ಸ್ವಚ್ಛತಾ ಕಾರ್ಯಕ್ರಮ ....
ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ ತುಂಬಾ ಕೆಲಸಗಳಿರುತ್ತವೆ. ಬ್ಲಾಗ್ ನೋಡಬೇಕು, ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು, ಮತ್ತೆ ಓದಬೇಕು ಎಂದು ಹೇಳಿದೆ. ಓದುವ ಸಮಯದಲ್ಲಿ... ಚೆನ್ನಾಗಿ ಊದಿದಿರಿ ಎಂದು ಕಾಣುತ್ತೆ, ಅದಕ್ಕೆ ಈಗ ಓದುತ್ತಾ ಇದ್ದೀರ ಎಂದಳು. ಏನೋ? ಒಂದೆರಡು ಬ್ಲಾಗ್ ಬರೆದ ಮಾತ್ರಕ್ಕೆ, ನಿಮ್ಮಷ್ಟಕ್ಕೆ ನೀವೇ ದೊಡ್ಡ ಸಾಹಿತಿ ಎಂದು ತಿಳಿದುಕೊಳ್ಳಬೇಡಿ. ನಿಮಗೇನೂ ಕೊಂಬು ಬಂದ ಹಾಗೆ ಆಡುತ್ತಿರುವಿರಿ ಎಂದಳು. ಏನು? ನನಗೆ ಕೊಂಬು ಇಲ್ಲವೇ?, ನನ್ನ ಹೆಸರು ಏನು? ಎಂದೆ. ಮತ್ತೇನು ದನ ಕಾಯುವವನು ಎಂದಳು. ಲೇ ಅವು ಆಕಳುಗಳು ಎಂದೆ. ಅವುಗಳಿಗೆ ಕೊಂಬು ಇದೆ. ನನಗೆ ಇಲ್ಲವೇ ಬೇಕಾದರೆ "ಗೋಪಾಲ್" ಎಂಬ ಹೆಸರಿನಲ್ಲಿ "ಲ್" ಕ್ಕೆ ಕೊಂಬು ಇದೆ ಅಲ್ಲ, ಒಂದೇ ಇರಬಹುದು, ಆದರೂ ಇದೆ ತಾನೇ ಎಂದೆ. ಆಯಿತು, ಮಹಾರಾಯರೆ ನೀವು ಮಹಾನ್ ಕೊಂಬು ಪಂಡಿತರು ...ಕ್ಷಮಿಸಿ ಕೊಬ್ಬು ಪಂಡಿತರು. ನಿಮಗೆ ಸರಿಸಾಟಿ ಯಾರು ಇಲ್ಲ ಆಯಿತಾ ಎಂದಳು. ಸಧ್ಯ, ನಿಮ್ಮ ಕಂಪ್ಯೂಟರ್ ನಾದರೂ ಒರೆಸುವ ಕೆಲಸ ಮಾಡುವುದಿಲ್ಲ ಎಂದಳು. ಬರಿ ಅದನ್ನು ಕುಟ್ಟುವುದು ಮಾತ್ರ ಬಿಡುವುದಿಲ್ಲ. ಸ್ವಲ್ಪ ಮೆಣಸಿನಕಾಯಿ ಕುಟ್ಟಿದ್ದರೆ, ಇಷ್ಟೊತ್ತಿಗೆ ಖಾರದ ಪುಡಿನಾದರೂ ಆಗುತಿತ್ತು ಎಂದು ಉಗಿದಳು. ಆಯಿತು... ಮಹಾರಾಯತಿ ಈ ಶನಿವಾರ ಮಾಡುತ್ತೇನೆ ಎಂದು ಅಭಯವನ್ನಿತ್ತೆ. ಅಷ್ಟಕ್ಕೇ ಬಿಡಬೇಕಲ್ಲ ಆಗತಾನೆ ಹೊಸದಾಗಿ ತಂದ ಕ್ಯಾಲಂಡರ್ ಮೇಲೆ ಒಂದು ವೃತ್ತ ಬಿಡಿಸಿ, ಈ ವಾರ ಸ್ವಚ್ಛತಾ ಕಾರ್ಯಕ್ರಮ ಎಂದು ಗುರುತು ಮಾಡಿ ಬಿಟ್ಟಳು. ಇನ್ನೂ ತಪ್ಪಿಸಿಕೊಳ್ಳುವುದು ಅಸಾಧ್ಯದ ಸಂಗತಿ ಆಗಿತ್ತು.
