ಮನುಷ್ಯ ಮನುಷ್ಯನನ್ನೇಕೆ ಅರ್ಥ ಮಾಡಿಕೊಳ್ಳುವುದಿಲ್ಲ?

ಮನುಷ್ಯ ಮನುಷ್ಯನನ್ನೇಕೆ ಅರ್ಥ ಮಾಡಿಕೊಳ್ಳುವುದಿಲ್ಲ?

 


    
                                      
 ಆ ದಿನ ನಾನು ಮನೆಗೆ ಹಿಂತಿರುಗುವಾಗ ನಾಲ್ಕು ಬಾರಿ ಯೋಚಿಸಿದ್ದು ಆ ದಿನ ಆಫೀಸಿನಲ್ಲಿ ನಡೆದ ಒಂದು ವಿಷಯದ ಬಗ್ಗೆ. ಅಂದು ನಾನು ನನ್ನ ಪಕ್ಕ ಕುಳಿತಿದ್ದ ನನ್ನ ಸ್ನೇಹಿತೆಯನ್ನು ಬಹಳ ರೇಗಿಸಿದ್ದೇನು. ಅದಾವುದೋ ವಿಷಯಕ್ಕೆ ಅವಳ ಪರ್ಸು ತೆಗೆದುಕೊಂಡ ನಾನು ಅದನ್ನು ಆಫೀಸಿನ ಸಮಯ ಮುಗಿದು ಮನೆಗೆ ಬರುವ ಹೊತ್ತಾಗುವವರೆಗೂ ಹಿಂತಿರುಗಿಸಿರಲಿಲ್ಲ. ಅದು ಅವಳ ಮುಖವನ್ನು ಕೆಂಪಾಗಿಸಿತ್ತು. ಅವಳು ನನ್ನೊಂದಿಗೆ ಮಾತನಾಡದೆ ಹಾಗೆ ಮನೆಗೆ ಹೋಗುವಂತೆ ಮಾಡಿತ್ತು. ಈ ಸನ್ನಿವೇಶ ನಡೆಯುತ್ತಿರುವಾಗಲೇ ನನ್ನ ಆತ್ಮೀಯ ಗೆಳೆಯನೊಬ್ಬ ನನಗೆ ಮೂರ್ನಾಲ್ಕು ಬಾರಿ ಅದನ್ನು ಅವಳಿಗೆ ಹಿಂತಿರುಗಿಸುವಂತೆಯೂ ಮತ್ತು ಅವಳಿಗೆ ಕೋಪ ಬಂದಿದೆಯೆಂದು ಹೇಳಿದರೂ ನಾನು ಅದನ್ನು ಅರ್ಥ ಮಾಡಿಕೊಳ್ಳದೆ ಹೋದೆ. ನಂತರ ನಾನು ಹಾಗೆ ಯೋಚಿಸತೊಡಗಿದ್ದು ನಾವೇಕೆ ತಕ್ಷಣ ಸನ್ನಿವೇಶವನ್ನು ಅರ್ಥೈಸಿಕೊಳ್ಳುವುದಿಲ್ಲ ಎಂದು.

ನಾವು ಎಷ್ಟೋ ಬಾರಿ ತಮಾಷೆಯಾಗಿ ತೆಗೆದುಕೊಂಡದ್ದು ಪರರಿಗೆ ಹಿಂಸೆಯಾಗುತ್ತೆಂದು ಏಕೆ ಅರ್ಥಮಾಡಿಕೊಳ್ಳುವುದಿಲ್ಲ? ಈ ರೀತಿಯ ತಮಾಷೆ ಎಷ್ಟೋ ಬಾರಿ ಪರರು ನನ್ನೊಂದಿಗೆ ಎಸಗಿದಾಗ ನನಗೆ ಮುಜುಗರವಾಗಿದೆ. ನಾವೇಕೆ ನಮ್ಮ ಗೆಳೆಯರನ್ನು, ಆತ್ಮೀಯರನ್ನು ಅವರ ಭಾವನೆಗಳನ್ನು ಅದೇ ಸನ್ನಿವೇಶದಲ್ಲೇ ಅರ್ಥ ಮಾಡಿಕೊಳ್ಳುವುದಿಲ್ಲ? ಮನುಷ್ಯ ಮನುಷ್ಯನನ್ನೇಕೆ ಅರ್ಥ ಮಾಡಿಕೊಳ್ಳುವುದಿಲ್ಲ?

