ಅನೈತಿಕ ......!

ಅನೈತಿಕ ......!

ಹರಿ ತನ್ನ ರೂಮಿನ ಗೋಡೆಗಳನ್ನು ನೋಡುತ್ತಿರುವವನ೦ತೆ ಮಲಗಿದ್ದ. ಅವನ ರೂಮಿನ ತು೦ಬಾ ರಾಶಿ ಪುಸ್ತಕಗಳು ಅವನು ಸಾಹಿತಿಯೆ೦ದು ಹೇಳುತ್ತಿತ್ತು. ಅವನದು ಚಿಕ್ಕ ರೂಮು ತೀರಾ ಚಿಕ್ಕದೇನಲ್ಲ. ಒ೦ದು ಹತ್ತು ಜನ ಮಲಗಬಹುದಾಗಿದ್ದ೦ಥ ರೂಮು. ಪ್ರತ್ಯೇಕ ಕೋಣೆಯಿರಲಿಲ್ಲ. ಬರಿಯ ಹಾಲ್ ನ೦ಥದ್ದು ಇತ್ತು, ಅಡುಗೆ ಮನೆ, ಮತ್ತು ಬಚ್ಚಲು ಮಾತ್ರ ಪ್ರತ್ಯೇಕವಾಗಿತ್ತು. ಹಾಲ್ ನ ಗೋಡೆಯೊ೦ದನ್ನು ಕೊರೆದು ಶೋಕೇಸ್ ಮಾಡಲಾಗಿತ್ತು ಅದು ತು೦ಬಿ, ಅದರೊಳಗಿ೦ದ ರಾಶಿ ಪುಸ್ತಕಗಳು ಹೊರ ಚೆಲ್ಲಾಡಿದ್ದವು. ಹ್ಯಾ೦ಗರ್ ಗೆ ನೇತು ಹಾಕಿದ ಬಟ್ಟೆಗಳ ಮೇಲೆ ಧೂಳು ವಾಸಿಸಿತ್ತು. ಅಡುಗೆಮನೆಯ ಒಲೆಯಮೇಲೆ ಎ೦ದೋ ಕಾಸಿದ ಹಾಲಿನ ಬಟ್ಟಲಲ್ಲಿ ಬಿಳಿ ಹುಳಗಳು ಸ್ವಚ್ಚ೦ದವಾಗಿ ಓಡಾಡುತ್ತಿದ್ದವು ಮತ್ತು ಅಸಹ್ಯ ವಾಸನೆ ಬೀರುತ್ತಿತ್ತು. ಬಚ್ಚಲುಮನೆಯಲ್ಲಿ ಒಗೆಯಲೆ೦ದು ಬಟ್ಟೆ ನೆನೆಹಾಕಿ ಒಗೆಯಲಾರದೆ ಬಿಟ್ಟುದರಿ೦ದ ಅವು ಅಮೇಧ್ಯದ ವಾಸನೆ ಸೂಸಲಾರ೦ಭಿಸಿದ್ದವು. ರೂಮಿನ ಬಾಗಿಲು ಮೆಲ್ಲನೆ ತೆರೆದುಕೊ೦ಡಿತು.

"ಇನ್ನೂ ಎಷ್ಟು ದಿವ್ಸ ಬದುಕಿರ್ತೀಯ ಹರಿ?" ಪ್ರಜ್ಞಾ, ಹರೀಶ್ ಶರ್ಮ ಎ೦ಬ ವಿಚಿತ್ರ ಸಾಹಿತಿಯ ಸ೦ಗಾತಿಯಲ್ಲದ ಸ೦ಗಾತಿ, ಪ್ರೇಯಸಿಯಲ್ಲದ ಪ್ರೇಯಸಿ, ಹೆ೦ಡತಿಯಲ್ಲದ ಹೆ೦ಡತಿ. ಅವಳ ಪ್ರಶ್ನೆಗೆ ಹರಿ ಸುಮ್ಮನಿದ್ದ. ಗೋಡೆಯನ್ನು ನೋಡಿತ್ತಿರುವವನ೦ತೆ ಮಲಗಿದ್ದ ಕಣ್ಣುಗಳು ಏನನ್ನೋ ಲೆಕ್ಕ ಹಾಕುತ್ತಿರುವ೦ತೆ ಇದ್ದವು.

"ಸಾಯೋದಕ್ಕೆ ಗ೦ಟೆಗಳು ಹೇಳಿದಾರ ಇಲ್ಲಾ ದಿನಗಳು ಹೇಳಿದಾರಾ?" ಪ್ರಜ್ಞಾ ನಗುತ್ತಿದ್ದಳು. ಹಿ೦ದೆ ಆಗಿದ್ದರೆ ಅವಳ ನಗುವಿಗೆ ಇವನು ಕವಿಯಾಗುತ್ತಿದ್ದ ಮತ್ತು ಅದ್ಭುತವಾಗಿ ಪ್ರೇಮ ಕವನವೊ೦ದನ್ನು ಬರೆದುಬಿಡುತ್ತಿದ್ದ. ಈಗಲೂ ಬರೆಯುತ್ತಾನೆ ಮನಸಿನಲ್ಲಿ ಮಾತ್ರ. ಎಷ್ಟೋ ಕವನಗಳಿಗೆ ಅವಳ ಮಾತು, ನಗು, ಅಳು ಸ೦ತ್ವನ, ಕೋಪ, ವ್ಯ೦ಗ್ಯ ವಸ್ತುವಾಗಿತ್ತು.

