ದಶಕ ಪೂರೈಸಿದ ವಿಕಿಪೀಡಿಯಾ

ದಶಕ ಪೂರೈಸಿದ ವಿಕಿಪೀಡಿಯಾ

ದಶಕ ಪೂರೈಸಿದ ವಿಕಿಪೀಡಿಯಾ

ವಿಕಿಪೀಡಿಯಾಕ್ಕೀಗ ಹತ್ತು ವರ್ಷ.ಜಗತ್ತಿನ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣಗಳಲ್ಲೊಂದಾದ ವಿಕಿಪೀಡಿಯಾ ಜನವರಿ ಹದಿನೈದು,2001ರಂದು ಆಸ್ತಿತ್ವಕ್ಕೆ ಬಂದಿತು.ವಿಕಿಪೀಡಿಯಾದ ಸ್ಥಾಪಕ ಜಿಮ್ಮಿವೇಲ್ಸ್ ಅವರು "ಹಲೋ ವರ್ಲ್ಡ್" ಎಂಬ ಪದಗಳೊಂದಿಗೆ,ವಿಕಿಪೀಡಿಯಾವನ್ನು ಆರಂಭಿಸಿದ್ದರು.ಮೊದಲ ತಿಂಗಳಲ್ಲೇ ವಿಕಿಪೀಡಿಯಾಕ್ಕೆ ಒಂದು ಸಾವಿರ ಬರಹಗಳು ಸೇರಿಸಲ್ಪಟ್ಟಿದ್ದುವು.ಈಗ ಅದರಲ್ಲಿ ಇನ್ನೂರ ಎಪ್ಪತ್ತು ಭಾಷೆಗಳ ಹದಿನೇಳು ದಶಲಕ್ಷ ಬರಹಗಳಿವೆ.ಎಂಬತ್ತು ಸಾವಿರ ಸಂಪಾದಕರುಗಳು ವಿಕಿಪೀಡಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದು,ಬಳಕೆದಾರ ಸಂಖ್ಯೆ ಪ್ರತಿತಿಂಗಳೂ ನಲುವತ್ತು ಕೋಟಿ ಜನ ದಾಟಿದೆ.ವಿಕಿಪೀಡಿಯಾವನ್ನು ಯಾವನೂ ತಿದ್ದುವ ಅವಕಾಶವಿದ್ದರೂ,ಇದರ ಬಳಕೆ ಮಾಡಲು ತುಸು ಪರಿಣತಿ ಅಗತ್ಯವೆನ್ನುವುದನ್ನು ಜಿಮ್ಮಿವೇಲ್ಸ್ ಅವರೇ ಒಪ್ಪಿಕೊಳ್ಳುತ್ತಾರೆ.ವಿಕಿಪೀಡಿಯಾವಿನ್ನೂ ಸರಳವಾಗಿ ಲಭ್ಯವಾದರಷ್ಟೇ ಮಹಿಳೆಯರೂ ಸೇರಿ ಶ್ರೀಸಾಮಾನ್ಯರು ಅದಕ್ಕೆ ತಮ್ಮ ಕೊಡುಗೆ ನೀಡಲು ಮುಂದೆ ಬಂದಾರು ಎನ್ನುವುದರ ಅರಿವು ವಿಕಿಪೀಡಿಯಾದ ಸಂಪಾದಕ ಮಂಡಳಿಗಿದೆ.ಇಲ್ಲವಾದರೆ ಹೆಚ್ಚು ಕಂಪ್ಯೂಟರ್ ಸಾಕ್ಷರರು ಮಾತ್ರಾ ವಿಕಿಪೀಡಿಯಾಕ್ಕೆ ಬರೆಯುವುದು ಮುಂದುವರಿದೀತು.