ಹಳೆಯ ಕಂಪನಿಯಲ್ಲಿ ಬರೀ ರವಿವಾರ ಮಾತ್ರ ರಜೆ ಇರುತಿತ್ತು. ಹೀಗಾಗಿ ನನಗೆ ಸ್ವಲ್ಪ ರಿಯಾಯಿತಿ ದೊರೆಯುತ್ತಿತ್ತು. ಆದರೆ ಈಗ ಯಾವುದೇ "ರಿಯಾಯಿತಿ" ಇಲ್ಲ, "ರೀ ಆಯಿತ" ಎಂಬ ಶಬ್ದ ಮಾತ್ರ ಕೇಳಿಸುತ್ತೆ. ಒಂದೇ ದಿನದಲ್ಲಿ ಎಲ್ಲ ಸ್ವಚ್ಛತಾ ಮುಗಿಯುತ್ತಾ, ನನ್ನ ಕೈಯಲ್ಲಿ ಎಂದು ಯೋಚನೆ ಬೇರೆ ಇತ್ತು.
ಕಡೆಗೆ ಶನಿವಾರ ಬಂದೆ ಬಿಟ್ಟಿತ್ತು. ಆರು ಘಂಟೆಗೆ ಎದ್ದೊಡನೆ ಸ್ವಚ್ಚತಾ ಕಾರ್ಯಕ್ರಮ ಶುರು ಮಾಡಿಕೊಂಡಿದ್ದೆ. ರೀ ಮೊದಲು ಕಾಫೀ ಕುಡಿ ಬನ್ನಿ, ಆಮೇಲೆ ಮಾಡುವಿರಂತೆ ಎಂದಳು. ಕಾಫೀ ಕುಡಿದು ಮತ್ತೆ ಕೆಲಸ ಶುರು ಮಾಡಿದೆ.
ಪೊರಕೆ ತೆಗೆದುಕೊಂಡು ಕಾಟ್ ಕೆಳಗೆ ಗುಡಿಸಿದೆ. ಒಂದು ಹಲ್ಲಿ ನನ್ನ ಮೇಲೆ ಬಂದ ಹಾಗೆ ಆಗಿತ್ತು. ನೋಡುತ್ತೇನೆ ಅದು ನನ್ನ ಮಗನ ರಬ್ಬರ್ ಹಲ್ಲಿ. ಮಡದಿ, ಮಗ ಇಬ್ಬರು ಜೋರಾಗಿ ನಗ ಹತ್ತಿದರು. ಕಡೆಗೆ ನಾನು ನಕ್ಕು, ಕಾಟ್ ಎತ್ತಿ ಆಮೇಲೆ ಸ್ವಚ್ಛ ಮಾಡಿದರೆ ಆಗುತ್ತೆ ಎಂದು ಎತ್ತಲು ಅನುವಾದೆ. ಸ್ವಲ್ಪ ಕೂಡ ಮಿಸುಗಾಡಲಿಲ್ಲ , ನನ್ನ ಮೀಸೆ ಮಾತ್ರ ಎರಡು ಬಾರಿ ಅಲುಗಾಡಿತು. ಇನ್ನೊಮ್ಮೆ "ಐಸಾ" ಎಂದು ಎತ್ತಲು ಅನುವಾದೆ. ದಪ್ ಎಂದು ಈ ದಪ್ಪದಾದ ದೇಹ ಕೆಳಗಡೆ ಬಿದ್ದಿತ್ತು. ಕಡೆಗೆ ನನ್ನನ್ನು ಎಬ್ಬಿಸಿ, ನಿಮ್ಮ ಅಪ್ಪನ ಕೈಯಲ್ಲಿ ಏನು? ಆಗುವುದಿಲ್ಲ ಎಂದು ಅಣಕಿಸಿದಳು. ಬರೀ ದೊಡ್ಡ ದೇಹ, ಒಳಗಡೆ ಏನು? ಇಲ್ಲ ಎಂದಳು. ಅವನಿಗೆ ಅರ್ಥವಾಗದಿದ್ದರೂ, ಅವಳು ನಕ್ಕೊಡನೆ ಅವನು ನಗುತ್ತಿದ್ದ. ಏನು? ಏನೆಂದು ತಿಳಿದಿದ್ದೀಯ ನನ್ನ. ನನ್ನ ಕಂಡರೆ ತುಂಬಾ ಜನರು ಹೆದುರುತ್ತಾರೆ ಗೊತ್ತಾ ಎಂದೆ. ಹೌದಾ?, ಜನರು ಜಿರಳೆ ನೋಡಿ ಕೂಡ ಹೆದರುತ್ತಾರೆ ಗೊತ್ತಾ ಎಂದಳು.
