ಕತೆ- ಮೂವರು ಸೋದರಿಯರು

ಕತೆ- ಮೂವರು ಸೋದರಿಯರು

ಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ ಕೋಣೆಯೊಂದರ ಬಾಗಿಲಿನ ಮೇಲೆ `ಆಫೀಸ್' ಎಂದು ಬರೆಯಲಾಗಿತ್ತು, ಆದರೆ ಅದರ ಬಾಗಿಲು ಮುಚ್ಚಿತ್ತು. ಕೈನಲ್ಲಿದ್ದ ವಾಚಿನಲ್ಲಿ ಸಮಯ ನೋಡಿದೆ. ಎಂಟು ಗಂಟೆ. ಬಂದದ್ದು ತೀರಾ ಬೇಗ ಆಯಿತೇನೋ ಎನ್ನಿಸಿ, ಯಾರಾದರೂ ಕಾಣುತ್ತಾರೇನೋ ಎಂದು ಪಡಸಾಲೆಯ ಒಳಕ್ಕೆ ಹೊರಟೆ. ಅಲ್ಲಿ ಒಂದು ಹೆಂಗಸು ಕಸ ಗುಡಿಸುತ್ತಿದ್ದವಳು ನನ್ನನ್ನು ನೋಡಿ, ಪೊರಕೆ ಅಲ್ಲೇ ಇಟ್ಟು ನನ್ನೆಡೆಗೆ ಬಂದಳು. `ಇಲ್ಲಿ, ಆಫೀಸಿನಲ್ಲಿ ಯಾರೂ ಇಲ್ಲವೆ?' ನಾನು ಕೇಳಿದೆ. `ಆಫೀಸು ಒಂಭತ್ತು ಗಂಟೆಗೆ ತೆರೆಯುತ್ತದೆ. ಯಾರು ಬೇಕಾಗಿತ್ತು?' ಆಕೆ ಕೇಳಿದಳು. ಒಂದೆರಡು ಗಳಿಗೆ ಹಾಗೆಯೇ ಇದ್ದೆ, ಏನು ಹೇಳಲೂ ತೋಚದೆ. `ಯಾರನ್ನಾದರೂ ನೋಡಬೇಕಿತ್ತೆ?' ಆಕೆ ಪುನಃ ಕೇಳಿದಳು. `ಹ್ಹಾಂ.... ಇಲ್ಲಿ ವೃದ್ಧಾಶ್ರಮದಲ್ಲಿ ಯಾರಾದರೂ ಜಾಕೋಬ್ ಎನ್ನುವವರಿದ್ದಾರೆಯೆ?' ಕೇಳಿದೆ. `ಜಾಕೋಬ್... ಜಾಕೋಬ್ ಹೆಸರಿನ ಇಬ್ಬರು ಮೂವರಿದ್ದಾರೆ... ಅವರ ಪೂರ್ತಿ ಹೆಸರು ಗೊತ್ತೆ? ಯಾವುದಕ್ಕೂ ಫಾದರ್ ಬರಬೇಕು. ಅವರು ಆಫೀಸಿಗೆ ಒಂಭತ್ತು ಗಂಟೆಗೆ ಬಂದು ಹೋಗುತ್ತಾರೆ. ಬನ್ನಿ ಆಫೀಸಿನಲ್ಲಿ ಕೂತಿರಿ' ಎಂದು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕೀಲಿಗೊಂಚಲು ತೆಗೆದು ಆಫೀಸಿನೆಡೆಗೆ ಹೊರಟಳು. ನಾನು ಅವಳನ್ನು ಹಿಂಬಾಲಿಸಿದೆ.
ಆಫೀಸಿನಲ್ಲಿ ಭೇಟಿ ನೀಡುವವರು ಕೂಡಲೆಂದು ಮೂಲೆಯೊಂದರಲ್ಲಿ ಸೋಫಾ ಹಾಕಿದ್ದರು. ರಾತ್ರಿಯ ಪ್ರಯಾಣದಿಂದ ಕೊಂಚ ಬಳಲಿದ್ದೆ. ಸೋಫಾ ದೊರೆತಿದ್ದು ಸುಪ್ಪತ್ತಿಗೆ ದೊರೆತಂತಾಯಿತು. `ನೀರೇನಾದರೂ ಬೇಕಾದರೆ ಅಲ್ಲೇ ಇದೆ ನೋಡಿ' ಎಂದಳು ಆಕೆ. ಗೋಡೆಯ ಪಕ್ಕದಲ್ಲಿ ನೀರಿನ ಫಿಲ್ಟರ್ ಇಟ್ಟಿದ್ದರು. `ಜಾಕೋಬ್... ನಿಮಗೇನಾಗಬೇಕು? ನಿಮ್ಮ ನೆಂಟರೆ?' ಆಕೆ ಹೊರಡುವ ಮುನ್ನ ಕೇಳಿದಳು. `ಹ್ಹಾಂ... ಇಲ್ಲ.... ಪರಿಚಯದವರು. ಅವರನ್ನು ಕಂಡು ಬಹಳ ವರ್ಷಗಳಾಗಿವೆ. ಕಂಡುಹೋಗೋಣ ಎಂದು ಬಂದೆ' ಎಂದು ಹೇಳಿದೆ. ಆಕೆ ನನ್ನೆಡೆಗೇ ನೋಡುತ್ತಿದ್ದು ಹೊರಹೊರಟಳು.
ಸೋಫಾಗೆ ಹಿಂದಕ್ಕೆ ತಲೆಯೊರಗಿಸಿ ಕಣ್ಣು ಮುಚ್ಚಿದೆ. ಇಪ್ಪತ್ತೈದು ವರ್ಷಗಳು! ಎಷ್ಟು ಬೇಗ ಕಳೆದುಹೋಗಿದೆ! ನಾನು ಎಂಭತ್ತೇಳರಲ್ಲಿ ಮಡಿಕೇರಿ ಬಿಟ್ಟವನು ಕಳೆದ ವಾರವಷ್ಟೇ ಅಲ್ಲಿಗೆ ಕಾಲಿರಿಸಿದ್ದು. ಸಮಯ ಎಷ್ಟು ಬೇಗ ಹೋಗಿಬಿಡುತ್ತದೆ! ಮೊನ್ನೆ ಮೊನ್ನೆ ತಾನೆ ಮಡಿಕೇರಿಗೆ ಮೊದಲಬಾರಿ ಹೋಗಿದ್ದೆನ್ನಿಸುತ್ತದೆ. ಈ ಸಾರಿ ಬ್ರಾಂಚ್ ಇನ್ಸ್ಪೆಕ್ಶನ್‌ಗೆ ನಾನೇ ಮಡಿಕೇರಿಗೆ ಹಾಕಿಸಿಕೊಂಡೆ, ನೋಡಿ ಬಹಳ ವರ್ಷಗಳಾಗಿದೆ ನೋಡಿಬರೋಣ ಎಂದು.
ಎಂಭತ್ತನಾಲ್ಕರಲ್ಲಿ ನಾನು ಆಗ ತಾನೆ ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಎಂಎಸ್.ಸಿ. ಮುಗಿಸಿದ್ದೆ. ಮುಗಿಸಿ ಇನ್ನೂ ಹಾಸ್ಟೆಲ್ ಖಾಲಿ ಮಾಡಿರಲಿಲ್ಲ. ಅಷ್ಟರಲ್ಲಿ ಈ ಹಿಂದೆ ಬ್ಯಾಂಕಿಂಗ್ ಪರೀಕ್ಷೆ ಬರೆದಿದ್ದ ಫಲಿತಾಂಶ ಬಂದು ನನಗೆ ಸಂದರ್ಶನಕ್ಕೆ ಆಹ್ವಾನ ಬಂದಿತ್ತು. ಸಂದರ್ಶನದಲ್ಲಿ ನಾನು ಆಯ್ಕೆಯಾಗಿ ನನ್ನ ಮೊದಲ ಪೋಸ್ಟಿಂಗ್ ಮಡಿಕೇರಿಗಾಗಿತ್ತು. ಕೊಡಗಿನಲ್ಲಿ ನನಗೆ ಉದ್ಯೋಗಾವಕಾಶ ದೊರೆತಿದ್ದು ನನಗೆ ಸಂತೋಷದ ವಿಷಯವೇ ಆಗಿತ್ತು. ಕಾಲೇಜಿನಲ್ಲಿದ್ದಾಗ ಶೈಕ್ಷಣಿಕ ಪ್ರವಾಸ ಹೊರಟಾಗಲೇ ನಾನು ಕೊಡಗನ್ನು ನೋಡಿದ್ದದ್ದು. ಜುಲೈ ತಿಂಗಳ ಕೊನೆಯಲ್ಲಿ ನಾನು ಮಡಿಕೇರಿಗೆ ಬಂದಿಳಿದಾಗ ಅಲ್ಲಿನ ಮಳೆ ಮತ್ತು ಚಳಿಯನ್ನು ಕಂಡು ಹೆದರಿದ್ದೆ. ನನಗೆ ಹೆದರಿಕೆ ಇದ್ದದ್ದು ನನ್ನ ಆಸ್ತಮಾದ್ದು. ಈ ವಾತಾವರಣದಲ್ಲಿ ನನ್ನ ಆರೋಗ್ಯ ಏನಾಗಿಬಿಡುತ್ತದೋ ಎಂಬ ಆತಂಕ ಇತ್ತು.
ಬ್ಯಾಂಕಿಗೆ ರಿಪೋರ್ಟ್ ಮಾಡಿಕೊಂಡಾಗ ಬ್ಯಾಂಕಿನಲ್ಲಿನ ಸಹೋದ್ಯೋಗಿಗಳು ನಾನೂ `ಬ್ಯಾಚುಲರ್' ಎಂದು ತಿಳಿದು ಒಂದಷ್ಟು ಜನ ಬ್ಯಾಂಕಿನ `ಬ್ಯಾಚುಲರ್'ಗಳು ಮನೆ ಮಾಡಿಕೊಂಡಿದ್ದಾರೆಂದೂ ನನ್ನನ್ನು ಅವರ ಜೊತೆಗೆ ಸೇರಿಕೊಳ್ಳಲು ಸಲಹೆ ಮಾಡಿದರು. ನನಗೂ ಅದೇ ಬೇಕಿತ್ತು. ಆಗ ತಾನೇ ಕೆಲಸ ದೊರೆತಿದೆ. ಸಂಬಳ ಕೂಡ ಅಷ್ಟು ಹೆಚ್ಚಿಲ್ಲ. ಒಬ್ಬನೇ ಪ್ರತ್ಯೇಕ ಮನೆ ಅಥವಾ ರೂಮು ಬಾಡಿಗೆಗೆ ಪಡೆಯುವ ಬದಲು ಇತರರ ಜೊತೆಗಿದ್ದರೆ ಬಾಡಿಗೆಯಲ್ಲೂ ಉಳಿತಾಯವಾಗುತ್ತದೆ ಹಾಗೂ ಹೊಸ ಜಾಗದಲ್ಲಿ ಜೊತೆಗಾರರೂ ಇರುತ್ತಾರೆ. ಬೇರೆ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿದ್ದ ಆ `ಬ್ಯಾಚುಲರ್'ಗಳೊಂದಿಗೆ ಮಾತನಾಡಿ ಸಂಜೆಯೇ ಹೋಟೆಲಿನ ರೂಮು ಖಾಲಿಮಾಡಿ ಅವರ ಮನೆಗೆ ಹೊರಟೆ.
ಚರ್ಚ್ ಬೀದಿಯಲ್ಲಿದ್ದ ಆ ಬಾಡಿಗೆ ಮನೆಯ ಯಜಮಾನ ಜಾಕೋಬ್ ಎಂದು, ಹಾಗೂ ಆತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿಯಿತು. `ಹುಷಾರಾಗಿರಿ' ಎಂದರು ಬ್ಯಾಂಕಿನ ಸಹೋದ್ಯೋಗಿಗಳು ತಮಾಷೆಗಾಗಿ. ದೊಡ್ಡ ಕಾಂಪೌಂಡ್ ಇದ್ದ ಆ ಮನೆಗಳಲ್ಲಿ ಎರಡನ್ನು ನಮ್ಮಂತಹವರಿಗೆ ಬಾಡಿಗೆ ನೀಡಿದ್ದರು. ಒಂದೊಂದು ಮನೆಯಲ್ಲಿ ಮೂರು-ನಾಲ್ಕು ಜನ ಬ್ಯಾಚುಲರ್‌ಗಳು ಬಾಡಿಗೆಗಿದ್ದರು. ಜಾಕೋಬ್ ಮತ್ತು ಕುಟುಂಬದವರಿದ್ದ ಮನೆ ಪಕ್ಕ ಖಾಲಿ ಜಾಗವಿದ್ದು ಅಲ್ಲೊಂದು ಸೇದು ಬಾವಿಯಿತ್ತು. ಅದರಿಂದಲೇ ನಾವೆಲ್ಲಾ ನೀರು ಸೇದಿಕೊಳ್ಳಬೇಕಾಗಿತ್ತು. ಬಾಡಿಗೆಗೆ ನೀಡಿದ್ದ ಮನೆಗಳು ಕೊಂಚ ಹಿಂದಕ್ಕೆ ಇದ್ದವು. ಹಿತ್ತಲ ಬಾಗಿಲು ತೆರೆದರೆ ಹಿಂದೆ ಕಾಫಿ ತೋಟವಿತ್ತು.
