ಹೃಸ್ವ ವಿಳಾಸ:ವೈರಸ್‌ಗೆ ರಹದಾರಿ

ಹೃಸ್ವ ವಿಳಾಸ:ವೈರಸ್‌ಗೆ ರಹದಾರಿ



ಹೃಸ್ವ ವಿಳಾಸ:ವೈರಸ್‌ಗೆ ರಹದಾರಿ
ಅಂತರ್ಜಾಲದ ಕೆಲವು ದುಷ್ಟರು ವೈರಸ್ ದಾಳಿ ನಿಯೊಜಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ.ನೇರವಾಗಿ ವೆಬ್ ವಿಳಾಸಗಳನ್ನು ಕಳುಹಿಸಿದರೆ,ಅದರ ಅಂತಹವರ ಬಣ್ಣ ಸುಲಭವಾಗಿ ಬಯಲಾಗುತ್ತದೆ-ಬಳಕೆದಾರ ಎಚ್ಚರವಾಗಿದ್ದು,ಅಂತಹ ಕೊಂಡಿಗಳನ್ನು ಕ್ಲಿಕ್ಕಿಸಿದೆ ಉಳಿಯುತ್ತಾನೆಂದು,ಇಂತವರೀಗ ವಿಳಾಸಗಳನ್ನು ಕಿರಿದಾಗಿಸಿ ಕಳುಹಿಸುತ್ತಾರೆ.goo.gl,bit.ly ಇಂತಹ ಸೇವೆ ಒದಗಿಸುವ ತಾಣಗಳು.ಇಲ್ಲಿ ಅಂತರ್ಜಾಲ ವಿಳಾಸಗಳು ಬದಲಾಗಿ ಕಿರಿಯ ವಿಳಾಸ ಬರುವುದರಿಂದ ಇಂತಹ ವಿಳಾಸಗಳನ್ನು ನೋಡಿದಾಗ,ಇವುಗಳ ಬಗ್ಗೆ ಅನುಮಾನ ಬರದು.ಕ್ಲಿಕ್ಕಿಸಿದಾಗಲಷ್ತೇ ಇವುಗಳ ಬಣ್ಣ ಬಯಲಾಗುತ್ತದೆ.ಅನಪೇಕ್ಷಿತ ಅಂತರ್ಜಾಲ ತಾಣಗಳನ್ನು ಪ್ರಚಾರ ಮಾಡಲೂ ಇಂತಹ ಸೇವೆಗಳನ್ನು ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.ಟ್ವಿಟರಿನಲ್ಲಿ ನೂರನಲುವತ್ತು ಅಕ್ಷರಗಳ ಸಂದೇಶದ ಮಿತಿ ಇರುವ ಕಾರಣ,ಉದ್ದ ವಿಳಾಸಗಳ ಕೊಂಡಿಗಳನ್ನು ಕಿರಿದುಗೊಳಿಸುವ ಸೇವೆಯು ಹೆಚ್ಚಿನ ಬಳಕೆಯಾಗುತ್ತದೆ.ಹಾಗಾಗಿ,ಟ್ವಿಟರ್ ಸಂದೇಶಗಳ ಮೂಲಕ ವೈರಸ್,ಅನಪೇಕ್ಷಿತ ಸಂದೇಶಗಳ ವಿತರಣೆ ಹೆಚ್ಚಾಗಿ ನಡೆಯುತ್ತಲಿದೆ.ಇದನ್ನು ತಡೆಯಲು ಟ್ವಿಟರ್ ಬಳಕೆದಾರರು ಟ್ವೀಟ್‌ಡೆಸ್ಕ್ ಅಂತಹ ಟ್ವಿಟರ್ ರೀಡರುಗಳನ್ನು ಬಳಸುವುದು ಕ್ಷೇಮ.ಇದರಲ್ಲಿ ಪೂರ್ಣಕೊಂಡಿಯನ್ನು ತೋರಿಸುವ ವ್ಯವಸ್ಥೆಯಿರುವುದರಿಂದ,ಬಳಕೆದಾರರು,ಕೊಂಡಿಯ ಮೇಲೆ ಕ್ಲಿಕ್ಕಿಸುವ ಮೊದಲು ಎಚ್ಚರಿಕೆ ವಹಿಸಬಹುದು.
