ಡಿಸೆಂಬರ್ ೩೧ - ಕರಾಳ ನೆನಪು
ಇದು ಸುಮಾರು ಹದಿಮೂರು ವರ್ಷದ ಹಿಂದಿನ ಘಟನೆ. ಹೊಸೂರು ರಸ್ತೆಯಲ್ಲಿರುವ ಐ.ಟಿ.ಐ ತರಬೇತಿ ಕೇಂದ್ರದಲ್ಲಿ ವೃತ್ತಿ ತರಬೇತಿ ವ್ಯಾಸಂಗ ಮಾಡುತ್ತಿದ್ದ ದಿನಗಳವು. ೧೯೯೬ - ೧೯೯೮ ಆ ಎರಡು ವರ್ಷಗಳು ನನ್ನ ಜೀವನದಲ್ಲಿ ಎಂದೂ ಮರೆಯಲಾರದಂಥಹ ಕಹಿ ಹಾಗೂ ಸಿಹಿ ಘಟನೆಗಳು ನಡೆದಿವೆ. ಅದರಲ್ಲಿ ಒಂದು ಘಟನೆಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ನಮ್ಮ ಗುಂಪಿನಲ್ಲಿ ಒಟ್ಟು ಹದಿನಾಲ್ಕು ಜನ ಇದ್ದರೂ ನಾವು ಐದು ಆರು ಜನ ಬಹಳ ಅನ್ಯೋನ್ಯವಾಗಿದ್ದೆವು. ನಾನು, ಬಾಬು, ಜಗದೀಶ್, ಲಕ್ಷ್ಮಿಪತಿ, ಬಾಲಾಜಿ ಹಾಗು ರಾಕೇಶ್. ಇಷ್ಟರಲ್ಲಿ ಬಾಬು ವಯಸ್ಸಿನಲ್ಲಿ ಹಿರಿಯನಾಗಿದ್ದರೆ ನಾನು ಕಿರಿಯವನಾಗಿದ್ದೆ. ಆದರೂ ನಾವು ಜೊತೆಜೊತೆಗೆ ಇರುತ್ತಿದ್ದೆವು. ಒಬ್ಬೊಬ್ಬರದು ಒಂದೊಂದೋ ರೀತಿಯ ಸ್ವಭಾವ ಅದರಲ್ಲೂ ಬಾಲಾಜಿಯದ್ದು ಸಿಕ್ಕಾಪಟ್ಟೆ ತರಲೆ ಸ್ವಭಾವ. ಎಷ್ಟೆಂದರೆ ಬರೀ ನಮ್ಮೊಡನೆ ಅಷ್ಟೇ ಅಲ್ಲ ಉಪಾಧ್ಯಾಯರೊಂದಿಗೂ ಹಾಗೆ ಇರುತ್ತಿದ್ದನು. ಯಾರು ಎಷ್ಟೇ ದುಖದಲ್ಲಿದ್ದರೂ ಅವರನ್ನು ನಗಿಸುವ ಕಲೆ ಇತ್ತು. ಅವನ ತರಲೆಯಿಂದ ಯಾರಾದರೂ ಕೋಪಗೊಂಡರೂ ಮರುಕ್ಷಣವೇ ಇನ್ನೊಂದು ತರಲೆ ಮಾಡಿ ಅವರನ್ನು ನಗಿಸಿಬಿಡುತ್ತಿದ್ದನು. ಅವನಿಗೆ ಬೈಯ್ಯಲೂ ಮನಸಾಗುತ್ತಿರಲಿಲ್ಲ ಏಕೆಂದರೆ ನೋಡಲು ಅಷ್ಟು ಮುಗ್ಧವಾಗಿದ್ದ.