ಬಯಲುಸೀಮೆಯವನಾದ ನನಗೆ ಮಲೆನಾಡಿನ ಈ ರೀತಿಯ ಮನೆ ಇಷ್ಟವಾಯಿತು. ನಾನು ಆ ಮನೆಗೆ ಹೊರಟ ದಿನ ಯಾವುದೋ ಹಬ್ಬದ ಪ್ರಯುಕ್ತ ಶುಕ್ರವಾರ- ಶನಿವಾರ ರಜೆ ಬಂದದ್ದರಿಂದ ಆ ಮನೆಯಲ್ಲಿದ್ದ ಗೆಳೆಯರು ಊರಿಗೆ ಹೊರಟರು. ಹೊರಡುವ ಮೊದಲು ಅವರು ಮನೆಯ ಮಾಲೀಕನ ಪರಿಚಯ ತಿಳಿಸಿಕೊಟ್ಟರು. ಜಾಕೋಬ್ಗೆ ವಯಸ್ಸಾಗಿದೆ. ಹೆಚ್ಚು ಓಡಾಡಲಾರ. ಇಲ್ಲೇ ಕಾಂಪೌಂಡಿನಲ್ಲಿ ಓಡಾಡುತ್ತಿರುತ್ತಾನೆ. ಹೆಚ್ಚು ಮಾತನಾಡುವುದಿಲ್ಲ. ಆತನ ಹೆಂಡತಿ ಎಂಥದೋ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಳೆ. ಆಕೆ ಹೊರಗೆ ಓಡಾಡುವುದನ್ನು ಯಾರೂ ಕಂಡಿಲ್ಲ. ಅವರಿಗೆ ಮೂವರು ಹೆಣ್ಣುಮಕ್ಕಳು. ದೊಡ್ಡವಳು ರೀನಾ, ಶಾಲೆಯೊಂದರಲ್ಲಿ ಟೀಚರ್; ಆಕೆಗೆ ಮದುವೆಯಾಗಿಲ್ಲ. ಆಕೆಯ ತಂಗಿ ಮ್ಯಾಗಿ, ಮದುವೆಯಾಗಿದೆ; ಗಂಡ ಮಸ್ಕಟ್‌ನಲ್ಲಿದ್ದಾನಂತೆ. ಆಕೆಗೆ ರಾಬರ್ಟ್ ಎಂಬ ಐದು ವರ್ಷದ ಮಗನಿದ್ದಾನೆ. ಕೊನೆಯ ತಂಗಿ ಲೀಸಾ- ಆಕೆ ಹುಚ್ಚಿ. ಮದುವೆಯಾಗಿತ್ತು, ಆದರೆ ಗಂಡ ಈಗ ಬಿಟ್ಟಿದ್ದಾನೆ. ಆಕೆ ಹುಚ್ಚಿಯಾದರೂ ಯಾರಿಗೂ ಎಂದು ತೊಂದರೆ ಕೊಟ್ಟಿಲ್ಲ.
ನಾನು ಆ ಮನೆಗೆ ಬಂದ ಮೊದಲ ದಿನ ರಾತ್ರಿಯೇ ಒಬ್ಬಂಟಿಯಾಗಿ ಕಳೆಯಬೇಕಾಯ್ತು. ಆಗ ತಾನೆ ಊರಿಂದ ನಾನು ಬಂದದ್ದರಿಂದ ಪುನಃ ವಾಪಸ್ಸು ಹೋಗಲು ಬೇಸರವಾಯ್ತು. ಮೂರು ದಿನ ರಜೆಯಲ್ಲಿ ಮಡಿಕೇರಿ ಸುತ್ತ ಮುತ್ತ ಎಲ್ಲಾ ಸುತ್ತಾಡೋಣವೆಂದುಕೊಂಡೆ. ಮಳೆ ಧೋ ಎಂದು ಸುರಿಯುತ್ತಿತ್ತು. ಮಲೆನಾಡಿನ ಮಳೆಯ ಬಗ್ಗೆ ಕೇಳಿದ್ದೆನಷ್ಟೆ ಹೊರತು ಈ ರೀತಿಯ ಅನುಭವವಾಗಿರಲಿಲ್ಲ. ವಿಪರೀತ ಚಳಿಯಿತ್ತು. ಸ್ವೆಟರ್, ಮಫ್ಲರ್ ಧರಿಸಿ ಮೇಲೊಂದು ಶಾಲು ಹೊದ್ದು ರಾತ್ರಿ ಗುಬ್ಬಚ್ಚಿಯಂತೆ ಮುದುಡಿಕೊಂಡು ಮಲಗಿದೆ.

ಲೀಸಾ
ರಾತ್ರಿ ಎಂಟು ಗಂಟೆಗೆಲ್ಲಾ ಊರು ಬಿಕೋ ಎನ್ನುತ್ತಿತ್ತು. ಕರೆಂಟ್ ಸಹ ಹೋಗಿತ್ತು. ಹೊಸ ಜಾಗವಾದದ್ದರಿಂದಲೋ ಏನೋ ನಿದ್ರೆ ಬರುತ್ತಿರಲಿಲ್ಲ. ಮೋಂಬತ್ತಿಯನ್ನೊಂದು ಹೊತ್ತಿಸಿ ಅದರ ಬೆಳಕಿನಲ್ಲಿ ಮ್ಯಾಗಸಿನ್ ತಿರುವಿ ಹಾಕುತ್ತಿದ್ದೆ. ಹೆಂಚಿನ ಮನೆಯಾದ್ದರಿಂದ ಮಳೆಯ ಸದ್ದು ಇನ್ನೂ ಜೋರಾಗಿತ್ತು. ಆಗಾಗ ಹಿಂದೆ ಇದ್ದ ಕಾಫಿ ತೋಟದಲ್ಲಿ ಸರಸರ ಸದ್ದಾಗುತ್ತಿತ್ತು. ಇಳಿಜಾರಿನಲ್ಲಿ ಮನೆ ಕಟ್ಟಿದ್ದುದರಿಂದ ವೆರಾಂಡಾದಿಂದ ನಡುಮನೆಗೆ ಹೋಗಲು ಒಂದೆರಡು ಮೆಟ್ಟಲು ಹಾಗೂ ನಡುಮನೆಯಿಂದ ಅಡುಗೆ ಮನೆಗೆ ಇಳಿಯಲು ಒಂದೆರಡು ಮೆಟ್ಟಲು ಹಾಗೂ ಹಿಂದೆಯಿದ್ದ ಬಚ್ಚಲ ಮನೆಗೆ ಒಂದೆರಡು ಮೆಟ್ಟಲು ಇಳಿಯಬೇಕಾಗಿತ್ತು. ಪ್ರತಿಸಾರಿ ಬಾತ್ ರೂಮಿಗೆ ಹೋಗಿಬರಲು ಒಂದಷ್ಟು ಕಸರತ್ತು ನಡೆಸಬೇಕಾಗುತ್ತಿತ್ತು. ರಾತ್ರಿಯ ನಿಶ್ಶಬ್ದ ಒಂದು ರೀತಿ ನನ್ನನ್ನು ಹೆದರಿಸುವಂತಿತ್ತು. ನನಗಂತೂ ಎಲ್ಲವೂ ಹೊಸದು, ಹೊಸ ರೀತಿಯ ಅನುಭವ. ಆಗಿನ್ನೂ ಟಿ.ವಿ. ಬಂದಿರಲಿಲ್ಲ. ಕ್ಯಾಸೆಟ್ ಪ್ಲೇಯರ್‌ನಲ್ಲಿ ಹಾಡು ಕೇಳೋಣವೆಂದರೆ ಕರೆಂಟ್ ಇಲ್ಲ. ಚಳಿಯಲ್ಲಿ ಮುದುಡಿದ್ದ ನನಗೆ ಯಾರೋ ಬಾಗಿಲು ತಟ್ಟಿದಂತೆ ಅನ್ನಿಸಿತು. ನನ್ನ ಕಿವಿ ನಿಮಿರಿತು. ಮತ್ತೊಮ್ಮೆ ಸರಿಯಾಗಿ ಕೇಳಿಸಿಕೊಳ್ಳಲು ಯತ್ನಿಸಿದೆ. ಹೌದು, ಯಾರೋ ಬಾಗಿಲು ತಟ್ಟುತ್ತಿದ್ದರು.
ಹಿಂದೆ ಕಾಫಿ ತೋಟದಲ್ಲಿ ಸರಸರ ಸದ್ದಾಯಿತು. `ಯಾರಿರಬಹುದು? ಈ ಮನೆಯಲ್ಲಿ ಮೊದಲೇ ಇದ್ದ ಕೆನರಾಬ್ಯಾಂಕಿನ ಸುರೇಶ ಅಥವಾ ಸ್ಟೇಟ್ ಬ್ಯಾಂಕಿನ ರಾಜಾರಾಮನ ಗೆಳೆಯರ್ಯಾರಾದರೂ ಇರಬಹುದೆ?' ಎಂದುಕೊಂಡು ಬಾಗಿಲು ತೆರೆಯಲು ಎದ್ದು ನಿಂತೆ. ಪುನಃ ಬಾಗಿಲು ತಟ್ಟಿದ ಸದ್ದಾಯಿತು. ತೆರೆಯಲೆ? ಅಥವಾ ಬೇಡವೆ? ಯೋಚಿಸುತ್ತಾ ಬಾಗಿಲ ಬಳಿ ಬಂದೆ. `ಯಾರು?' ಎಂದು ಕೇಳಿದೆ. ಉತ್ತರವಿಲ್ಲ. `ಯಾರು ಬೇಕು?' ಪುನಃ ಕೇಳಿದೆ. ಯಾರೂ ಉತ್ತರಿಸಲಿಲ್ಲ.
ಆದರೆ ಪುನಃ ಬಾಗಿಲು ತಟ್ಟಿದರು. ತೆರೆದು ನೋಡೇಬಿಡೋಣ ಯಾರಿರಬಹುದು ಎಂದುಕೊಂಡು ಬಾಗಿಲು ತೆರೆದೆ. ಹೊರಗಿನ ದೃಶ್ಯ ನೋಡಿ ಬೆಚ್ಚಿಬಿದ್ದು ಒಂದೆರಡು ಹೆಜ್ಜೆ ಹಿಂದಿರಿಸಿದೆ. ಹೊರಗೆ ಹೆಣ್ಣೊಬ್ಬಳು ಎದುರಿಗೆ ಮೋಂಬತ್ತಿ ಹಿಡಿದು ನಿಂತಿದ್ದಳು. ಅದು ಗಾಳಿಗೆ ಆರದಂತೆ ಅದನ್ನು ಮತ್ತೊಂದು ಹಸ್ತದಲ್ಲಿ ಮುಚ್ಚಿಕೊಂಡಿದ್ದಳು. ಅವಳ ಉದ್ದನೆ ಕೂದಲು ಎರಡೂ ಭುಜಗಳ ಮೇಲೆ ಹರಡಿಕೊಂಡಿತ್ತು. ಆ ಮೋಂಬತ್ತಿಯ ಬೆಳಕಿನಲ್ಲಿ ಬೆಳಕು ನೆರಳಿನ ಆಟದಲ್ಲಿ ಅವಳ ಮುಖ ಒಂದು ರೀತಿ ಭಯಾನಕವಾಗಿ ಕಾಣುತ್ತಿದೆ ಎನ್ನಿಸಿ ನನಗೆ ಹೆದರಿಕೆಯಾಯಿತು. `ಯಾರು.... ಯಾರು ಬೇಕು?' ಎಂದೆ ತೊದಲುತ್ತಾ. ಆಕೆ ಅಲ್ಲೇ ನಿಂತು ನನ್ನನ್ನೇ ನೋಡುತ್ತಿದ್ದಳು. ಅವಳ ಮುಖದಲ್ಲಿ ಮುಗುಳ್ನಗೆ ಮೂಡಿತು. ಆಕೆ ಆಗ ಸುಂದರವಾಗಿದ್ದಾಳೆನ್ನಿಸಿತು. 'ಜೀಸಸ್ ಹೇಳಿದ....' ಎಂದಳು. ನನಗೆ ಅವಳ ಮಾತೇನೂ ಅರ್ಥವಾಗಲಿಲ್ಲ. ನಾನು ನಿಂತಲ್ಲಿಯೇ ಇದ್ದೆ. ಏರಿದ ಎದೆಬಡಿತ ಇನ್ನೂ ಕಡಿಮೆಯಾಗಿರಲಿಲ್ಲ. `ಜೀಸಸ್ ಹೇಳಿದ.... ನೀನೇ ನನ್ನ ಗಂಡನಂತೆ....' ಎಂದಳು. ಇನ್ನೂ ಬೆಚ್ಚಿಬಿದ್ದೆ ನಾನು. ಕೈಕಾಲು ನಡುಗತೊಡಗಿತು. ಅಷ್ಟರಲ್ಲಿ, `ಹೇ, ಲೀಸಾ!' ಎಂದು ಯಾರೋ ಮತ್ತೊಬ್ಬ ಹೆಂಗಸು ಜೋರಾಗಿ ಕೂಗಿದರು. ಈ ಹೆಂಗಸು ಅಲುಗಾಡಲಿಲ್ಲ. ಮತ್ತೇನೋ ಹೇಳಿದಳು. ಆ ಮಳೆಯ ಆರ್ಭಟದಲ್ಲಿ, ಹೆದರಿಕೊಂಡಿದ್ದ ನನಗೆ ಆಕೆ ಹೇಳಿದ್ದು ಏನೂ ಕೇಳಿಸಲಿಲ್ಲ. ಹಿಂದಿನಿಂದ ಕೂಗಿದ ಹೆಂಗಸು ಬಂದು `ಲೀಸಾ, ನಡಿ ಮನೆಗೆ' ಎಂದು ಈಕೆಯನ್ನು ಎಳೆದೊಯ್ದಳು. ಹೋಗುತ್ತಿದ್ದಾಗ ಆಕೆ ಕೈಯಲ್ಲಿ ಹಿಡಿದಿದ್ದ ಮೋಂಬತ್ತಿ ಆರಿಹೋಯಿತು. ತಕ್ಷಣ ನಾನು ಬಾಗಿಲು ಮುಚ್ಚಿ, ಚಿಲಕ ಜಡಿದು ಓಡಿ ಬಂದು ಮಲಗಿದೆ. ಆ ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ವಿಚಿತ್ರ ಕನಸಗಳು. ಚಳಿಯಲ್ಲಿ ಜ್ವರ ಬಂದಂತಾಗಿತ್ತು. ಯಾಕಾದರೋ ಈ ಊರಿಗೆ ಬಂದೆನೋ ಎನ್ನಿಸಿತ್ತು.