-------------------------------------------
ಮ್ಯಾಂಡ್ರಿವಾ ಲೀನಕ್ಸ್


ಮ್ಯಾಂಡ್ರಿವಾ ಎನ್ನುವ ಹೊಸ ಲೀನಕ್ಸ್ ವಿತರಣೆಯು ಉಬುಂಟು ಲೀನಕ್ಸಿನಂತೆ ಬಳಕೆದಾರಸ್ನೇಹಿ ಲೀನಕ್ಸ್ ಆಗಿದೆ.ಇದರ ಹೊಸ ಆವೃತ್ತಿ ಮ್ಯಾಂಡ್ರಿವಾ 2010.2 ಈಗ ಬಿಡುಗಡೆಯಾಗಿದೆ.ವರ್ಷಕ್ಕೆರಡು ಸಲ ಇದರ ಹೊಸ ಆವೃತ್ತಿಗಳನ್ನು ಬಿಡುಗಡೆಗೊಳಿಸುವ ಸಂಪ್ರದಾಯ.ಸಿಡಿ,ಡಿವಿಡಿ ಮತ್ತು ಫ್ಲಾಶ್ ಡ್ರೈವ‌ಗಳಲ್ಲೂ ಇದು ಲಭ್ಯ.ಪವರ್‌ಪ್ಯಾಕ್ ಆವೃತ್ತಿಗೆ ಹಣ ಪಾವತಿಸಬೇಕಾಗುತ್ತದೆ.ಹಾಗೆಂದು ಉಚಿತ ಆವೃತ್ತಿಯೂ ಇದೆ.ಅಂತರ್ಜಾಲ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು http://www.mandriva.com/en ಅಂತರ್ಜಾಲ ತಾಣಕ್ಕೆ ಭೇಟಿ ಕೊಡಬಹುದು.
-------------------------------------------------
ವಿಂಡೋಸ್7ನಲ್ಲಿ ಸಮಸ್ಯೆ

ಮೈಕ್ರೋಸಾಫ್ಟಿನ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ ವಿಂಡೋಸ್7 ಬಳಸಿದಾಗ,ಅದು ತನ್ನಿಂದತಾನೇ ಅಂತರ್ಜಾಲಕ್ಕೆ ದತ್ತಾಂಶ ಕಳುಹಿಸಿ,ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸುವುದು ಕಂಡು ಬಂದಿದೆ.ಮೈಕ್ರೋಸಾಫ್ಟ್ ಕಂಪೆನಿಯೇ ಹೀಗಾಗುವುದನ್ನು ಒಪ್ಪಿಕೊಂಡು,ಇದಕ್ಕೆ ವ್ಯವಸ್ಥೆಯಲ್ಲಿ ಅನುಸ್ಥಾಪಿಸಿದ ಇತರ ತಂತ್ರಾಂಶಗಳು ಕಾರನ ಎಂದು ದೂರಿದೆ.
----------------------------------------------
ಮುಖ್ಯಸ್ಥರು ಬದಲು


ಗೂಗಲ್ ಕಂಪೆನಿಯ ಮುಖ್ಯಸ್ಥನಾಗಿ ಅದರ ಸಂಸ್ಥಾಪಕರಲ್ಲೋರ್ವರಾದ ಲ್ಯಾರೀ ಪೇಜ್ ಅವರು ಅಧಿಕಾರ ಸ್ವೀಕರಿಸಿ,ಅಚ್ಚರಿ ಮೂಡಿಸಿದ್ದಾರೆ.ಎರಿಕ್ ಸ್ಮಿತ್ ಇದುವರೆಗೆ ಮುಖ್ಯಸ್ಥರಾಗಿದ್ದರು.ಗೂಗಲ್‌ನ ಆಕರ್ಷಕ ಹಣಕಾಸು ಸ್ಥಿತಿ ಉತ್ತಮವಾಗಿದ್ದರೂ ಈ ಬದಲಾವನೆ ನಡೆದಿದೆ.ತನ್ನ ನಾಲ್ಕನೆಯ ತ್ರೈಮಾಸಿಕದಲ್ಲಿ ಎರಡೂವರೆ ಬಿಲಿಯನ್ ಡಾಲರ್ ಲಾಭ ಗಳಿಸುವಲ್ಲಿ ಯಶಸ್ವಿಯಾಗಿತ್ತು.ಇದನ್ನು ಸಾಧಿಸಲು ಗೂಗಲ್ ಸುಮಾರು ಎಂಟೂವರೆ ಬಿಲಿಯನ್ ಡಾಲರ್ ವ್ಯವಹಾರ ಮಾಡಬೇಕಾಯಿತು.ಗೂಗಲ್ ಕಂಪೆನಿಯು ಫೇಸ್‌ಬುಕ್ ಅಂತಹ ಸಾಮಾಜಿಕ ಜಾಲತಾಣಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು,ಮೊಬೈಲ್ ಕ್ಷೇತ್ರದಲ್ಲಿ ಆಪಲ್ ಕಂಪೆನಿಯ ಸ್ಪರ್ಧೆ ಎದುರಿಸಬೇಕಿದೆ.ಕಂಪೆನಿಯ ಉದ್ಯೋಗಿಗಳ ಸಂಖ್ಯೆಯು ಇಪ್ಪತ್ತೈದು ಸಾವಿರ ಸಮೀಪಿಸಿದೆ.ಸ್ಪರ್ಧೆ ಎದುರಿಸಲು ಹೊಸ ವರಸೆಗಳು ಬೇಕಾಗಿದ್ದು,ಲ್ಯಾರಿ ಪೇಜ್ ಇದಕ್ಕೆ ಸಮರ್ಥರೆನ್ನುವ ಭಾವನೆಯಿದೆ.