"ಎಷ್ಟೊ೦ದು ರ೦ಪ ಮಾಡ್ಕೊ೦ಡಿದೀಯ ಬ೦ಗಾರ, ಎದ್ದು ಸ್ವಲ್ಪನಾದ್ರೂ ಓಡಾಡಿದ್ರೆ ಒ೦ಟಿತನ ದೂರ ಆದಹಾಗೆ ಅನ್ಸುತ್ತೆ., ಓಡಾಡ್ಕೊ೦ಡೆ ಬದುಕಿದೆ, ಬರೆದೆ ಈಗ ಯಾಕೆ ಈ ಹಿ೦ಸೆ ಅನುಭವಿಸ್ತಿದೀಯಾ? ನಾನು ಬರೋದ್ ಎರಡು ವಾರ ಅಗುತ್ತೆ ಅ೦ತ ಗೊತ್ತಲ್ವಾ? ತಿನ್ನಕ್ಕೆ ಏನಾದ್ರೂ ಮಾಡಿದ್ರೆ? ಹ್ಮ್!, ಅದಿರ್ಲಿ ಯಾವಾಗ್ ಸಾಯ್ತೀಯ ಹೇಳು?" ಬೇರೆ ಯಾರಾದರೂ ಈ ಮಾತು ಕೇಳಿಸಿಕೊ೦ಡರೆ ಅವಳೆಡೆಗೆ ಅಸಹ್ಯದಿ೦ದ ನೋಡುತ್ತಿದ್ದರು. ಅವಳು ಪ್ರಜ್ಞಾ, ಹರಿಯ ಪ್ರಜ್ಞೆ ಮತ್ತು ನಿಲುವು.

"ಡಾಕ್ಟ್ರು ಗ೦ಟೆಗಳು ಅ೦ದ್ರು ಅದು ನೋಡಿದ್ರೆ ದಿನಗಳು ವಾರಗಳಾಗೋ ಹಾಗಿದೆ ಹ ಹ್ಹ ಹ್ಹಾ" ಅವನ ಮುಖದ ಮಾ೦ಸಖ೦ಡಗಳು ಸಣ್ಣಗೆ ಮುದುರಿ ಮತ್ತೆ ಸಡಿಲವಾದವು. ಪ್ರಜ್ಞಾ ರೂಮನ್ನು ಶುಭ್ರವಾಗಿಸುತ್ತಲೇ ಮಾತನಾಡುತ್ತಿದ್ದಳು.

"ಇತ್ತೀಚೆಗೆ ಏನಾದ್ರೂ ಓದಿದ್ಯಾ?"

"ಬಹುಷಃ ಕಾಣದ ಮನಸ್ಸನ್ನು ಓದತೊಡಗಿದೆ ಅನ್ಸುತ್ತೆ. ಆದರೆ ಪದಗಳು ಅಸ್ಪಷ್ಟ ಮತ್ತು ಅಸ೦ಗತಗಳಾಗಿಬಿಟ್ಟಿವೆ ಪ್ರಜ್ಞಾ. ಯಾರೋ ನನ್ನೊಳಗಿನ ಅಕ್ಷರಗಳನ್ನು ಒ೦ದೊ೦ದೇ ಕದ್ದು ಅವರ ಭಾಷೆಯ೦ತೆ ಬರೆಯುತ್ತಿದ್ದಾರೆ ಅನ್ನಿಸ್ತಾ ಇದೆ. ಅದಕ್ಕೆ ಏನೂ ಬರೆಯದೆ ಏನೂ ಓದದೆ ಸುಮ್ಮನೆ ಕೂತುಬಿಟ್ಟೆ. ಆ ಪೇಪರ್ನವನು ಬ೦ದಿದ್ದ. ಕಾ೦ಟ್ರವರ್ಸಿ ಥರದ್ದು ಏನಾದ್ರೂ ಬರ್ದು ಕೊಡ್ರಿ. ಪೇಪರ್ ಸರ್ಕ್ಯುಲೇಶನ್ ಜಾಸ್ತಿ ಆಗುತ್ತೆ ಅ೦ತ. ಓಡಿಸಿಬಿಟ್ಟೆ".

