ಒಲವಿನೋಲೆ ೪ : ಎಪ್ಪತ್ತರ ಹಾಡು ಗುನುಗುತ್ತ, ಎಪ್ಪತ್ತರಲ್ಲಿ ಸಾಗುತ್ತ..

ಒಲವಿನೋಲೆ ೪ : ಎಪ್ಪತ್ತರ ಹಾಡು ಗುನುಗುತ್ತ, ಎಪ್ಪತ್ತರಲ್ಲಿ ಸಾಗುತ್ತ..

 

ಕಾಯುವಿಕೆಯ ಕಾತರಕುವರ,

 

ಹೊತ್ತಲ್ಲದ ಹೊತ್ತಲ್ಲಿ ನಿದ್ದೆಯಿಂದೆದ್ದು ಕಣ್ಣು ಪಿಳಿಪಿಳಿ ಗುಟ್ಟಿ ಆಗಷ್ಟೇ ಕನಸಲ್ಲಿ ಬಂದು ಹೋದ ನಿನ್ನ ಕನವರಿಕೆಯಲ್ಲಿ ಮತ್ತೆ ನಿದ್ದೆ ಹೋಗುವುದಿದೆಯಲ್ಲ..ಅದರಷ್ಟು ಖುಷಿ ಕೊಡುವ ವಿಷಯ ಇನ್ನೊಂದಿಲ್ಲ ಅನ್ನಿಸುತ್ತದೆ. ಕನಸಿಗೂ ಕನವರಿಕೆಗೂ ಏನಾದ್ರು ವ್ಯತ್ಯಾಸ ಇದೆಯಾ ಅಂತ ಒಮ್ಮೊಮ್ಮೆ ನೆನೆಸಿದಾಗ ನನ್ನಷ್ಟಕ್ಕೆ ನಕ್ಕಿದ್ದಿದೆ, ಎರಡರಲ್ಲೂ ನಿನ್ನದೇ ಇರವಿನ ಮೆರವಣಿಗೆಯಿರುವಾಗ ವ್ಯತ್ಯಾಸಗಳ ಹಂಗ್ಯಾಕೆ ಅಲ್ವ?

 

 ಕನಸಿನೂರ ಮಹಲಿನಲ್ಲಿ ನಿನ್ನ ಚಲನದಿಂದ

ಮನಸಿನೂರಿನಲ್ಲಿ ಬರಿಯ ಮಲ್ಲಿಗೆಯದೇ ಗಂಧ..

 

ಆವತ್ತು ಐವತ್ತೇ ಮೆಟ್ಟಿಲುಗಳು ಬಾಕಿಯಿದ್ದವು, ಮುಳ್ಳಯ್ಯನಗಿರಿಯ ತುತ್ತ ತುದಿಯ ಪುಟ್ಟೇಪುಟ್ಟ ದೇಗುಲಕ್ಕೆ. "ನನ್ನಿಂದಾಗಲ್ಲ ಕಣೋ ಇನ್ನು ಹತ್ತೊದಿಕ್ಕೆ" ಅಂತ ರಂಪ ಹಿಡಿದು ನಾನು ಅಲ್ಲೇ ಕುಳಿತುಬಿಟ್ಟಿದ್ದೆ. ಎರಡೂವರೆ ಮೈಲು ಹತ್ತಿಕೊಂಡು ಬಂದವಳಿಗೆ ಇನ್ನು ಕಣ್ಣಳತೆಯಷ್ಟೇ ದೂರದಲ್ಲಿರುವ ಶಿಖರಕ್ಕೆ ಹೋಗಲು ದಾಡಿಯೇನಲ್ಲ, ನಿನ್ನ ಪುಸಲಾಯಿಸುವಿಕೆಯ ಇನ್ನೊಂದು ಪುಟ್ಟ ಡೋಸ್ ಬೇಕಿತ್ತು ಅಷ್ಟೇ... ನಾನು ಹಾಗೆ ಕುಳಿತಾಗಲೆಲ್ಲ ನೀನು ನನಗಾಗಿ ತೋರಿಸುವ ಪುಟ್ಟ ಪುಟ್ಟ ಆಸೆಗಳಿವೆಯಲ್ಲ, ಅವು ನಂಗೆ ತುಂಬಾ ತುಂಬಾ ಇಷ್ಟ..ಯಾಕೆಂದರೆ ಅವೆಲ್ಲ ನೀನು ನನಗಾಗಿಯೇ ಮೀಸಲಿಡುವ ಸೋ ವೆರಿ ಸ್ಪೆಷಲ್ ಕ್ಷಣಗಳು..

