ಅಹಲ್ಯೆಯನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಅಹಲ್ಯೆಯನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

 ಅಹಲ್ಯಾ - ಈಕೆ ಬ್ರಹ್ಮನ ಮಾನಸ ಪುತ್ರಿ. ಅಪ್ರತಿಮ ಸುಂದರಿ. ಇಡೀ ಜಗತ್ತಿನಲ್ಲಿ ಇವಳಷ್ಟು ಸೌಂದರ್ಯವತಿ ಯಾರೂ ಇರಲಿಲ್ಲ.  ಒಂದು ಸಾವಿರ ಸುಂದರಿಯನ್ನು ಸೃಷ್ಟಿ ಮಾಡಿದ ಬ್ರಹ್ಮ, ಅವರೆಲ್ಲರಲ್ಲಿನ ಅತ್ಯಂತ ಸೌಂದರ್ಯದ ಅಂಶವನ್ನು ತೆಗೆದುಕೊಂಡು ಈಕೆಯನ್ನು ಸೃಷ್ಟಿ ಮಾಡಿದನು.  ಒಂದು ಕಥೆಯಂತೆ ಈಕೆಯನ್ನು ಸೃಷ್ಠಿ ಮಾಡಿದ  ಬ್ರಹ್ಮ, ಇವಳ ರಕ್ಷಣೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಗೌತಮ ಮುನಿಗೆ ಒಪ್ಪಿಸಿದ.  ಗೌತಮ ಮುನಿ ಈಕೆಯನ್ನು ಪಾಲಿಸಿ, ಪೋಷಿಸಿ, ಈಕೆ ಪ್ರಾಪ್ತ ವಯಸ್ಸಿಗೆ ಬಂದಾಗ, ಬ್ರಹ್ಮನ ಬಳಿ ತಂದು ಬಿಟ್ಟ.  ಈತನ ಪ್ರಾಮಾಣಿಕತೆಗೆ ಮೆಚ್ಚಿದ ಬ್ರಹ್ಮ! ಈತನಿಗೆ ಅಹಲ್ಯೆಯನ್ನು ಕೊಟ್ಟು ಮದುವೆ ಮಾಡಿಸಿದನಂತೆ.  ಮತ್ತೊಂದು ಕಥೆಯಂತೆ,  ಇಡೀ ಪ್ರಪಂಚ ಪರ್ಯಟನೆಯನ್ನು ಯಾರೂ ಮೊದಲಿಗೆ ಮುಗಿಸಿಕೊಂಡು ಬರುತ್ತಾರೋ, ಅವರಿಗೆ ಅಹಲ್ಯೆಯನ್ನು ಕೊಟ್ಟು ಮದುವೆ ಮಾಡುವೆನೆಂಬ ನಿಯಮವಿಟ್ಟಾಗ, ಈಕೆಯಲ್ಲಿ ಅನುರಕ್ತನಾಗಿದ್ದ ಗೌತಮ ಮುನಿ, ಒಂದು ಹಸುವಿಗೆ ಪ್ರದಕ್ಷಿಣೆ ಮಾಡಿ, ಸ್ವಯಂವರವನ್ನು ಗೆದ್ದು, ಅಹಲ್ಯೆಯನ್ನು ಮದುವೆಯಾದನಂತೆ.  ಈ ದಂಪತಿಗಳಿಗೆ ಪುತ್ರನೊಬ್ಬ ಜನಿಸಿದ ಕೂಡಲೇ ಇಂತಹ ಸುಂದರ ಹೆಂಡತಿಯಿದ್ದರೂ, ವೈರಾಗ್ಯ ತಾಳಿದವ ಗೌತಮ ಮುನಿ!  ಇಂದ್ರ ಪರಸ್ತ್ರೀಯರನ್ನು ಮೋಹಿಸುವುದರಲ್ಲಿ ಎತ್ತಿದ ಕೈಯಲ್ಲವೇ?  ಇವಳನ್ನು ಕಂಡು ಮೋಹಿಸಿದ, ಗೌತಮ ಮುನಿಯ ವೇಷದಲ್ಲಿ ಈಕೆಯನ್ನು ಸಂಭೋಗಿಸಿದ. ಈತ ತನ್ನ ಗಂಡನಲ್ಲವೆಂದು ತಿಳಿದಿದ್ದರೂ ಅಹಲ್ಯೆ ಆತ ಹೇಳಿದಕ್ಕೆಲ್ಲಾ ಸಮ್ಮತಿಸಿದಳು.  ಇದನ್ನು ತಿಳಿದ ಗೌತಮ ಮುನಿ ಇಬ್ಬರಿಗೂ ಶಾಪ ನೀಡಿದ, ಇಂದ್ರನಿಗೆ ಸಹಸ್ರಯೋನಿಗಳು ಹುಟ್ಟಿಕೊಂಡವು, ನಂತರ ಬೇಡಿಕೊಂಡ ನಂತರ ಸಹಸ್ರಾಕ್ಷನಾಗಿ ಸ್ವರ್ಗಕ್ಕೆ ಮರಳಿದ. ಗಂಡನಲ್ಲವೆಂದು ತಿಳಿದಿದ್ದರೂ, ಇಂದ್ರನೊಟ್ಟಿಗೆ ಸಂಭೋಗಿಸಿದ ಪಾಪಕ್ಕಾಗಿ ಅಹಲ್ಯೆ ರಾಮನಿಗಾಗಿ ಕಾಯುತ್ತಾ ಕಲ್ಲಾದಳು!  ಅಹಲ್ಯೆ ಮಾಡಿದ್ದನ್ನು ಕ್ಷಮಿಸಿ ಆಕೆಗೆ ಶಾಪ ವಿಮೋಚನೆ ನೀಡಿದ ಈ ರಾಮ ತನ್ನ ಪತ್ನಿಯನ್ನು ಸಂಶಯ ಪಟ್ಟು ಅಗ್ನಿಪರೀಕ್ಷೆಗೆ ಒಡ್ಡಿದ! 