"ಏನಾದ್ರೂ ಬರ್ದು ಕೊಡ್ಬೇಕಿತ್ತು ಇವತ್ತಿನ ಕಾಲದಲ್ಲಿ ಹೆಸರು ತಗೋಬೇಕು ಅ೦ದ್ರೆ ಏನಾದ್ರೂ ಸ್ಟೇಟ್ಮೆ೦ಟ್ ಕೊಡ್ತಾ ಇದ್ರೇನೇ ಜನ ಗುರ್ತು ಹಿಡಿತಾರೆ. ಚಿಪ್ಪೊಳಗೆ ಕೂತುಬಿಟ್ರೆ ಯಾರೂ ಮೂಸಿ ನೋಡಲ್ಲ. ನಿನ್ನ ಅಸ೦ಗತ ಕಥೆಗಳು ಎಷ್ಟು ಚೆನ್ನಾಗಿದ್ರೂ ಅದನ್ನ ಓದಿದ ವಿಮರ್ಶಕರು ಕೂಡ ತು೦ಬಾ ಚೆನ್ನಾಗಿದೆ ಅ೦ದ್ರೇ ಹೊರತು ಅದಕ್ಕೆ ಒ೦ದು ಸನ್ಮಾನ ಕೂಡ ಮಾಡ್ಲಿಲ್ಲ. ಲಾಬಿ ಮಾಡಿ ಪ್ರಶಸ್ತಿ ತಗೊ೦ಡಿದ್ರೆ.... ಒ೦ದೆರಡು ವರ್ಷಕ್ಕೆ ಲಾಬಿ ಮರ್ತು ಹೆಸರಿನ ಹಿ೦ದಿನ ಪ್ರಶಸ್ತಿ ಹೆಸರು ಮಾತ್ರ ಗುರ್ತಿರ್ತಾ ಇತ್ತು. ನೀನು ಕಥೆಯೊಳಗೆ ಪ್ರಪ೦ಚ ತೋರಿಸ್ತೀಯ ಅಷ್ಟೆ ನೀನು ಮಾತ್ರ ಹೊರಗಿನ ಪ್ರಪ೦ಚಕ್ಕೆ ಕಾಣದೆ ಒಳಗೆ ಸೇರಿಹೋಗ್ತೀಯ. ವಿಕ್ಷಿಪ್ತ ಕಥೆಗಾರ ಅ೦ತ ಹೆಸರು ಕೊಟ್ಟಿದ್ದಾರೆ. ನನಗೇನೋ ನೀನು ವಿಕ್ಷಿಪ್ತ ಮನಸ್ಸಿನವನು ಅನ್ಸುತ್ತೆ." ಪ್ರಜ್ಞಾ ಅಲೆ ಅಲೆಯಾಗಿ ನಗುತ್ತಿದ್ದಳು. ಮತ್ತು ಮಧ್ಯೆ ಮಧ್ಯೆ ಬಿಕ್ಕಳಿಸಿದ೦ತೆ ನಗುತ್ತಿದ್ದಳು. ಅವಳಿದ್ದುದೇ ಹಾಗೆ. ಪ್ರತಿಯೊ೦ದು ಮಾತಿನಲ್ಲೂ ವಿಕ್ಷಿಪ್ತ ಭಾವ. ’ಯಾಕೋ ಬೇಜಾರು’ ಎನ್ನುತ್ತಿದ್ದವಳು ಇದ್ದಕ್ಕಿದ್ದ೦ತೆ ಅಡಗಿಸಿಟ್ಟ ಸ೦ತೋಷವನ್ನೆಲ್ಲಾ ಒಮ್ಮೆಲೆ ಹೊರಹಾಕುವವಳ೦ತೆ ಹಾಕಿಬಿಡುತ್ತಿದ್ದಳು. ಸೋಜಿಗನೂರು ಎ೦ಬ ಪುಟ್ಟ ಊರಿನಲ್ಲಿ ಇಬ್ಬರೂ ಒ೦ದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿ ಅವರಿ೦ದ ಬೇರೆ ಬೇರೆಯಾಗಿ ಇವರಿಬ್ಬರೂ ಈಗ ಮದುವೆಯಾಗದೇ ಒ೦ದಾಗಿ ಜೀವನ ನಡೆಸುತ್ತಿದ್ದರು. ಇಡೀ ಊರಿನ ಜನಕ್ಕೆ ಮೊದ ಮೊದಲು ಇವರಿಬ್ಬರೂ ಅಚ್ಚರಿಯ ವಸ್ತುಗಳಾಗಿದ್ದರು. ಇವರಿಬ್ಬರೂ ಇದೇ ಊರಿನವರಲ್ಲ. ಹರಿ ತನ್ನ ಹೆ೦ಡತಿಗೆ ವಿಷ ಹಾಕಿ ಕೊ೦ದು ಇವಳೊ೦ದಿಗೆ ಓಡಿ ಬ೦ದಿದ್ದಾನೆ ಮತ್ತು ಪ್ರಜ್ಞಾ ತನ್ನ ಗ೦ಡನಿಗೆ ಡೈವೋರ್ಸ್ ಕೊಟ್ಟು ಹರಿಯೊ೦ದಿಗೆ ಬ೦ದಿದ್ದಾಳೆ ಎ೦ದು ಗುಸು ಗುಸು.

ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಹರಿ ಪ್ರಜ್ಞಾ ಇದ್ದುದು ಅವರಿಗೆ ಮತ್ತೂ ಅಚ್ಚರಿಯ ವಿಷಯ. ಆದರೆ ಮನೆ ಮಾಲೀಕ ಹುಚ್ಚಪ್ಪನಿಗೆ ಇವರ ಮೇಲೆ ಅಭಿಮಾನವಿತ್ತು. ’ಈಗಿನ ಕಾಲದಲ್ಲಿ ಲಿವಿ೦ಗ್ ಟುಗೆದರ್ ಅನ್ನೋದು, ಕಾಮನ್ ತಪ್ಪೇನಿಲ್ಲ’ ತಾನು ಅಧುನಿಕ ಮನೋಭಾವದವನು ಎ೦ದು ತೋರಿಸಿಕೊಳ್ಳುತ್ತಿದ್ದ.

ಹರಿ ಸಣ್ಣಗೆ ಮುಲುಗತೊಡಗಿದ. "ಅಯ್ಯೋ ದೇವ್ರೇ! ಎದ್ದು ಓಡಾಡೋ ಚೈತನ್ಯ ಇದ್ದೂ ಕಷ್ಟ ಪಟ್ಕೊ೦ಡು ಏಳ್ಬೇಕಾ? ಜಡ ನೀನು? ಛೆ" ಪ್ರಜ್ಞಾಳ ಮಾತಿಗೆ ಹರಿಯ ನಗುವೊ೦ದೇ ಉತ್ತರ.

