ಏನಿದು GMMXIE
ಏನಿದು GMMXIE
ಜನವರಿ ಒಂದರಂದು ಗೂಗಲ್ ತಾಣವನ್ನು ನೋಡಿದಾಗ,ಅಲ್ಲಿನ ಗೂಗಲ್ ಡೂಡ್ಲ್ GMMXIE ಎಂದಿತ್ತು.ಏನಿದು MMXI ಎಂದು ತಲೆಕೆರೆದು ಕೊಂಡವರೇ ಹೆಚ್ಚು.ಗೂಗಲ್ ಡೂಡ್ಲ್,ಸಾಂದರ್ಭಿಕವಾಗಿರುವ ಕಾರಣ,ಇದು ಹೊಸ ವರ್ಷಕ್ಕೆ ಸಂಬಂಧ ಪಟ್ಟಿದ್ದು ಎನ್ನುವ ಕೋನದಿಂದ ಯೋಚಿಸಿದಾಗಲಷ್ಟೇ ಜನರಿಗೆ ಇದು ರೋಮನ್ ಅಂಕೆಯಲ್ಲಿ ಬರೆದ 2011 ಎನ್ನುವುದು ಹೊಳೆಯಿತು.ರೋಮನ್ ಅಂಕೆಯಲ್ಲಿ M ಎಂದರೆ ಸಾವಿರ,ಹಾಗಾಗಿ ಎರಡು ಸಾವಿರ ಬರೆಯಲು MM;ಹಾಗೂ ಹತ್ತು ಬರೆಯಲು X ಅಕ್ಷರವೂ ಒಂದು ಬರೆಯಲು I ಬಳಕೆಯಾಗಿದೆ.ಮೊದಲ G ಮತ್ತು ಕೊನೆಯ E ಗೂಗಲ್ ಎಂದು ಬರೆಯಲು ಬಳಕೆಯಾಗಿದೆ.ಹೀಗಾಗಿ GMMXIE.ಹೇಗಿದೆ ಹೊಸ ವರ್ಷದ ಡೂಡ್ಲ್?
------------------------------------------
2010ರ ಬೆಸ್ಟ್
ವರ್ಷದ ಬೆಸ್ಟ್ ಸ್ಮಾರ್ಟ್ಫೋನ್ ಉತ್ಪನ್ನವೆಂದು ಸ್ಯಾಮ್ಸಂಗ್ ಕಂಪೆನಿಯ ಸ್ಮಾರ್ಟ್ಫೋನ್ ಎಪಿಕ್ 4ಜಿ ಸ್ಥಾನಗಿಟ್ಟಿಸಿತು.ಪಿಸಿವರ್ಲ್ಡ್ ತಾಣವಿದನ್ನು ಅತ್ಯುತ್ತಮ ಉತ್ಪನ್ನವೆಂದು ಪರಿಗಣಿಸಿತು.ಇದೊಂದು ಆಂಡ್ರಾಯಿಡ್ ಫೋನ್.4ಜಿ ನೆಟ್ವರ್ಕ್ ಇರುವೆಡೆಯೂ ಕೆಲಸ ಮಾಡಬಲ್ಲುದು(ನಮ್ಮ ದೇಶದಲ್ಲಿ ಇಲ್ಲ).ಬೆಸ್ಟ್ ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಉತ್ಪನ್ನಗಳ ಸ್ಥಾನ ಎಚ್ಪಿಯ ಪಾಲಾಯಿತು.ಬೆಸ್ಟ್ ಇ-ರೀಡರ್ ಎಂದು ಕಿಂಡಲ್ನ ಇ-ರೀಡರನ್ನು ಹೆಸರಿಸಲಾಗಿದೆ.ಬೆಸ್ಟ್ ಟ್ಯಾಬ್ಲೆಟ್ ಊಹಿಸಿದಿರಲ್ಲ?ಐಪ್ಯಾಡ್.ಬೆಸ್ಟ್ ಸ್ಮರಣಕೋಶವಾಗಿ ಅತಿವೇಗದಲ್ಲಿ ದತ್ತಾಂಶ ವರ್ಗಾವಣೆಗೆ ಅನುವು ಮಾಡುವ ಕ್ರೂಸಿಯಲ್ ಎನ್ನುವ ಎಸ್ಎಸ್ಡಿಯನ್ನು ಪರಿಗಣಿಸಲಾಗಿದೆ.
