ, ಗುರು ವ್ಯಾಸರು ತಮ್ಮ ಶಿಷ್ಯರಿಗೆ ಹೇಳಿದ್ದರೆ..............


ಅವರ ಎಲ್ಲಾ ಶಿಷ್ಯರು ಕನಕದಾಸರಾಗಿರುತ್ತಿದ್ದರು!!!!!


ನಮ್ಮ ಮನೆಯಲ್ಲಿ ಶಿಷ್ಯರು ಎಲ್ಲೇ ಅಡಗಿ ಕುಳಿತರೂ, ಅಲ್ಲೊಂದು ಫೋಟೋ/ಕ್ಯಾಲೆಂಡರ್ ಅವರನ್ನು ದಿಟ್ಟಿಸಿ ನೋಡುತ್ತಿರುತ್ತದೆ!


ಹಾಗೆಂದು ನಾನು ಕ್ಯಾಲೆಂಡರ್ ಪ್ರಿಯನೂ ಅಲ್ಲ. ಮಹಾನ್ ದೈವಭಕ್ತನೂ ಅಲ್ಲ. ಬಾಬಾರನ್ನು ನಂಬದಿದ್ದರೂ ಆಳೆತ್ತರದ ಕ್ಯಾಲೆಂಡರ್‌ನಲ್ಲಿರುವ ಬಾಬಾ ನಾವು ಊಟಮಾಡುವುದನ್ನು ೩ ವರ್ಷದಿಂದ ಗಮನಿಸುತ್ತಿದ್ದಾರೆ.


ತುಂಬಿದ ಬಿ.ಎಮ್.ಟಿ.ಸಿ. ಬಸ್ಸಂತೆ, ನಮ್ಮ ದೇವರ ಕೋಣೆಯೂ ಫುಲ್. ಕಳೆದ ವಾರ ಒಬ್ಬರು " ನೋಡಿ ಗಣೇಶರೆ, ನಿನ್ನೆ ಮದುವೆಮನೆಯಲ್ಲಿ ತಾಂಬೂಲದೊಂದಿಗೆ ಈ ಗಣೇಶ ವಿಗ್ರಹ ಕೊಟ್ಟರು. ಇದು ಬಲಮುರೀನಾ?...ಅಲ್ವಾ?....ಯಾವುದೋ ಒಂದು...ನೀವೇ ಇಟ್ಟುಕೊಳ್ಳಿ" ಎಂದು ಗಣೇಶನ ಪುಟ್ಟ ವಿಗ್ರಹ ಕೊಟ್ಟು ಹೋದರು. ಗಣೇಶನ ಮೂರ್ತಿ ಮುಂದೆ, ಕಂಠಪೂರ್ತಿ ಕುಡಿದು, ಹುಚ್ಚರ ಹಾಗೆ ಕುಣಿವವರು ಕೆಲವರಾದರೆ, ಗಣೇಶನ ಸೊಂಡಿಲು ಬಲಕ್ಕೆ ತಿರುಗಿದೆಯಾ,ಎಡಕ್ಕಾ, ಪೂಜೆಗೇನಾದರೂ ಕೊರತೆ ಆಗಬಹುದಾ ಎಂದು ಭಯಬೀಳುವವರು ಹಲವರು. ಹೊಟ್ಟೆತುಂಬಾ ಉಂಡು,ಇನ್ನು ಒಂದು ಅಗುಳು ಹೋಗಲೂ ಸ್ಥಳವಿಲ್ಲ ಎಂದ ರಾಮಕೃಷ್ಣ ಪರಮಹಂಸರು, ಜಿಲೇಬಿ ಬಂದಾಗ ಪುನಃ ಹಾಕಿಸಿಕೊಂಡು ತಿಂದಂತೆ, ಗಣೇಶನ ವಿಗ್ರಹ ಬಂದಾಗ ಫುಲ್ ಆದ ದೇವರ ಪೀಠದಲ್ಲೂ ಸ್ವಲ್ಪ ಸ್ಥಳ ಸಿಕ್ಕಿತು.


ಜನವರಿ ತಿಂಗಳು ಬಂತೆಂದರೆ ಪರಿಚಯವಿದ್ದವರು ಬಿಡಿ, ಇಲ್ಲದವರೂ ಸಹ ಹುಡುಕಿ ಬಂದು ಕ್ಯಾಲೆಂಡರ್ ಕೊಟ್ಟು ಹೋಗುವರು. "ಈಗಷ್ಟೇ ಮನೆಗೆ ಪೈಂಟ್ ಹಾಕಿಸಿದ್ದು....ಹೊಸ ಕ್ಯಾಲಂಡರ್ ಚೆನ್ನಾಗಿದೆ. ನಿಮ್ಮ ಫ್ರೆಂಡ್ ರಮೇಶನ....." ದೂರದಿಂದ ಪ್ರೀತಿಯಿಂದ ತಂದು ಕೊಡುವಾಗ ಬೇಡ ಎಂದು ಹೇಗೆ ಹೇಳಲಿ..


ಈ ವರ್ಷ ಹೊಸದಾಗಿ ಬಂದ ೩ ಕ್ಯಾಲಂಡರ್ ಹಿಡಕೊಂಡು ಮನೆಯೊಳಗೆ ಸುತ್ತುತ್ತಿದ್ದೇನೆ. ಒಂದೇ ಒಂದು ಮೊಳೆ ಖಾಲಿ ಇಲ್ಲ. ಹೊಡೆಯಲೂ ಸ್ಥಳವಿಲ್ಲ. "ಎಲ್ಲಾದರೂ ಸ್ಥಳ ಉಂಟೇನೇ?" ಎಂದು ನನ್ನಾಕೆಯ ಕೇಳಿದೆ. " ಇಲ್ಲೇ ನಿಂತರೆ ನನ್ನ ತಲೆಗೇ ಒಂದು ಮೊಳೆ ಹೊಡೆದು ಕ್ಯಾಲೆಂಡರ್ ನೇತು ಹಾಕುವಿರಿ" ಅಂದು ಅಡುಗೆ ಕೋಣೆಗೆ ಹೊರಟಳು. "ತಲೆಬದಲಿಗೆ ಬೆನ್ನಾದರೆ ೩ನ್ನೂ ಪಕ್ಕ ಪಕ್ಕ ನೇತುಹಾಕಬಹುದಲ್ವಾ.." ಅಂದೆ ಮೆಲ್ಲಗೆ. ನಿಮಗ್ಯಾರಿಗೂ ಸೌಂಡ್ ಕೇಳಿಸಲಿಲ್ಲ ತಾನೆ?


ತಲೆ ಸುತ್ತುತ್ತಾ ಇದೆ. ಸ್ವಲ್ಪ ಸುಧಾರಿಸಿಕೊಳ್ಳುತ್ತೇನೆ.


-ಗಣೇಶ.

Rating
No votes yet

Comments