ಅಂದು ಡಿಸೆಂಬರ್ ೩೧ ೧೯೯೭. ಬೆಳಿಗ್ಗೆ ತರಬೇತಿ ಕೇಂದ್ರದ ಮೈದಾನದಲ್ಲಿ ನಾವು ಆರು ಜನ ಭೇಟಿಯಾಗಿ ಮರುದಿನ ಜನವರಿ ೧ ರಜ ಇದ್ದಿದ್ದರಿಂದ ಆಚೆ ಎಲ್ಲಾದರೂ ಹೋಗೋಣ ಎಂದು ಮಾತನಾಡುತ್ತಿದ್ದೆವು. ಆಗ ಬಾಲಾಜಿ ಎಲ್ಲರಿಗೂ ಹೇಳಿದ ನೋಡಿ ಮುಂದಿನ ವರ್ಷ ಎಲ್ಲರೂ ಎಲ್ಲೆಲ್ಲಿ ಇರುತ್ತೇವೋ ಗೊತ್ತಿಲ್ಲ, ಮುಂದಿನ ೩ ತಿಂಗಳಲ್ಲಿ ಪರೀಕ್ಷೆಗಳು ಶುರುವಾಗುತ್ತದೆ. ಆದ್ದರಿಂದ ನಾಳೆ ಪೂರ್ತಿ ದಿನ ಸುತ್ತಾಡಿ ಹೊಸ ವರ್ಷದ ಆನಂದ ಪಡೆಯೋಣ. ಎಲ್ಲರೂ ತಪ್ಪದೆ ೯ ಗಂಟೆಗೆ ಇಲ್ಲಿ ಹಾಜರಾಗೋಣ. ಇಲ್ಲಿಂದ ಯಾವುದಾದರೂ ಸಿನಿಮಾ, ಹೋಟೆಲ್, ಲಾಲ್ ಬಾಗ್ ಗೆ ಹೋಗಿ ಸಂಜೆ ತನಕ ಮಾತಾಡಿ ಸುತ್ತಾಡಿ ಆಮೇಲೆ ಹೋಗೋಣ. ಯಾರಾದರೂ ತಪ್ಪಿದರೆ ಸರಿ ಇರಲ್ಲ ಎಂದು ಹೊರಡುವ ಮುನ್ನ ಸುಮಾರು ಹತ್ತು ಸಲ ಹೇಳಿ ಹೋದ.
ಮರುದಿನ ಬೆಳಿಗ್ಗೆ ಎಲ್ಲರೂ ಅಂದುಕೊಂಡ ಸಮಯಕ್ಕೆ ಸರಿಯಾಗಿ ಮೈದಾನದ ಬಳಿಯಿದ್ದೆವು. ಬಾಲಾಜಿ ಒಬ್ಬನನ್ನು ಹೊರತುಪಡಿಸಿ. ಇನ್ನೇನು ಬರಬಹುದು ಎಂದು ಎಲ್ಲರೂ ಕಾದೆವು..ಸಮಯ ೯.೩೦ ಆಯಿತು, ಹತ್ತಾಯಿತು, ಹನ್ನೊಂದಾದರೂ ಬರಲಿಲ್ಲ. ಆಗೆಲ್ಲ ಮೊಬೈಲ್ ಬಳಕೆ ಇರಲಿಲ್ಲ. ಅವರ ಮನೆ ದೂರವಾಣಿ ಸಂಖ್ಯೆಯೂ ಗೊತ್ತಿರಲಿಲ್ಲ, ಮನೆ ವಿಳಾಸವೂ ಗೊತ್ತಿರಲಿಲ್ಲ. ಸರಿ ಇನ್ನೇನು ಮಾಡುವುದು ಅವನು ನಾಳೆ ಬಂದಾಗ ಸರಿಯಾಗಿ ಬೈಯ್ಯಬೇಕು ಎಂದುಕೊಂಡು ಎಲ್ಲರೂ ಹನ್ನೆರಡು ಗಂಟೆಗೆ ಹೊರತು ಲಾಲ್ ಬಾಗ್ ಗೆ ಹೋಗಿ ಸ್ವಲ್ಪ ಹೊತ್ತು ಇದ್ದು ವಾಪಸ ಹೊರಟೆವು.