------------------------------
MMXIನಲ್ಲಿ ಏನಿರಬಹುದು?
ಹೊಸ ವರ್ಷದಲ್ಲಿ ಗೂಗಲ್ ಕ್ರೋಂ ಆಧಾರಿತ ನೆಟ್ಬುಕ್ನ್ನು ವಿವಿಧ ಕಂಪೆನಿಗಳು ಬಿಡುಗಡೆ ಮಾಡಬಹುದು ಎಂಬ ಗುಸುಗುಸು ಇದೆ.ಏಸರ್ ಕಂಪೆನಿಯ ಎರಡು ತೆರೆಗಳ ನೋಟ್ಬುಕ್ ಬಗ್ಗೆಯೂ ವದಂತಿ ಕೇಳಿಸುತ್ತಿದೆ.ಬ್ಲೂರೇಡಿಸ್ಕ್ ಪ್ಲೇಯರ್ ಬರುವ ನಿರೀಕ್ಷೆಯಿದೆ.ಐಪೋಡ್ ಟಚ್ಗೆ ಹೋಲುವ ಸ್ಯಾಮ್ಸಂಗ್ ಕಂಪೆನಿಯ ಉತ್ಪನ್ನ ಬರುವ ಬಗ್ಗೆಯೂ ಕೇಳಿಬರುತ್ತಿದೆ.ಎಲ್ಜಿಯ ಅತಿ ತೆಳುವಾದ ಆಂಡ್ರಾಯಿಡ್ ಫೋನ್ ಲಭ್ಯವಾಗುವ ನಿರೀಕ್ಷೆಯಿದೆ.ಮೈಕ್ರೋಸಾಫ್ಟ್ ಕಂಪೆನಿಯ ವಿನ್8 ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಬಗ್ಗೆಯೂ ಮತ್ತೆ ಮಾತು ಕೇಳಿಬರತೊಡಗಿದೆ.
-----------------------------------
ಹಳೆವಿದ್ಯಾರ್ಥಿಗಳ ಮಿಲನದಲ್ಲಿ ವಿಡಿಯೋ ಕಾನ್ಫರೆನ್ಸ್ ಬಳಕೆ
ಕಾಲೇಜುಗಳು ತಮ್ಮ ಹಳೆವಿದ್ಯಾರ್ಥಿಗಳ ಜತೆ ತಮ್ಮ ನಂಟನ್ನು ಉಳಿಸಿ-ಬೆಳೆಸಿಕೊಂಡು ಹೋಗಲು ಬಯಸುತ್ತವೆ.ವಿದ್ಯಾರ್ಥಿಗಳೂ ಅಷ್ಟೆ-ಸಾಧ್ಯವಾದಷ್ಟು ಮಟ್ಟಿಗೆ,ತಮ್ಮನ್ನು ರೂಪಿಸುವಲ್ಲಿ ಸಹಾಯ ಮಾಡಿದ ಸಂಸ್ಥೆಗಳಿಗೆ ತಮ್ಮಿಂದಾದ ಮಟ್ಟಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತಾರೆ.ಆದರೆ,ತಮ್ಮ ಜೀವನದ ಪಯಣದಲ್ಲಿ ಎಲ್ಲೆಲ್ಲಿಗೋ ತಲಪಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಗಳ ಆವರಣಕ್ಕೇ ಹೋಗಿ,ರಜತ-ಸುವರ್ಣ ಮಿಲನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇರಬಹುದು.ಇಂತವರಿಗೆ ಇದೀಗ ವಿಡಿಯೋ ಸಂವಾದಗಳು ಬಹಳ ನೆರವಾಗುತ್ತಿವೆ.ನಮ್ಮಲ್ಲೂ ಇಂತಹ ಪ್ರಯೋಗಗಳು ನಡೆಯುತ್ತಿವೆ.ಒಂದು ಉದಾಹರಣೆಗಾಗಿ http://nmamitalumni.in ತಾಣವನ್ನು ಗಮನಿಸಬಹುದು.