ಮರುದಿನ ಬೆಳಿಗ್ಗೆ ಎದ್ದಾಗ ಗಂಟೆ ಒಂಭತ್ತಾಗಿತ್ತು. ಸುರಿಯುತ್ತಿದ್ದ ಮಳೆ ನಿಂತಿರಲಿಲ್ಲ. ಹೊರಗಿನ ಕಾಂಪೌಂಡಿನಲ್ಲಿದ್ದ ಬಾವಿಯಿಂದ ನೀರು ಸೇದಿಕೊಂಡು ಬಂದು ಕಾಯಲು ಸ್ಟೋವ್ ಮೇಲಿಟ್ಟೆ. ಒಂದು ರೀತಿಯ ವಿಚಿತ್ರ ಹೆದರಿಕೆಯಿಂದ ನೀರು ಸೇದುವಾಗ ಜಾಕೋಬ್ ಮನೆಯ ಕಡೆಗೆ ತಿರುಗಿ ಸಹ ನೋಡಲಿಲ್ಲ. ಕಾಫಿ ಮಾಡಿಕೊಂಡು ಪೇಪರ್ ಓದುತ್ತಿದ್ದಾಗ ಬಾಗಿಲು ತಟ್ಟಿದ ಸದ್ದಾಯಿತು. `ಮತ್ತೇನು ಬಂತು ಗ್ರಹಚಾರ' ಎಂದುಕೊಂಡೆ. ಪುನಃ ಬಾಗಿಲು ತಟ್ಟಿತು. ಅಳುಕಿನಿಂದಲೇ ಬಾಗಿಲು ತೆರೆದೆ. ಹೊರಗೆ ಹೆಂಗಸೊಬ್ಬಳು ನಿಂತಿದ್ದಳು. ಆದರೆ ಆಕೆ ರಾತ್ರಿ ಮೋಂಬತ್ತಿ ಹಿಡಿದುಬಂದ ಹೆಂಗಸಲ್ಲ. `ನನ್ನ ಹೆಸರು ರೀನಾ. ಜಾಕೋಬ್ರವರ ದೊಡ್ಡ ಮಗಳು. ಈ ಮನೆಗೆ ಹೊಸದಾಗಿ ಬಂದವರು ನೀವೇ ಅಲ್ಲವೆ? ನೀವು ಬಂದಿರುವುದಾಗಿ ಸುರೇಶ್ ಹೇಳಿದರು' ಎಂದಳು ಆಕೆ. `ಹೌದು, ಸುರೇಶ್ ಊರಿಗೇ ಹೋಗಿದ್ದಾರೆ', ನಾನೆಂದೆ. `ಗೊತ್ತು, ಅವರು ಊರಿಗೆ ಹೋಗುವಾಗಲೇ ನೀವು ಬಂದ ವಿಷಯ ತಿಳಿಸಿದರು. ರಾತ್ರಿ ಬಂದು ನಿಮಗೆ ತೊಂದರೆ ನೀಡಿದವಳು ನನ್ನ ತಂಗಿ ಲೀಸಾ. ಅದಕ್ಕೆ ನಿಮಗೆ ತಿಳಿಸಲು ಬಂದೆ. ನಿಮಗೆ ತೊಂದರೆ ಕೊಟ್ಟದ್ದಕ್ಕೆ ಕ್ಷಮೆ ಇರಲಿ' ಎಂದಳು. `ಪರವಾಗಿಲ್ಲ, ತೊಂದರೆ ಏನಿಲ್ಲಾ' ಎಂದೆ. ಅಷ್ಟರಲ್ಲಿ ರಾತ್ರಿಯ ಆತಂಕ, ಹೆದರಿಕೆ ಎಲ್ಲಾ ಮರೆತಿತ್ತು. `ಏನಾದರೂ ಬೇಕಾದಲ್ಲಿ ಕೇಳಿ, ಸಂಕೋಚಬೇಡ' ಎಂದಳು. `ಥ್ಯಾಂಕ್ಸ್' ಎಂದೆ. ಆಕೆ ಹೊರಟುಹೋದಳು.
ಮಡಿಕೇರಿಗೆ ನನ್ನ ಜೀವ ಒಗ್ಗಿಕೊಂಡಿತು. ಆದರೂ ನನ್ನ ಆಸ್ತಮಾದ ಬಾಧೆ ಹೆಚ್ಚಾಗಿತ್ತು. ಇಷ್ಟೊಂದು ಸುಂದರ ಪ್ರಕೃತಿಯನ್ನು ಈ ಕಾಯಿಲೆಯಿಂದ ಅಸ್ವಾಧಿಸಲು ಸಾಧ್ಯವಿಲ್ಲವಲ್ಲ ಎನ್ನುವ ಹಿಂಸೆ ಕಾಡುತ್ತಿತ್ತು. ಮಳೆ ಚಳಿಯಲ್ಲಿ ಸ್ವಲ್ಪ ಹೆಚ್ಚು ಓಡಾಡಿದಲ್ಲಿ ರಾತ್ರಿಯೆಲ್ಲಾ ಉಬ್ಬಸದಿಂದ ನಿದ್ರೆಯಿಲ್ಲದೆ ಕಳೆಯಬೇಕಾಗಿತ್ತು.
ಮಡಿಕೇರಿಯಲ್ಲಿನ ನನ್ನ ಮೊದಲ ರಾತ್ರಿಯೇ ಮನೆಯ ಬಾಗಿಲು ತಟ್ಟಿದವಳು ಲೀಸಾ ಎಂದು ಸುರೇಶ್ ತಿಳಿಸಿದ. ಆಕೆ ಹುಚ್ಚಿ ಎಂದು ತಿಳಿಸಿದ. ಆಕೆಗೆ ಮದುವೆಯಾಗಿತ್ತಂತೆ. ಒಂದೂ ಮಗು ಸಹ ಇದೆಯಂತೆ. ಆದರೆ ಗಂಡ ಆಕೆಯನ್ನು ಬಿಟ್ಟಿದ್ದಾನೆ. ಆಕೆ ಹುಚ್ಚಿ ಆದದ್ದರಿಂದ ಗಂಡ ಬಿಟ್ಟನೋ ಅಥವಾ ಗಂಡ ಬಿಟ್ಟದ್ದರಿಂದ ಹುಚ್ಚಿಯಾದಳೊ ತಿಳಿಯದು ಎಂದ ಸುರೇಶ. ಆಗಾಗ ಆಕೆ ಜೋರಾಗಿ ಅಳುತ್ತಿರುವುದು ಕೇಳಿಸುತ್ತಿತ್ತು. ನಾನು ಆಫೀಸಿಗೆ ಅಥವಾ ಹೊರಗೆ ಹೊರಟಾಗಲೆಲ್ಲಾ ಜಾಕೋಬ್ ಮನೆಯ ಹಿಂಭಾಗ ಕಾಣಿಸುತ್ತಿತ್ತು. ಅದೇ ಅವರ ಊಟದ ಕೋಣೆಯಾಗಿದ್ದು ಅಲ್ಲಿ ದೊಡ್ಡ ಕಿಟಕಿ ಹಾಗೂ ಬಾಗಿಲೊಂದು ಇತ್ತು. ಆ ಬಾಗಿಲಿನಿಂದ ಲೀಸಾ ಹೊರಗೆ ಹೋಗಿಬಿಡಬಹುದೆಂಬ ಹೆದರಿಕೆಯಿಂದ ಯಾವಾಗಲೂ ಬೀಗ ಹಾಕಿರುತ್ತಾರಂತೆ. ಲೀಸಾ ಯಾವಾಗಲೂ ಅಲ್ಲಿ ನಿಂತಿರುತ್ತಿದ್ದಳು. ಓಡಾಡುವ ನಮ್ಮನ್ನು ಕಂಡಾಗಲೆಲ್ಲಾ ಏನನ್ನಾದರೂ ಹೇಳುತ್ತಿರುತ್ತಿದ್ದಳು. ಒಂದೆರಡು ದಿನಗಳಲ್ಲಿ ಅದೂ ನನಗೆ ಅಭ್ಯಾಸವಾಯಿತು. ಕೆಲವೊಮ್ಮೆ ಅವಳು ಏನಾದರೂ ಹೇಳಿದಾಗ ಏನು ಹೇಳುತ್ತಾಳೆ ಎನ್ನುವುದನ್ನು ನಿಂತು ಕೇಳಿಸಿಕೊಳ್ಳುತ್ತಿದ್ದೆ. ಅವಳ ಮಾತು ಏನೊಂದೂ ಅರ್ಥವಾಗುತ್ತಿರಲಿಲ್ಲ. ನಾನು ಅವಳೊಂದಿಗೆ ಮಾತನಾಡಲೂ ಯತ್ನಿಸಿದೆ. ನನ್ನ ಏನೋ ಮಾತಿಗೆ ಅವಳೇನೋ ಹೇಳುತ್ತಿರುತ್ತಿದ್ದಳು. ಕೆಲವೊಮ್ಮೆ ಅವಳ ಮಾನಸಿಕ ಆರೋಗ್ಯ ಚೆನ್ನಾಗಿರುತ್ತಿತ್ತು. ಆಗ ಆಕೆ ಕಿಟಕಿಯ ಬಳಿ ನಿಂತಿರುತ್ತಿರಲಿಲ್ಲ. ಏನಾದರೂ ಮನೆಕೆಲಸದಲ್ಲಿ ತೊಡಗಿರುತ್ತಿದ್ದಳು. `ಹುಣ್ಣಿಮೆ ಬಂದರೆ ಅವಳ ಹುಚ್ಚು ಹೆಚ್ಚಾಗಿಬಿಡುತ್ತದೆ' ಎಂದು ಸುರೇಶ ಒಮ್ಮೆ ಹೇಳಿದ್ದ. `ಆಗ ಅವಳನ್ನು ರೂಮಿನಲ್ಲಿ ಕೂಡಿಹಾಕಿ ಬೀಗ ಹಾಕಿಬಿಡುತ್ತಾರೆ' ಎಂದೂ ಸಹ ಹೇಳಿದ್ದ. ನನಗೇನು ಹೇಳಲೂ ತೋಚಿರಲಿಲ್ಲ.
ದೊಡ್ಡ ಮಗಳಾದ ರೀನಾಳೇ ಬಾಡಿಗೆ ಸಂಗ್ರಹಕ್ಕೆ ಹಾಗೂ ಏನಾದರೂ ಮನೆಯ ರಿಪೇರಿಗಳಿದ್ದಲ್ಲಿ ವಿಚಾರಿಸಲು ಬರುತ್ತಿದ್ದಳು. ಆಕೆಯ ತಂದೆ ಜಾಕೋಬ್ ಸಹ ಅನಾರೋಗ್ಯದಿಂದಾಗಿ ಹೆಚ್ಚು ಓಡಾಡುತ್ತಿರಲಿಲ್ಲ. ಒಮ್ಮೆ ರೀನಾಳ ಜೊತೆ ಮಾತನಾಡುವಾಗ `ಏಕೆ ಲೀಸಾಗೆ ಚಿಕಿತ್ಸೆ ಏನೂ ಕೊಡಿಸಲಿಲ್ಲವೆ?' ಎಂದು ಕೇಳಿದ್ದೆ. `ಓಡಾಡಿ ನನಗೂ ಸಾಕಾಗಿದೆ. ಚಿಕಿತ್ಸೆ ಕೊಡಿಸುತ್ತಲೇ ಇದ್ದೇವೆ. ಅವಳಿಗೆ ಮಾತ್ರೆಗಳನ್ನು ತಿನ್ನಿಸುವುದೂ ಕಷ್ಟ. ಚೆನ್ನಾಗಿದ್ದಾಗ ಅವಳೇ ಮಾತ್ರೆ ಸ್ವತಃ ತೆಗೆದುಕೊಳ್ಳುತ್ತಾಳೆ. ಒಮ್ಮೊಮ್ಮೆ ಏರುಪೇರಾದಾಗ ನಮಗೂ ತೀರಾ ಕಷ್ಟವಾಗುತ್ತದೆ. ಅದಕ್ಕೆ ಅವಳನ್ನು ಕೋಣೆಯಲ್ಲಿ ಹಾಕಿ ಬೀಗಹಾಕಿಬಿಡುತ್ತೇವೆ' ಎಂದಳು. ಅವಳ ಕಣ್ಣಂಚಿನಲ್ಲಿ ಹನಿಗೂಡಿತ್ತು. `ಅವಳ ಗಂಡ ಕೇರಳದಲ್ಲಿದ್ದಾನೆ. ಇವಳ ಮಗುವೂ ಅವನ ಬಳಿಯೇ ಇದೆ. ಅವನು ಬಿಟ್ಟುಹೋದ ಮೇಲೆ ಇವಳ ಆರೋಗ್ಯ ಇನ್ನೂ ಹದಗೆಟ್ಟಿದೆ. ಅವನು ಬಂದು ಕರೆದುಕೊಂಡು ಹೋದರೆ ಇವಳು ಸರಿಹೋಗಬಹುದೇನೋ. ಆದರೆ ಅವನು ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆಂದು ಹೇಳುತ್ತಾರೆ. ಏನು ಮಾಡಲೂ ತೋಚುತ್ತಿಲ್ಲ' ಎಂದಿದ್ದಳು.