ಇತ್ತ ಭಾರತದಲ್ಲಿ ವಿಪ್ರೋ ಕಂಪೆನಿಯ ಮುಖ್ಯಸ್ಥರೂ ಬದಲಾಗಿದ್ದಾರೆ.ಈರ್ವರು ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರೂ,ವಿಪ್ರೋ ತನ್ನ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಯಶಸ್ಸು ಪಡೆಯದ ಕಾರಣವೋ ಏನೋ,ಅದರ ಮುಖ್ಯಸ್ಥರಾಗಿ ಟಿಕೆ ಕುರಿಯನ್ ಅವರನ್ನು ನೇಮಿಸಲಾಗಿದೆ.ಐಟಿ ಕಂಪೆನಿಗಳು ಉತ್ತಮ ಅವಕಾಶಗಿಟ್ಟಿಸಲು ಯಶಸ್ವಿಯಾಗುತ್ತಿರುವ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ,ಈ ನಾಯಕತ್ವದ ಬದಲಾವಣೆಯಿಂದ ಕಂಪೆನಿಯ ಅದೃಷ್ಟ ಖುಲಾಯಿಸುತದೋ ಕಾದು ನೋಡಬೇಕಿದೆ.
-----------------------------------------------
2011ರ ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ ಉದಯವಾಣಿ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಶ್ರೀನಿವಾಸ್ ರಾವ್,ಬ್ರಹ್ಮಗಿರಿ,ಉಡುಪಿ.
*ನಂಬರ್ ಪೋರ್ಟೇಬಿಲಿಟಿಗೆ ಕನ್ನಡ ಪದ ಟಂಕಿಸಿ.
*ಸಿಡಿಎಂಎ ಮತ್ತು ಜಿಎಸೆಂ ತಂತ್ರಜ್ಞಾನಕ್ಕಿರುವ ವ್ಯತ್ಯಾಸ ಏನು?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS15 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಬಿಂಗ್ ಏನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಶೋಧ ಸೇವೆ.
*http://brizzly.com ಟ್ವಿಟರ್ ರೀಡರ್.ಕಳೆದವಾರ ಸರಿಯುತ್ತರ ಕಳಿಸಿ ಬಹುಮಾನ ಗೆದ್ದವರು ಉಜಿರೆಯ ಅಕ್ಷಯ ಪ್ರಭು.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ನಿಯತವಾಗಿ ನಿದ್ರಿಸಿದರೆ,ಮುದಿತನ ತಪ್ಪಿಸಬಹುದು,ಅದರಲ್ಲೂ ಡ್ರೈವಿಂಗ್ ಮಾಡುವಾಗ ನಿದ್ರಿಸಿದರೆ..
*ಗಂಡಸು ಎಷ್ಟು ಚಂದವಿದ್ದರೂ ಆತ ಹ್ಯಾಂಡ್"ಸಮ್",ಹೆಂಗಸು ಸ್ವಲ್ಪವೇ ಚೆನ್ನಾಗಿದ್ದರೂ ಬ್ಯೂಟಿ"ಫುಲ್"!
*ಬಂಗಾಳಿಗಳು ವೀರ್ ಎನ್ನುವ ಶಬ್ದವನ್ನು ಬೀರ್ ಎನ್ನುತ್ತಾರೆ..ಹಾಗಾಗಿ ಬೀರ್ ಅವರ ಶೋಧ...
*ಚೈನೀಸ್ ನೀರುಳ್ಳಿ ಸಾಂಬಾರಿನ ಊಟ ಮಾಡಿದಾಗ,ನೀವು ಉಂಡದ್ದು ಚೈನೀಸ್ ಫುಡ್ಡೇ?