------------------------------------------
ಸ್ಮಾರ್ಟ್ಫೋನ್:ಬಳಸಲೂ ಸ್ಮಾರ್ಟ್
ಯುರೋಪಿನ ಹಲವು ದೇಶಗಳ ಸ್ಮಾರ್ಟ್ಪೋನ್ಗಳಲ್ಲಿ ಬಳಕೆಯಾಗುವ ವಿದ್ಯುತ್ ಶಕ್ತಿಚಾರ್ಜರ್ಗಳು ಒಂದೇ ರೀತಿ ಇರಬೇಕು ಎಂಬ ವಾದದನ್ವಯ,ಅಲ್ಲಿನ ಯುರೋಪಿಯನ್ ಕಮೀಷನ್ ಚಾರ್ಜರ್ಗಳಿಗೆ ಮಾನಕಗಳನ್ನು ಸಿದ್ಧಪಡಿಸಿದೆ.ಇದನ್ನು ಹ್ಯಾಂಡ್ಸೆಟ್ ತಯಾರಕರುಗಳಿಗೆ ಕಳುಹಿಸಲಾಗಿದೆ.ಸ್ಯಾಮ್ಸಂಗ್,ಐಫೋನ್,ನೋಕಿಯಾ,ಬ್ಲಾಕ್ಬೆರ್ರಿಯಂತಹ ಕಂಪೆನಿಗಳಿದಕ್ಕೀಗಾಗಲೇ ಸಮ್ಮತಿಸಿವೆ.ಹೀಗಾಗಿ ಸದ್ಯದಲ್ಲೇ ಈ ಹ್ಯಾಂಡ್ಸೆಟ್ಗಳಿಗೆ ಒಂದೇ ಚಾರ್ಜರ್ ಸರಿಹೊಂದಲಿದೆ.ಅದಲ್ಲದೆ,ಸ್ಮಾರ್ಟ್ಪೋನ್ ಬದಲಾಯಿಸುವಾಗ,ಹಳೆಯ ಚಾರ್ಜರ್ ಅದಕ್ಕೂ ಸರಿಹೊಂದುವ ಕಾರಣ,ಮತ್ತೆ ಹೊಸ ಚಾರ್ಜರ್ ಅಗತ್ಯವಿಲ್ಲ.
---------------------------------
2011 ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆರವರ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆ(ರಿ ನಂ. 19327)
*ಟ್ಯಾಲಿ ತಂತ್ರಾಂಶದ ಉಪಯೋಗ ಏನು?
*ಸಹಕಾರಿ ಸಂಘಗಳ ಲೆಕ್ಕಪತ್ರಗಳನ್ನು ನಿರ್ವಹಿಸಲು ಬಳಸುವ ಜನಪ್ರಿಯ ತಂತ್ರಾಂಶ ಹೆಸರಿಸಿ.
(ಉತ್ತರಗಳನ್ನು nittecreditsociety@yahoo.comಗೆ ಮಿಂಚಂಚೆ ಮಾಡಿ,ವಿಷಯ:NS12 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಪಾಡ್ಕಾಸ್ಟಿಂಗ್ ಅಂದರೆ ಧ್ವನಿರೂಪದ ಬ್ಲಾಗು.
*ಕನ್ನಡದ ಪ್ರಮುಖ ಪಾಡ್ಕಾಸ್ಟಿಂಗ್ ಅಂಕಣಕಾರ ಮತ್ತು "ಉದಯವಾಣಿ" ಓದುಗ ಶ್ರೀವತ್ಸಜೋಶಿ http://sjoshi.podbean.com
ಕಳೆದವಾರ ಸರಿಯುತ್ತರಗಳು ಬಂದಿಲ್ಲವಾದ್ದರಿಂದ ಯಾರಿಗೂ ಬಹುಮಾನ ಇಲ್ಲ.)
------------------------------------------------------------
ಟ್ವಿಟರ್ ಚಿಲಿಪಿಲಿ
*ಜನವರಿ ಏಳು ಮತ್ತು ಎಂಟರಂದು ನಿಟ್ಟೆ ಎನ್ ಎಂ ಎ ಎಂ ಐ ಟಿಯಲ್ಲಿ IC-CANA 2011 ಅಂತಾರ್ರಾಷ್ಟ್ರೀಯ ಸಮಾವೇಶ http://www.iccana.com
*ಕುಡಿತದ ಕೆಡುಕುಗಳ ಬಗ್ಗೆ ಯೋಚಿಸಿದಂತೆಲ್ಲಾ, ತಲೆಸಿಡಿದು ಹೋಗುವಂತೆ ಅನ್ನಿಸಿ,ಯೋಚಿಸುವುದನ್ನೇ ಬಿಟ್ಟು ಬಿಡುತ್ತೇನೆ..