 

ನಿನ್ನ ಕಾಡೊ ನೆಪದಲ್ಲಿನ ನನ್ನದೆಲ್ಲ ಹಠಗಳು 

 ನೀನು ಕಟ್ಟಿ ಕೊಟ್ಟ ಪುಟ್ಟ ನೆನಪಿನೊಲವ ಪುಟಗಳು 

 

ಈ ಸಾರಿ ನಾನು ಹಾಗೆ ಹಠ ಕಟ್ಟಿದಾಗ ನೀನು ನನಗೆ ಪ್ರಾಮಿಸ್ ಮಾಡಿದ್ದು 'ಆಗುಂಬೆಗೆ ಬೈಕ್ ರೈಡ್' .. ನಿಜ ಹೇಳಲಾ ? ನಿನ್ನಷ್ಟೇ ನನಗೆ ನಿನ್ನ ಬೈಕು ಕೂಡ ಇಷ್ಟ ಕಣೋ. ಇಬ್ಬನಿಯ ಪಸೆಯಲ್ಲಿ ತೋಯ್ದೆದ್ದ ತಿರುವು ಮುರುವು ಘಾಟಿ ರೋಡುಗಳಲ್ಲಿ ಎಪ್ಪತ್ತರ ಹಾಡುಗಳನ್ನು ಗುನುಗುತ್ತ ನಿನ್ನ ಹೆಗಲಿಗೆ ತಲೆಯಿಟ್ಟು ತಬ್ಬಿಸಾಗುವುದಿದೆಯಲ್ಲ , ನಾನು ಬದುಕಿನಲ್ಲಿ ಇಷ್ಟಪಡುವ ಅತಿ ಸಂತಸದ ಕ್ಷಣಗಳವು. ಎತ್ತಲಿಂದಲೋ ತೂರಿಬರುವ ಹಿತಗಾಳಿಗೆ ಮೈಯೊಡ್ಡಿ ಎಪ್ಪತ್ತರಲ್ಲಿ ಸಾಗುವುದು , ಅದು ನಾನು-ನೀನು ಮಾತ್ರ ಇರುವ ಕನಸಿನೂರ ಪಯಣ. ಪ್ರತಿ ಬಾರಿ ನೀನು ಟ್ರೆಕ್ಕಿಂಗ್ ಗೆಂದು ಜಾಗ ಹುಡುಕಲು ಸತಾಯಿಸಿದಾಗ I'm least bothered .

 

ಬೆಳ್ಳಂಬೆಳಗ್ಗೆ ಎದ್ದು ನೂರುಗಟ್ಟಲೆ ಮೈಲು ದೂರ ನಿನ್ನೊಡನೆ ಜೀಕುತ್ತ ಸಾಗುವುದೇ ಒಂದು ಹಬ್ಬವಾಗಿರುವಾಗ ಅದ್ಯಾವೂರಾದ್ರೂ  doesn't matter ... ಆಗಿಂದಾಗ್ಗೆ ತಪ್ಪುವ ದಾರಿಗಳು, ಹೆಂಗೆಂಗೋ ಸೇರಿಕೊಳ್ಳುವ ಹಳ್ಳಿಗಳು, ನಮಗೆಂದೇ ಸಿಕ್ಕಿ ಬೈಕು ನಿಲ್ಲಿಸಿದಾಗ ಸಲಾಮು ಹೊಡೆದು ದಾರಿ ಹೇಳುವ ಆತ್ಮೀಯ ದಾರಿಹೋಕರು, ಹೆಸರಿಲ್ಲದ ಗೂಡಂಗಡಿಗಳ ಮುರುಕು ಬೆಂಚಿನಲ್ಲಿ ಕುಳಿತು ಹೀರಿದ ಅಪರಿಮಿತ ರುಚಿಯ ಚಹಾಗಳು... ನಿನ್ನ ಜೊತೆ ಕನಸಿನ ಜೋಳಿಗೆ ಕಟ್ಟಿ ಹೊರಟೆನೆಂದರೆ ಅದು ಸಾಲು ಸಾಲು ಅಚ್ಚರಿಗಳ, ನನ್ನನ್ನೇ ನಾನು ಕಂಡುಕೊಳ್ಳುವ ಹೊಸತನದ ತೇರು..