ಇದು ಮನುಜನ ಸಹಜ ಗುಣವೆಂದು ನನಗೂ ಗೊತ್ತು ಆದರೆ ನಾನಿಂದು ತಿಳಿಯಬಯಸುವುದೇನೆಂದರೆ, ನಾವೇಕೆ ಆ ಕ್ಷಣದಲ್ಲಿ ಪರರಿಗಿರುವ ಭಾವನೆಗಳನ್ನು ತಿಳಿಯುವುದಿಲ್ಲ? ನಾವು ಪ್ರಜ್ಞಾವಂತ ಸ್ಥಿತಿಯಲ್ಲಿ ಪ್ರತಿಯೊಂದು ಸನ್ನಿವೇಶವನ್ನು ಅವಲೋಕಿಸುತ್ತೇವೆಂದು ನೀವು ಹೇಳಿದರೆ ನಾನು ನಂಬುವುದಿಲ್ಲ.
ಉದಾಹರಣೆಗೆ, ನಮ್ಮಲ್ಲಿ ನೂರಕ್ಕೆ ಎಂಬತ್ತು ಜನ ರಾಮಾಯಣದಲ್ಲಿ ರಾಮನನ್ನು ಇಷ್ಟ ಪಡುವಂತೆಯೇ ಹನುಮಂತನನ್ನು ಮತ್ತಷ್ಟು ಜನ ಹಾಗು ರಾವಣನನ್ನು ಕೆಲವರು ಮೆಚ್ಚುತ್ತಾರೆ. ನಾನು ಕೂಡ ರಾವಣನ ಪಾತ್ರವನ್ನು ತುಂಬಾ ಇಷ್ಟ ಪಡುತ್ತೇನೆ. ಏಕೆಂದರೆ ಅವನು ಬಲಶಾಲಿ, ಆಜಾನುಬಾಹು, ದೇವತೆಗಳಿಂದ ವರ ಪಡೆದವನು ಹಾಗು ಶಿವನನ್ನೇ ಮೆಚ್ಚಿಸಿ ಅವನ ಆತ್ಮಲಿಂಗ ಪಡೆದ ಅವನು ಮಹಾಭಕ್ತ. ಅವನು ರಾಕ್ಷಸ ಕುಲದಲ್ಲಿ ಹುಟ್ಟಿದ ಮಾತ್ರಕ್ಕಾಗಲಿ, ಸೀತಾಪಹರಣ ಮಾಡಿದ ಎಂಬ ಕಾರಣಕ್ಕಾಗಲಿ ಕೆಟ್ಟವನಲ್ಲ. ಇಂದಿಗೂ ಶ್ರೀಲಂಕೆಯಲ್ಲಿ ರಾವಣನನ್ನು ಪೂಜಿಸುತ್ತಾರೆ. ಅಂದಮೇಲೆ ಆತನೂ ಒಳ್ಳೆಯ ಕೆಲಸ ಮಾಡಿರಬೇಕಲ್ಲವೇ? ಅವನು ಮಾಡಿದ ಒಂದು ತಪ್ಪಿನಿಂದ ಅವನು ಎಷ್ಟೋ ಜನರ ಮನಸಿನಲ್ಲಿ ಖಳನಾಯಕನಾದ. ಈ ಒಂದು ಸನ್ನಿವೇಶ ಎಷ್ಟೋ ಜನರ ಮನದಲ್ಲಿ ರಾವಣನಿಗೆ ಜಾಗ ಕೊಡುವುದಿಲ್ಲ,

ಅದು ಹಾಗಿರಲಿ, ನಾನು ನಮ್ಮ ಮನಸ್ಸನ್ನು ಸನ್ನಿವೇಶ ಹೇಗೆ ಬದಲಾಯಿಸುತ್ತದೆಂದು ಹೇಳಲು ಹೊರಟಿದ್ದೆ. ನಾವೇಕೆ ಕೆಲದಿನಗಳವರೆಗೂ ಒಂದು ಸಣ್ಣ ಅಭ್ಯಾಸ ರೂಡಿಸಿಕೊಳ್ಳಬಾರದು? ನೀವು ಸೈ ಎಂದರೆ ಕೇಳಿ...