*ಹೊಸವರ್ಷದಲ್ಲಿ 1/1/11,11/1/11,1/11/11,11/11/11 ಮುಂತಾದ ಪಂಗನಾಮಗಳು ಕಾದಿವೆ...
-------------------------------------------------
ಸಲ್ಲಾಪ:ಧಾರವಾಡದ ಪೇಡೆ
ಧಾರವಾಡ ಫೇಡೆಯ ರುಚಿ ಸವಿದವರು ಅದಕ್ಕೆ ಮನಸೋಲುತ್ತಾರೆ.ಹಾಗೆಯೇ ಅಲ್ಲಿನ ಭಾಷೆಯ ಸೊಗಡಿಗೂ ಕೂಡಾ.ಸುಧೀಂದ್ರ ಎಲ್ ದೇಶಪಾಂಡೆ "ಸುನಾತ್"ಯವರ ಬ್ಲಾಗ್ http://sallapa.blogspot.com ಓದಿದರೆ ಧಾರವಾಡದ ಪೇಡೆ ಸವಿದ ಅನುಭವವಾದೀತು.ಅವರ ಬ್ಲಾಗುಗಳಿಗೆ ರಾಶಿ-ರಾಶಿ ಪ್ರತಿಕ್ರಿಯೆಗಳು ಸಿಕ್ಕಿರುವುದೇ ಇದಕ್ಕೆ ಸಾಕ್ಷಿ.ಹಾಗೆಯೇ ಇವರ ಬ್ಲಾಗನ್ನು ಅನುಸರಿಸುವವರ ಸಂಖ್ಯೆ ಎರಡುನೂರು ಸಮೀಪಿಸುತ್ತಿದೆ.ಬೇಂದ್ರೆ,ಭೈರಪ್ಪನವರ ಸಾಹಿತ್ಯದಿಂದ ಹಿಡಿದು,ಮನಮೋಹನ-ಯೆಡ್ಡಿಯವರ ರಾಜಕಾರಣದ ಬಗೆಗಿನ ವೈವಿಧ್ಯಮಯ ವಿಚಾರಗಳೂ,ಟೀಕೆ-ಟಿಪ್ಪಣಿಗಳು ಇವರ ಬ್ಲಾಗು-ಪ್ರತಿಕ್ರಿಯೆಗಳಲ್ಲಿ ಸುಳಿಯುತ್ತವೆ.ಇತರರೊಡನೆ ಸೇರಿ ಗದುಗಿನ ಭಾರತವನ್ನು ಇನ್ನೊಂದು ಬ್ಲಾಗು "ಕರ್ಣಾಟ ಭಾರತ ಕಥಾಮಂಜರಿ"ಅಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.ಈ ಕಾರ್ಯದಲ್ಲಿ ಯಾರೂ ಭಾಗಿಯಾಗಬಹುದು ಎನ್ನುವ ಮುಕ್ತ ಆಹ್ವಾನವಿದೆ.ಬರಹಗಳನ್ನು ಬೇರೆ ಬೇರೆ ಬರಹಗಾರರು,ಬೇರೆ ಬೇರೆ ಸಮಯದಲ್ಲಿ ಬರೆಯುತ್ತಿರುವುದರಿಂದ,ಅದು ಗದುಗಿನ ಭಾರತದಲ್ಲಿರುವ ಕ್ರಮದಲ್ಲಿ ಸಿಗುವುದಿಲ್ಲ.ಆದರೆ ಶೀರ್ಷಿಕೆಗಳನ್ನು ಹತ್ತು ಪರ್ವಗಳಿಗನುಸಾರ ನೀಡಲಾಗಿದೆ.ಈ ಬ್ಲಾಗನ್ನು http://gaduginabharata.blogspot.com/
Udayavani Unicode
Udayavani
*ಅಶೋಕ್ಕುಮಾರ್ ಎ