-----------------------------------------------
ಗೂಗಲ್ ಅನುವಾದಕ
ಇಂಗ್ಲೀಷಿನಲ್ಲಿ ಮಾತನಾಡಿದ್ದನ್ನು ಸ್ಪಾನಿಶ್ ಭಾಷೆಯಲ್ಲಿ ಹಾಗೆಯೇ ಸ್ಪಾನಿಶ್ ಭಾಷೆಯಲ್ಲಿ ಹೇಳಿದ್ದನ್ನು ಇಂಗ್ಲೀಷಿನಲ್ಲಿ ಹೇಳುವ ಅನುವಾದಕ ಸೇವೆಯೀಗ ಗೂಗಲ್ ಆಂಡ್ರಾಯಿಡ್ ಫೋನ್‌ಗಳಲ್ಲಿ ಸಿಗಲಿದೆ.ಇದುವರೆಗೆ ಗೂಗಲ್ ಅನುವಾದ ಸೇವೆಯು ಬರವಣಿಗೆಯಲ್ಲಿ ಮಾತ್ರಾ ಸಿಗುತ್ತಿತ್ತು.ಸದ್ಯ ಸರಳ ವಾಕ್ಯಗಳಲ್ಲಿ ಹೇಳಿದ್ದು ಅಥವಾ ಸಣ್ಣ ಪದಗುಚ್ಛಗಳಿಗೆ ಮಾತ್ರಾ ಸರಿಯಾದ ಅನುವಾದ ನಿರೀಕ್ಷಿಸಬಹುದು.ಮುಂದೆ ಹಲವಾರು ಭಾಷೆಗಳಲ್ಲೂ ಇಂತಹ ಅನುವಾದಕ ಸೇವೆಯು ಸಿಗಲಿದೆ.
------------------------------------
ಐಪಿವರ್ಶನ್6 ದಿನ
ಈ ವರ್ಷದ ಜೂನ್ ಹನ್ನೊಂದನ್ನು ಐಪಿವರ್ಶನ್-ಆರು ದಿನವಾಗಿ ಆಚರಿಸಲಾಗುವುದಂತೆ.ಅಂದು ಅಂತರ್ಜಾಲದಲ್ಲಿ ಈಗ ಬಳಸಲಾಗುತ್ತಿರುವ ಶಿಷ್ಟಾಚಾರವಾದ ಐಪಿವರ್ಶನ್ ನಾಲ್ಕರ ಬದಲು ಆರನ್ನು ಪರೀಕ್ಷಾರ್ಥವಾಗಿ ಒಂದು ದಿನದ ಮಟ್ಟಿಗೆ ಅನುಸರಿಸಿ,ಎಲ್ಲೆಡೆ ಹೊಸ ಶಿಷ್ಟಾಚಾರದ ಬಗ್ಗೆ ಗಮನಹರಿಯುವಂತೆ ಮಾಡಲಾಗುತ್ತದೆ.ಹಳೆ ಶಿಷ್ಟಾಚಾರ ಆನುಸರಿಸಿದರೆ,ಅಂತರ್ಜಾಲ ವಿಳಾಸಗಳನ್ನು ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ಏರ್ಪಡುವ ಬಗ್ಗೆ ನಿಮಗೆ ಗೊತ್ತಿರಬಹುದು.ಹೊಸ ಶಿಷ್ಟಾಚಾರವನ್ನು ಪೂರ್ತಿಯಾಗಿ ಅಂತರ್ಜಾಲದಲ್ಲಿ ಬಳಸಲು ಭಾರಿ ಸಿದ್ಧತೆ ಬೇಕು.ಹೊಸ ಜಾಲಗಳು ಹೊಸ,ಶಿಷ್ಟಾಚಾರದ ಪ್ರಕಾರವೇ ಅನುಷ್ಠಾನವಾದರೂ,ಹಳೆಯವನ್ನು ಬದಲಿಸಲು ಬದಲಾಯಿಸಬೇಕಾದ ಯಂತ್ರಾಂಶ,ತಂತ್ರಾಂಶ ಗಣನೀಯ ಮಟ್ಟದ ಪ್ರಯತ್ನ ಮತ್ತು ಮೂಲಸೌಕರ್ಯದ ಅಭಿವೃದ್ಧಿಯನ್ನು ಅಪೇಕ್ಷಿಸಲಿದೆ.ಹಾಗಾಗಿ ಎರಡೂ ಶಿಷ್ಟಾಚಾರಗಳೂ ಜತೆ ಜತೆಯಾಗಿ ಸಾಗುವಂತೆ ಏರ್ಪಾಡು ಮಾಡಬೇಕಾಗಬಹುದು.ನಿಧಾನವಾಗಿ ಬದಲಾವಣೆಗಳನ್ನು ಮಾಡಿ,ಪೂರ್ತಿಯಾಗಿ ಐಪಿವರ್ಶನ್-ಆರನ್ನು ಬಳಸಲು ಸಮಯ ಬೇಕಾಗಬಹುದು.