---------------------------------------------
ಸ್ಥಿರ ಮೊಬೈಲ್ ನಂಬರ್ ಜಾರಿ
ಮೊಬೈಲ್ ನಂಬರ್ ಬದಲಿಸದೆ,ಸೇವೆ ನೀಡುವ ಕಂಪೆನಿಯನ್ನು ಬದಲಿಸುವ ಅವಕಾಶವನ್ನು ಈಗ ದೇಶಾದ್ಯಂತ ಒದಗಿಸಲಾಗಿದೆ.ಹೆಚ್ಚಿನ ಮೊಬೈಲ್ ಕಂಪೆನಿಗಳು ಈ ಸೇವೆ ನೀಡಲಾರಂಭಿಸಿವೆ.ಸದ್ಯ ಸೇವೆ ನೀಡುತ್ತಿರುವ ಕಂಪೆನಿಯಿಂದ ಬಿಡುಗಡೆ ಹೊಂದಲು,ಎಸೆಮ್ಮೆಸ್ ಸಂದೇಶ ನೀಡಿದರೆ ಸಾಕು.ಪ್ರತ್ಯುತ್ತರವಾಗಿ,ಬರುವ ಸಂದೇಶದಲ್ಲಿ ಇರುವ ಕೋಡ್ ಅನ್ನು ಹೊಸ ಕಂಪೆನಿಯ ಅರ್ಜಿಯಲ್ಲಿ ನಮೂದಿಸಿ,ಹತ್ತೊಂಭತ್ತು ರೂಪಾಯಿ ಪಾವತಿಸಿದರೆ,ಹೊಸ ಕಂಪೆನಿಯ ಸೇವೆ ಲಭ್ಯವಾಗುತ್ತದೆ.ನಡುವೆ ತುಸು ಹೊತ್ತು ಮೊಬೈಲ್ ಸೇವೆ ಅಲಭ್ಯವಾಗಬಹುದಷ್ಟೇ.ತಮ್ಮ ಗ್ರಾಹಕರ ಸೇವೆಯಲ್ಲಿ ಉತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ವಿಫಲವಾದ ಕಂಪೆನಿಗಳಿಗೆ ಈ ಸವಲತ್ತು ಕಹಿಯೆನಿಸಲಿದೆ.ಹೊಸ ಕಂಪೆನಿಗಳಿಗೆ ಆಕರ್ಷಕ ಯೋಜನೆಗಳ ಮೂಲಕ ಇತರ ಕಂಪೆನಿಗಳ ಗ್ರಾಹಕರನ್ನು ತಮ್ಮತ್ತ ಸೆಳೆಯಲಿದು ಉತ್ತಮ ಅವಕಾಶ ಒದಗಿಸಲಿದೆ.ಬಿಎಸೆನ್ನೆಲ್ ಆರಂಭದಲ್ಲೇ ಹೊಸ ಗ್ರಾಹಕರಿಗೆ ಎಂಎನ್ಪಿ ಸೇವೆಗೆ ದರ ಮನ್ನಾ ಪ್ರಕಟಿಸಿದೆಯಲ್ಲದೆ,ತ್ರೀಜಿಗೂ ವರ್ಗಾವಣೆ ಮಾಡುವ ಅವಕಾಶ ಒದಗಿಸಿದೆ.ಟುಜಿ ಸೇವೆಗಳಿಗೆ ವರ್ಗಾವಣೆ ಹೊಂದುವಾಗ,ಸಿಮ್ ಬದಲಿಸಬೇಕಿಲ್ಲ.
--------------------------------
ಭಾವನಾಪ್ರಪಂಚ


ಬೆಂಗಳೂರಿನ ಭಾವನಾ ರಾವ್ ಈಗ ಜೆಕ್ ರಿಪಬ್ಲಿಕ್‌ನಲ್ಲಿ ವಾಸವಾಗಿದ್ದಾರೆ.ಅವರ ದ್ವಿಭಾಷಾ ಬ್ಲಾಗ್ ಬರವಣಿಗೆಯ ಪ್ರಯೋಗಗಳನ್ನು http://bhavana-pen.blogspot.comದಲ್ಲಿ ಕಾಣಬಹುದು.ಅವರ ತಿರುಗಾಟದ ಚಿತ್ರಗಳನ್ನು ಧಾರಾಳವಾಗಿ ಬಳಸಿಕೊಂಡ ಕಾರಣ,ಬ್ಲಾಗ್‌ನಲ್ಲಿ ಬರವಣಿಗೆಯ ಜತೆ ದೃಶ್ಯ-ಕಾವ್ಯದ ಆಹಾರವೂ ಸಿಗುತ್ತದೆ.
Udayavani Unicode
Udayavaniepaper
*ಅಶೋಕ್‌ಕುಮಾರ್ ಎ