ರೂಮಿನಲ್ಲಿ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತಿದ್ದೆ. ಅಲ್ಲದೆ ಬ್ಯಾಂಕ್ ಸಹ ಹತ್ತಿರದಲ್ಲೇ ಇದ್ದುದರಿಂದ ಮನೆಗೆ ನಡೆದುಕೊಂಡೇ ಬರಬಹುದಿತ್ತು. ಅದೊಂದು ದಿನ ಮಧ್ಯಾಹ್ನ ಮನೆಗೆ ಬಂದಾಗ ಮ್ಯಾಗಿ ಮತ್ತು ಒಂದಷ್ಟು ಅಕ್ಕಪಕ್ಕದ ಹೆಂಗಸರು ಬಾವಿಯ ಬಳಿ ನಿಂತು ಬಗ್ಗಿ ನೋಡಿ ಏನೋ ಹೇಳುತ್ತಿದ್ದರು. ನಾನು ಅಲ್ಲಿಗೆ ಹೋಗುವಷ್ಟರಲ್ಲಿ `ಲೀಸಾ ಬಾವಿಗೆ ಬಿದ್ದುಬಿಟ್ಟಿದ್ದಾಳೆ' ಎಂದಳು ಮ್ಯಾಗಿ. ನಾನು ಗಾಭರಿಯಿಂದ ಬಗ್ಗಿ ನೋಡಿದೆ. ನೀರಿಗೆ ಬಿದ್ದಿದ್ದ ಲೀಸಾ ಕಲ್ಲೊಂದನ್ನು ಹಿಡಿದುಕೊಂಡಿದ್ದು ಕಾಣಿಸಿತು. ಅವಳು ಬದುಕಿದ್ದುದನ್ನು ಕಂಡು ಆತಂಕ ಕಡಿಮೆಯಾಯಿತು. ಮ್ಯಾಗಿ ಲೀಸಾಳಿಗೆ ಹಾಗೇ ಹಿಡಿದುಕೊಂಡಿರುವಂತೆ ಹೇಳುತ್ತಿದ್ದಳು. `ನೀರು ಸೇದಲು ಬಂದಿದ್ದಳು. ಅದ್ಹೇಗೆ ಬಿದ್ದಳೋ ಗೊತ್ತಿಲ್ಲ' ಎಂದಳು ಮ್ಯಾಗಿ. ಅವಳ ಮುಖದಲ್ಲಿ ಅಂಜಿಕೆ ಕಾಣುತ್ತಿತ್ತು. ಅಲ್ಲಿ ಇದ್ದವರೆಲ್ಲಾ ಹೆಂಗಸರೇ. `ಯಾರೂ ಬಾವಿಗೆ ಇಳಿಯುವವರಿಲ್ಲವೆ?' ಕೇಳಿದೆ. `ಅಕ್ಕ ರೀನಾಳಿಗೆ ಹೇಳಿ ಕಳುಹಿಸಿದ್ದೇನೆ. ಅವಳಿನ್ನೇನು ಬರಬಹುದು. ಯಾರನ್ನಾದರೂ ಕರೆತರುತ್ತಾಳೆ' ಎಂದಳು ಮ್ಯಾಗಿ. ಅಷ್ಟರಲ್ಲಿ ಬಾವಿಯಲ್ಲಿದ್ದ ಲೀಸಾ ಕೈ ರಪರಪ ಹೊಡೆದಳು. ಮ್ಯಾಗಿ ಹಾಗೂ ಇತರ ಹೆಂಗಸರು ಜೋರಾಗಿ ಕಿರುಚಿಕೊಂಡರು. ಲೀಸಾ ಆಗಾಗ ತಲೆಯನ್ನು ನೀರಿನಲ್ಲಿ ಮುಳುಗಿಸುವುದನ್ನು ಮಾಡುತ್ತಿದ್ದಳು. ನಾನೇ ಇಳಿದು ಅವಳನ್ನು ಮೇಲಕ್ಕೆತ್ತಲು ತಕ್ಷಣ ನಿರ್ಧರಿಸಿ ಅಲ್ಲೇ ಇದ್ದ ಹಗ್ಗವನ್ನು ಬಿಗಿಯಾಗಿ ಕಟ್ಟಿ ಬಾವಿಗೆ ನಿಧಾನವಾಗಿ ಇಳಿದೆ. ನನಗೆ ಚಿಕ್ಕಂದಿನಿಂದಲೂ ಈಜುಬರುತ್ತಿತ್ತು ಆದರೆ ನಾನೆಂದೂ ಈ ರೀತಿ ಬಾವಿಗೆ ಬಿದ್ದವರನ್ನು ಎತ್ತಿ ಹಾಕಿರಲಿಲ್ಲ. ಬಾವಿಯ ಅಗಲ ಹೆಚ್ಚಿರಲಿಲ್ಲ. ಹಾಗೂ ಅಲ್ಲಲ್ಲಿ ಕಾಲು ಊರಲು ಆಧಾರವಾಗಿ ಕಲ್ಲುಗಳನ್ನು ಇರಿಸಿದ್ದರು. ನಾನು ಕೆಳಕ್ಕೆ ಇಳಿಯುವಷ್ಟರಲ್ಲಿ ಅವಳ ಕೈ ಜಾರಿ ನೀರಿನೊಳಕ್ಕೆ ಮುಳುಗಿದಳು. ಮೇಲಿದ್ದವರು ಜೋರಾಗಿ ಕಿರುಚಿಕೊಂಡರು. ನಾನೂ ಸರಕ್ಕನೆ ಒಂದು ಕೈಲಿ ಹಗ್ಗವನ್ನು ಹಿಡಿದುಕೊಂಡು ನೀರಿನೊಳಕ್ಕೆ ಧುಮುಕಿದೆ. ಈಜಲು ಬರದವರು ನೀರಿನೊಳಕ್ಕೆ ಬಿದ್ದಾಗ ಅವರನ್ನು ಕಾಪಾಡಲು ಬರುವವರನ್ನು ಬಿಗಿಯಾಗಿ ಹಿಡಿದುಕೊಂಡುಬಿಡುತ್ತಾರೆ ಎಂಬುದು ತಿಳಿದಿದ್ದುದರಿಂದ ಹಗ್ಗವನ್ನು ಒಂದು ಕೈಲಿ ಹಿಡಿದುಕೊಂಡೇ ಇದ್ದೆ. ನಾನು ನೀರಿನೊಳಕ್ಕೆ ಧುಮುಕಿ ಅವಳ ಕೈ ಹಿಡಿದು ಮೇಲಕ್ಕೆಳೆದುಕೊಂಡು ಬಂದೆ. ಅದೆಲ್ಲಾ ಕೆಲಕ್ಷಣಗಳಲ್ಲೇ ಕಳೆದುಹೋಯಿತು. ಲೀಸಾ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಆದರೆ ಅವಳ ಮುಖದಲ್ಲಿ ಯಾವ ಭಾವನೆಗಳೂ ಇರಲಿಲ್ಲ. ಅಂಜಿಕೆಯೂ ಇರಲಿಲ್ಲ. ಆದರೆ ನನ್ನ ಕೈಕಾಲುಗಳು ಥರಥರ ನಡುಗುತ್ತಿದ್ದವು. ಸಾವರಿಸಿಕೊಳ್ಳಲು ನನಗೆ ಕೊಂಚ ಸಮಯವೇ ಬೇಕಾಯಿತು. ಅಲ್ಲೇ ನೀರೊಳಗೆ ಕಲ್ಲೊಂದನ್ನು ಆಧಾರವಾಗಿ ತೆಗೆದುಕೊಂಡು ನನ್ನ ಬಲಗಾಲನ್ನು ಊರಿ ಎಡಗಾಲನ್ನು ಎದುರಿನ ಕಲ್ಲುಕಟ್ಟಡಕ್ಕೆ ಒತ್ತಿಹಿಡಿದು ಲೀಸಾಳನ್ನು ನನ್ನ ತೊಡೆಯ ಮೇಲೆ ಕೂರಿಸಿಕೊಂಡು ಮತ್ತೊಂದು ದಪ್ಪಹಗ್ಗವನ್ನು ಇಳಿಸಲು ಹೇಳಿದೆ. ಅಷ್ಟರಲ್ಲಿ ರೀನಾ ಬಂದಿದ್ದಳೆನ್ನಿಸುತ್ತದೆ, ಆಕೆಯ ದನಿಯೂ ಕೇಳಿಸುತ್ತಿತ್ತು. ಯಾರೋ ಗಂಡಸರು ಸಹ ಮಾತನಾಡುತ್ತಿದ್ದರು. ಲೀಸಾ ಎಡಗೈಯಲ್ಲಿ ಹಗ್ಗವನ್ನು ಹಿಡಿದಿದ್ದಳು ಹಾಗೂ ಬಲಗೈಯನ್ನು ನನ್ನ ಹೆಗಲ ಮೇಲೆ ಹಾಕಿದ್ದಳು. ನನ್ನ ಮುಖವನ್ನೇ ನೋಡುತ್ತಿದ್ದಳು. ಅವಳನ್ನು ಅಷ್ಟು ಹತ್ತಿರದಿಂದ ನೋಡಿದ್ದು ಅದೇ ಮೊದಲು. ಅವಳ ಮುಖದಲ್ಲಿ ಮುಗುಳ್ನಗುವಿತ್ತು. `ಬಾವಿಗೆ ಏಕೆ ಹಾರಿದೆ?' ಎಂದು ಕೇಳಿದೆ. ಅವಳು ಏನೂ ಹೇಳಲಿಲ್ಲ. ಅವಳ ಮುಖದಲ್ಲಿನ ಮುಗುಳ್ನಗು ಮಾಸಲಿಲ್ಲ. ಒಂದರೆಕ್ಷಣ ತಡವಾಗಿದ್ದಿದ್ದರೆ ಸತ್ತೇ ಹೋಗುತ್ತಿದ್ದಳೇನೊ. ಆದರೂ ಆಕೆಯ ಮುಖದಲ್ಲಿ ಸಾವಿನ ಹೆದರಿಕೆ ಕೊಂಚವೂ ಇರಲಿಲ್ಲ. ಬಹುಶಃ ಆಕೆಗೆ ಸಾವು ಬದುಕಿನ ನಡುವಿನ ಅಂತರವೇ ತಿಳಿದಿಲ್ಲವೇನೋ ಎನ್ನಿಸಿತು. `ನನಗೆ ಗೊತ್ತು' ಎಂದಳು. ನನ್ನ ಮನಸ್ಸಿನ ಆಲೋಚನೆ ಆಕೆಗೆ ಹೇಗೆ ತಿಳಿಯಿತು ಎಂದು ನನಗೇ ಆಶ್ಚರ್ಯವಾಯಿತು. `ಏನು ಗೊತ್ತು?' ಕೇಳಿದೆ. `ಯೂ ಆರ್ ಮೈ ಹಸ್ಬಂಡ್' ಎಂದು ನನ್ನ ಹೆಗಲ ಮೇಲಿನ ಅವಳ ಕೈಹಿಡಿತವನ್ನು ಬಿಗಿಗೊಳಿಸಿದಳು. ನನ್ನ ನಡುಕ ಹಾಗೂ ಗಾಭರಿ ಕೊಂಚ ಕಡಿಮೆಯಾದಂತೆ ಅನ್ನಿಸಿತು. ಮೇಲೆ ನೋಡಿದೆ. ಜನ ಮಾತನಾಡುತ್ತಿದ್ದರು. ಹಗ್ಗಕ್ಕೆ ಏನೋ ಕಟ್ಟುತ್ತಿರುವಂತೆ ಅನ್ನಿಸಿತು. ಇತ್ತ ಲೀಸಾಳ ಕಡೆ ನೋಡಿ `ಯಾರು ಹೇಳಿದರು ನಿನಗೆ?' ಎಂದು ಕೇಳಿದೆ. `ನನಗೆ ಗೊತ್ತು. ಜೀಸಸ್ ಹೇಳಿದ್ದು. ನೀನೇ ನನ್ನ ಗಂಡ' ಎಂದಳು. ನನಗೆ ಏನು ಹೇಳಲೂ ತೋಚಲಿಲ್ಲ. `ಆಯಿತು, ಆ ವಿಷಯ ಆಮೇಲೆ ಮಾತನಾಡೋಣ' ಎಂದು ಸುಮ್ಮನಾದೆ. ಅವಳ ದೇಹದ ಇಡೀ ತೂಕವನ್ನು ಹೊತ್ತಿದ್ದ ನನ್ನ ತೊಡೆಯ ನಡುಕ ಇನ್ನೂ ಕಡಿಮೆಯಾಗಿರಲಿಲ್ಲ. ಮೇಲಿದ್ದವರು ಇನ್ನೂ ಹಗ್ಗವನ್ನೇ ಬಿಡಲಿಲ್ಲ.