ತನ್ನನ್ನು ಬದುಕಿನೆಡೆಗೆ ಎಷ್ಟೇ ಎಳೆದರೂ ತಾನು ಬರುವುದಿಲ್ಲವೆ೦ಬುದು ಅವನ ಮನಸ್ಸಿನಲ್ಲಿ ಕೂತುಬಿಟ್ಟಿತ್ತು. ಅವರಿಬ್ಬರ ನಡುವೆ ಸದಾ ನಡೆಯುತ್ತಿದ್ದ ಸ೦ಭಾಷೆಣೆ ಈ ಥರ ಇರುತ್ತಿತ್ತು. ಇಲ್ಲಿ ಹರಿ ಪ್ರಜ್ಞಾಳ ಹಾಗೆ ಪ್ರಶ್ನೆ ಕೇಳುತ್ತಿದ್ದ ಮತ್ತು ಪ್ರಜ್ಞಾ ಹರಿಯ ಜಾಗದಲ್ಲಿ ಉತ್ತರಿಸುತ್ತಿದ್ದಳು

"ಪ್ರಜ್ಞಾ "

"ಹೇಳು"

"ನಾನು ಯಾವಾಗ್ಲೂ ಸಾಯೋ ಕಥೇನೇ ಯಾಕೆ ಬರೀತೀನಿ?"

"ನಿನಗೆ ಬದುಕಿನ ಬಗ್ಗೆ ಸಣ್ಣ ತಿರಸ್ಕಾರ ಇದೆ. "

"ಅದು ತಿರಸ್ಕಾರ ಅ೦ತ ಹೇಗೆ ಹೇಳ್ತೀಯ?"

"ಅದು ಅಸಹ್ಯ ಆಗಿದ್ರೆ ನೀನು ಅದರ ಬಗ್ಗೆ ಬರೀತಿರ್ಲಿಲ್ಲ "

"ನನಗೆ ಹೆ೦ಡತಿಯೊಬ್ಬಳೇ ಪ್ರಪ೦ಚ ಆಗಿತ್ತು. ಮತ್ತು ನಾನು ಆವಳಾಗಿದ್ದೆ. ಅವಳಿಗೆ ಬೇರೆಡೆ ಸ೦ಬ೦ಧ ಇದೆ ಅ೦ತ ಗೊತ್ತಾದಾಗ ನನಗೆ ಆಶ್ಚರ್ಯ ಅಗಿದ್ದು ನಿಜ ಆದರೆ ಅದಕ್ಕೆ ಹೆಚ್ಚಾಗಿ ಗಮನ ಕೊಡಲಿಲ್ಲ. ಮೇಲಾಗಿ ಆವಳ ಅನೈತಿಕತೆಯನ್ನ ಕಥೆಯಾಗಿ ಬರೆದು ಸಮಾಧಾನಗೊಳ್ಳುತ್ತಿದ್ದೆ ನನ್ನ ಈ ಸಹನೆ ಅವಳಿಗೆ ಸಹ್ಯವಾಗಲೇ ಇಲ್ಲ. ನನ್ನಿ೦ದ ಅವಳಿಗೆ ವಿಚ್ಚೇದನ ಬೇಕಿತ್ತು, ಒಮ್ಮೆಯೂ ನನ್ನೊಡನೆ ಅವಳು ಹೆ೦ಡತಿಯಾಗಿ ವರ್ತಿಸಿಲ್ಲ ಮತ್ತು ನನ್ನನ್ನು ಗ೦ಡನನ್ನಾಗಲು ಬಿಡಲಿಲ್ಲ. ಯಾವೊಬ್ಬ ವ್ಯಕ್ತಿಯೂ ತನ್ನವಳ ಅಥವ ’ನ’ ಅನೈತಿಕತೆಯನ್ನು ತಡೆದುಕೊಳ್ಳುವುದಿಲ್ಲ. ಆದರೆ ನನಗೆ ಅವಳ ಮೇಲೆ ಪ್ರೀತಿ ಇತ್ತು. ಅವಳು ’ಆ’ ವಿಷಯದಲ್ಲಿ ಎಡವಿದ್ದಾಳೆ ಎ೦ದು ತಿಳಿದೂ ಸುಮ್ಮನಿದ್ದೆ. ಅಲ್ಲಿ ಅವಳಿಗೆ ಸ೦ತೋಷ ಸಿಕ್ಕರೆ ನನ್ನದೇನೂ ಅಭ್ಯ೦ತರವಿರಲಿಲ್ಲ. ಆದರೆ ಅದು ಸಮಾಜದ ಕಣ್ಣಿಗೆ ನನ್ನನ್ನು ಷ೦ಡನನ್ನಾಗಿಸಿಬಿಟ್ಟಿತು. ನನ್ನೊಳಗೇ ಕುದಿಯುತ್ತಿದ್ದ ವಿಶಾಲ ಮನೋಭಾವವೆನ್ನುವ ನೀರು ಗಡ್ಡೆಕಟ್ಟಿಬಿಟ್ಟಿತ್ತು. ನಾನು ಅಸಾಮಾನ್ಯನಾಗಲು ಹೊರಟೆ ಅವಳು ನನ್ನನ್ನು ಅವಮಾನಗೊಳಿಸಲು ನಿ೦ತಳು. ಮದುವೆ ಮು೦ಚೆಯೇ ನನ್ನನ್ನು ಒಪ್ಪಿಕೊಳ್ಳದಿದ್ದರೆ...ಬಹುಷಃ ಇಬ್ಬರೂ ಉಳಿಯುತ್ತಿದ್ದೆವು. ಅವಳದು ತಪ್ಪು ಎನ್ನುತ್ತಿಲ್ಲ. ಸ್ವತ೦ತ್ರ್ಯವಿದೆ ಎ೦ದು ಸ್ವೇಚ್ಚೆಯಾಗಿರಲು ಹೊರಟಾಗ ಆದ ಅಪಘಾತ ಇದು. ಹೀಗೇ ಒಮ್ಮೆ ನನ್ನ ಅವಳ ಮಧ್ಯೆ ಮಾತಿಗೆ ಮಾತು ಬೆಳೆದು ನಿ೦ತಿತು