 

ನನ್ನ ಕನಸ ಗಾಳಿಪಟಕೆ ನಿನದೆ ಒಲವ ಸೂತ್ರ

ಬದುಕ ನಾಟಕದಲಿ ಸಿಕ್ಕ ನನ್ನತನದ ಪಾತ್ರ...

 

ಪಯಣ ಇಷ್ಟೊಂದು ಸಂಗತಿಗಳನ್ನು ಕಲಿಸಿಕೊಡುತ್ತೆ ಅಂತ ನಿನ್ನಿಂದಲೇ ನಾನು ಅರಿತುಕೊಂಡಿದ್ದು..ತಿಂಗಳ ಮುಂಚೆ ಟ್ರಾವೆಲ್ಗಳಲ್ಲಿ ರೆಸರ್ವೇಶನ್ ಮಾಡಿಸಿ, ಹೋಟೆಲುಗಳಲ್ಲಿ ರೂಮು ಕಾದಿರಿಸಿ, ಟೂರ್ ಗೈಡ್ ಕರೆತಂದಲ್ಲೆಲ್ಲ ಅಲೆದು, ಅವನು ತೋರಿಸಿದಲ್ಲಿ ಫೋಸು ಕೊಟ್ಟು ನಿಂದು,  ಅವನ ಕೈಯಲ್ಲೇ ಫೋಟೋ ಹೊಡೆಸಿಕೊಂಡು ದಿನ ಬೆಳಗಾಗುವುದರೊಳಗೆ ಫೇಸುಬುಕ್ಕಿನಲ್ಲೋ, ಆರ್ಕುಟ್ಟಿನಲ್ಲೋ ಹಾಕಿ ಲೈಕಿಸಿಕೊಳ್ಳುವ ಆ ನನ್ನ ಗೆಳೆಯರಿಗೆ ಹೋಲಿಸಿದರೆ , you are so different ಕಣೋ.. ನೀನಾಯಿತು, ನಿನ್ನ ಬೈಕಾಯಿತು..ಮೈಲುದ್ದದ ದಾರಿಯಾಯಿತು..ಇವೆಲ್ಲದರ ಜೊತೆ ನಿನಗಾತು ಕುಳಿತು ಕೊಳ್ಳುವ ನಾನು..ಇಷ್ಟಿರುವಾಗ ಸಮಯದ ಹಂಗು ಬೇಕಾ ನಮಗೆ? 

 

'ಆಗುಂಬೆಯ ಬೈಕ್ ರೈಡ್' ನೀನು ಪ್ರಾಮಿಸ್ ಮಾಡಿದ್ರೂ ಇನ್ನೂ ಚೂರು ನಿನ್ನ ಕಾಡೋಣ ಅಂತ ಅನ್ನಿಸ್ತು. "ನೀನೇನು ಹೇಳಿದ್ರು ನಂಗೆ ಒಂದು ಹೆಜ್ಜೆ ಮುಂದಿಡೋಕೆ ಆಗಲ್ಲ" ಅಂತ ರಂಪ ಮುಂದುವರೆಸಿದೆ... ಏನು ಹೇಳ್ತಾನೆ ನನ್ನ ಮುದ್ದು ಮಜ್ನು ಅಂತ ಮನಸು ಢವಗುಟ್ಟುತ್ತಿತ್ತು. ನೀನೇನೂ ಹೇಳಲಿಲ್ಲ..ನನ್ನ ಬಳಿಯೇ ಕುಳಿತುಬಿಟ್ಟೆ..ನಾನು ದಿಟ್ಟಿಸುವ ದೂರದ ಬೆಟ್ಟ ಸಾಲನ್ನೇ ದಿಟ್ಟಿಸುತ್ತ.. ಒಂದು ಕ್ಷಣ ನಾನು ನಿನ್ನೆಡೆಗೆ ತಿರುಗಿ ನೋಡಿದೆ..ನನ್ನ ಮಜ್ನು ಇಷ್ಟೊಂದು ಚೆಲುವನಾ ! ನನಗರಿವಿಲ್ಲದಂತೆಯೇ ನನ್ನ ಕೈಗಳನ್ನು ನಿನ್ನ ಕೈಗಳ ಅತಿ ಸಮೀಪವೇ ಇರಿಸಿದೆ. ನನ್ನ ಆಸೆ ನಿನ್ನಂತ ಕಳ್ಳನಿಗೆ ಗೊತ್ತಾಗದ್ದೇನೂ ಅಲ್ಲ..ಆದ್ರೂ ಏನೂ ಗೊತ್ತಿಲ್ಲದವನಂತೆ ಕುಳಿತಲ್ಲಿಂದ ಎದ್ದುಬಿಟ್ಟು ಮತ್ತೆ ನಡೆಯಲು ಶುರುಹಚ್ಚಿಬಿಟ್ಟೆ! ಒಂದು ಮಾತೂ ಆಡದೆ..ಆ ಕ್ಷಣಕ್ಕೆ ನನಗೆ ತಣ್ಣೀರು ರಾಚಿದಂತೆ ಅನಿಸಿದ್ದು ಸುಳ್ಳಲ್ಲ.. ಆದ್ರೆ ನಿಜ ಹೇಳಲಾ, ನಿನ್ನ ಈ ಪ್ರಜ್ಞೆಯ ನಡುವಳಿಕೆಯೇ ನಾನು ನಿನ್ನಲ್ಲಿ ಅತ್ಯಂತ ಇಷ್ಟ ಪಡುವ ಸೊತ್ತು. ಅದೆಷ್ಟು ಕಾಳಜಿಯಿಂದ ಒಂದು ಸಂಬಂಧವನ್ನು ಕಾಯ್ದುಕೊಳ್ಳ ಬೇಕೆಂಬುದನ್ನು ನೀನು ಬಾರಿ ಬಾರಿಯೂ ನನಗೆ ಕಲಿಸುತ್ತಿರುತ್ತೀಯ. ನನ್ನ ಮುದ್ದು ಮಜ್ನು, you are my friend , guide & philosopher..

 

ಆಡದುಳಿದ ಮಾತುಗಳಿಗೆ ಅರ್ಥ ಹುಡುಕಬೇಕು 

ಪ್ರೀತಿ ಕಲಿಯೊ ಮೊದಲು ನಾನು ಬದುಕ ಕಲಿಯಬೇಕು

 

ಈ ಬಾರಿ ನಾನೇನೂ ರಂಪ ಮಾಡಲಿಲ್ಲ. ಸುಮ್ಮನೆ ನಿನ್ನ ಹಿಂಬಾಲಿಸುತ್ತಾ ನಡೆದೆ...ನಿನ್ನ ಹೆಜ್ಜೆಗಳ ಹಾದಿಯಲ್ಲೇ ನನ್ನ ಕನಸಿನ ಹೆಜ್ಜೆಗಳನ್ನಿಡುತ್ತ..ನನ್ನೊಳಗಿದ್ದ ನೀನೆಂಬ ಹುಚ್ಚುತನ ಅದಾಗಲೇ ನೀನೆಂಬ ಮೆಚೂರ್ಡ್ ಫೀಲಿಂಗ್ ಗೆ ದಾರಿಮಾಡಿ ಕೊಟ್ಟಾಗಿತ್ತು . ಅದು ಹೇಗೆ ನಾನು ಆ ರೀತಿ  ಬದಲಾದೇನೋ..ಆ ಸಂಜೆ ನಾವು ಗಿರಿಯ ತುದಿ ತಲುಪಿದ್ವಿ, ತುದಿಯಲ್ಲಿರುವ ಗುಡಿಯಲ್ಲಿ ಊಟವನ್ನೂ ಮುಗಿಸಿದ್ವಿ , ಕಣ್ಣ ನೇರಕ್ಕೆ ಸಾಗುವ ಮೋಡಗಳ ಸಾಲುಗಳನ್ನು ತಾಸಿಗೂ ಹೆಚ್ಚು ಕಾಲ ದಿಟ್ಟಿಸಿದ್ವಿ.. ತುಂಬಾ ತುಂಬಾ ಮಾತೂ ಆಡಿದ್ವಿ.. ಆದ್ರೂ ನಮ್ಮಿಬ್ಬರ ನಡುವೆ ಇದ್ದ ಆ ತುಂಟತನ ಅದ್ಹೇಗೋ ಆ ಸಂಜೆಯ ತಂಗಾಳಿಯಲ್ಲಿ ಕೊಚ್ಚಿಕೊಂಡು ಹೋದಂತೆ ಅನ್ನಿಸಿ ನಿನ್ನ ಜೊತೆಯಿರುವಾಗಲೇ ನಿನ್ನನ್ನು ಮಿಸ್ ಮಾಡಿಕೊಂಡಂತೆ ಮನಸ್ಸು ಕಸಿವಿಸಿಗೊಂಡಿತ್ತು.. ಆದ್ರೆ ಆ ಕಸಿವಿಸಿಗೆ ಕಾಂಪ್ರೋಮೈಸ್ ಆಗಿ ಇನ್ನೇನೋ ಸಿಕ್ಕಿದ್ದಂತೆ ಅನ್ನಿಸಿ ಒಳಗೊಳಗೇ ಪುಟ್ಟ ಖುಷಿಯೂ ಇತ್ತು.