ನಾನು ಮತ್ತೊಮ್ಮೆ ಅವರಿಗೆ ಕೂಗಿ ಹೇಳಿದೆ. ಲೀಸಾ ನನ್ನನ್ನು ಅಪ್ಪಿಕೊಂಡವಳಂತೆ ಇದ್ದವಳು ನನ್ನ ಮುಖವನ್ನು ನೋಡುವುದನ್ನು ನಿಲ್ಲಿಸಲೇ ಇಲ್ಲ. ನನಗೆ ಕೊಂಚ ಕಸಿವಿಸಿಯಾದಂತೆ ಅನ್ನಿಸಿತು. `ಜೀಸಸ್ ನಿನ್ನ ಜೊತೆ ಯಾವಾಗ ಮಾತನಾಡುತ್ತಾನೆ?' ಕೇಳಿದೆ. ಯಾವುದೋ ಲೋಕದಲ್ಲಿದ್ದ ಲೀಸಾ ಎಚ್ಚೆತ್ತುಕೊಂಡವಳಂತೆ `ಹ್ಹಾಂ...?' ಎಂದಳು. `ಜೀಸಸ್ ನಿನ್ನ ಜೊತೆ ಯಾವಾಗ ಮಾತನಾಡುತ್ತಾನೆ?' ಪುನಃ ಕೇಳಿದೆ. `ದಿನಾಲೂ ಮಾತನಾಡುತ್ತಾನೆ. ನೀನೇ ನನ್ನ ಗಂಡನಲ್ಲವೆ?' ಎಂದಳು. ಅಷ್ಟರಲ್ಲಿ ಹಗ್ಗಬಂದಿತು. ಅದಕ್ಕೊಂದು ದೊಡ್ಡ ದಿಂಬನ್ನು ಕಟ್ಟಿದ್ದರು. ಅವಳನ್ನು ಆ ದಿಂಬಿನ ಮೇಲೆ ಕೂಡಿಸುವಷ್ಟರಲ್ಲಿ ನನಗೆ ಸಾಕುಸಾಕಾಯಿತು. ಅವಳು ನನ್ನ ಹೆಗಲಿನಿಂದ ಕೈಯನ್ನು ತೆಗೆಯುತ್ತಲೇ ಇರಲಿಲ್ಲ. ಕೊನೆಗೆ ಅವಳನ್ನು ಮೇಲಕ್ಕೆ ಸಾಗಹಾಕಿ ನಾನು ಮೇಲೆ ಹತ್ತಿಬಂದೆ. ರೀನಾ ಒಂದಷ್ಟು ಜನ ಗಂಡಸರನ್ನು ಕರೆದುತಂದಿದ್ದಳು. ಅವಳ ಅಪ್ಪ ಜಾಕೋಬ್ ಓಡಾಡಲು ಆಗದಿದ್ದರೂ ಕಷ್ಟಪಟ್ಟು ಹೊರಗೆ ಬಂದಿದ್ದ. ಲೀನಾ ಮತ್ತು ಮ್ಯಾಗಿ `ತುಂಬಾ ಥ್ಯಾಂಕ್ಸ್' ಹೇಳಿದರು.

ಮ್ಯಾಗಿ
ಮ್ಯಾಗಿಯ ಐದು ವರ್ಷದ ಮಗ ರಾಬರ್ಟ್ ಶಾಲೆಯಿಂದ ವಾಪಸ್ಸು ಬಂದು ನಾವು ಬ್ಯಾಂಕಿನಿಂದ ಬರುವುದನ್ನೇ ಕಾದಿರುತ್ತಿದ್ದ. ನಾವು ಬಂದ ಕೂಡಲೇ ನಮ್ಮ ಬಳಿಗೆ ಓಡಿಬರುತ್ತಿದ್ದ. ಮಳೆ ಬೀಳುತ್ತಿದ್ದರೆ ಮಡಿಕೇರಿಯಲ್ಲಿ ನಾವು ಹೊರಗೇ ಹೋಗುತ್ತಿರಲಿಲ್ಲ. ನಾವು ಕೇರಂ ಆಡುತ್ತಿದ್ದರೆ ರಾಬರ್ಟ್ ಜೊತೆಗೂಡುತ್ತಿದ್ದ. ಅದು ಇದು ಮಾತನಾಡುತ್ತ ಸಮಯ ಕಳೆಯುತ್ತಿತ್ತು. ರಾಬರ್ಟ್‌ನಿಗೆ ಅವನ ತಂದೆಯನ್ನು ನೋಡಿದ ನೆನಪೇ ಇಲ್ಲ. ಎಲ್ಲಿದ್ದಾರೆ ಅಂದರೆ ಮಸ್ಕಟ್‌ನಲ್ಲಿ ಎಂದಿದ್ದ. ಒಮ್ಮೆ ಅವನ ಅಪ್ಪನ ಫೋಟೋ ತಂದು ತೋರಿಸಿದ್ದ. `ನಿಮ್ಮಪ್ಪ ಮಸ್ಕಟ್‌ನಿಂದ ಬರುವುದು ಯಾವಾಗ?' ಎಂದರೆ ಆ ಮುದ್ದುಹುಡುಗ `ಮುಂದಿನ ತಿಂಗಳು' ಎನ್ನುತ್ತಿದ್ದ. ಜೊತೆಗೆ `ನನಗೆ ಅಷ್ಟೊಂದು ಬೊಂಬೆ ತರುತ್ತಾರೆ' ಎನ್ನುತ್ತಿದ್ದ. `ಅವನು ಇದೇ ರೀತಿ ಒಂದು ವರ್ಷದಿಂದ ಹೇಳುತ್ತಿದ್ದಾನೆ. ಅವನಪ್ಪ ಬಂದೇ ಇಲ್ಲ' ಎಂದ ಸುರೇಶ. `ಇಲ್ಲ, ಮುಂದಿನ ತಿಂಗಳು ಬರುತ್ತಾರೆ' ಎಂದು ರಾಬರ್ಟ್ ಕೂಗಿದ. ಅವನ ಮುಖದಲ್ಲಿ ಸಿಟ್ಟಿತ್ತು.
ಅದೊಂದು ದಿನ ಸಂಜೆ ನಾನು ಬ್ಯಾಂಕಿನಿಂದ ಬಂದು ಮನೆಯಲ್ಲಿದ್ದೆ. ಸುರೇಶ ಮತ್ತು ರಾಜಾರಾಮ ಇನ್ನೂ ಬಂದಿರಲಿಲ್ಲ. ನಾನು ಕೂತು ಮ್ಯಾಗಸಿನ್ ತಿರುವಿ ಹಾಕುತ್ತಿದ್ದೆ. ರಾಬರ್ಟ್ ಓಡಿ ಬಂದ. ಬಂದವನೆ, `ಮಮ್ಮಿ ಮಾತಾಡ್ಬೇಕಂತೆ' ಎಂದ. `ಏನು ವಿಷಯ?' ಎಂದೆ ರಾಬರ್ಟ್‌ನನ್ನು. ಅಷ್ಟರಲ್ಲಿ ಬಾಗಿಲು ತಟ್ಟಿದ ಸದ್ದಾಯಿತು. ನೋಡಿದರೆ ಬಾಗಿಲಲ್ಲಿ ರಾಬರ್ಟ್‌ನ ಅಮ್ಮ ಮ್ಯಾಗಿ ನಿಂತಿದ್ದಳು. `ಒಂದ್ನಿಮಿಷ ಒಳಗೆ ಬರಲೆ?' ಎಂದಳು. ತಕ್ಷಣ ಏನೂ ಹೇಳಲು ತೋಚದೆ, `ಬನ್ನಿ, ಬನ್ನಿ' ಎಂದೆ. ಚೇರಿನ ಮೇಲೆ ಬಿದ್ದಿದ್ದ ಪೇಪರ್, ಮ್ಯಾಗಸಿನ್ಗಳನ್ನು ಎತ್ತಿ ಪಕ್ಕಕ್ಕಿರಿಸಿದೆ. `ನಮ್ಮ ಅಮ್ಮನಿಗೆ ಕಾಯಿಲೆ. ಅವರು ಎದ್ದು ಓಡಾಡಲು ಆಗುವುದಿಲ್ಲ. ಆ ದಿನ ಲೀಸಾ ಬಾವಿಗೆ ಹಾರಿದಾಗ, ನೀವು ಮಾಡಿದ ಸಹಾಯಕ್ಕೆ ಅಮ್ಮ ಥ್ಯಾಂಕ್ಸ್ ಹೇಳು ಅಂದರು. ಸ್ವತಃ ಬಂದು ಹೇಳಲಾಗುವುದಿಲ್ಲವಲ್ಲ ಎಂದು ಕಣ್ಣೀರಿಟ್ಟರು' ಎಂದಳು ಮ್ಯಾಗಿ. `ಹೇ, ಪರವಾಗಿಲ್ಲ. ಅಷ್ಟಕ್ಕೆಲ್ಲಾ ಏಕೆ. ಆ ಕ್ಷಣ ನಾನಿಲ್ಲದಿದ್ದರೂ ಮತ್ತಾರಾದರೂ ಬಾವಿಗೆ ಇಳಿದಿರುತ್ತಿದ್ದರು. ಅದೇನೂ ದೊಡ್ಡ ವಿಷಯವಲ್ಲ' ಎಂದೆ ನಾನು. ಇಬ್ಬರೂ ಮಾತನಾಡುವುದನ್ನು ರಾಬರ್ಟ್ ಏನೊಂದೂ ಅರ್ಥವಾಗದವನಂತೆ ನೋಡುತ್ತಿದ್ದ.
ಲೀಸಾ ಬಾವಿಗೆ ಬಿದ್ದಿದ್ದ ದಿನ ಸಂಜೆ ನಾನು ಹೊರಗೆ ಹೊರಟಾಗ ಜಾಕೋಬ್ ಹೊರಗೆ ಕುರ್ಚಿಯ ಮೇಲೆ ಕೂತಿದ್ದ. ನನಗೇ ಕಾಯುತ್ತಿದ್ದಿರಬಹುದೆನ್ನಿಸಿತ್ತು. ನನ್ನನ್ನು ಹತ್ತಿರಕ್ಕೆ ಕರೆದು ತನ್ನ ಎರಡು ಕೈಗಳಿಂದ ನನ್ನ ಕೈಗಳನ್ನು ಹಿಡಿದುಕೊಂಡು `ಥ್ಯಾಂಕ್ಯೂ' ಎಂದ. ನಾನು ನಕ್ಕು `ಪರವಾಗಿಲ್ಲ. ಹೇಗಿದೀರಾ? ಹೇಗಿದೆ ನಿಮ್ಮ ಆರೋಗ್ಯ?' ಎಂದು ಕೇಳಿ ಅವರ ಭುಜ ತಟ್ಟಿ ಆಫೀಸಿಗೆ ಹೊರಟಿದ್ದೆ. ಈ ದಿನ ಜಾಕೋಬ್‌ನ ಹೆಂಡತಿ ಮ್ಯಾಗಿಯ ಕೈಯಲ್ಲಿ ತನ್ನ ಕೃತಜ್ಞತೆಗಳನ್ನು ಕಳುಹಿಸಿದ್ದಳು. ಮ್ಯಾಗಿ ಮತ್ತೇನೂ ಹೇಳಲಿಲ್ಲ; ಎದ್ದೂ ಸಹ ಹೋಗಲಿಲ್ಲ. ಕೂತೇ ಇದ್ದಳು. ನನಗೆ ಏನೂ ಮಾತನಾಡಲು ತೋಚದೆ, `ರಾಬರ್ಟ್ ಹೇಳುತ್ತಿದ್ದ ಅವರಪ್ಪ ಮುಂದಿನ ತಿಂಗಳು ಬರುತ್ತಾರಂತೆ. ಅವರೆಲ್ಲಿ ಮಸ್ಕಟ್‌ನಲ್ಲಿದ್ದಾರೆಯೆ?' ಎಂದು ಕೇಳಿದೆ. `ಹೌದು' ಎಂದ ರಾಬರ್ಟ್. ರಾಬರ್ಟ್‌ನನ್ನು ಹತ್ತಿರಕ್ಕೆ ಎಳೆದುಕೊಂಡಳು ಮ್ಯಾಗಿ. `ಒಂದು ವರ್ಷದಿಂದ ಸುದ್ದಿಯೇ ಇಲ್ಲ. ಪತ್ರ ಬರೆಯುತ್ತಿಲ್ಲ, ಫೋನ್ ಮಾಡುತ್ತಿಲ್ಲ. ಬರೆಯುವ ಪತ್ರಗಳಿಗೆ ಉತ್ತರವೂ ಇಲ್ಲ. ನಾನು ಫೋನ್ ಮಾಡಿದರೆ ಆ ನಂಬರ್ ಇದ್ದಂತೆಯೇ ಇಲ್ಲ' ಎಂದಳು ಮ್ಯಾಗಿ ತಲೆ ತಗ್ಗಿಸಿ. `ಅವರು ಹೋಗಿ ನಾಲ್ಕು ವರ್ಷಗಳಾದವು. ಹೋದಾಗಿನಿಂದ ಬಂದೇ ಇಲ್ಲ. ನಾನು ಇಂದು ನಾಳೆ ಎಂದುಕೊಂಡು ಕಾಯುತ್ತಲೇ ಇದ್ದೀನಿ. ಏನು ಮಾಡಬೇಕೆಂದು ತಿಳೀತಿಲ್ಲ' ಎಂದಳು. ಈ ಎಲ್ಲಾ ವಿಷಯಗಳನ್ನು ಆಕೆ ಸುರೇಶ ಅಥವಾ ರಾಜಾರಾಮನ ಬಳಿ ಹಿಂದೆಂದೂ ಮಾತನಾಡಿರಲಿಲ್ಲ. ಬಹುಶಃ ನಾನು ಬಾವಿಗೆ ಇಳಿದು ಲೀಸಾಳನ್ನು ಮುಳುಗುವುದರಿಂದ ಕಾಪಾಡಿದ್ದುದರಿಂದ ನಾನು ಅವರಿಗೆ ಹತ್ತಿರವೆನ್ನಿಸಿ ನನ್ನಲ್ಲಿ ಹೇಳಿರಬಹುದು ಎನ್ನಿಸಿತು. ಮತ್ತೊಮ್ಮೆ ಆ ಪ್ರಶ್ನೆ ಯಾಕಾದರೂ ಕೇಳಿದೆನೋ ಎನ್ನಿಸಿತು. `ಹಣ ಕಳುಹಿಸುವುದು ಸಹ ನಿಲ್ಲಿಸಿ ಒಂದು ವರ್ಷವಾಗಿದೆ. ಈಗ ಎಲ್ಲರ ಹೊರೆಯೂ ರೀನಾಳ ಮೇಲಿದೆ' ಎಂದಳು. ತಲೆ ತಗ್ಗಿಸಿಯೇ ಇದ್ದ ಅವಳ ಕಣ್ಣಿನಿಂದ ಒಂದೆರಡು ಹನಿ ನೆಲದ ಮೇಲೆ ಬಿದ್ದದ್ದು ಕಾಣಿಸಿತು. ಅದನ್ನು ಗಮನಿಸಿದ ರಾಬರ್ಟ್ ಅವಳ ಗಲ್ಲ ಹಿಡಿದು ತಲೆ ಮೇಲೆತ್ತಲು ಪ್ರಯತ್ನಿಸಿದ. ಅವನು ಮುಖ ಅಳುವಂತೆ ಮಾಡಿದ. ಇನ್ನೇನು ಅವನು ಜೋರಾಗಿ ಅತ್ತುಬಿಡುತ್ತಾನೆ ಎನ್ನಿಸಿತು. ತಕ್ಷಣ ಮ್ಯಾಗಿ ಎದ್ದು ರಾಬರ್ಟ್‌ನ ಕೈ ಹಿಡಿದು ದರದರನೆ ಎಳೆದುಕೊಂಡು ಮನೆಗೆ ಓಡಿದಳು.