ಇದು ಅಹಲ್ಯೆಯ ಕಥೆ.  ಗೌತಮ ಮುನಿ, ಅಹಲ್ಯೆ ಇಂದ್ರ ಈ ಮೂವರಲ್ಲಿ ತಪ್ಪು ಯಾರದು?  ಗೌತಮ ಮುನಿಯ ಮಗಳಂತೆ ಬೆಳೆದವಳು ಅಹಲ್ಯೆ! ಅವನೊಟ್ಟಿಗೆ ಮದುವೆಯಾಗಿ ಸಂಸಾರ ಮಾಡುವುದು ಹೇಗೆ? ಗೌತಮ ಮುನಿ ಆಕೆಯನ್ನು ಅಷ್ಟು ಪ್ರೀತಿಯಿಂದ ಲಾಲಿಸಿ, ಬೆಳೆಸಿ, ಮದುವೆಯಾದದ್ದು ತಪ್ಪಲ್ಲವೇ?  ಇಂತಹ ಸೌಂದರ್ಯವತಿಯನ್ನು ಮದುವೆಯಾಗಿಯೂ ಸಂಸಾರದಲ್ಲಿ ವಿರಕ್ತಿ ಹೊಂದಿದ್ದು ಯಾರ ತಪ್ಪು? ಪರಸ್ತ್ರೀಯನ್ನು ಮೋಹಿಸಿ, ಆಕೆಯನ್ನು ಒಲಿಸಿಕೊಂಡ ಇಂದ್ರನದು ತಪ್ಪಲ್ಲವೇ?   ಯೌವನದ ಹೊಸ್ತಿಲಲ್ಲಿ ಇದ್ದ ಅಹಲ್ಯೆಗೆ ಇಂದ್ರ ಆಕರ್ಷಿತನಾಗಿ ಕಂಡಿದ್ದರೆ ಆಶ್ಚರ್ಯವೇನಿಲ್ಲ.  ಸ್ವರ್ಗ ಲೋಕದ ಒಡೆಯ ಬೇರೆ! ಒಲಿದಳು. ಗಂಡನ ಉದಾಸೀನತೆಯಿಂದ ವಿರಹವೇದನ ಅನಭವಿಸಿದ ಅಹಲ್ಯೆಯದೇನು ತಪ್ಪು?  ಇಂತಹ ಅಹಲ್ಯೆಯನ್ನು ನಾವು ದಿನವೂ ಸ್ಮರಿಸಿದರೆ ಪಾಪವೆಲ್ಲವೂ ನಾಶ ಎನ್ನುವುದು ಏನನ್ನೂ ಸೂಚಿಸುತ್ತದೆ? ತನಗೇ ಬೇಕಾದುದನ್ನು ಪಡೆದ ಅಹಲ್ಯೆಯ ದಿಟ್ಟತನವನ್ನು ಮೆಚ್ಚಿ ಈ ಪಟ್ಟ ಸಿಕ್ಕಿತೇ?      

 

Rating
No votes yet