-------------------------------------
ದುರಂತದ ಹಾನಿ:ಹ್ಯಾಕರುಗಳ ಸಹಾಯಹಸ್ತ
ಪ್ರಾಕೃತಿಕ ದುರಂತಗಳು ಸಂಭವಿಸಿದಾಗ,ಅವುಗಳಿಂದ ಜನರಿಗೆ ಸಂಭವಿಸುವ ಹಾನಿಯನ್ನು ಕನಿಷ್ಠ ಮಟ್ಟಕ್ಕಿಳಿಸಲು ತಂತ್ರಜ್ಞಾನದ ಉಪಯೋಗ ಪಡೆಯಲಾಗುವಂತೆ ಮಾಡಲು ಹ್ಯಾಕರುಗಳ ತಮ್ಮ ಸಹಾಯಹಸ್ತವನ್ನು ಚಾಚಿದ್ದಾರೆ.ಕೆಲವು ವಾರಗಳ ಹಿಂದೆ ಈ ಅಂಕಣದಲ್ಲೂ ಹ್ಯಾಕರ್ ಶಬ್ದದ ನಿಜಾರ್ಥದ ಬಗ್ಗೆ ಚರ್ಚೆ ನಡೆದಾಗ,ಓದುಗರೊಬ್ಬರು ಹ್ಯಾಕರುಗಳು ತಮ್ಮ ಪರಿಣತಿಯನ್ನು ಸಮಸ್ಯೆಯನ್ನು ಬಗೆಹರಿಸಲು ಒದಗಿಸುವವರು ಎಂದು ವ್ಯಾಖ್ಯಾನಿಸಿದ್ದರು.ಮಾಸ್ಕೋದಲ್ಲಿ ಹ್ಯಾಕರುಗಳ ಸಮ್ಮೇಳನದಲ್ಲಿ,ಅವರುಗಳು ಮಾಡಿದ್ದೂ ಅದನ್ನೇ.ದಯಾಪರ ಹ್ಯಾಕ್‌ಗಳ ಗುಂಪು ನಾಸಾದ ಉಪಗ್ರಹ ಚಿತ್ರಗಳನ್ನು ಕಂಪ್ಯೂಟರುಗಳಲ್ಲಿ ವೀಕ್ಷಿಸಲು ಅನುಕೂಲವಾಗುವ ಹಾಗೆ ಅನುಕೂಲ ಕಲ್ಪಿಸಿ,ದುರಂತ ಸಂಭವಿಸಿದ ಪ್ರದೇಶಗಳ ಕ್ಷಣ-ಕ್ಷಣದ ಪರಿಸ್ಥಿತಿಯನ್ನು ತಿಳಿದುಕೊಂಡು ಪರಿಹಾರ ಕಾರ್ಯಗಳನ್ನು ನಡೆಸಲು ಅನುಕೂಲ ಕಲ್ಪಿಸಿದರು.ಇದರ ಜತೆಗೆ,ಅನಾಹುತಕ್ಕೀಡಾದ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡವರ ಮೊಬೈಲ್ ಫೋನ್‌ಗಳ ಮೂಲಕ ಅವರಿರುವ ಸ್ಥಾನ ಪತ್ತೆಯಲ್ಲದೆ,ಅವರುಗಳು ತಾವು ಚೆನ್ನಾಗಿದ್ದೇವೆಯೇ,ಸಮಸ್ಯೆ ಎದುರಿಸುತ್ತಿದ್ದೇವೆಯೇ ಎನ್ನುವುದನ್ನು ಬಾಹ್ಯ ಜಗತ್ತಿಗೆ ಸುಲಭವಾಗಿ ತಿಳಿಯ ಪಡಿಸಲು ಮೊಬೈಲ್ ತಂತ್ರಾಂಶಗಳನ್ನೂ ಅಭಿವೃದ್ಧಿ ಪಡಿಸಿದರು.