ರೀನಾ
ಆ ದಿನ ರಾತ್ರಿ ಪುನಃ ನನ್ನ ಆಸ್ತಮಾ ಕಾಡಿತ್ತು. ಹೊರಗೆ ಧೋ ಎಂದು ಸುರಿಯುತ್ತಿದ್ದ ಮಳೆ. ನಿದ್ರೆ ನನ್ನಿಂದ ದೂರವಾಗಿತ್ತು. ಬದುಕಿನಲ್ಲಿ ಅತ್ಯಂತ ಸುಲಭದ ಹಾಗೂ ನಿರಾಯಾಸವಾಗಿ ಮಾಡುವ ಕೆಲಸವೆಂದರೆ ಉಸಿರಾಟ. ಆದರೆ ಅದನ್ನೇ ಅತ್ಯಂತ ಕಷ್ಟಕರವಾಗಿ, ಹಿಂಸೆಯಿಂದ ಮಾಡಬೇಕಾದರೆ? ಮಲಗಿದ್ದಷ್ಟೂಉಬ್ಬಸ ಹೆಚ್ಚಾಗುತ್ತಿದ್ದುದರಿಂದ ಮಂಚದ ಕೊನೆಯಲ್ಲಿ ಎರಡೂ ಬದಿಗೆ ಕೈಗಳನ್ನು ಊರಿ ತಲೆಯನ್ನು ಮಳೆಯಲ್ಲಿ ತೊಯ್ದ ಗುಬ್ಬಚ್ಚಿಯಂತೆ ಭುಜಗಳ ನಡುವೆ ಹುದುಗಿಸಿಕೊಂಡು ಅದೆಷ್ಟು ಹೊತ್ತು ಕೂತಿದ್ದೆನೊ ಗೊತ್ತಿಲ್ಲ. ರಾತ್ರಿ ಎರಡು ಗಂಟೆಯಲ್ಲಿ ನುಂಗಿದ್ದ ಮಾತ್ರೆ ಕ್ರಮೇಣ ಕೆಲಸಮಾಡಿದಂತೆ, ಬಳಲಿಕೆಯಿಂದ ಮುಂಜಾನೆ ನಿದ್ರೆ ಬರತೊಡಗಿತು. ತಲೆ ವಿಪರೀತ ನೋಯುತ್ತಿತ್ತು; ಎದೆಗೂಡ ಮೇಲೆ ಕಲ್ಲ ಚಪ್ಪಡಿ ಇರಿಸಿದಂತೆ ಭಾಸವಾಗುತ್ತಿತ್ತು. ಹಾಗೆಯೇ ಒರಗಿ ನಿದ್ರೆ ಮಾಡಿದೆ. ಬೆಳಿಗ್ಗೆ ಸುರೇಶ ಮತ್ತು ರಾಜಾರಾಮ ಬ್ಯಾಂಕಿಗೆ ಹೊರಡುವಾಗ ನನ್ನನ್ನು ಎಬ್ಬಿಸಿದರು. ನಮ್ಮ ಬ್ಯಾಂಕಿಗೆ ನಾನು ರಜೆಯೆಂದು ತಿಳಿಸಿಬಿಡುವಂತೆ ಅವರಿಗೆ ತಿಳಿಸಿ ಹಾಗೆಯೇ ನನ್ನ ನಿದ್ರೆಯನ್ನು ಮುಂದುವರಿಸಿದೆ. ವಿಚಿತ್ರದ ಹಾಗೂ ಹಿಂಸೆಯ ಕನಸುಗಳು ಬೀಳುತ್ತಿದ್ದವು. ಕನಸಿನಲ್ಲಿ ಯಾರೋ `ಅಂಕಲ್' ಎಂದು ಕರೆಯುತ್ತಿರುವಂತೆ ಭಾಸವಾಯಿತು. ಯಾರೋ ತಳ್ಳಿದಂತನ್ನಿಸಿ ಎಚ್ಚರವಾಯಿತು. ನೋಡಿದರೆ ರಾಬರ್ಟ್ ನಿಂತು ನನ್ನ ಭುಜತಟ್ಟಿ ಎಬ್ಬಿಸುತ್ತಿದ್ದ. `ನನಗೆ ಮೈ ಹುಷಾರಿಲ್ಲ. ತೊಂದರೆ ಕೊಡಬೇಡ' ಹೋಗು ಎಂದು ಅವನನ್ನು ಕಳುಹಿಸಿದೆ.
ಒಂದ್ಹತ್ತು ನಿಮಿಷ ಕಳೆದಿರಬೇಕು. ಪುನಃ ಯಾರೋ ನನ್ನ ಹೆಸರಿಡಿದು ಕರೆದಂತಾಯಿತು. ಕನಸೋ ಎಚ್ಚರವೋ ತಿಳಿಯಲಿಲ್ಲ. ಹಾಗೆಯೇ ಮಲಗಿದ್ದೆ. ಈ ಸಾರಿ ಹೆಣ್ಣು ದನಿಯೊಂದು ನನ್ನ ಹೆಸರಿಡಿದು ಕರೆಯುತ್ತಿರುವುದು ಸ್ಪಷ್ಟವಾಯಿತು. ಕಣ್ಣುಬಿಟ್ಟರೆ ರೀನಾ ಎದುರಿಗೆ ನಿಂತಿದ್ದಳು. ನನ್ನ ಈ ಅವಸ್ಥೆಯಲ್ಲಿ ಆಕೆ ಬಂದಿದ್ದು ನನಗಿಷ್ಟವಾಗಲಿಲ್ಲ. ದೇಹವೆಲ್ಲಾ ಬಳಲಿಕೆಯಿಂದ ನಿತ್ರಾಣವಾಗಿತ್ತು. ಆಕೆ ಹೋಗುವಂತೆ ಕಾಣಲಿಲ್ಲ. `ಮೈ ಹುಷಾರಿಲ್ಲವೆ?' ಕೇಳಿದಳು. `ಹ್ಹೂಂ.. ' ಎಂದು ಎದ್ದು ಕೂತೆ. `ರಾಬರ್ಟ್ ಬಂದು ಹೇಳಿದ, ಅದಕ್ಕೇ ಬಂದೆ' ಎಂದಳು. `ಏನು ಬೇಡ, ಸರಿಹೋಗುತ್ತದೆ' ಎಂದು ಎದ್ದು ನಿಂತೆ. `ಏನಾದರೂ ಬೇಕೆ?' ಎಂದಳು. `ಏನೂ ಬೇಡ, ನಿದ್ರೆ ಮಾಡಿದರೆ ಎಲ್ಲಾ ಸರಿಹೋಗುತ್ತದೆ' ಎಂದೆ. ನನ್ನನ್ನು ನನ್ನಷ್ಟಕ್ಕೆ ಬಿಟ್ಟರೆ ಸಾಕಾಗಿತ್ತು. ರಾಬರ್ಟ್ ಆಕೆಯ ಹಿಂದೆಯೇ ನಿಂತಿದ್ದ. ಅವರು ಅಲ್ಲಿ ನಿಂತಿದ್ದಂತೆಯೇ ನಾನು ಬಾತ್‌ರೂಮಿನ ಕಡೆಗೆ ಮೆಟ್ಟಲಿಳಿದು ಹೋದೆ. ಉಸಿರಾಡುವಾಗ ಇನ್ನೂ ಗೊರಗೊರ ಸದ್ದು ಕೇಳಿಸುತ್ತಲೇ ಇತ್ತು.
ಬಾತ್‌ರೂಮಿನಿಂದ ಬರುವಷ್ಟರಲ್ಲಿ ರೀನಾ ಹಾಗೂ ರಾಬರ್ಟ್ ಕಾಣಲಿಲ್ಲ. ನನ್ನ ಮಂಚದ ಪಕ್ಕದ ಟೇಬಲ್ಲಿನ ಮೇಲೆ ಹೊಗೆಯಾಡುವ ಚಪಾತಿ ಇತ್ತು. ಬಳಲಿಕೆಯಿಂದ ನನಗೂ ಹಸಿವಾಗುತ್ತಿತ್ತು. ಬೇರೆ ಏನಾದರೂ ತಿಂಡಿ ಮಾಡಿಕೊಳ್ಳುವ ಮನಸ್ಥಿತಿಯೂ ಇರಲಿಲ್ಲ. ಮನದಲ್ಲೇ ಅವರಿಗೆ ವಂದಿಸಿ ಚಪಾತಿ ತಿನ್ನಲು ಕೂತೆ. ನಂತರ ಮಾತ್ರೆ ನುಂಗಿ ಹಾಗೆಯೇ ಮಂಚದ ಮೇಲೆ ಒರಗಿದೆ. ಒಂದೈದು ನಿಮಿಷದ ನಂತರ ಬಾಗಿಲು ತಟ್ಟಿದ ಸದ್ದಾಯಿತು. ರೀನಾಳೇ ಇರಬೇಕೆಂದುಕೊಂಡೆ, ಏಕೆಂದರೆ ರಾಬರ್ಟ್ ಬಾಗಿಲು ತಟ್ಟಿ ಬರುವವನಲ್ಲ. ಅವನಿಗೆ ಆಹ್ವಾನವೇ ಬೇಡ. ರೀನಾಳೆ ಒಳಗೆ ಬಂದಳು. ಅವಳ ಕೈಯಲ್ಲಿ ಕಾಫಿಯ ಕಪ್ಪಿತ್ತು. `ನಿಮಗೆ ತೊಂದರೆ ಕೊಟ್ಟೆ' ಎಂದೆ. ಸುಮ್ಮನೆ ಮುಗುಳ್ನಕ್ಕ ಆಕೆ ಕಾಫಿ ಅಲ್ಲೇ ಇರಿಸಿ ನಾನು ಏನೂ ಹೇಳದಿದ್ದರೂ ಅಲ್ಲೇ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕೂತಳು. ನನಗೂ ಕಾಫಿ ಬೇಕಿತ್ತು. ಕಾಫಿ ಕುಡಿದೆ.
`ಸ್ಕೂಲಿಗೆ ಹೋಗೋದಿಲ್ಲವೆ?' ನಾನು ಕೇಳಿದೆ. `ಹ್ಹಾಂ... ಹೋಗಬೇಕು. ಇನ್ನೂ ಸಮಯವಿದೆ' ಎಂದಳು. ಅವಳೊಟ್ಟಿಗೆ ಮಾತನಾಡಲು ನನ್ನಲ್ಲಿ ಏನೂ ಇರಲಿಲ್ಲ. `ಥ್ಯಾಂಕ್ಸ್' ಎಂದೆ ಕಾಫಿಯ ಕಪ್ಪನ್ನು ಮೇಜಿನ ಮೇಲಿಡುತ್ತಾ. ಆಕೆ ಏನೂ ಹೇಳಲಿಲ್ಲ, ಪುನಃ ಮುಗುಳ್ನಕ್ಕಳು. ಲೀನಾ ಆಕೆಯ ತಂಗಿಯರಂತೆ ಸುಂದರ ಹೆಣ್ಣಲ್ಲ. ಆದರೆ ಮಾತು ಬಹಳ ಕಡಿಮೆ ಆದರೆ ಅಷ್ಟೇ ಮೃದು ಎನ್ನಿಸುವಂತಿತ್ತು. ಸುಮ್ಮನೆ ಹಾಗೆಯೇ ಕೂತಿದ್ದಳು. ಆಕೆಯ ವಯಸ್ಸು ಏನಿಲ್ಲವೆಂದರೂ ನಲವತ್ತಾಗಿರಬಹುದು. ನನಗಿಂತಾ ಸುಮಾರು ಹದಿನೈದು ವರ್ಷ ದೊಡ್ಡವಳು. ಆಕೆಯ ತಂದೆ ತಾಯಿಯರಿಗೆ ಗಂಡು ಮಕ್ಕಳಿಲ್ಲ. ಈಕೆಯೇ ದೊಡ್ಡವಳು. ತಂದೆ ತಾಯಿಯರಿಬ್ಬರೂ ಹಾಸಿಗೆ ಹಿಡಿದು ಬಹಳ ವರ್ಷಗಳೇ ಕಳೆದಿವೆ. ಅವರ ಆರೈಕೆಯಲ್ಲಿ ಆಕೆಗೆ ಮದುವೆಯಾಗಲು ಸಮಯವೇ ಸಿಕ್ಕಿರಲಿಲ್ಲವೆನ್ನಿಸುತ್ತದೆ. ಅಷ್ಟೊತ್ತಿಗೆ ಆಕೆಯ ತೆಕ್ಕೆಯೊಳಕ್ಕೆ ಇನ್ನಿಬ್ಬರು ತಂಗಿಯರು ಬಂದು ಸೇರಿಕೊಂಡಿದ್ದಾರೆ. ಆಗಾಗ ಅವರ ಮನೆಯಲ್ಲಿ ಆಕೆಯ ಇಬ್ಬರು ತಂಗಿಯರು ಜೋರು ದನಿಯಲ್ಲಿ ಜಗಳವಾಡುತ್ತಿರುವುದು ಕೇಳುತ್ತಿತ್ತು. ಆದರೆ ಒಂದು ದಿನವೂ ರೀನಾಳ ಜೋರುದನಿ ಕೇಳಿರಲಿಲ್ಲ. ಹಾಗೆಯೇ ಹಾಸಿಗೆಯ ಮೇಲೆ ಕೂತು ಒರಗಿದ್ದವನಿಗೆ ಹಾಗೆಯೇ ನಿದ್ರೆ ಬಂದಿತ್ತು. ಎಚ್ಚರವಾದಾಗ ರೀನಾ
ಇರಲಿಲ್ಲ.