ಇಂದಿನಿಂದ ನೀವು ನಿಮ್ಮ ಸಹೋದ್ಯೋಗಿ, ಗೆಳೆಯ, ಗಂಡ ಅಥವಾ ಹೆಂಡತಿ ಯಾರೊಂದಿಗಾದರೂ ಮಾತನಾಡುವಾಗ ಬರೀ ಅವರ ಮಾತಿಗೆ ಜವಾಬು ನೀಡುವ ಬದಲು, ಅದರ ಜೊತೆಗೆ ಅವರು ನಿಮ್ಮ ಜವಾಬಿಗೆ ಹೇಗೆ ಪ್ರತಿಕ್ರಯಿಸುತ್ತಾರೆ ಅಥವಾ ಅವರು ನಿಮ್ಮಿಂದ ಯಾವ ಉತ್ತರವನ್ನು ಬಯಸುತ್ತಿದ್ದಾರೆ ಎಂದು ಒಂದು ಘಳಿಗೆ ಯೋಚಿಸಿ ಜವಾಬು ನೀಡಿ. ಅದಕ್ಕೂ ಮೊದಲು ಸನ್ನಿವೇಶವನ್ನು ಅವಲೋಕಿಸಲು ಪ್ರಯತ್ನಿಸಿ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ, ಸಾದಾರಣ ಸನ್ನಿವೇಶಗಳಲ್ಲಿ ಅವರು ಬಯಸುವ ಉತ್ತರ ನೀಡಲು ಪ್ರಯತ್ನಿಸಿ. ನಾವು ಆ ಸಮಯದಲ್ಲಿ ಪರರಿಂದ ಯಾವ ಪ್ರತಿಕ್ರಿಯೆಯನ್ನು ಬಯಸುತ್ತಿದೆವೋ ಅವರು ಕೂಡ ನಮ್ಮಿಂದ ಅದೇ ರೀತಿಯಾದಂಥಹ ಪ್ರತಿಕ್ರಿಯೆಯನ್ನು ಬಯಸುತ್ತಾರೆಂದು ನಾವು ತಿಳಿಯಬೇಕಿದೆ. ನಾವು ಯಾವುದೇ ಕೆಲಸದಲ್ಲಿ ನಿರತರಾಗಿದ್ದರೂ ಅವರ ಪ್ರಶ್ನೆಗೆ ಉತ್ತರಿಸುವ ಮೊದಲು ಅವರ ಮುಖವನ್ನೊಮ್ಮೆ ನೋಡಿದರೆ, ಅದು ಪ್ರತಿಕ್ರಿಯೆಯನ್ನು ಬದಲಿಸಬಹುದು.

ಒಂದೆರಡು ದಿನ ಇದನ್ನು ಪ್ರಯತ್ನಿಸಿ ಹಾಗು ನಿಮ್ಮಲ್ಲಾಗಿರುವ ಬದಲಾವಣೆ ಹಾಗು ಪರರು ನಿಮ್ಮನ್ನು ನೋಡುವ ರೀತಿಯನ್ನು ಗಮನಿಸಿ, ನಾನು ಇದೆ ಅಭ್ಯಾಸದಲ್ಲಿ ನಿರತನಾಗುವೆ.
ಪ್ರತಿಯೊಂದು ಘಳಿಗೆಯಲ್ಲೂ ತಕ್ಷಣ ಪ್ರತಿಕ್ರಯಿಸಬಹುದಾದ ಪ್ರಶ್ನೆಗಳಿಗೂ ಒಂದೆರಡು ಸೆಕೆಂಡು ಯೋಚಿಸಿ ಪ್ರತಿಕ್ರಯಿಸಿ ಹಾಗು ಅದರ ಪರಿಣಾಮವನ್ನು ನೋಡಿ. ನಂತರ ನಿಮ್ಮ ಪ್ರತಿಕ್ರಿಯೆಯನ್ನು ಈ ಲೇಖನಕ್ಕೆ ಸೇರಿಸಿ. ಅದರಿಂದ ನಾನೂ ಕೂಡ ವಿಭಿನ್ನ ಜನರ ವಿಭಿನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು.


 


 

Comments