ಕಡೆಗೆ ನೀನು ಬಾ ಹೆಲ್ಪ್ ಮಾಡು ಎಂದೆ. ಅವಳು ಬಂದಳು. ಇಬ್ಬರು ಸೇರಿ ಎತ್ತಿದರು ಕಾಟ್ ಮೇಲೆ ಏಳಲೇ ಇಲ್ಲ. ಈಗ ನಾನು ನಗುತ್ತಾ ಈಗ ಏನು ಹೇಳುತ್ತಿ ಎಂದೆ. ಅಡುಗೆ ಮನೆಯಲ್ಲಿನ ಹಾಲು ಉಕ್ಕುವ ಶಬ್ದ ಕೇಳಿ ಒಳಗಡೆ ಹೋಗಿ ಬಂದಳು. ನಾನು ಇನ್ನೂ ಎತ್ತಲು ಪ್ರಯತ್ನ ಮಾಡುತ್ತಲೇ ಇದ್ದೆ. ಬಂದವಳೇ ರೀ ಎಂದು ನಗುತ್ತಾ ಅಲ್ಲಿ ನೋಡಿ ಗೋಡೆಗೆ ಅದು ಸಿಕ್ಕಿ ಹಾಕಿ ಕೊಂಡಿದೆ ಎಂದು ನಗಲು ಶುರು ಮಾಡಿದಳು. ನಾನು ಆಮೇಲೆ ಸ್ವಲ್ಪ ಸರಿಸಿ ತುಂಬಾ ಆರಾಮವಾಗಿ ಎತ್ತಿ ಇಟ್ಟೆ. ಮನೆಯ ಎಲ್ಲ ಸ್ವಚ್ಚತಾ ಕಾರ್ಯಕ್ರಮ ಮುಗಿಸಿ, ಮಡದಿ ಮಾಡಿದ ಬಿಸಿ ಬೇಳೆ ಬಾತ್ ತಿಂದು ಸಂಜೆವರೆಗೆ ನಿದ್ದೆ ಮುಗಿಸಿ ಎದ್ದೆ.
ಎದ್ದೊಡನೆ ಕೈ ಕಾಲು ಮಾತನಾಡುತ್ತಾ ಇದ್ದವು. ಹೀಗಾಗಿ ಸ್ವಲ್ಪ ಒದರುತ್ತ ಇದ್ದೆ. ಅದನ್ನು ನೋಡಿ ವರ..ವರ.. ಎಂದು ಒದರಬೇಡಿ ಎಂದಳು. ಅದಕ್ಕೆ ವರ ವರ ಎಂದು ನಾನೇಕೆ ಒದರಲಿ ಬೇಕಾದರೆ ಕನ್ಯಾ.. ಕನ್ಯಾ ಎಂದು ಕಿರುಚುತ್ತೇನೆ ಎಂದು ಹೇಳಿ ಮತ್ತೊಮ್ಮೆ ಮಂಗಳಾರತಿ ಮಾಡಿಸಿಕೊಂಡಿದ್ದೆ. ಕಾಫೀ ಕೊಡುತ್ತಾ ರೀ.. ಮುಂದಿನ ವಾರ ಅಡುಗೆ ಮನೆ ಸ್ವಚ್ಛ್ ಮಾಡೋಣ ಎಂದಳು. ನಾನು ನನ್ನ ಮಗನ ಚಿಣ್ಣರ ಹಾಡು "ವಾರಕೆ ಏಳೆ ಏಳು ದಿನ, ಆಟಕೆ ಸಾಲದು ರಜದ ದಿನ" ವನ್ನು ಬದಲಿಸಿ "ವಾರಕೆ ಶನಿವಾರ ಒಂದು ದಿನ , ಸ್ವಚ್ಛತೆಗೆ ಸಾಲದು ಈ ಒಂದು ದಿನ" ಎಂದು ಹಾಡುತ್ತಾ ಕಾಫೀ ಹಿರಿ ಮುಗಿಸಿದ್ದೆ.