ಅದಾದ ಮೇಲೆ ಆಗಾಗ ಸಿಕ್ಕಾಗಲೆಲ್ಲಾ ಮಾತನಾಡಿಸುತ್ತಿದ್ದಳು. ಸುರೇಶ, ರಾಜಾರಾಮ ಊರಿಗೆ ಹೋಗಿ ನಾನೊಬ್ಬನೇ ಇದ್ದಾಗ ತಿಂಡಿ ತಂದುಕೊಡುತ್ತಿದ್ದಳು. ಅದೊಂದು ದಿನ ಸುರೇಶ ಮತ್ತು ರಾಜಾರಾಮ ಹಾಗೂ ಇತರ ಗೆಳೆಯರು ಮನೆಗೆ ಹತ್ತಿರದಲ್ಲೇ ಇದ್ದ ಥಿಯೇಟರಿಗೆ ಸೆಕೆಂಡ್ ಶೋಗೆ ಹೋಗಿದ್ದರು. ನಾನೂ ಬೇಕಾದಷ್ಟು ಸಾರಿ ಅವರೊಟ್ಟಿಗೆ ಸಿನೆಮಾಗೆ ಹೋಗಿದ್ದೆ. ಆದರೆ ಆ ದಿನ ಅವರು ಹೋಗಿದ್ದ ಸಿನೆಮಾ ನನ್ನಲ್ಲಿ ಅಷ್ಟೊಂದು ಕುತೂಹಲ ಮೂಡಿಸಿರಲಿಲ್ಲವಾದುದರಿಂದ ನಾನು ಹೋಗಿರಲಿಲ್ಲ. ಮನೆಯಲ್ಲೇ ಕೂತಿದ್ದೆ. ಸಂಜೆ ಮಳೆ ಇರಲಿಲ್ಲ. ಆದರೆ ರಾತ್ರಿಯಾದಂತೆ ಮಳೆ ಧೋ ಎಂದು ಸುರಿಯಲಾರಂಭಿಸಿತು. ಕರೆಂಟ್ ಸಹಾ ಹೋಯಿತು. ಎಂದಿನಂತೆ ಮೋಂಬತ್ತಿ ಹಚ್ಚಿ ಮಲಗಲು ಹಾಸಿಗೆ ಸಿದ್ಧಪಡಿಸಿಕೊಳ್ಳುತ್ತಿದ್ದೆ. ಬಾಗಿಲು ತಟ್ಟಿದ ಸದ್ದಾಯಿತು. ಸಿನೆಮಾಗೆ ಹೋದವರು ಇಷ್ಟು ಬೇಗ ಬರಲು ಸಾಧ್ಯವಿಲ್ಲ. ಪುನಃ ಲೀಸಾ ಬಂದಳೆ ಎಂದುಕೊಂಡೆ. ಈಗ ಅವಳು ಕೂದಲೆಲ್ಲಾ ಹರಡಿಕೊಂಡು ಬಂದರೂ ನನಗೆ ಹೆದರಿಕೆಯಾಗುವುದಿಲ್ಲ. ನಾನೇ ಅವಳಿಗೆ ಛತ್ರಿ ಹಿಡಿದು ಮನೆಗೆ ವಾಪಸ್ಸು ಬಿಟ್ಟುಬರಬಲ್ಲೆ. ಹಾಗಾಗಿ ಧೈರ್ಯದಿಂದ ಬಾಗಿಲು ತೆರೆದೆ. ಹೊರಗೆ ಕತ್ತಲಲ್ಲಿದ್ದ ಆಕೃತಿಯ ಕೈಯಲ್ಲಿ ಯಾವ ಮೋಂಬತ್ತಿಯೂ ಇರಲಿಲ್ಲ. ಆ ಆಕೃತಿ ಸರಕ್ಕನೆ ಮನೆಯೊಳಕ್ಕೆ ನುಗ್ಗಿಬಂತು. ಕೋಣೆಯಿಂದ ಬರುತ್ತಿದ್ದ ಮೋಂಬತ್ತಿಯ ಬೆಳಕಿನಿಂದ ಅದು ರೀನಾ ಎಂದು ತಿಳಿಯಿತು. ಆಕೆ ಸರಕ್ಕನೆ ಒಳಕ್ಕೆ ನುಗ್ಗಿ ಬಂದದ್ದರಿಂದ ಕೊಂಚ ಗಾಭರಿಯೇ ಆಯಿತು. ಒಳಕ್ಕೆ ಬಂದವಳೇ ನೇರ ನನ್ನ ರೂಮಿಗೆ ನುಗ್ಗಿ ಕುರ್ಚಿಯ ಮೇಲೆ ಕೂತಳು. ನನಗೊಂದೂ ಅರ್ಥವಾಗಲಿಲ್ಲ. `ಏನಾದರೂ ಸಹಾಯ ಬೇಕಾಗಿತ್ತೆ?' ಎಂದು ಕೇಳಿದೆ. `ನಿನ್ನ ಜೊತೆ ಮಾತನಾಡಬೇಕಿತ್ತು' ಎಂದಳು. ಮನೆಯಲ್ಲೇನಾದರೂ ಸಮಸ್ಯೆಯಾಗಿರಬಹುದು ಎಂದುಕೊಂಡು ಅಲ್ಲೇ ಮಂಚದ ಮೂಲೆಯೊಂದರಲ್ಲಿ ಕೂತೆ. `ಏಕೆ, ಏನಾಗಿದೆ?' ಎಂದೆ. ಮನೆಯಲ್ಲಿ ಲೀಸಾಳನ್ನು ಸೇರಿಸಿಕೊಂಡಲ್ಲಿ ಮೂರುಜನ ರೋಗಿಗಳು. ಏನಾದರೂ ಸಂಕಟದಲ್ಲಿರಬಹುದು ಎಂದುಕೊಂಡೆ. ಅಳತೊಡಗಿದಳು. ನನಗಿನ್ನೂ ಗಾಭರಿಯಾಯಿತು. ಆಕೆಯ ಅಮ್ಮ ಅಥವಾ ಅಪ್ಪನಿಗೇನಾದರೂ ಆಗಿದೆಯೆ? `ರೀನಾ ಏನದು ಹೇಳು' ಎಂದೆ. ಇದ್ದಕ್ಕಿದ್ದಂತೆ ಎದ್ದು ನನ್ನನ್ನು ಅಪ್ಪಿಕೊಂಡಳು. ನನಗೆ ಕೊಂಚ ಕಸಿವಿಸಿಯಾಯಿತು. ಬಿಡಿಸಿಕೊಳ್ಳಲು ಯತ್ನಿಸಿದೆ. ಇನ್ನೂ ಬಲವಾಗಿ ಆತುಕೊಂಡಳು. ಬಲವಂತವಾಗಿ ಅವಳ ಕೈಗಳನ್ನು ಬಿಡಿಸಿ ಪುನಃ ಕುರ್ಚಿಯ ಮೇಲೆ ಕೂಡಿಸಿದೆ. `ನನಗೆ ಈ ಬದುಕು ಸಾಕಾಗಿದೆ' ಎಂದಳು. ಅವಳ ಆ ಯಾತನೆ ನನಗರ್ಥವಾಗುತ್ತಿತ್ತು. ಅವಳಿಗೆ ಅವಳದೇ ಬದುಕೆನ್ನುವುದು ಇರಲೇ ಇಲ್ಲ. ಅವಳು ಬದುಕುತ್ತಿರುವುದು, ದುಡಿಯುತ್ತಿರುವುದು ಅವಳಿಗಾಗಿ ಅಲ್ಲ.
ಏನೂ ಹೇಳಲು ತೋಚದೆ, `ಸಮಾಧಾನ ಮಾಡಿಕೊ, ಎಲ್ಲಾ ಸರಿಹೋಗುತ್ತದೆ' ಎಂದೆ. ನನ್ನ ಮಾತು ಅವಳಿಗೆ ಒಂದು ಜೋಕ್ ಎನ್ನಿಸಬಹುದು ಎಂಬುದು ನನಗೆ ತಿಳಿದಿತ್ತು. ಅವಳ ಅಳುವಿನ ತುಟಿಗಳಲ್ಲೂ ನಗು ಕಾಣಿಸಿಕೊಂಡಂತೆ ಅನ್ನಿಸಿತು. ತಲೆ ಎತ್ತಿ ನನ್ನನ್ನೇ ನೋಡುತ್ತಿದ್ದವಳು, `ನನ್ನನ್ನು ಮದುವೆಯಾಗುತ್ತೀಯಾ?' ಎಂದಳು. ತಕ್ಷಣ ನನ್ನ ತಲೆ ಗಿರಗಿರ ತಿರುಗಿದಂತೆ ನನಗನ್ನಿಸಿತು. ಅವಳಿಂದ ಈ ಪ್ರಶ್ನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ಗರಬಡಿದವನಂತೆ ಎದ್ದು ನಿಂತೆ. ಆಕೆ ನನ್ನನ್ನೇ ನೋಡುತ್ತಿದ್ದಳು. ಆಕೆ ಆ ಪ್ರಶ್ನೆಯನ್ನು ತಮಾಷೆಗಾಗಿ ಕೇಳುತ್ತಿಲ್ಲ ಎಂದು ನನಗರಿವಾಗತೊಡಗಿತು. `ಸಾಧ್ಯವೇ ಇಲ್ಲ', ನನಗರಿವಿಲ್ಲದಂತೆ ನನ್ನಿಂದ ಮಾತು ಹೊರಬಿತ್ತು. `ಪ್ಲೀಸ್' ಎಂದಳು. ಇದೇನೋ ಅತಿರೇಕಕ್ಕೆ ಹೋಗುತ್ತಿದೆ ಎನ್ನಿಸಿತು. ಲೀಸಾಳೊಬ್ಬಳೇ ಅಲ್ಲ, ಅವಳ ಮನೆಯಲ್ಲಿನ ಎಲ್ಲರೂ ಹುಚ್ಚರೆನ್ನಿಸತೊಡಗಿತು. `ಐ ಲವ್ ಯೂ. ಬಹಳ ದಿನಗಳಿಂದ ನಿನ್ನಲ್ಲಿ ಹೇಳಬೇಕೆಂದಿದ್ದೆ' ಎಂದಳು. ಅವಳ ಮಾತುಗಳು ಎಲ್ಲೋ ದೂರದಲ್ಲಿ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. `ನೋಡು, ನಾನೀಗಾಗಲೇ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದೇನೆ. ಮುಂದಿನ ವರ್ಷ ನಮ್ಮ ಮದುವೆಯಾಗುತ್ತಿದೆ. ಈಗ ನೋಡು, ದಯವಿಟ್ಟು ಮನೆಗೆ ಹೋಗು' ಎಂದೆ. ಆ ಕ್ಷಣ ಆಕೆ ಹೊರಹೊರಟರೆ ಸಾಕಾಗಿತ್ತು. ಆಕೆಯ ಮೇಲೆ ನನ್ನ ಉತ್ತರ ಯಾವ ಪರಿಣಾಮವನ್ನೂ ಬೀರಲಿಲ್ಲ. ಏನೋ ಯೋಚಿಸುತ್ತಿದ್ದವಳು, `ನೀನು ಪ್ರೀತಿಸಿರುವ ಹುಡುಗಿಯನ್ನೇ ಮದುವೆಯಾಗು, ಆದರೆ ನಾನೂ ಇರುತ್ತೇನೆ. ನಾನು ಇಲ್ಲೇ ಇರುತ್ತೇನೆ, ನನಗೊಂದು ಮನೆ ಮಾಡಿಡು .... ಆಗಾಗ ಬಂದುಹೋಗುತ್ತಿರು' ಎಂದಳು. ನನಗೆ ವಿಪರೀತ ಸಿಟ್ಟು ಬಂದಿತು. `ನನಗೆ ಇನ್ನು ಹೆಚ್ಚು ಮಾತನಾಡಲು ಇಷ್ಟವಿಲ್ಲ. ಪ್ಲೀಸ್ ಗೋ ಹೋಮ್' ಎಂದೆ. ಆಕೆ ಎದ್ದು ನನ್ನ ಕಡೆಗೆ ಬರತೊಡಗಿದಳು. ಆಕೆಯನ್ನು ಬಲವಂತವಾಗಿ ಬಾಗಿಲಿನಿಂದ ಹೊರಕ್ಕೆ ತಳ್ಳಿದೆ. ಆಕೆ ಅಳುತ್ತಲೇ ಇದ್ದಳು. ಆ ಚಳಿ, ಮಳೆಯಲ್ಲೂ ನನ್ನ ಮೈ ಬೆವರಿತ್ತು.

***
ಫಾದರ್ ಬಂದು ನನ್ನನ್ನು ಎಬ್ಬಿಸಿದಾಗಲೇ ನನಗೆ ಎಚ್ಚರವಾದದ್ದು. `ಗುಡ್ ಮಾರ್ನಿಂಗ್' ಹೇಳಿ ನನ್ನ ಪರಿಚಯ ಮಾಡಿಕೊಂಡೆ. ಮಡಿಕೇರಿಯ ಜಾಕೋಬ್ ಒಬ್ಬರನ್ನು ನೋಡಲು ಬಂದಿದ್ದೇನೆಂದು ತಿಳಿಸಿದೆ. ನಾನು ಅವರ ನೆಂಟನಲ್ಲವೆಂದೂ ನನಗೆ ಬಹಳ ಹಿಂದೆ ಪರಿಚಯವಿದ್ದವರೆಂದೂ ತಿಳಿಸಿದೆ. ಆ ವೃದ್ಧಾಶ್ರಮದಲ್ಲಿ ಮೂವರು ಜಾಕೋಬ್‌ಗಳಿದ್ದಾರೆ, ಅವರ ಪೂರ್ತಿ ಹೆಸರು ಏನೆಂದು ಕೇಳಿದರು. ನನಗೆ ನೆನಪಿಲ್ಲವೆಂದೆ. ವಿವರಗಳನ್ನು ಕೇಳಿದ ಫಾದರ್, `ನಿಮ್ಮ ವಿವರಗಳ ಹಾಗೆ ಇರುವವರು ಒಬ್ಬರಿದ್ದಾರೆ. ಅವರ ವಯಸ್ಸು ತೊಂಭತ್ತಾಗಿರಬಹುದು. ಅವರೊಬ್ಬರೇ ಮಡಿಕೇರಿಯವರು. ಬನ್ನಿ ತೋರಿಸುತ್ತೇನೆ' ಎಂದು ಕರೆದುಕೊಂಡು ಹೋದರು. ಹೋಗುವಾಗ, `ಆ ಜಾಕೋಬ್ ನಮ್ಮಲ್ಲಿ ಬಂದು ಸುಮಾರು ಇಪ್ಪತ್ತು ವರ್ಷಗಳಾಯಿತು. ಅವರನ್ನು ನೋಡಲು ಬರುತ್ತಿರುವವರಲ್ಲಿ ನೀವೇ ಮೊದಲು' ಎಂದರು ಫಾದರ್. ಅವರ ಮೂವರು ಹೆಣ್ಣು ಮಕ್ಕಳಿಗೇನಾಯಿತು ಎನ್ನುವ ಪ್ರಶ್ನೆ ನನ್ನನ್ನು ಮಡಿಕೇರಿಯಿಂದ ಕಾಡುತ್ತಲೇ ಇತ್ತು. ಹೊರಗೆ ಬಹಳಷ್ಟು ಜನ ವಯಸ್ಸಾದವರಿದ್ದರು. ಕೆಲವರು ಊರುಗೋಲುಗಳನ್ನು ಹಿಡಿದು ಓಡಾಡುತ್ತಿದ್ದರು, ಇನ್ನು ಕೆಲವರು ಅಲ್ಲಲ್ಲಿ ಕೂತು ಮಾತನಾಡುತ್ತಿದ್ದರು. ಅಲ್ಲೇ ಮರದ ಕೆಳಗೆ ವೀಲ್ ಚೇರಿನಲ್ಲಿ ಒಬ್ಬ ಹಣ್ಣು ಹಣ್ಣು ಮುದುಕ ಕೂತಿದ್ದರು. ಅಲ್ಲಿಗೆ ನನ್ನನ್ನು ಕರೆದೊಯ್ದು `ಜಾಕೋಬ್ ತಾತ ನೋಡಿ ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ' ಎಂದು ಜೋರುದನಿಯಲ್ಲಿ ಹೇಳಿದರು. ಆ ತಾತ ತನ್ನ ಕನ್ನಡಕಗಳ ಹಿಂದೆ ಕುಳಿಬಿದ್ದ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸಿ ನೋಡಿದರು. ಜಾಕೋಬ್‌ರ ಮುಖ ನಾನು ಇಪ್ಪತ್ತೈದು ವರ್ಷಗಳ ಹಿಂದೆ ಕಂಡಿದ್ದಂತೆ ಇರಲಿಲ್ಲ. ಆದರೂ ಅವರೇ ಇರಬಹುದೆಂದು ಅಲ್ಲೇ ಪಕ್ಕದ ಕಲ್ಲಿನ ಬೆಂಚಿನ ಮೇಲೆ ಕೂತೆ. `ನೀವು ಮಾತನಾಡುತ್ತಿರಿ, ನಾನು ಬರುತ್ತೇನೆ' ಎಂದು ಫಾದರ್ ಅಲ್ಲಿಂದ ಹೊರಟರು.
ಜಾಕೋಬ್‌ಗೆ ನನ್ನ ಪರಿಚಯ ಹೇಳಿದೆ. `ನೆನಪಿದೆಯಾ?' ಎಂದು ಕೇಳಿದೆ. `ನೆನಪು' ಎಂದ ಅಜ್ಜನ ಮುಖದಲ್ಲಿ ವಿಷಾದದ ನಗೆ ಮೂಡಿತು. `ನನಗಿರುವುದು ಬರೇ ನೆನಪುಗಳ ಹೊರೆ ಮಾತ್ರ' ಎಂದರು. `ನೀನೇ ಅಲ್ಲವೆ, ನನ್ನ ಮಗಳು ಲೀಸಾಳನ್ನು ಬಾವಿಯಿಂದ ಕಾಪಾಡಿದ್ದು?' ಹೌದೆಂದು ತಲೆಯಾಡಿಸಿದೆ. `ಅಲ್ಲಿ ನೋಡು' ಎಂದು ಇಬ್ಬರು ಮುದುಕರೆಡೆಗೆ ಕೈ ತೋರಿದರು. ಎದುರಿನ ಮತ್ತೊಂದು ಮರದ ಕೆಳಗೆ ಇಬ್ಬರು ವಯಸ್ಸಾದವರು ಕಲ್ಲ ಬೆಂಚುಗಳ ಮೇಲೆ ಕೂತಿದ್ದರು. `ಅವರಿಗೆಂಥದೋ ಕಾಯಿಲೆಯಂತೆ, ಮರೆವಿನ ಕಾಯಿಲೆ. ಅವರಿಗೆ ಏನೂ ನೆನಪಿರೋಲ್ಲ. ಆ ಮುಠ್ಠಾಳರಿಗೆ ಊಟ ಮಾಡಿದ್ದೂ ನೆನಪಿರೋಲ್ಲ. ಎಂಥಾ ಪುಣ್ಯಾತ್ಮರವರು!' ಸ್ವಲ್ಪ ಹೊತ್ತು ತಲೆತಗ್ಗಿಸಿ ಕೂತಿದ್ದ ಜಾಕೋಬ್ ಮಾತು ಮುಂದುವರಿಸಿದರು, `ನನಗ್ಯಾಕೆ ಅಂಥ ಮರೆವಿನ ಕಾಯಿಲೆ ಬರಲಿಲ್ಲ?' ನನಗೇನು ಹೇಳಲೂ ತೋಚಲಿಲ್ಲ. `ಹೇಗಿದ್ದೀರಿ?' ಎಂದು ಕೇಳಲೂ ಮನಸ್ಸಾಗಲಿಲ್ಲ. ಒಂದೈದು ನಿಮಿಷ ಇಬ್ಬರೂ ಹಾಗೆಯೇ ಕೂತಿದ್ದೆವು.
`ಮಡಿಕೇರಿಯಲ್ಲಿ ನೀವಿದ್ದ ಮನೆ ಬಳಿಹೋಗಿದ್ದೆ. ಆ ಮನೆಯಲ್ಲಿದ್ದವರು ನೀವು ಇಲ್ಲಿರುವುದು ತಿಳಿಸಿದರು. ನಿಮ್ಮ ಮಕ್ಕಳು ರೀನಾ, ಮ್ಯಾಗಿ, ಲೀಸಾ...ರಾಬರ್ಟ್ ಎಲ್ಲಿದ್ದಾರೆ?' ಕೇಳಿದೆ. ತೂಕಡಿಸುತ್ತಿದ್ದಂತೆ ಇದ್ದ ಜಾಕೋಬ್ ತಲೆ ಎತ್ತಿ ಸುಮ್ಮನೆ `ಎಲ್ಲೋ ಹೋದರು' ಎನ್ನುವಂತೆ ಕೈ ಆಡಿಸಿದರು. ಸ್ವಲ್ಪ ಹೊತ್ತಿನ ನಂತರ, `ಲೀಸಾ ಪುನಃ ಬಾವಿಗೆ ಹಾರಿದಳು. ಈ ಸಾರಿ ಅವಳನ್ನು ಎತ್ತುವವರು ಯಾರೂ ಇರಲಿಲ್ಲ' ಎಂದರು. ನನ್ನ ಬಾಯಿಂದ `ಅಯ್ಯೋ' ಎನ್ನುವ ಶಬ್ದ ನನಗರಿವಿಲ್ಲದಂತೆ ಬಂತು. ಜಾಕೋಬ್‌ರ ಮುಖದಲ್ಲಿ ಯಾವ ಭಾವನೆಯೂ ಇರಲಿಲ್ಲ. `ಮ್ಯಾಗಿಯ ಗಂಡ ಮಸ್ಕಟ್‌ನಿಂದ ಬರಲೇ ಇಲ್ಲ. ಕೊನೆಗೆ ಅವಳೇ ಒಂದು ದಿನ ಅವನನ್ನು ಹುಡುಕಿಕೊಂಡು ಅಲ್ಲಿಗೇ ಹೊರಟುಹೋದಳು. ಆಗಾಗ ಪತ್ರ ಬರೆಯುತ್ತಿದ್ದಳು. ಅಲ್ಲಿ ಅವಳ ಗಂಡ ಸಿಗಲೇ ಇಲ್ಲವಂತೆ. ಅಲ್ಲಿ ಅವರಿವರ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದಳಂತೆ. ಕೊನೆಗೆ ಪತ್ರ ಬರೆಯುವುದೂ ನಿಲ್ಲಿಸಿದಳು. ಅವಳು ಬದುಕಿದ್ದಾಳೋ ಇಲ್ಲವೋ ಗೊತ್ತಿಲ್ಲ. ರಾಬರ್ಟ್ ಅವಳ ಜೊತೆ ಹೋಗಲಿಲ್ಲ. ಅವನು ಪುಂಡನಾಗಿ ಎಲ್ಲಿದ್ದಾನೋ ಗೊತ್ತಿಲ್ಲ. ಅವನಿಗೇ ನಾವಿದ್ದ ಮನೆ ಬರೆದುಕೊಟ್ಟೆ. ಅವನು ಅದನ್ನು ಮಾರಿಕೊಂಡು ಊರುಬಿಟ್ಟು ಹೋಗಿದ್ದಾನೆ. ಇನ್ನು ರೀನಾಳ ಕತೆ... ಆಕೆ ನಿನ್ನನ್ನೂ ಕೇಳಿರಬಹುದಲ್ವೆ ಮದುವೆಯಾಗು ಎಂದು?' ಎಂದು ಹೇಳಿ ನನ್ನೆಡೆಗೇ ನೋಡಿದರು ಜಾಕೋಬ್. ನಾನು ಏನೂ ಹೇಳಲಿಲ್ಲ. `ಆ ರೀತಿ ಆಕೆ ಎಷ್ಟು ಜನರನ್ನು ಕೇಳಿಲ್ಲ! ಪಾಪದ ಹುಡುಗಿ. ಅಪ್ಪ ಅಮ್ಮಂದಿರಾದ ನಾವು ಅವಳನ್ನು ನೋಡಿಕೊಳ್ಳಬೇಕಾಗಿತ್ತು. ನಮ್ಮ ದುರಾದೃಷ್ಟ ನಾವು ಬದುಕಿ ಅವಳ ಬದುಕನ್ನು ಹಾಳುಮಾಡಿಬಿಟ್ಟೆವು.' ಜಾಕೋಬ್ ಕಣ್ಣಂಚಿನಲ್ಲಿ ನೀರ ಹನಿ ಕಾಣಿಸಿತು. `ರೀನಾ ಏನಾದಳು?' ಎಂದು ಕೇಳುವ ಧೈರ್ಯ ನನಗೆ ಬರಲಿಲ್ಲ. `ಸಾವೂ ಬರಲಿಲ್ಲ, ಹಾಳಾದ್ದು ನೆನಪುಗಳೂ ಸಾಯಲಿಲ್ಲ' ಎಂದ ಜಾಕೋಬ್ ತಲೆ ತಗ್ಗಿಸಿದರು.
ಹತ್ತು ನಿಮಿಷ ಹಾಗೆಯೇ ಕೂತಿದ್ದೆ. ಜಾಕೋಬ್ ಅಲುಗಾಡಲಿಲ್ಲ. ಕಣ್ಣು ಮುಚ್ಚಿತ್ತು. ನಿದ್ರೆ ಮಾಡುತ್ತಿರಬಹುದು ಎನ್ನಿಸಿ ನಾನು ತಂದಿದ್ದ ಸೇಬಿನ ಕವರ್ ಅಲ್ಲೇ ಕಲ್ಲಬೆಂಚಿನ ಮೇಲೆ ಇರಿಸಿ ನನ್ನ ಚೀಲ ಹೆಗಲಿಗೇರಿಸಿ ಸದ್ದಿಲ್ಲದೆ ಅಲ್ಲಿಂದ ಹೊರಟೆ. ಜಾಕೋಬ್ ಅಜ್ಜ ಅವರ ಹೊರೆಯನ್ನು ನನಗೂ ವರ್ಗಾಯಿಸಿದ್ದಾರೆ ಎನ್ನಿಸಿ ಎದೆ ಭಾರವಾಗಿತ್ತು.

ಈ ಕತೆ ಹಾಗೂ ನನ್ನ  ಇತರ ಕತೆ, ಲೇಖನಗಳನ್ನು ನನ್ನ ಬ್ಲಾಗ್ `ಅಂತರಗಂಗೆ'ಯಲ್ಲೂ (http://antaragange.blogspot.com) ನೋಡಬಹುದು.

Comments