ನಾಲ್ಕನೆಯ ದೀಪಾವಳಿ

ನಾಲ್ಕನೆಯ ದೀಪಾವಳಿ

ಬರಹ

ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ ಬಗ್ಗೆಯೂ ಪತ್ರಿಕೆಯಲ್ಲಿ ಓದಿರಬಹುದು. ಆದರೆ ನಾಲ್ಕನೆಯ ದೀಪಾವಳಿ ! ಹೌದು ಸ್ವಾಮಿ ನಾನು ಬರೆಯುತ್ತಿರುವುದು ಅಳಿಯನಾದ ಮೇಲಿನ ನನ್ನ ನಾಲ್ಕನೆಯ ದೀಪಾವಳಿಯ ಬಗ್ಗೆ.

ಪತ್ರಿಕೆಯೊಂದರಲ್ಲಿ ಪ್ರಸಿದ್ಧ ದಂಪತಿಗಳ ಮೊದಲ ದೀಪಾವಳಿಯ ಅನುಭವಗಳನ್ನು ಓದುತ್ತಾ, ನಮ್ಮ ಮೊದಲನೆಯ ದೀಪಾವಳಿಯ ಮೆಲುಕು ಹಾಕುತ್ತಿರುವಾಗ, ಮುಕ್ತ ನೋಡುವಾಗ, ಕ್ರೈಮ್ ಡೈರಿ ಜಾಹೀರಾತು ಬಂದಹಾಗೆ, ನನ್ನ ಉತ್ತಮಾರ್ಧ 'ರೀ' ಎಂದಳು. ಬಂದಿತಲ್ಲಪ್ಪಾ ಹಬ್ಬದ ಡಿಮ್ಯಾಂಡು ಎಂದು ವಿಚಲಿತನಾಗಿ ನಾನು ಅನಾಸಕ್ತಿಯಿಂದ ಹೂಗುಟ್ಟಿದೆ. 'ರೀ, ಈ ದೀಪಾವಳಿಗೆ ಮಧು ಮಾವನ ಮನೆಗೆ ಕರೆದಿದ್ದಾರೆ' ಎಂದಳು. ಹಾ! ಎಂದು ಕಿವಿ ನಿಮಿರಿಸಿದೆ.ಮಧು ನನ್ನವಳ ಅಣ್ಣ. ಈ ವರ್ಷವೇ ಮಹಿಮಾಳೊಂದಿಗೆ ಅವನ ಮದುವೆಯಾಗಿತ್ತು. ಮದುವೆಯಾದ ತಕ್ಷಣವೇ ಅವರಿಬ್ಬರೂ ಅಮೇರಿಕಾಕ್ಕೆ ಹಾರಿದ್ದರು.

'ಹೌದೂರಿ, ನಾವೂ ಅಲ್ಲಿಗೆ ಹೋಗಬೇಕಂತೆ' ಎಂದಳು. ಹೊಡೆದೆಯಲ್ಲೋ ಛಾನ್ಸು ಎಂದು ಮನಸ್ಸಿನಲ್ಲೇ ಅಂದುಕೊಂಡು, ಅದನ್ನು ಹೊರಗೆ ತೋರಿಸಿಕೊಳ್ಳದೆ, 'ನಿಮ್ಮ ಅಪ್ಪ, ಅಮ್ಮ ಹೋಗುವುದೇನೊ ಸರಿ, ನಾವ್ಯಾಕೆ ಹೋಗಬೇಕಂತೆ?' ಎಂದೆ. 'ಇಲ್ಲಾರೀ ಮಧು ಮಹಿಮಾ ಬೇರೆ ಇಲ್ಲಿ ಇಲ್ಲ. ಅದಕ್ಕೆ ನಾವು ಖಂಡಿತ ಬರಬೇಕು ಎನ್ನುತ್ತಿದ್ದಾರೆ. ನಾಳೆ ಅವರು ನಮ್ಮನ್ನು ಕರೆಯುವುದಕ್ಕೆ ಇಲ್ಲಿಗೇ ಬರ್ತಿದ್ದಾರೆ' ಎಂದಳು. ಪ್ರಾಕ್ಸಿ ಅಳಿಯನಾಗಲು ಮನದಲ್ಲೇ ತಯಾರಿ ನಡೆಸಿದೆ.

ಈ ಬಾರಿಯ (೨೦೦೫ರ)ಬೆಂಗಳೂರಿನ ಮಳೆಯ ಆರ್ಭಟದ ಬಗ್ಗೆ ನೀವೆಲ್ಲರೂ ಒದ್ದೆಯಾದ ಪೇಪರ್ ಗಳಲ್ಲಿ ಓದಿರಲೇಬೇಕು. ನಮ್ಮ ಜಯಪ್ರಕಾಶ ನಾರಾಯಣ ನಗರ (ಕನ್ನಡದಲ್ಲಿ ಜೆಪಿ ನಗರ)ದಲ್ಲಂತೂ ಸಂಪೂರ್ಣ ಕ್ರಾಂತಿಯುಂಟಾಗಿ, ಹಂತ ಹಂತ ವಾಗಿ ಅದು ಜಲ ಪ್ರಳಯ ನಗರವಾಗಿ ಪರಿವರ್ತನೆಗೊಂಡಿತ್ತು. ನಮ್ಮ ರಸ್ತೆಯಲ್ಲಿ ಓಡಾಡುತ್ತಿದ್ದರೆ ವಸುದೇವನು ಶ್ರೀಕೃಷ್ಣನನ್ನು ಮಥುರೆಯಿಂದ ಕರೆದುಕೊಂಡು ಹೋದ ನೆನಪು ಬರುತ್ತಿತ್ತು. ಸಾರಕ್ಕಿ ಕೆರೆ ಅಚ್ಚುಕಟ್ಟಿನಲ್ಲಿ , ಅಚ್ಚುಕಟ್ಟಾಗಿ ಮನೆಕಟ್ಟಿಕೊಂಡು ವಾಸಿಸುತ್ತಿದ್ದ ಜನರೆಲ್ಲರೂ, ಅಣೆಕಟ್ಟಿನ ಬದಿಯಲ್ಲಿ ಪ್ರವಾಹದಿಂದ ಬಳಲುವ ಜನರಂತಾಗಿದ್ದರು.

ಇದೇನಿದು, ದೀಪಾವಳಿ ಬಗ್ಗೆ ಬರೆಯಲು ಶುರುಮಾಡಿದವನು ಮಳೆಯ ಬಗ್ಗೆ ಕೊರೆಯುತ್ತಿದ್ದಾನಲ್ಲ ಎಂದುಕೊಳ್ಳುತ್ತಿರಬೇಕು ನೀವು. ಇದೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ, ಮಧು ಅತ್ತೆ-ಮಾವ ನಮ್ಮನ್ನು ಕರೆಯಲು ಬರಬೇಕೆಂದಿದ್ದ ದಿನವೂ ಮಳೆಯು ತನ್ನ ಪ್ರತಾಪವನ್ನು ತೋರಿಸಿತ್ತು. ಅವರು ನಮ್ಮನ್ನು ಆಹ್ವಾನಿಸಲು, ಈ ರಸ್ತೆಯಲ್ಲಿ ಬಂದರೆ, ಪರಿಪರಿಯಾದ ಕಷ್ಟಗಳನ್ನನುಭವಿಸಿ,
ಮನಃಪರಿವರ್ತನೆಗೊಂಡು, ನಮ್ಮನ್ನು ಕರೆಯದೇ ಹೋಗಬಹುದೆಂಬ ಭಯ ನನ್ನನಾವರಿಸಿತು. ಇನ್ನು ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲವಲ್ಲ ಎಂದು ಕೊಂಡು, ಹೇಗಿದ್ದರೂ ಮೇಲ್ದಂಡೆ (ಮೊದಲ ಹಂತ) ಪ್ರದೇಶದಲ್ಲಿರುವ ನಮ್ಮ ಅತ್ತೆಮಾವನವರ ಮನೆಗೇ ಅವರು ಮೊದಲು ಬರುತ್ತಾರೆ, ನಾವೇ ಅಲ್ಲಿಗೇ ಹೋಗಿ ಆಹ್ವಾನ ಸ್ವೀಕರಿಸೋಣ ಎಂದು ನಿರ್ಧರಿಸಿದೆ.

ಅವರು ಬರುವ ಒಂದು ಗಂಟೆ ಮುಂಚೆಯೇ ನಾವುಗಳು ಅಲ್ಲಿ ಹಾಜರಿದ್ದೆವು. ಕರೆಯಲು ಬರುವವರಿಗೆಂದು ನಮ್ಮತ್ತೆ ಖಾರಸೇವು ಕರೆದಿದ್ದರು. ಆಂತೂ-ಇಂತು ಕರೆಯುವವರು ಬಂದು, ಕರೆದ ಖಾರಸೇವು ತಿಂದು, ನಮ್ಮೆಲ್ಲರನ್ನೂ ದೀಪಾವಳಿಗೆ ಕರೆದು ಹೋದಾಗ, ನನಗೆ ನೆಮ್ಮದಿಯುಂಟಾಯಿತು.

ಈ ಮಧ್ಯೆ ಇನ್ನೊಂದು ಪ್ರಕರಣವನ್ನು ಹೇಳಲು ಮರೆತಿದ್ದೆ. ನಮ್ಮ ಮಾವನವರ ಕಾರಿನ ಚಾಲಕ ಗಂಗಾದರ ಆಲಿಯಾಸ್ ಗಂಗೂವಿನ ಬದಲಾದ ವರ್ತನೆಯ ಬಗ್ಗೆ. ಗಂಗು ಮೊದಲೆಲ್ಲಾ ನನ್ನ ಇಂಡಿಕಾ ಕಾರನ್ನು ಬಹಳ ವಿಶ್ವಾಸದಿಂದ ಕಾಣುತ್ತಿದ್ದ. ನಮ್ಮ ಮೊದಲ ದೀಪಾವಳಿ ಸಮಯದಲ್ಲಿ ಅವರ ಹಳೆಯ ಮಾರುತಿ ಕಾರನ್ನು ಹೊರಗೆ ನಿಲ್ಲಿಸಿ, ನಮ್ಮ ಕಾರನ್ನು ಗೇಟಿನೊಳಗೆ ನಿಲ್ಲಿಸುತ್ತಿದ್ದ.ಆದರೆ ಮಾವನವರು ಹಳೆಯ ಮಾರುತಿಯನ್ನು ಮಾರಿ ಹೊಸ ಮಾರುತಿಯನ್ನು ಕೊಳ್ಳುವುದರೊಂದಿಗೆ ಗಂಗೂ ಬಹಳ ಬದಲಾಯಿಸಿಬಿಟ್ಟ. ಮುತ್ತು ಕೊಡುವವಳು ಬಂದಾಗ ತುತ್ತು ಕೊಡುವವಳನ್ನು ಮರೆಯುವಂತೆ ನಮ್ಮ ಇಂಡಿಕಾದ ಆರೈಕೆ ಮಾಡುವುದನ್ನು ಬಿಟ್ಟು ಬಹಳ ನಿರ್ಲಕ್ಷದಿಂದ ಕಾಣಲಾರಂಭಿಸಿದ. ಈ ಎಲ್ಲಾ ಬದಲಾವಣೆಗಳನ್ನೂ ನಮ್ಮ ಇಂಡಿಕಾ ತನ್ನ ಇಂಡಿಕೇಟರ್
ತುದಿಯಿಂದಲೇ ಗಮನಿಸುತ್ತಿತ್ತು.