----------------------------
ಹಲಸಿನ ಬಗೆಗೇ ಬರಹ
ಹಲಸು ಅತ್ಯುಪಯುಕ್ತ ಹಣ್ಣಾದರೂ,ಇದರ ಪೂರ್ಣ ಪ್ರಯೋಜನ ಪಡೆಯಲು ರೈತರು ಯಶಸ್ವಿಯಾಗಿಲ್ಲ.ಹಲಸಿನ ಮೌಲ್ಯವರ್ಧನೆ ಮಾಡಿ,ರೈತರು ಹೆಚ್ಚಿನ ಆದಾಯ ಪಡೆಯಲು ಲಭ್ಯವಿರುವ ವಿವಿಧ ಮಾರ್ಗಗಳನ್ನು ತೋರಿಸುವ ಬ್ಲಾಗ್ ಬರಹಗಳು http://panasamwonders.blogspot.comನಲ್ಲಿವೆ.ಇದು ಪಟ್ಟಣಂತಿಟ್ಟದ ಕೃಷಿ ವಿಜ್ಞಾನ ಕೇಂದ್ರ ನಡೆಸುತ್ತಿರುವ ಬ್ಲಾಗ್.ಸಾರ್ವಜನಿಕರೂ ತಮಗೆ ತಿಳಿದಿರುವ ಹಲಸಿನ ಮೌಲ್ಯವರ್ಧನೆಯ ದಾರಿಗಳ ಬಗ್ಗೆ ಇಲ್ಲಿ ಬರೆಯಲು ಅವಕಾಶವಿದೆ.ಹಲಸನ್ನು ಹುಲುಸಾಗಿ ಬೆಳೆದರೆ ಸಾಲದು,ಅದರ ಪ್ರಯೋಜನ ರೈತರಿಗೆ ಸಿಗಲಿ ಎಂಬ ಆಶಯ ಇಲ್ಲಿನ ಬರಹಗಳಲ್ಲಿ ಎದ್ದು ಕಾಣುವ ಅಂಶ.
---------------------------
2011ರ ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆರವರ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆ(ರಿ ನಂ. 19327)
(ಉತ್ತರಗಳನ್ನು nittecreditsociety@yahoo.comಗೆ ಮಿಂಚಂಚೆ ಮಾಡಿ,ವಿಷಯ:NS14 ನಮೂದಿಸಿ.)
*ಬಿಂಗ್ ಏನು?
*http://brizzly.com ಏನು?
(ಕಳೆದ ವಾರದ ಸರಿಯುತ್ತರಗಳು:
*ಅಡೋಬ್ ಫೋಟೋಶಾಪ್‌ನಂತೆ ಬಳಸಬಹುದಾದ ಮುಕ್ತ ತಂತ್ರಾಂಶ ಜಿಂಪ್GIMP - “GNU image manipulation program".
*ಮೈಕ್ರೋಸಾಫ್ಟಿನ ಆಫೀಸ್ ತಂತ್ರಾಂಶದ ಬದಲು ಬಳಸಬಹುದಾದ ಮುಕ್ತ ತಂತ್ರಾಂಶ ಓಪನ್ ಆಫೀಸ್..ಕಳೆದವಾರ ಸರಿಯುತ್ತರ ಕಳಿಸಿ ಬಹುಮಾನ ಗೆದ್ದವರು ಎಸ್.ಚೇತನ್ ಕೆಮ್ಮಣ್ಣು,ಎನ್ ಐ ಟಿ ಕೆಯ ಎಂ ಟೆಕ್ ವಿದ್ಯಾರ್ಥಿ.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ವಾದ ಎನ್ನುವುದು ಯಾರು ಸರಿ ಎನ್ನುವುದರ ಬಗ್ಗೆ ನಡೆದರೆ,ಚರ್ಚೆ ಯಾವುದು ಸರಿ ಎನ್ನುವುದರ ಬಗ್ಗೆ ಇರುತ್ತದೆ.