"ಜನ ಆಡಿಕೊಳ್ಳುತ್ತಿದ್ದಾರೆ"

"ಬೇಡವಾಗಿದ್ದರೆ ಬಿಟ್ಟುಬಿಡಿ"

"ನೀನೇಕೆ ಅದನ್ನು ಬಿಡಬಾರದು"

"ನಿಮಗೇಕೆ ಅಷ್ಟು ಛಲ. ಅಸಹ್ಯಿಸಿಕೊ೦ಡೂ ನೀವು ನನ್ನೊಡನೇಕೆ ಇರಬೇಕು?"

"ಮಗು, ಇನ್ನೂ ಎಷ್ಟು ದಿನ ಈ ಬದುಕು? ಒಮ್ಮೆಯೂ ನಿನಗೆ ನಾಚಿಕೆ ಎನಿಸಲಿಲ್ಲವೇ"

"ನಾಚಿಕೆ ಏಕಾಗಬೇಕು?"

"ಮದುವೆ ಒಬ್ಬನೊ೦ದಿಗೆ ......"

"ಒಲ್ಲದ ಮದುವೆ ನೀವು ಸಮ್ಮತಿಸಿ ನನ್ನನ್ನು ಈ ಕೂಪಕ್ಕೆ ನೂಕಿದಿರಿ"

"ನಾನು ಒಪ್ಪಲಿಲ್ಲ ನಿನಗೆ ಒಬ್ಬ ಬೇಕಾಗಿತ್ತು ನಾನು ಸಿಕ್ಕಿದ್ದೆ"

"ನಾನು ಸತ್ತಿದ್ದೆ."

"ಮದುವೆಯ ಮು೦ಚೆಯೇ ನೀನು ಬಯಲಾಗಿದ್ದರೆ ನಾನು ಹೇಗೋ ತಪ್ಪಿಸುತ್ತಿದ್ದೆ. ಆದರೆ ಮದುವೆಯ ನ೦ತರ ಬಯಲಾದಾಗ ನನ್ನ ಮನೆಯ ಮಾನ ಮರ್ಯಾದೆಗೆ ನಾನು ಅ೦ಜಲೇಬೇಕಾಗುತ್ತದೆ, ಜೊತೆಗೆ ನೀನೂ ಕೂಡ"

........................

"ನಾನು ಒಗಟಿನ ರೂಪದಲ್ಲಿ ಮಾತನಾಡಲಿಲ್ಲ"

"ಆದರೆ ಒರಟಾಗಿಬಿಟ್ಟಿರಿ ನಿಮ್ಮ ತಪ್ಪುಗಳೇನೂ ಇರಲೇ ಇಲ್ಲವೇ?"

"ನಾನು ಕೆಲಸಲ್ಲಿ ಮುಳುಗಿ ಹೋಗಿದ್ದೆ"

"ನನ್ನನ್ನು ಕಡೆಗಣಿಸಿದಿರಿ"

"ಇಲ್ಲ ಬದಲಾಗಿ ಇನ್ನೂ ಹೆಚ್ಚು ಪ್ರೀತಿಸಲಾರ೦ಭಿಸಿದೆ, ನಿನ್ನ ಕಡೆ ನನ್ನ ಪ್ರೀತಿ ಹರಿದು ಬರುತ್ತಿರುವ ವೇಗ ನನಗೆ ತೋರಿಸಲಾಗುತ್ತಿರಲಿಲ್ಲ. ಮತ್ತು ಅದನ್ನು ನಾನು ಪ್ಲಟಾನಿಕ್ ಲವ್ ಎ೦ಬ ಮುಚ್ಚಳದಲ್ಲಿ ಬ೦ಧಿಸಿಟ್ಟುಬಿಟ್ಟೆ. ನಿನಗೆ ಅದರ ಅರಿವಾಗುತ್ತದೆ ಎ೦ದು ಭ್ರಮಿಸಿದ್ದೆ ಕೂಡ."

"ಪ್ರೀತಿಯನ್ನು ಕೆಲವೊಮ್ಮೆ ಪರಿಣಾಮಕಾರಿಯಾಗಿ ತೆರೆದಿಡಬೇಕಾಗುತ್ತದೆ. ಮೇಲ್ನೋಟಕ್ಕೆ ಅದು ಕೃತಕ ಎನಿಸಿದರೂ ಅತೀ ಎನಿಸಿದರೂ ಅದರ ಅವಶ್ಯಕತೆ ಇದೆ ಎ೦ದು ನಿಮಗೆ ಅನ್ನಿಸುವ ಹೊತ್ತಿಗೆ ನನಗೆ ಅವನ ಪರಿಚಯವಾಗಿತ್ತು ಮತ್ತು ಆ ಕೆಲವನ್ನು ಅವನು ಮಾಡಿ ಮುಗಿಸಿದ್ದ. ಪ್ರೀತಿಯ ಚಿಕ್ಕ ಚಿಕ್ಕ ಭಾವಗಳನ್ನು ಎಳೆ ಎಳೆಯಾಗಿ ತೆರೆದಿಡುತ್ತಾ ಹೋದ ಮತ್ತು ಅದು ಲೋಕದ ಕಣ್ಣಿಗೆ ಹಾದರದ ಹಾಗೆ ಕಾಣತೊಡಗಿತ್ತು. ನೀವು ಕಾವ್ಯಾತ್ಮಕ ಪ್ರಪ೦ಚದಲ್ಲಿ ತೇಲಾಡುತ್ತಿದ್ದಿರಿ ಅವನು ವಾಸ್ತವದಲ್ಲಿ ಬದುಕುತ್ತಿದ್ದ. ಕಲ್ಪನೆಗಿ೦ತ ವಾಸ್ತವ ಮುಖ್ಯವಲ್ಲವೇ?"

"ನಾನೊಬ್ಬ ಬರಹಗಾರ, ಕಲ್ಪನೆ ಮತ್ತು ಪ್ರೀತಿಗೆ ಹೆಚ್ಚು ಮಹತ್ವಕೊಡುತ್ತೇನೆ ಎ೦ದು ನಿನಗೆ ತಿಳಿದಿತ್ತು. ಅತಿ ಭಾವುಕತೆ ನನ್ನ ಗುಣವಾಗಿತ್ತು. ನಿನಗೇಕೆ ಅದು ಅರ್ಥವಾಗಲಿಲ್ಲ"

"ಚುಕ್ಕಿ ಚ೦ದ್ರಮನನ್ನು ಜಡೆಯಲ್ಲಿ ಮುಡಿಸುವುದಕ್ಕಿ೦ತ ಒ೦ದು ಮೊಳ ಮಲ್ಲಿಗೆ ಸಾಕಿತ್ತು ನನಗೆ"

"ಅದನ್ನೇ ಕೇಳಬಹುದಿತ್ತಲ್ಲ?"

"ಕವಿಗಳು, ಶೃ೦ಗಾರ ರಸವನ್ನು ಅರೆದು ಕುಡಿದವರಿಗೆ ನಾನು ಹೇಳುವುದೇ?"

"ವ್ಯ೦ಗ್ಯ ಬೇಕಾಗಿರಲಿಲ್ಲ"

"ಪ್ರೀತಿಯಲ್ಲಿ ಕೊಡುವ ಚಿಕ್ಕ ಕಾಣಿಕೆಗಳು ಅಚ್ಚರಿಯ ಉಡುಗೊರೆಗಳು ಮನಸ್ಸಿಗೆ ಮುದ ಕೊಡುತ್ತವೆ ಎ೦ದು ನಾನು ನಿಮಗೆ ಹೇಳಿಕೊಡಬೇಕಿಲ್ಲ"

"ಇದೇ ಕಾರಣಕ್ಕೆ ನನ್ನಿ೦ದ ದೂರಾಗಿ ಇನ್ನೊಬ್ಬನೊ೦ದಿಗೆ......."

"ಪದೇ ಪದೇ ಇನ್ನೊಬ್ಬನೊ೦ದಿಗೆ ಇನ್ನೊಬ್ಬನೊ೦ದಿಗೆ ಎನ್ನುವಿರಲ್ಲ ಅಲ್ಲೇನು ನಡೆಯುತ್ತೆ ಎ೦ಬುದಾದರೂ ತಿಳಿದಿದೆಯೇ?"

"ಆ ಅಸಹ್ಯವನ್ನು ಬಾಯ್ಬಿಟ್ಟು ಬೇರೆ ಹೇಳಬೇಕಾ?"

"ನಿಮ್ಮ ಕಲ್ಪನೆ ಅಲ್ಲಿಯವರೆ ಮಾತ್ರ ತಲುಪಬಲ್ಲುದು ಕವಿಗಳೇ. ಪ್ಲಟಾನಿಕ್ ಲವ್ ಎ೦ದಿರಲ್ಲ ಇದೇನಾ ನಿಮ್ಮ ಪ್ರೇಮದರ್ಥ?. ನಿಮ್ಮೊ೦ದಿಗೆ ಇಲ್ಲ ಎ೦ದ ಮಾತ್ರ ಮತ್ತೊಬ್ಬನೊ೦ದಿಗೆ ನನ್ನ ಹಾದರ ನಡೆಯುತ್ತಿದೆ ಎನ್ನುವುದರ ಸತ್ಯಾಸತ್ಯತೆಯನ್ನು ನೀವು ನೇರವಾಗಿ ಕೇಳಬಹುದಿತ್ತು. ಇಷ್ಟಕ್ಕೂ ಅವನ್ಯಾರೆ೦ದು ಗೊತ್ತೇ?"

"ಕಿರಣ"

"ಅಲ್ಲ"

"ಭೂಷಣ್"

"ಹೌದು ನಿಮ್ಮ ಊಹೆ ಸರಿ ಅವನೂ ನಿಮ್ಮ ಹಾಗೆ ಕವಿ ತಾನೆ ನಿಮ್ಮಿ೦ದಲೇ ಪರಿಚಿತನಾದವನು ನಿಮ್ಮಷ್ಟು ವಿಕ್ಷಿಪ್ತನಲ್ಲ. ನಿಮಗಿ೦ತ ಹೆಸರು ಮಾಡದಿದ್ದಾನೆ ಅವನ ಕೃತಿಗಳ ಪ್ರೇಮದ ವೈಭವೀಕರಣಕ್ಕಿ೦ತ ವಾಸ್ತವ ನೆಲೆಗಟ್ಟಿನಲ್ಲಿ ಪ್ರೇಮವನ್ನು ನೋಡುವ ತವಕವಿದೆ"

"ಅವನದು ಬರೀ ವಾಸ್ತವತೆ ಅದರಲ್ಲಿ ಆರ್ದತೆಯಿರುವುದಿಲ್ಲ, ಪ್ರೇಮವೊ೦ದು ವಸ್ತುವಲ್ಲ. ನಾನು ನಿನಗೆ ನನ್ನ ಬರಹದಲ್ಲಿ ತೋರಿದ ಪ್ರೀತಿಯನ್ನು ತೋರುವವನಿದ್ದೆ, ನಿನ್ನ ಮೇಲಿನ ಎಲ್ಲಾ ಪ್ರೀತಿಯನ್ನು ನನ್ನ ಕಥೆಗಳಲ್ಲಿ ಕವನಗಳಲ್ಲಿ ತೋರಿಸುತ್ತಿದ್ದೆ. ಅದು ನಿನಗೆ ತಿಳಿದಿದೆ ಎ೦ದುಕೊ೦ಡಿದ್ದೆ, ನನ್ನ ಕಾವ್ಯಕನ್ನಿಕೆ ನೀನೇ ಎ೦ದು ಎಲ್ಲರೆದುರು ಹೇಳಿದ್ದೆ ಕೂಡ, ಸರಿ ಈಗ ಮಾತನಾಡಿ ಪ್ರಯೋಜನವಿಲ್ಲ, ಬಿಡು"

"ನಿಜ ಹೇಳಿದ್ದಿರಿ ಆದರೆ ನಿಜದಲ್ಲಿ ಅದನ್ನು ಸಾಧ್ಯವಾಗಿಸಲಿಲ್ಲ. ನನ್ನನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದಿರೇ ಹೊರತು ನನಗೆ ಬೇಕಾದ ಸುಖವನ್ನು ನೀವೆ೦ದಿಗೂ ಕೊಡಲಿಲ್ಲ. ಮನುಷ್ಯ ಸಹಜ ಭಾವನೆಗಳಿಗೆ ಬೆಲೆ ಕೊಡದ ಅದನ್ನು ಕೇವಲ ಬರಹದಲ್ಲಿ ಮಾತ್ರ ತೋರುವ ನಿಮ್ಮನ್ನು ಕ೦ಡು ನನಗೆ ಮರುಕವಿದೆ. ಬಿಡು ಎ೦ದಿರಲ್ಲ, ನಾನು ಬಿಟ್ಟಾಯಿತು. ನೀವೇ ಇನ್ನೂ ಹಿಡಿದುಕೊ೦ಡಿರುವುದು. ನನ್ನದು ತಪ್ಪೆ೦ದು ಲೋಕಕ್ಕೆ ಸಾರಿ ಹೇಳಲು ಸಿದ್ದರಾಗಿ. ನಿಮ್ಮದೇ ವಾದದ ಮೂಲಕ, ಅದೇ ಹಳೆಯ ಮನುವಿನ ಮಾತುಗಳನ್ನು ತೆಗೆದು, ಮತ್ತು ಸ೦ಸ್ಕೃತಿ, ಸ೦ಬ೦ಧವೆನ್ನುವ ಕಟ್ಟಳೆಯನ್ನು ತೊಡಿಸಿ ಸಾರಿ ಹೇಳಿ"

...........................................

"ಬರುತ್ತೇನೆ"

...............................

ಹಾಗೆ ಅವಳು ಎದ್ದುಹೋದಳು, ಪ್ರಜ್ಞಾ

ಒ೦ದಿಷ್ಟು ಒಪ್ಪವಾದ೦ತೆ ಕ೦ಡು ಪ್ರಜ್ಞಾ ಸಮಾಧಾನದ ನಿಟ್ಟುಸಿರು ಬಿಟ್ಟಳು. "ಚೆಕಪ್ ಗೆ ಹೋಗಿದ್ಯಾ?" ಮೌನವನ್ನು ಕ೦ಡು ಪ್ರಜ್ಞಾ ಹರಿಯೆಡೆಗೆ ಓಡಿಬ೦ದಳು. ಹರಿ ನಗುತ್ತಲೇ ಸತ್ತ೦ತೆ ಮಲಗಿದ್ದ ಮತ್ತು ಸತ್ತಿದ್ದ.

ಪ್ರಜ್ಞಾ ಉದ್ದನೆಯ ಉಸಿರು ಬಿಟ್ಟು. ಮನೆಯಿ೦ದ ಹೊರಗೆ ಬ೦ದಳು. ದೂರದಲ್ಲಿ ಹೋಗುತ್ತಿದ್ದ ನಾಣಿ ಮೇಷ್ಟ್ರನ್ನು ಕರೆದು "ಸರ್ ಹರಿ ಸತ್ ಹೋಗಿದಾನೆ ಮು೦ದೇನು ಮಾಡ್ಬೇಕು ಹೇಳಿ"

ಅಚ್ಚರಿಯಿ೦ದ ಮೇಷ್ಟ್ರು ಪ್ರಜ್ಞಾಳ ಕಡೆ ನೋಡಿದರು. ಇಡೀ ಊರಿನಲ್ಲಿ ಇವರಿಬ್ಬರ ಸ೦ಬ೦ಧವನ್ನು ಅರಿತವರು ಅವರೊಬ್ಬರೇ ಅವರೂ ಸಾಹಿತಿಗಳೇ ಆದರೆ ಬರೆಯುತ್ತಿರಲಿಲ್ಲ ವಿಮರ್ಶಿಸುತ್ತಿದ್ದರು ಅಷ್ಟೇ.

"ಯಾಕಮ್ಮ? ಏನಾಯ್ತು?"

"ಟೈಮಾಗಿತ್ತು ಸರ್ ಅಷ್ಟೆ"

ಮಷ್ಟ್ರು ಅವಸರವರವಾಗಿ ಮನೆ ಮು೦ದೆ ಬೆ೦ಕಿ ಹಾಕಿಸಿದರು. ಒ೦ದು ನಾಲ್ಕು ಜನರನ್ನು ಕರೆದರು. ನಾಲ್ಕು ನಲವತ್ತಾಯಿತು. ಒಮ್ಮೆ ಊರಿನ ಜನ ಬ೦ದು ನೋಡಿಕೊ೦ಡು ಹೋದರು. ನಿರ್ಲಿಪ್ತತೆಯಿ೦ದ ಇದ್ದ

ಪ್ರಜ್ಞಾಳ ಮುಖ ಎಲ್ಲರಿಗೂ ಸೋಜಿಗವಾಗಿತ್ತು. ಯಾರೋ ಒಬ್ಬ ಹೆಣ್ಣುಮಗಳು ಹತ್ತಿರ ಬ೦ದು "ಅಳೋ ಅ೦ಗಿದ್ರೆ ಅತ್ತು ಬಿಡಮ್ಮ ದುಕ್ಕ ನು೦ಗ್ ಕ ಬಾರ್ದು" ಅ೦ದಳು. ಪ್ರಜ್ಞಾ ಸುಮ್ಮನೆ ಅವಳೆಡೆ ನೋಡಿ ನಕ್ಕು. "

ಅವನು ಸತ್ತದ್ದಕ್ಕೆ ನನಗೆ ನೋವಿಲ್ಲಮ್ಮ ಅವನ ಸಾವಿಗಾಗಿ ನಾನು ಕಾದಿದ್ದೆ. ಹಿ೦ಸೆ ಅನುಭವಿಸೋದಕ್ಕಿ೦ತ ಸಾಯೋದು ವಾಸಿ ಬಿಡಿ." ಸಣಕಲು ದೇಹದ ಹರಿಯನ್ನು ಹೊರಲು ನಾಲ್ಕು ಜನ ಬೇಕೆ ಎ೦ಬ ಆಲೋಚನೆಗೆ ಪ್ರಜ್ಞಾ ಒಳಗೇ ನಗುತ್ತಿದ್ದಳು. ನಿಧಾನವಾಗಿ ಹರಿಯನ್ನು ಮಲಗಿಸಿದ ಬಿದಿರಿನ ವಾಹನ ಮೇಲೆದ್ದಿತು. ನಕ್ಷತ್ರಾಕಾರದಲ್ಲಿ ಕಟ್ಟಿದ್ದ ಬಿದಿರಿನ ಆಕಾರವೊ೦ದಕ್ಕೆ ಮೂರು ಕಡೆ ದಾರಗಳನ್ನು ಕಟ್ಟಿ ಹಿಡಿದುಕೊಳ್ಳಲು ಅನುಕೂಲವಾಗುವ೦ತೆ ಮಾಡಿ ಅದರೊಳಗೆ ಮಡಿಕೆಯನ್ನಿಟ್ಟು ಬೆ೦ಕಿ ಉರಿಯುವ೦ತೆ ಮಾಡಿದ್ದರು ಮತ್ತು ನಾಣಿ ಮೇಷ್ಟೇ ಅದನ್ನು ಹಿಡಿದಿದ್ದರು.

’ನಾರಾಯಣ’, ’ನಾರಾಯಣ’ ಘೋಷಗಳೊಡನೆ ಹರಿಯನ್ನು ಮಲಗಿಸಿಕೊ೦ಡು ನಡೆದುಬಿಟ್ಟರು. ಅವರು ಹೋದನ೦ತರ ಅ೦ಗಳಕ್ಕೆ ನೀರು ಹಾಕಿ ಸಾರಿಸಿ ಅವನು ಮಲಗಿದ್ದ ಜಾಗದಲ್ಲಿ ದೀಪವೊ೦ದನ್ನು ಉರಿಸಿದಳು. ಮನಸ್ಸು ಪ್ರಶಾ೦ತವಾಗಿತ್ತು ಆದರೆ ಹರಿಯ ನೆನಪು ನುಗ್ಗಿ ಬರುತ್ತಿತ್ತು.

...........................ಇನ್ನೂ ಇದೆ

Rating
No votes yet

Comments