ನಾಲ್ಕನೆಯ ದೀಪಾವಳಿ ಬಂದೇ ಬಿಟ್ಟಿತು. ಬೆಳಿಗ್ಗೆ ಬೇಗನೆ ಎದ್ದು (ನಿಜವಾದ) ಎಣ್ಣೆಶಾಸ್ತ್ರ ಮುಗಿಸಿ, ಅಭ್ಯಂಜನ ಮಾಡಿದ್ದೂ ಆಯಿತು.ಸರಿಯಾದ ಸಮಯಕ್ಕೆ ನಮ್ಮ ಮಾವನವರ ಮನೆ ತಲುಪಿದೆವು. ಅಲ್ಲಿಂದ ಎಲ್ಲರೂ ಮಧು ಮಾವನ ಮನೆಗೆ ಹೊರಟೆವು. ಯಾವಾಗಲೂ ನಮ್ಮ ಗಾಡಿ ಮುಂದೆ ಬಿಡುತ್ತಿದ್ದ ಗಂಗೂ, ಇಂದು ಧಿಮಾಕಿನಿಂದ ಬರ್ರೆಂದು ಹೊಸ ಮಾರುತಿಯಲ್ಲಿ ಮುಂದೆ ಹೊರಟ.

ಶ್ರೀಯುತ ಪದ್ಮನಾಭರಾಯರ ಮನೆ ಇರುವುದು ಪದ್ಮನಾಭನಗರದಲ್ಲಿ. ಮಣ್ಣಿನ ಮಕ್ಕಳ ಮನೆಯ ಪಕ್ಕದಲ್ಲಿರುವ ಮಣ್ಣಿನ ರೋಡಿನಲ್ಲಿ. ಅಲ್ಲಿಗೆ ನಾವು ತಲುಪುವ ಹೊತ್ತಿಗೆ ಗಂಗೂ ತಲುಪಿ, ಆಯಕಟ್ಟಿನ ಜಾಗದಲ್ಲಿ ತನ್ನ ಕಾರನ್ನು ನಿಲ್ಲಿಸಿಕೊಂಡಿದ್ದ. ಸರಿ ನನ್ನ ಕಾರನ್ನು ಮನೆಯ ಗೇಟಿನ ಮುಂದೆ ನಿಲ್ಲಿಸೆದೆ. ನಾವೆಲ್ಲರೂ ಕೆಳಗಿಳಿದೆವು. ಕಾರನ್ನು ಸರಿಯಾದ ಜಾಗದಲ್ಲಿ ನಿಲ್ಲಿಸು ಎಂದು ಗಂಗುವಿನ ಕೈಗೆ ಕೀಲಿ ಕೊಟ್ಟೆ. ಯಾಕೋ ನನ್ನ ಇಂಡಿಕಾಗೆ ಇದು ಸರಿ ಹೋದ ಹಾಗೆ ಕಾಣಲಿಲ್ಲ. ನಿಂತಲ್ಲೇ ಮಿಸುಕಿ ಮುಲುಗಿ ಕುಂಯ್ ಗುಟ್ಟಿತು.ಆದರೂ ನಿರ್ಲಕ್ಷದಿಂದ ಗಂಗೂ ಅದನ್ನು ಒಂದು ಮೂಲೆಗೆ ತಳ್ಳಿದ.

ಭರ್ಜರಿಯಾಗಿತ್ತು ದೀಪಾವಳಿ ಭೋಜನ. ಶ್ರೀ ಪದ್ಮನಾಭರಾಯರೂ, ಶ್ರೀಮತಿ ಸಾವಿತ್ರಿಬಾಯಿಯವರೂ ಒಂದರ ಹಿಂದೆ ಒಂದರಂತೆ ಭಕ್ಷಗಳನ್ನು ಬಡಿಸುತ್ತಿದ್ದರೆ ನಮ್ಮ ಕೈ-ಬಾಯಿಗಳು ದಣಿಯುತ್ತಿದ್ದವು. ಆದರೂ ರುಚಿರುಚಿಯಾದ ಜಿಲೇಬಿ, ಪಾಯಸ, ದಾಳಿಂಬರೆ-ಹೆಸರುಕಾಳು ಕೋಸಂಬರಿ, ಇತ್ಯಾದಿಗಳನ್ನು ಎಲೆಯಲ್ಲೇ ಬಿಡಲು ಮನಸಾಗದೆ, ಟ್ರ್ಯಾಫಿಕ್ ಜ್ಯಾಮ್ ಆದರೂ ಮೂತಿ ತೂರಿಸಿಕೊಂಡು ಬಂದು ನಿಲ್ಲುವ ಆಟೋಗಳಂತೆ ಹೊಟ್ಟೆಯಲ್ಲಿ ಅಲ್ಲಲ್ಲಿ ತೂರಿಸಿ ನಿಲ್ಲಿಸಿದೆವು. ಶ್ರೀಲಂಕಾದ ಮೇಲೆ ದೋಣಿ ತನ್ನ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದರೆ, ನಾವಿಲ್ಲಿ ಊಟದಲ್ಲಿ ನಾಲ್ಕು, ಆರುಗಳನ್ನು ಹೊಡೆದು ತೇಗಿದೆವು. ಇನ್ನು ತಕ್ಷಣ ಹೊರಡಲು ಸಾಧ್ಯವಿಲ್ಲವೆಂದು ಹಾಗೆಯೇ ಒಂದು ಗಂಟೆ ವಿಶ್ರಾಂತಿ ತೆಗೆದುಕೊಂಡೆವು.ಸಂಜೆಯಾಗುತ್ತಾ ಬಂದಿತೆಂದು ಕಾಫಿ ಕುಡಿದು, ಪ್ರೀತಿಯ ಉಡುಗೊರೆಗಳನ್ನು ಸ್ವೀಕರಿಸಿ ಹೊರಡಲು ಹೊರಗೆ ಬಂದೆವು.

ಗಂಗೂ ಮತ್ತೆ ತನ್ನ ಮಾರುತಿ ಕಾರಿನಲ್ಲಿ ಮುಂದೆ ಹೊರಟ. ನಾನು ಕಾರಿನಲ್ಲಿ ಕುಳಿತು ಕೀಲಿ ಕೈ ತಿರುಗಿಸಿದೆ. ನನ್ನ ಕಾರು ಸ್ವಲ್ಪ ಮಿಸುಕಿತು. ಆದರೆ ಸ್ಟಾರ್ಟ್ ಆಗಲಿಲ್ಲ. ಮರಳಿ ಯತ್ನವ ಮಾಡಿದರೂ ಉಪಯೋವೇನೂ ಆಗಲಿಲ್ಲ.

ಮುಂದಿನ ಕಾರಿನಲ್ಲಿದ್ದವರೆಲ್ಲರೂ ಇಳಿದು ಬಂದರು. ಎಲ್ಲರೂ ಸೇರಿ ಕಾರನ್ನು ತಳ್ಳಿ ಚಾಲನೆಗೊಳಿಸುವ ಪ್ರಯತ್ನ ಮಾಡಿದರು. ಆ ರಸ್ತೆಯೋ ಸ್ವಲ್ಪ ಇಳಿಜಾರಿನದು. ಮೇಲಿನಿಂದ ಕೆಳಗಿನವರೆಗೂ ತಳ್ಳಿದರೂ ನನ್ನ ಕಾರು ಉಸಿರಾಡಲಿಲ್ಲ. ಸರಿ, ನಾವೆಲ್ಲರೂ ಕಾರನ್ನು ಮತ್ತೆ ಮೇಲಕ್ಕೆ ತಳ್ಳಿದೆವು. ಪಾಪ ಮಧು ಅತ್ತೆ-ಮಾವ, ನಮ್ಮ ಅತ್ತೆ-ಮಾವ, ಎಲ್ಲರೂ ಸೇರಿ ತಳ್ಳುತ್ತಿದ್ದರು. ಭಾರೀ ಭೋಜನವಾದ ಉದರಗಳು ಬೇರೆ. ಹೀಗೆ ಕಾರನ್ನು ಮೇಲೆ ಕೆಳಗೆ ತಳ್ಳುವ ಆಟ ಮೂರ್ನಾಲ್ಕು ಬಾರಿಯಾಯಿತು. ನಮ್ಮೆಲ್ಲರ, ಅದರಲ್ಲೂ ವಿಶೇಷವಾಗಿ ಗಂಗುವಿನ ಮೈಯಲ್ಲಿಳಿಯುತ್ತಿದ್ದ ಬೆವರನ್ನು ನೋಡಿ, ನನ್ನ ಕಾರು ಎಂಜಿನ್ನಿನಲ್ಲೇ ಪಕಪಕ ನಗುತ್ತಿತ್ತು.

