ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ .....
ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮಗುರು -ಒಂದು ಹಾಡು
ಕೆಟ್ಟ ಮಗನು ಇರಬಹುದು , ಕೆಟ್ಟ ತಾಯಿ ಇರುವದಿಲ್ಲ -ಶಂಕರಾಚಾರ್ಯರು
ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ ತಾಯಿ, ತಾಯಿ ಅನ್ನೋ ಪದ ಇದೆ ನೋಡಿ ಲೋಕದಲ್ಲಿ ದೇವರ ಪ್ರತಿರೂಪವೇ ಅದು . ಮಗ ಚಂಡಾಲನೇ ಆಗಿರಬಹುದು, ಗುರು ಶಂಕರಾಚಾರ್ಯನೇ ಆಗಿರಬಹುದು. ಏನಾಗತ್ತೆ ಅನ್ನೋ ಯೋಚನೆಯೇ ಇಲ್ಲದೇ ಸಾಗೋದೊಂದೇ ಕೆಲಸ ತಾಯಿಗೆ, ತನ್ನದು ಅಂದುಕೊಂಡು. ಈ ಮಮತೆ ಈ ವಾತ್ಸಲ್ಯ ಎಲ್ಲ ದೇವರೊಬ್ಬನಿಗೇ ಮಾತ್ರ ಸಾಧ್ಯ - ಮಾಸ್ತಿ ವೆಂಕಟೇಶ ಅಯ್ಯಂಗಾರರು.
ಬಾಯಿ ಇರಬೇಕು , ಇಲ್ಲವೆ ತಾಯಿ ಇರಬೇಕು. - ಒಂದು ಗಾದೆಮಾತು.
ಎಲ್ಲ ತಾಯಂದಿರು ಮೊದಲು ವಿಚಾರಿಸೋದು ಮಕ್ಕಳು ಊಟ ಮಾಡಿದರೇ, ಮಕ್ಕಳು ಯಾವದೇ ವಯಸ್ಸಿನವರಿರಲಿ. ರಾಮಯಣದಲ್ಲಿ ಶ್ರೀ ರಾಮನು ಪಟ್ಟಾಭಿಷೇಕದ ವಿಷಯ ತಿಳಿಸಿ ಆಶೀರ್ವಾದ ಪಡೆಯಲು ತಾಯಿ ಕೌಸಲ್ಯೆ ಬಳಿ ಬಂದಾಗ ಅವಳು ಕೇಳಿದ್ದು ' ಮಗನೇ, ಏನಾದರೂ ತಿಂದಿದ್ದೀಯೋ, ಇಲ್ಲವೋ?'.
ಹೆಚ್ಚೇನು ? ಇಂಥ ಒಬ್ಬ ತಾಯಿ ನಮಗೂ ಇದ್ದಳು , ಯಾವಾಗಲೂ ಮನೆ, ಗಂಡ, ಮಕ್ಕಳ ಹಿತ ನೋಡಿದವಳು, ಬಡವ ಬಲ್ಲಿದರೆನ್ನದೆ ಎಲ್ಲರೊಡನೆ ಅಂತಃಕರುಣದಿಂದ ನಡೆದುಕೊಂಡವಳು, ಸದಾ ಸರಿಯಾದ ತೀರ್ಮಾನ ತೆಗೆದುಕೊಂಡು ನಡೆದವಳು, ಸದಾ ತೃಪ್ತಳು, ತನಗಾಗಿ ಏನನೂ ಬೇಡದವಳು , ಯಾವಾಗಲೂ ಒಳ್ಳೆಯದನ್ನೇ ಬಯಸಿದವಳು, ಒಳ್ಳೆಯದನ್ನೇ ಎದುರುನೋಡಿದವಳು, ನಮಗೊಂದು ಮಾತ ಹೇಳದೆ , ಆದರೂ ಏನೂ ಬಾಕಿ ಇರಿಸದಂತೆ ಎಲ್ಲವನ್ನು ಮಾಡಿ ಹೋದಳು , ಈಗ ಆ ಮಾತಿಗೆ ಒಂದು ತಿಂಗಳು . ಎಲ್ಲರ ಬಾಯಲ್ಲಿ ಅವಳ ಸಾವು ಪುಣ್ಯದ ಸಾವು . ಇದ್ದರೆ ಹೀಗಿರಬೇಕು , ಹೋದರೆ ಹೀಗೆ ಹೋಗಬೇಕು ಎನ್ನಿಸಿಕೊಂಡಳು.
ದೇಹ ಜೀರ್ಣವಾದಾಗ ಆತ್ಮವು ಅದನ್ನು ಬಿಟ್ಟು ಇನ್ನೊಂದು ದೇಹವನ್ನರಸಿ ತೆರಳುವುದಂತೆ. ಒಂದು ಒಳ್ಳೆಯ ಆತ್ಮವು ದೇಹವನ್ನು ಧರಿಸಿ ನಮ್ಮೆಲ್ಲರ ನಡುವೆ ಇತ್ತೇನೋ ? ಬಾಳಿನುದ್ದಕ್ಕೂ ಅವಳು ಇನ್ನು ನೆನಪು ಮಾತ್ರ.
ಜೀವ ಕೋಗಿಲೆ ಇಂಚರ
ಅದಕೆ ದೇಹವೆಂಬುದೇ ಪಂಜರ
ಇಂಚರ ಕೇಳಲು ಪಂಜರ ಅಗತ್ಯ
ಪಂಜರ ಮುರಿದರೆ ಇಂಚರ ಅಗೋಚರ
Comments
ಉ: ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ .....