ಧಾರವಾಡ ಪೆದ್ದನ.... ಮೈಸೂರು ಶಾಕ್ ....

ಧಾರವಾಡ ಪೆದ್ದನ.... ಮೈಸೂರು ಶಾಕ್ ....

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಸುದ್ದಿ ಆಗುವಷ್ಟು ದೊಡ್ಡವನೇನು ನಾನಲ್ಲ ಬಿಡ್ರಿ. ಬಿಡ್ರಿ ಅಂದಿದ್ದಕ್ಕೆ, "ಎಲ್ಲೇ ಹಿಡುಕೊಂಡೆ ನಿನ್ನ ಲೇ" ಅಂತ ಮಾತ್ರ ಕೇಳಬ್ಯಾಡ್ರಿ. ಇದು ನಮ್ಮ ಭಾಷಾ ಸೊಗುಡು. ಸೊಗಡೋ ಅಥವಾ ಸುಡುಗಾಡೋ... ಅರ್ಥ ಆದ್ರ ಸಾಕು ಅಂತೀರೇನು.. ಅದು ಖರೇನ.. ಯಾಕಂದ್ರ ನಾನು ಧಾರವಾಡದವ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬಂದಿದ್ದ. ಅವರ ಭಾಷೆ ನೋಡಿ, ಅಂದ್ರ ಕೇಳಿ ನನಗ ಅಲ್ಲೇ ಹೊಂದಾಣಿಕಿ ಆಗೋದ ಸ್ವಲ್ಪ ತ್ರಾಸ(ಕಷ್ಟ) ಆತು. ಯಾಕಂದ್ರ ನಾವು ಯಾವುದ ವಿಷ್ಯ ಇರಲಿ ಬಹಳ ಎಳಯನ್ಗಿಲ್ಲ. ಆದ್ರ ಮೈಸೂರಿನವರು ರಬ್ಬರ್ ಏಳದ ಹಂಗ ಏಳಿತಾರ ರೀ...ನಾವು ಆರಾಮ ಇದ್ದೀಯೇನಲೇ ಅಂತ, ನನ್ನ ಪ್ರೀತಿ 'ರಾಮ'ನ ಹೆಸರನ್ನು ಸೇರಿಸಿಕೊಂಡು ಕ್ಷೇಮ ಸಮಾಚಾರ ಕೇಳಿದ್ರ, ಇವರು "ಏನ ಸರ್ ಚೆನ್ನಾಗಿದ್ದೀರಾ?" ಎಂದು ಕೇಳ್ತಾರ ಅದು ಪೂರ್ತಿ ಎಳ್ದು. ಎಳ್ದು ಅಂದ್ರ ತಮ್ಮ ಕಡೆ ಜಗ್ಗಿ ಅಲ್ಲ ಮತ್ತ. ಭಾಷೆ ಮಾತ್ರ ಎಳ್ದು ಅಂತ ಹೇಳಿದೆ.. ತಪ್ಪು ತಿಳ್ಕೋಬ್ಯಾಡ್ರಿ.

ನಮ್ಮ ಭಾಷಾ ಅಂದ್ರ ಏನು? ಅಂತ ತಿಳ್ದಿರಿ. ಎಲ್ಲಾದುಕ್ಕೂ ತಪ್ಪದ "ರೀ" ಹಚ್ಛ್ತೇವ್ರಿ. ರೀ ಬರ್ರೀ... ಎರಡು ಬಾರಿ ರೀ ಅಂದವ್ಯಲ್ಲ ಹಂಗ. ಇಲ್ಲಿ ಅವರು.. ಇಲ್ಲಿ ಬನ್ನಿ...ಕುಳಿತುಕೊಳ್ಳಿ.. ಹಿಂಗ. ಸ್ವಲ್ಪ ಮರ್ಯಾದಿ ಕಡಿಮೀನ...ಮತ್ತ ಸಂಬಂದಕ್ಕೆ ಭಾಳ ಒತ್ತ ಕೊಡ್ತೆವ್ರೀ.. ಬೇಕಂದ್ರ ಯಾರಾದರೂ ಚಡ್ಡಿ ದೊಸ್ತಗೆ ಕೆಳ್ರಿ...( ಆ ***^^&$ ಮಗನ ಈ ##@$^^ ಮಗನ ಎನ್ನದೇ ಮಾತನಾಡೂವುದಿಲ್ಲ). ಅದ ಜಗಳ ಮಾಡುಬೇಕಾರ ಈ ಸಂಬಂದ ಬಂತೋ...ಅದರ ಕಥೀನ ಬ್ಯಾರೆ ತಗಿರಿ....ತಗಿರಿ ಅಂದ್ರ ಚಿತ್ರ ಅಂತ ತಿಳ್ಕೊಂಡಿರಿ ಮತ್ತ. ಕಥೆನೆ ಬೇರೆ ಬಿಡಿ ಅಂತಿರಲ್ಲ ಅದ.

ನಮ್ಮ ಊರನ್ಯಾಗ ಪೇಂಟರ್ ಗೋಳು ಭಾಳ ಇದ್ದಾರ. ಅದೇನು ದೊಡ್ಡ ಮಹಾ...ನಮ್ಮ ಉರಿನ್ಯಾಗು, ಇದ್ದಾರ ಅಂತೀರೇನು....ಆದ್ರ ಒಂದು ಫರ್ಕ್ ಏನು ಅಂದ್ರ....ಎಲ್ಲರೂ ಕೆಂಪ್ ಪೈಂಟ್ ಹೊಡಿತಾರ...ಮತ್ತ ಡಿಸೈನ್ ಸಹಿತವಾಗಿ.... ಅಂದ್ರ ಎಲಿ,ಅಡಿಕಿ,ಹೊಗೆ ಸೊಪ್ಪಿನಿಂದ...ಆಮೇಲೆ ನಮಗ ಘಳಿಗೊಮ್ಮೆ ಚಹಾ ಬೇಕ.. ಬೇಕ ನೋಡ್ರೀ ಮತ್ತ....