 

ನನ್ನ ನಿನ್ನ ನಡುವಿನಲ್ಲಿ ನುಸುಳಿ ಹೋದ ಗಾಳಿ

ಏನ ಕೊಚ್ಚಿಕೊಂಡು ಹೋಯ್ತು ಏನ ಉಳಿಸಿತಿಲ್ಲಿ..

 

ನನ್ನ ಅತ್ಯಂತ ಪ್ರೀತಿಯ ತುಂಟ ಸುಕುಮಾರ ಮೆಲ್ಲ ಮೆಲ್ಲನೆ ಒಬ್ಬ ಜವಾಬ್ದಾರಿಯುತ ಜೀವದ ಗೆಳೆಯನಾಗಿ ನನ್ನೆದುರೇ ಹೊಮ್ಮಿಕೊಂಡು ಬಿಟ್ಟಿದ್ದ. ಆ ರಾತ್ರಿಯ ನನ್ನ ಕನಸುಗಳೆಲ್ಲ ಫುಲ್ ಡಿಫರೆಂಟ್ ಗೊತ್ತಾ..ಆವತ್ತಿನವರೆಗೂ ನಾನು ನಿನ್ನ ಬಗ್ಗೆ ಯೋಚಿಸುತ್ತಿದ್ದಾಗಲೆಲ್ಲ ನಿನ್ನನ್ನು ಹೇಗೆಲ್ಲ ಗೋಳು ಹೊಯ್ದುಕೊಳ್ಳಬಹುದು ಅಂತಾನೆ ಸ್ಕೆಚ್ ಹಾಕುತ್ತಿದ್ದೆ. ಆದ್ರೆ ಅಂದಿನಿಂದ ಅದೇಕೋ ಕನಸುಗಳು ಬೆಚ್ಚನಾದವು, ನೆನಪುಗಳು ಹಚ್ಚನಾದವು, ಕನವರಿಕೆಗಳು ಹುಚ್ಚನಾದವು....

 

ಬಿದಿಗೆ ಚಂದ್ರನಲ್ಲಿ ನಿನ್ನ ಬಿಂಬ ಕಾಣೋ ಮೊದಲು

ಮನದ ಮೂಲೆಯಲ್ಲಿ ನಮ್ಮ ಮುತ್ತು ಅದಲು ಬದಲು 

 

ಇದೀಗ 'ಆ' ದಿನವೂ ಬಂದೆ ಬಿಟ್ಟಿದೆ. ನಾಳೆ ನೀನು ನನಗೆಂದೆ ಪ್ರಾಮಿಸ್ ಮಾಡಿದ ಆಗುಂಬೆಯ ಬೈಕ್ ಟ್ರಿಪ್. ಈ ಬಾರಿ ನಾನು ನಿನ್ನ ರೇಗಿಸಲ್ಲ..ರಂಪವನ್ನೂ ತೆಗೆಯೋಲ್ಲ. ಆದ್ರೂ ನೋಡ್ತಿರು, ಈ ಬಾರಿ ನಿನ್ನ ಈ ಲೈಲಾ ನಿನಗೆ ಇನ್ನಿಲ್ಲದಷ್ಟು ಇಷ್ಟವಾಗ್ತಾಳೆ..ನೀನು ಯಾವತ್ತೂ ಮರೆಯಲ್ಲ, ಅಂಥ ಮೆಮೊರೆಬಲ್ ಅಡೋರಬಲ್ ಟ್ರಿಪ್ ಇದಾಗುತ್ತೆ..ನೋಡುತ್ತಿರು.. 

ಹೇಗೆಂತಿಯಾ?  ಸಸ್ಪೆನ್ಸ್ :-)

 

ಇಂತಿ ನಿನ್ನ ರಾಜ್ಕುಮಾರಿ..     

 

Rating
No votes yet

Comments