ಎರಡು ಮೂರು ದಿನ ಆದರೂ ಬಾಲಾಜಿಯ ಪತ್ತೆ ಇರಲಿಲ್ಲ. ಆಗ ನಮಗೆ ಆತಂಕ ಶುರುವಾಯಿತು. ಆದರೆ ಆತನನ್ನು ಸಂಪರ್ಕಿಸುವ ಯಾವುದೇ ಮಾರ್ಗವಿರಲಿಲ್ಲ. ನಾಲ್ಕನೇ ದಿನ ಬೆಳಿಗ್ಗೆ ತರಭೇತಿ ಕೇಂದ್ರದೊಳಗೆ ಹೋಗುತ್ತಿದ್ದ ಹಾಗೆ ನಮ್ಮ ಉಪಾಧ್ಯಾಯರು ಎಲ್ಲರನ್ನು ಕರೆದು ನಿಮಗೆ ಒಂದು ದುಃಖದ ವಿಷಯ ಎಂದರು. ನಮಗೆಲ್ಲ ಗಾಬರಿಯಾಗಿ ಬಾಲಾಜಿಯ ವಿಷಯವೇ ಇರಬಹುದು ಎಂದು ಅನಿಸಿತು. ನಂತರ ಅವರೆಂದರು ಇಂದು ಬೆಳಿಗ್ಗೆ ಬಾಲಾಜಿ ಅವರ ತಾಯಿಯಿಂದ ಕರೆ ಬಂದಿತ್ತು. ಡಿಸೆಂಬರ್ ೩೧ ರ ರಾತ್ರಿ ಬಾಲಾಜಿ ಅವರ ಅಕ್ಕ ಅಪಘಾತವೊಂದರಲ್ಲಿ ಮೃತಪಟ್ಟಳೆಂದು ತಿಳಿಸಿದರು. ನಮಗೆ ಕ್ಷಣ ಕಾಲ ಸುತ್ತಲೂ ಕಪ್ಪಿಟ್ಟಿತ್ತು. ಸುಧಾರಿಸಿಕೊಂಡು ಅವರ ಮನೆಯ ವಿಳಾಸ ತಿಳಿದುಕೊಂಡು ಅವರ ಮನೆಗೆ ಹೋದಾಗ ನಮ್ಮನ್ನು ಎದುರುಗೊಂಡ ಅವರ ತಾಯಿ ಕಣ್ಣೀರಿಡುತ್ತಾ ನೋಡಿ ನಿಮ್ಮ ಬಾಲಾಜಿ ಅಕ್ಕನನ್ನು ಕಳೆದುಕೊಂಡು ಬೇಸರದಲ್ಲಿ ಅಣ್ಣ ನೀರು ಬಿಟ್ಟು ಕುಳಿತಿದ್ದಾನೆ. ನೀವಾದರೂ ಸಮಾಧಾನ ಮಾಡಿ ಎಂದರು. ಅವನ ರೂಮಿನೊಳಗೆ ಹೊಕ್ಕಾಗ ಕತ್ತಲಲ್ಲಿ ಒಂದು ಮೂಲೆಯಲ್ಲಿ ಕುಳಿತು ಅಳುತ್ತಾ ಕುಳಿತಿದ್ದ ಅವನನ್ನು ಕಂಡು ಭಯವಾಯಿತು. ನಮ್ಮನ್ನು ನೋಡಿದ ಕೂಡಲೇ ಇನ್ನೂ ಜೋರಾಗಿ ಅಳಲು ಶುರುಮಾಡಿದ. ಸುಮಾರು ಒಂದು ಗಂಟೆಗಳ ಕಾಲ ಸಮಾಧಾನ ಪಡಿಸಿದೆವು. ಆದರೆ ಅವನಿಗೆ ಊಟ ಮಾಡಿಸುವಲ್ಲಿ ವಿಫಲರಾದೆವು.
