ತೆಲಂಗಾಣ ಸಂದಿಗ್ಧ

ತೆಲಂಗಾಣ ಸಂದಿಗ್ಧ

ಆಂಧ್ರ ಪ್ರದೇಶವಿರಬಹುದು, ಕರ್ನಾಟಕ ಮಹಾರಾಷ್ಟ್ರಗಳೇ ಇರಬಹುದು, ಪ್ರತ್ಯೇಕತೆಯ ಕೂಗಿನಲ್ಲಿ ಕಿವಿಗಡಚಿಕ್ಕಿ ಜೋರಾಗಿ ಕೇಳಿಸುವುದು ರಾಜಕೀಯದ ಕಿರಚಾಟ. ಒಳಗೊಂದಿಷ್ಟು ಆರ್ಥಿಕ ಅಸಮಾನತೆ ಅನ್ಯಾಯವೂ ಇರದಿರದು. ಆದರಿದಕ್ಕೆ ಭಾಷಾವಾರು ಪ್ರಾಂತ ರಚನೆಯ ಮೂಲ ಆಶಯದೊಂದಿಗೆ ಬಾದರಾಯಣ ಸಂಬಂಧವೂ ಇರುವುದಿಲ್ಲ! ಪ್ರತ್ಯೇಕತಾ ವಾದದ ಸಂದಿಗ್ಧ-ಸಂಕೀರ್ಣತೆಗಳೇನಿದ್ದರೂ, ಅದು ಅಸಮರ್ಥ ಹೆಂಬೇಡಿ ರಾಜಕಾರಣದ್ದು!


          ಭಾಷಾವಾರು ಪ್ರಾಂತ ವಿಂಗಡನೆ, ಭಾಷೆ ಮತ್ತು ಅದನ್ನು ಸಂಕೇತವಾಗುಳ್ಳ ಸಮಾನ ಭಾವಸಂಸ್ಕಾರ ಸಮೂಹಗಳ ನೆಲೆಯಲ್ಲಾಗಿರುವುದು. ಆರ್ಥಿಕ ಅಭಿವೃದ್ಧಿ, ಪ್ರದೇಶವೊಂದರ ಭೌತ-ಭೌಗೋಳಿಕ ಲಭ್ಯತೆ ಮತ್ತು ಅದರ ಪರಂಪರಾನುಗತ ಬಳಕೆಯಿಂದಾಗುವ ಸಂಪತ್ ಸೃಷ್ಟಿಯನ್ನವಲಂಬಿಸುರುವುದು. ಒಂದು ಪ್ರದೇಶದ ಜನ ಯಾವ ಭಾಷೆಯಲ್ಲಿ ಹೊಲ ಉಳುತ್ತಾರೆ, ಯಾವ ಹಾಡು ಹೇಳಿಕೊಂಡು ಗಣಿ ತೋಡುತ್ತಾರೆ, ಯಾವ ದೇವರನ್ನು ಪೂಜಿಸಿ ಮಗ್ಗ ಆಡಿಸುತ್ತಾರೆನ್ನುವುದರ ಅಲ್ಲಿನ ಸಂವೃದ್ಧಿಯಾಗುವುದಿಲ್ಲ, ಸರಕಾರ ಅಲ್ಲಿ ಹೇಗೆ ತಕ್ಕ ತಕ್ಕ Infrastructure ಒದಗಿಸಿಕೊಡುತ್ತದೆ ಎನ್ನುವದನ್ನದು ಅವಲಂಬಿಸಿರುತ್ತದೆ!


          ಇಂತಹ ಜಾಣ್ಮೆ-ಗಯ್ಮೆಗಳಿಲ್ಲದೆ, ಆಡಳಿತ ನಡೆಸುತ್ತೇವೆಂದು ಕೊಚ್ಚಿಕೊಳ್ಳುವ ನಿಸ್ಸತ್ತ್ವ ರಾಜಕಿಯಕ್ಕೆ ಇದೆಲ್ಲಾ ಅರ್ಥವಾದೀತೇ? ಅತೃಪ್ತನೊಬ್ಬನಿಗೆ ಮುಖ್ಯಮಂತ್ರಿ ಪಟ್ಟ ಬೇಕಿರುತ್ತದೆ; ಅಂಥವನ ಚೆಲಾಗಳಿಗೆ ಸಮಗ್ರ ರಾಜ್ಯದಲ್ಲಿ ರಾಜಕಾರಣ ಮಾಡುವ ಸಾಮರ್ಥ್ಯವಿರುವುದಿಲ್ಲ; ಇಂಥಂಥಾ ಹೊಟ್ಟುರುಕರ ಗುಂಪುಗಳು ತಮ್ಮ ತಮ್ಮದೇ ಪ್ರತ್ಯೇಕಗುಂಡಿ ತೋಡಿಕೊಳ್ಳಲು ಹವಣಿಸುತ್ತವೆ. ಮೂಢ ಜನತೆಯ ಭಾವೋದ್ರೇಕವೇ ಇವರೆಲ್ಲರ ಬಂಡವಾಳ!


ರಾಜಕೀಯೇತರ ನಿಸ್ವಾರ್ಥ ಸಂಸ್ಕಾರವಂತರೂ, ಸಂಸ್ಕೃತಿವಂತರಾದರೂ ಇದನ್ನು ಅರ್ಥ ಮಾಡಿಕೊಳ್ಳಬಾರದೇ?!

Comments