ಮತ್ತೆ ಲೇಖನದ ವಿಷಯ ನೆನೆಪು ಆಗಿ ಬರೆಯುತ್ತಾ ಕುಳಿತೆ. ನಾನು ಲೇಖನವನ್ನು ಒಂದು ಪೇಜ್ ನಾದರೂ ಬರೆಯುತ್ತೇನೆ. ಇವತ್ತು ಎಷ್ಟು ಬರೆದರು ಒಂದು ಪೇಜ್ ಆದ ಹಾಗೆ ಅನ್ನಿಸಲೇ ಇಲ್ಲ. ಏಕೋ ಅನುಮಾನವಾಗಿ ಹಳೆಯ ಲೇಖನ ತೆಗೆದೆ, ಅದು ಕೂಡ ಚಿಕ್ಕದಾಗಿ ಇತ್ತು. ಒಂದೆರಡು ಲೇಖನ ಓದಿದೆ ಪೂರ್ತಿ ವಿಷ್ಯ ಇತ್ತು. ಅಷ್ಟರಲ್ಲಿ ಮಡದಿ ನಿನ್ನೆ ಇಂದ ಸ್ವಲ್ಪ ಚಿಕ್ಕದಾಗಿ ಬರುತ್ತಿದೆ ನೋಡಿ ಏನಾಗಿದೆ? ಮಾನಿಟರ್ ಎಂದಳು. ಆಮೇಲೆ ತಿಳಿಯಿತು ಅವಳು ಅದರ ಸೆಟ್ಟಿಂಗ್ ಚೇಂಜ್ ಮಾಡಿದ್ದಾಳೆ ಎಂದು. ಅದನ್ನು ಸರಿ ಮಾಡಿದ ಮೇಲೆ, ದೊಡ್ಡದಾಗಿ ಕಂಡ, ನನ್ನ ಲೇಖನದ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬಂತು.
ಸಂಜೆ ಮಗನಿಗೆ ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೀರಿ, ಮತ್ತೆ ಕುಟ್ಟಲು ಶುರು ಮಾಡಿದ್ದೀರ ಎಂದಳು. ಪಾರ್ಕಿಗೆ ಹೊರಟೆವು. ಕೆಳಗಡೆ ಓನರ್ "ಏನ್ರೀ ಗೋಪಾಲ್ ಚೆನ್ನಾಗಿದ್ದೀರಾ, ಬೆಳಿಗ್ಗೆ ಬೂಕಂಪ ಆಗಿತ್ತು, ಆದರೆ ಯಾವ ಚ್ಯಾನೆಲ್ ನಲ್ಲಿ ತೋರಿಸಲೇ ಇಲ್ಲ ನೋಡಿ ಎಂದು ಮುಖ ಕಿವುಚಿದರು". ನನ್ನ ಮಡದಿ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದಳು. ಅವಳನ್ನು ನೋಡಿ ನನ್ನ ಮಗ ಕೂಡ. ಪಾರ್ಕಿಗೆ ಹೋಗಿ ಸಂಜೆ ಬರುವ ವೇಳೆಯಲ್ಲಿ ಎಸ್.ಎಲ್.ವಿ ಗೆ ತೆರಳಿ ಒಂದಿಷ್ಟು ಬಿಳಿ ಗುಳಿಗೆ (ಇಡ್ಲಿ) ನುಂಗಿ ಮನೆಗೆ ಬಂದು ಕ೦ಟ ಪೂರ್ತಿ ಊಟ ಮುಗಿಸಿ, ಈ ಶನಿವಾರಗಳು ವಾರಕೆ ಎರಡು ಬಂದರೆ ಹೇಗೆ ಎಂದು ಯೋಚಿಸುತ್ತಾ, ನಿದ್ದೆಗೆ ಜಾರಿದೆ.
ಮುಂದಿನ ಶನಿವಾರ ಏನೇನು ಕಾದಿದೆಯೋ ಗೊತ್ತಿಲ್ಲ... ಮತ್ತೆ ಬರುತ್ತೇನೆ ಆ(ಈ) ಶನಿವಾರದ ಪೂರ್ತಿ ವಿವರದೊಂದಿಗೆ....ಆ(ಈ) ಎಂದು ಬರೆದಿದ್ದೇನೆ, ಎಂದು ನನ್ನ ಮಡದಿಗೆ ಮಾತ್ರ ಹೇಳಬೇಡಿ... ಅವಳು, ಇವನಿಗೆ ಆ..ಆ..ಇ ...ಈ ಕೂಡ ಬರುವುದಿಲ್ಲ ಎಂದು ತಿಳಿದುಕೊಂಡಾಳು...:-)).
Comments
ಉ: ಸ್ವಚ್ಛತಾ ಕಾರ್ಯಕ್ರಮ ....
In reply to ಉ: ಸ್ವಚ್ಛತಾ ಕಾರ್ಯಕ್ರಮ .... by Jayanth Ramachar
ಉ: ಸ್ವಚ್ಛತಾ ಕಾರ್ಯಕ್ರಮ ....
ಉ: ಸ್ವಚ್ಛತಾ ಕಾರ್ಯಕ್ರಮ ....
In reply to ಉ: ಸ್ವಚ್ಛತಾ ಕಾರ್ಯಕ್ರಮ .... by partha1059
ಉ: ಸ್ವಚ್ಛತಾ ಕಾರ್ಯಕ್ರಮ ....