ಅವನ ರೂಮಿನಿಂದ ಆಚೆ ಬಂದು ಅವರ ತಂದೆಯ ಬಳಿ ಮಾತನಾಡುತ್ತಿದ್ದಾಗ ಅವರು ಹೇಳಿದರು. ಡಿಸೆಂಬರ್ ೩೧ ರ ರಾತ್ರಿ ಅವಳು ಹಾಗು ಅವಳ ಭಾವಿ ಪತಿ ಅವರ ಬಂಧುಗಳ ಮನೆಗೆ ತೆರಳಿ ವಾಪಸ್ ಬರುತ್ತಿದ್ದಾಗ ಸರ್ಜಾಪುರ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಅವಳು ಸ್ಥಳದಲ್ಲೇ ಮೃತಪಟ್ಟು ಆ ಹುಡುಗ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿಯಿತು. ಅವರಿಗೂ ಸಮಾಧಾನ ಮಾಡಿ ಅಲ್ಲಿಂದ ವಾಪಸ್ ಬಂದೆವು. ಹತ್ತು ದಿನಗಳ ನಂತರ ತರಭೇತಿ ಕೇಂದ್ರಕ್ಕೆ ಬಂದ ಬಾಲಾಜಿ ಮೊದಲಿನ ಬಾಲಾಜಿ ಆಗಿರಲಿಲ್ಲ. ಎಲ್ಲರನೂ ನಗಿಸಿ ನಲಿಸುತ್ತಿದ್ದ ಆ ಬಾಲಾಜಿ ಕಳೆದುಹೋಗಿದ್ದ. ಹೊಸ ಬಾಲಾಜಿಯನ್ನು ಕಂಡು ಕೆಲವೊಮ್ಮೆ ಭಯ ಆಗುತ್ತಿತ್ತು. ಆತನ ಮೌನ ಅಷ್ಟು ಭಯ ತರಿಸುತ್ತಿತ್ತು. ಎಷ್ಟೋ ಬಾರಿ ಆತನನ್ನು ನಗಿಸಲು ಪ್ರಯತ್ನಿಸಿದರೂ ನಮ್ಮ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿತ್ತು.
ಅಂದಿನಿಂದ ಇಂದಿನವರೆಗೂ ಡಿಸೆಂಬರ್ ೩೧ ಅಂದರೆ ಆ ಘಟನೆ ನನ್ನ ನೆನಪಿನಂಗಳದಲ್ಲಿ ಮಾಸದೆ ಉಳಿದುಬಿಟ್ಟಿದೆ.
Comments
ಉ: ಡಿಸೆಂಬರ್ ೩೧ - ಕರಾಳ ನೆನಪು
In reply to ಉ: ಡಿಸೆಂಬರ್ ೩೧ - ಕರಾಳ ನೆನಪು by asuhegde
ಉ: ಡಿಸೆಂಬರ್ ೩೧ - ಕರಾಳ ನೆನಪು
ಉ: ಡಿಸೆಂಬರ್ ೩೧ - ಕರಾಳ ನೆನಪು
In reply to ಉ: ಡಿಸೆಂಬರ್ ೩೧ - ಕರಾಳ ನೆನಪು by manju787
ಉ: ಡಿಸೆಂಬರ್ ೩೧ - ಕರಾಳ ನೆನಪು
ಉ: ಡಿಸೆಂಬರ್ ೩೧ - ಕರಾಳ ನೆನಪು
In reply to ಉ: ಡಿಸೆಂಬರ್ ೩೧ - ಕರಾಳ ನೆನಪು by malathi shimoga
ಉ: ಡಿಸೆಂಬರ್ ೩೧ - ಕರಾಳ ನೆನಪು
ಉ: ಡಿಸೆಂಬರ್ ೩೧ - ಕರಾಳ ನೆನಪು
In reply to ಉ: ಡಿಸೆಂಬರ್ ೩೧ - ಕರಾಳ ನೆನಪು by gopaljsr
ಉ: ಡಿಸೆಂಬರ್ ೩೧ - ಕರಾಳ ನೆನಪು