*ನೀವು ಯಾವಾಗಲೂ ಯೋಚಿಸಿದ್ದನ್ನೇ ಯೋಚಿಸಿದರೆ, ನೀವು ಮಾಡಿದ್ದನ್ನೇ ಮಾಡಿ,ನಿಮಗೆ ಇದುವರೆಗೆ ಸಿಕ್ಕಿದ ಫಲವೇ ಸಿಗುತ್ತದೆ.ಹಾಗಾಗಿ ಯೋಚನಾ ಸರಣಿಯನ್ನು ಬದಲಾಯಿಸಿ..
*ಯುವಕರು ಕೆಡುತ್ತಿದ್ದಾರೆ..ಇವತ್ತು ದೇವಾಲಯದಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗ ಆರತಿ ತಟ್ಟೆಯಿಂದ ಸಿಗರೇಟು ಉರಿಸಿಕೊಂಡಾಗ,ಅವಾಕ್ಕಾದ ನನ್ನ ಕೈಯಿಂದ ಬಿಯರ್ ಬಾಟಲು ಬೀಳದ್ದು ಪುಣ್ಯ..
-------------------------
ಬನವಾಸಿ ಬಳಗದ "ಏನ್‌ಗುರು?"
http://enguru.blogspot.com ಇದು ಹಲವರು ಸೇರಿ ಬರೆಯುತ್ತಿರುವ ಬ್ಲಾಗ್.ಬನವಾಸಿ ಬಳಗವೆಂದು ತಮ್ಮನ್ನು ಗುರುತಿಸಿಕೊಳ್ಲುವ ಇದರ ಸದಸ್ಯರು,ಕನ್ನಡಪರ ನಿಲುವನ್ನು ಬ್ಲಾಗ್ ಬರಹಗಳಲ್ಲಿ ಎತ್ತಿ ಹಿಡಿಯುತ್ತಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.ಇದೇ ಈ ಬ್ಲಾಗ್‌ನ ಜನಪ್ರಿಯತೆಯ ಗುಟ್ಟು ಕೂಡಾ.ಇವರ ಬರಹಗಳ ಬಗ್ಗೆ ಸಮುದಾಯ ತಾಣಗಳಲ್ಲಿ ಚರ್ಚೆಯಾಗುವುದೂ ಸಾಮಾನ್ಯ.ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಗಬೇಕು,ಹಿಂದಿಯನ್ನು ರಾಷ್ಟ್ರಭಾಷೆಯೆನ್ನುವುದು ತಪ್ಪು.ಹಿಂದಿ ಹೇರಿಕೆ ಬೇಡ ಎನ್ನುವುದೂ ಈ ಬ್ಲಾಗಿನಲ್ಲಿ ಆಗಾಗ ವ್ಯಕ್ತವಾಗುವ ನಿಲುವು.ವಿವಿಧ ವಿಷಯಗಳ ಬಗೆಗೆ ಪ್ರಕಟವಾದ ಬರಹಗಳ ಪರಿವಿಡಿ ಸಿಗುವ ಕಾರಣ,ಆಸಕ್ತಿಯಿರುವ ವಿಷಯಗಳ ಮೇಲಿನ ಬರಹಗಳನ್ನು ಹುಡುಕುವುದು ಸುಲಭವಾಗುತ್ತದೆ.ತಪ್ಪು ಕನ್ನಡದ ಬಳಕೆ,ಸಂಸ್ಥೆಗಳಲ್ಲಿ ಕನ್ನಡ ಬಳಸದೆ ಕನ್ನಡಿಗರಿಗೆ ತೊಂದರೆಯಾಗುವವರ ಬಗ್ಗೆ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸಿ,ಸಾಕಷ್ಟು ಯಶಸ್ವಿಯಾಗಿದೆ.ಇಂತಹ ತಪ್ಪುಗಳ ವಿರುದ್ಧ ಹೋರಾಟ ನಡೆಸಲು ಕನ್ನಡಿಗರನ್ನು ಎಚ್ಚರಿಸುವ ಕೆಲಸವನ್ನೂ ಬನವಾಸಿ ಬಳಗ ಮಾಡುತ್ತಿದೆ.
Udayavani 
Udayavaniepaper