ಕಾರಿನ ಬ್ಯಾಟರಿ ಸತ್ತಿರಬೇಕೆಂದು ನಿಶ್ಚಯಿಸಿದೆ. ಹೊಸ ಮಾರುತಿಯ ಬ್ಯಾಟರಿಯಿಂದ ವಿದ್ಯುತ್ ಹರಿಸಿ ಕಾರನ್ನು ಚಾಲನೆ ಗೊಳಿಸಲೇ ಎಂದು ಮನದಲ್ಲೇ ಯೋಚಿಸಿದೆ. ಆದರೆ ಮೊದಲೇ ಗಂಗೂ ಹಾಗು ಅವನ ಹೊಸ ಮಾರುತಿಯಬಗ್ಗೆ ವಿಷಕಾರುತ್ತಿರುವ ನನ್ನ ಇಂಡಿಕಾ ಅದರ ಬ್ಯಾಟರಿಯ ಜೀವವನ್ನೂ ಹೀರಿ ಬಿಟ್ಟರೇ ಎಂದು ಭಯವಾಯಿತು.

ಇದು ನಮ್ಮಕೈಲಾಗುವ ವಿಷಯವಲ್ಲವೆಂದು ಮ್ಯೆಕಾನಿಕ್ ಹುಡುಕಲು ಹೊರಟೆವು. ಹತ್ತಿರದಲ್ಲೇ ಇದ್ದ ಒಬ್ಬನ ಬಳಿ ಕೇಳಿದರೆ, ಸಾರ್ ನಾವು ಇಂಡಿಕಾ ಮುಟ್ಟುವುದಿಲ್ಲವೆಂದು ಟಾಟ ಮಾಡಿದ. ಸರಿ ಹಳೆಯ ಮ್ಯೆಕಾನಿಕ್ ನ ಸ್ಪ್ಯಾನರ್ರೇಗತಿಯೆಂದು, ನನ್ನ ಮೊಬೈಲಿನಲ್ಲಿ ಅವನ ನಂಬರ್ ಕುಟ್ಟತೊಡಗಿದರೆ, ಅದರ ಬ್ಯಾಟರಿಯೂ ಮುಗಿಯುತ್ತಿದೆಯೆಂಬ ಸಂಕೇತ ಬರಬೇಕೆ?. ಬ್ಯಾಟರಾಯಸ್ವಾಮಿಯನ್ನು ಮನದಲ್ಲೇ ನೆನೆಯುತ್ತಾ, ಅವನ ಉತ್ತರಕ್ಕೆ ಕಾಯ ತೊಡಗಿದೆ. ನನ್ನ ಅದೃಷ್ಟ ಚೆನ್ನಾಗಿದ್ದುದರಿಂದ ಆ ಮ್ಯೆಕಾನಿಕ್ ಸಿಕ್ಕಿದ. ಅವನ ಸಹಾಯಕ ಬಂದು ಮತ್ತೊಂದು ಬ್ಯಾಟರಿಯಿಂದ ನನ್ನ ಕಾರುನ್ನು ಎಗರಿಸಿ ಒದ್ದು (jump start) ಚಾಲನೆಗೊಳಿಸಿದ. ಹಾಗು ಹೀಗೂ ಮನೆ ತಲುಪಿದೆವು. ಹೀಗಿತ್ತು ನಮ್ಮ ನಾಲ್ಕನೇಯ ದೀಪಾವಳಿ. ಖಾರಸೇವಿನಿಂದ ಕಾರಸೇವೆಯವರೆಗೆ !

- ಸುಚರಾ
ಬರೆದದ್ದು ೧೭.೧೨.೨೦೦೫)