ಇದು ಸೀರಿಯಸ್ ವರ್ತನೆಯೇ?!

ಇದು ಸೀರಿಯಸ್ ವರ್ತನೆಯೇ?!

          ಆಡಳಿತ ಭ್ರಷ್ಟತೆಯ ಬಗ್ಗೆ ಪ್ರಶ್ನಿಸುವುದು ವಿಪಕ್ಷಗಳ ಸೆಂಟ್-ಪರಸೆಂಟ್ ಹಕ್ಕು. ಇಂತಹ ರಣವೀಳ್ಯಕ್ಕೆ ವಿಧಾನ ಮಂಡಲ ಅತ್ಯುಚಿತ ವೇದಿಕೆಯೂ ಹೌದು. ಆದರೆ ಈಗ ನಡೆಯುತ್ತಿರುವ ಕಲಾಪ ಅದಾಗಿಲ್ಲ!


          ಆಳುವವರ ಮಾವಾಳ್ಲುತನ, ಸ್ವಹಿತಕ್ಕಾಗಿ ಸರಕಾರದ ಬೊಕ್ಕಸಕ್ಕೆ ಪಂಗನಾಮ, ಎಲ್ಲೆ-ಗಡಿಗಳಿಲ್ಲದೆ, ದೈತ್ಯ ಹಿರಣ್ಯಾಕ್ಷನಂತೆ ಭೂಕಬಳಿಕೆ ಇತ್ಯಾದಿ ಅಕಲ್ಯಾಣ ಗುಣಗಳು ಮುಗಿಲೆತ್ತರಕ್ಕೆ ಬಿಂಬಿತವಾಗುತ್ತಿವೆ. ಅವುಗಳ ಸತ್ಯಾಸತ್ಯತೆಯನ್ನು ಪ್ರತಿಪಕ್ಷಗಳು ಪದರ-ಪದರವಾಗಿ ಬಿಚ್ಚಿಡಲೇಬೇಕು. ಆದರವು ಸದನದಲ್ಲಿ ಧರಣಿಯ ಪೋಸ್ ಕೊಟ್ಟು ಎದ್ದುಹೋಗುತ್ತಿವೆ! ಚಲಾವಣೆಯಲ್ಲುಳಿಯಲು ಇದು ಅವರಿಗೊಂದು ಸ್ಟ್ರ್ಯಾಟಜಿಯಾಗಬಹುದು. ಆದರೆ ಮುಂದಿನ ಚುನಾವಣೆ ಗೆಲ್ಲಲು ಬುನಾದಿಯಂತೂ ಅಗುವುದಿಲ್ಲ!


          ಏನೇ ಮಾಡಿದರೂ ಈ ಕ್ಷಣದಲ್ಲಿ ಭ್ರಷ್ಟ ಸರಕಾರವನ್ನುರುಳಿಸುವ ಸಂಖ್ಯೆ ಪ್ರತಿಪಕ್ಷದಲ್ಲಿಲ್ಲ; ಜನತೆಗದು ಬೇಕಾಗೂ ಇಲ್ಲ. ಆದ್ದರಿಂದ ಅಂಥಾ ರೂಲೇ ಏಕೆ? ಸರಕಾರದ ಸ್ಥಿರತೆಯ ಮೇಲೆ ಪರಿಣಾಮ ಬೀರದ ನಿಯಮದಡಿಯೇ ಗೊತ್ತುವಳಿಗಳನ್ನು ಮಂಡಿಸಲಿ; ಪರಿಣಾಮಕಾರಿಯಾಗಿ ಪಟ್ಟುಗಳನ್ನು ಹಾಕಿ, ಸರಕಾರವನ್ನು ಬೆಬ್ಬೆಬ್ಬೆ...  ಅನ್ನಿಸಲಿ. ಅವಕಾಶವಿದ್ದಲ್ಲೆಲ್ಲಾ ಫ್ರೆಂಡ್ಲಿ ಮತವಿಭಜನೆ ಕೇಳಿ ಸರಕಾರದ ಬಂಡವಾಳವನ್ನು ಬಯಲಿಗೆಳೆಯುತ್ತಾ ಹೋಗಲಿ! ರೆಸಾರ‍್ಟಿಗೆ ಹೋಗಿ ಐನಾತಿ ಶಾಸಕರನ್ನು ಖರೀದಿಸುವುದಕ್ಕಿಂತಾ, ಅಥವಾ ಚುನಾವಣೆಯಲ್ಲಿ ಹಣ-ಹೆಂಡಕ್ಕೆ ವೋಟಿನ ವಿನಿಮಯ ಮಾಡಿಕೊಳ್ಳುವ ಕಳ್ಳತನಕ್ಕಿಂತಾ ಮತದರರ ಕಣ್ತೆರೆಸಿ ಪಡೆಯುವ ಪ್ರಾಮಾಣಿಕ ಗೆಲವಿಗೇ ಇದು ಹೆದ್ದಾರಿಯಾದೀತು!


          ಅದರೆ ಪ್ರಾಮಾಣಿಕತೆ ಶಬ್ದಕ್ಕೇ ಬೆಚ್ಚಿ-ಬೆದರುವುದೇ ರಾಜಕಾರಣದ ವಾಖ್ಯೆಯಾಗಿದೆಯಲ್ಲ್ಲಾ?! 

Rating
No votes yet

Comments