ನಾನು ಎಲ್ಲಿ ಇದ್ದೆ ಮೈಸೂರುನ್ಯಾಗ ಅಲ್ಲ ...ಮೊದ್ಲ ಹೋದ ಮ್ಯಾಲೆ ಬೆಟ್ಟಿಯಾಗಿದ್ದು ಗೌಡ್ರನ್ನ ಬಾಳ ಒಳ್ಳೆ ಮನ್ಶ್ಯರೀ, ಆದ್ರ ಅವನ್ದು ನಂದು ಸ್ವಲ್ಪ ಹೊಂದಾಣಿಕಿ ಆಗ್ಲಿಲ್ಲ.ತಪ್ಪು ತಿಳ್ಕೋಬ್ಯಾಡ್ರಿ ಮತ್ತ. ನಮ್ಮ ಭಾಷಾ ಅವ್ರಿಗೆ ಛಲೋ ಅನ್ನಿಸಲಿಲ್ಲ. ನಾವು ಎಲ್ಲಾನು Short Cut ನ್ಯಾಗ ಮತ್ತು Fast ಆಗಿ ಮಾತಾಡ್ತೆವಿ. ಅದು ಅವ್ರಿಗೆ ಅರ್ಥ ಆಗ್ಲಿಲ್ಲ ಅಂತ ಅನ್ಸ್ಥದ. ಗೌಡ್ರನ್ನ ಬಾಳ(ಬಾಲ) ಒಳ್ಳೆ ಮನ್ಶ್ಯರೀ(ಮುಷ್ಯ) ಅಂತ ಅರ್ಥ ಮಾಡ್ಕೋ೦ಡಿರಬೇಕು ಪಾಪ. ಅದಕ್ಕ ನನ್ನ ಮಹಿಷಾಸುರನಂಗ ಕಾಣ್ತಿದ್ರು. ಅವ್ರ ಭಾಷೆ ನನಗ ಸ್ವಲ್ಪ ಕಿರ್ಕಿರೀನ ಇತ್ತು. ಅವ್ರು ಯಾವಾಗಲು "ಹಿಂಸೆ" ಅನ್ನೋ ಪದ ಬಳಸ್ತಿದ್ರು. ನಮ್ ಕಡೆ ಹಿಂಸೆ ಅಂದ್ರ ಬಹಳ ಅಪಾರ್ಥವಾಗಿ ತಿಳಿದ್ಕೊಳ್ತಿವಿ.(ಪ್ರಾಣಿ ಹಿಂಸೆ ಅನ್ನೋ ತರಾ...)

ನಾನು ಒಂದು ದಿನ ಏನ್ರೀ ಗೌಡ್ರೇ ನಾಷ್ಟಾ ಆತ್ರಿ ಎಂದು ಕೇಳಿದೆ. ಎಲ್ಲಿ ಏನು ನಷ್ಟ ಆಯಿತು ಎಂದು ಘಾಬರಿ ಆಗಿ ಕೇಳಿಕೊಂಡು ಬಂದುಬಿಟ್ಟರು ಪಾಪ. ನಾಷ್ಟಾ ಅಂದ್ರ ತಿಂಡಿ ರೀ ಸರ್ ಎಂದು ಹೇಳಿದ ಮೇಲೆ ಆಯಿತು ಎಂದು ಹೇಳಿ ಹೋದ್ರು. ಅವರ ಭಾಷಾ ನಾವು ಅರ್ಥ ಮಾಡ್ಕೋತಿದ್ದೀವಿ, ಅದ್ರ ಆವ್ರು ನಮ್ಮ ಭಾಷಾ ಅಪಾರ್ಥ ಮಾಡ್ಕೋತಿದ್ರು.

ಹಿಂಗ ೬ ತಿಂಗಳ ತ್ರಾಸ ಅಲ್ಲ.... ಹಿಂಸೆ(ಕಷ್ಟ) ಅನುಭವಿಸಿ ಕೊನೆಗೆ ಬಳ್ಳಾರಿಗೆ ವರ್ಗಾವಣೆ ಆಯಿತು.

ಅದರಲ್ಲೋ ಒಂಥರಾ ಮಜಾನೇ ಇತ್ತನ್ನಿ. ಅವರದ್ದು ಒಂಥರಾ ಮೈಸೂರು ಪಾಕ್ (ಸ್ವಲ್ಪ ದಿನ ಮೈಸೂರು ಶಾಕ್ ಅನ್ನಿಸಿದರೂ ....) ಇದ್ದಂಗ ಭಾಷಾ... ಆದ್ರೆ ನಮ್ದು ಧಾರವಾಡ ಪೇಡ. ಎರಡು ಚಲೊನ ಅಲ್ಲೇನೆ ..... ಆದ್ರ ಈ ಧಾರವಾಡ ಪೆದ್ದನಿಗೆ ಅರ್ಥ ಆಗಬೇಕಲ್ಲ.

Rating
No votes yet

Comments