ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

ರಾಷ್ಟ್ರಕವಿಯೊಬ್ಬರನ್ನು ಹೋಲುವ ತಲೆಗೂದಲು,ಹೋತದ ಗಡ್ಡ ಆತನಿಗಿತ್ತು. ವಿಚಿತ್ರ ಬಣ್ಣಗಳಿರುವ ಬಟ್ಟೆ ಅವನ ಇಷ್ಟವಾಗಿತ್ತು. ಅವನ ಬಟ್ಟೆ, ಹೆಗಲ ಚೀಲ, ತನಗೆ ಸಮಾನರಿಲ್ಲದ ನಿಲುವು ಗಮನ ಸೆಳೆಯುತ್ತಿದ್ದವು. ಬ್ಯಾಂಕರ್ ವ್ರತ್ತಿಯಿಂದ ನಿವ್ರತ್ತನಾಗಿದ್ದ. ಪೆನ್ ಷನ್ ಜಾರಿಯಾಗಿತ್ತು. ಸ್ವಲ್ಪ ದುಡ್ಡು ಬ್ಯಾಂಕಲ್ಲಿ ಡೆಪೋಸಿಟ್ ಆಗಿಯೂ ಇತ್ತು. ಬ್ಯಾಂಕರ್ ವ್ರತ್ತಿಯಲ್ಲಿ ಹಲವು ರಾಜ್ಯ ಸುತ್ತಿದ್ದ. ಬ್ಯಾಂಕಿನಿಂದ ಸಿಗುವ ನ್ಯಾಯಬದ್ದ ಸವಲತ್ತನ್ನು ಪೂರಾ ಬಳಸಿದ್ದ. ವ್ರತ್ತಿಯಲ್ಲಿ ಎಲ್ಲೂ ಸಂಕಷ್ಟಕ್ಕೆ ಸಿಗದ ಹಾಗೇ ನೋಡಿಕೊಂಡಿದ್ದ. ಅಧಿಕಾರಿವಲಯದಲ್ಲಿ ಇತರ ಅಧಿಕಾರಿಗಳು ಅವನ ಎದುರು ಚಪ್ಪೆ ಅನಿಸುತ್ತಿದ್ದರು.ವಿಸ್ಕಿ, ಸೀಗರೇಟು ಬಳಸುತ್ತಿದ್ದ. ಈಗ ಒಂದು ಹನಿಯೂ ಮುಟ್ಟುವುದಿಲ್ಲ. ಸಿಗರೇಟು ಸೇದುವುದಿಲ್ಲ. ಹುಕಿ ಬಂದಾಗ ಅಸ್ಪಷ್ಟವಾದ ಬಣ್ಣಗಳ ಮಿಲನವಿರುವ, ಸಾಮಾನ್ಯರಿಗೆ ಅರ್ಥವಾಗದ ಚಿತ್ರ ಬಿಡಿಸುತ್ತಿದ್ದ. ಕಲಾವಿದರ ಗುಂಪು ಚಿತ್ರಗಳನ್ನು ಹೊಗಳುತ್ತಿತ್ತು. ಸಾಧ್ಯವಾದಗಲೆಲ್ಲ ಬಿಡಿಸಿದ ಚಿತ್ರಗಳ ಪ್ರದರ್ಷನವನ್ನೂ ಏರ್ಪಡಿಸುತ್ತಿದ್ದ. ಅವನ  ಮಗನಿಗೆ ಉದ್ಯೋಗ ಸಿಕ್ಕಿತ್ತು. ಮದುವೆಯೂ ಆಗಿತ್ತು. ಬೇರೆ ರಾಜ್ಯದಲ್ಲಿ ಮಗ ಸೊಸೆ ಇದ್ದ ಕಾರಣ, ಮನೆಯಲ್ಲಿ ಬ್ಯಾಂಕರ್ ಮತ್ತು ಅವನ ಪತ್ನಿ ಇಬ್ಬರೇ ಇದ್ದರು. ಬ್ಯಾಂಕು ವ್ರತ್ತಿಯಲ್ಲಿದ್ದಾಗ, ಬಹಳ ಚುರುಕಿನ ನಡೆ ಹೊಂದಿದ್ದ. ಯಾರನ್ನು ಯಾಮಾರಿಸಬಲ್ಲ ಮಾತುಗಾರಿಕೆ ಇತ್ತು. ಬಹಳ ಪುಸ್ತಕ ಓದಿದ್ದ. ಪುಸ್ತಕದಲ್ಲಿ ಇಷ್ಟವಾದ ವಾಕ್ಯಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದ. ಹಾಗೇ ಬರೆದಿಟ್ಟ ಡೈರಿಗಳ ಸಂಗ್ರಹವೇ ಅವನ ಆಸ್ತಿತ್ವದ ಅಂಗವಾಗಿರುವ ಮಾತೂ ಆಡುತ್ತಿದ್ದ. ಓದಿದ್ದ ಪುಸ್ತಕಗಳನ್ನು ಕಪಾಟುಗಳಲ್ಲಿ ವ್ಯವಸ್ಥಿತವಾಗಿ ಇಟ್ಟಿದ್ದ. ಏಳು ಮನೆಗಳಿರುವ, ಸುತ್ತ ಗದ್ದೆಗಳನ್ನು ಹೊಂದಿರುವ ಗಂಟು ಜಾಗದಲ್ಲಿ, ಇವನದು ಸ್ವಂತ ಮಾಲಕಿಯ ಮನೆಯಾಗಿತ್ತು. ಉಳಿದ ಆರು ಮನೆಯವರಲ್ಲಿ ಯಾವುದಾದರೊಂದು ಕಾರಣಕ್ಕೆ ಮನಸ್ತಾಪವಿದ್ದ ಕಾರಣ ಯಾರೊಡನೆಯೂ ಮಾತುಕತೆ ಇರಲಿಲ್ಲ. ಇತ್ತಿಚೇಗೆ ಅವನ ಪತ್ನಿ ಜಾರಿ ಬಿದ್ದಾಗ, ಇದೇ ಕಾರಣಕ್ಕಾಗಿ ಪೋನು ಮಾಡಿ ಆಸ್ಪತ್ರೆಯ ವ್ಯಾನು ಬರುವುದನ್ನೇ ಕಾಯಬೇಕಾಯಿತು. ನಾಲ್ಕು ತಾಸುಗಳಷ್ಟು ಕಾಲ ಆಕೆ ನೋವಿನಿಂದ ಒದ್ದಾಡುತ್ತಾ ಬಿದ್ದಿದ್ದಳು. ಬ್ಯಾಂಕರ್ ಆ ಹೊತ್ತಿನಲ್ಲಿ ಹೋಗಿ ಕೇಳುತ್ತಿದ್ದರೆ, ಸಹಾಯ ಮಾಡುವುದಕ್ಕೆ ಹಿಂದೆ ಮುಂದೆ ನೋಡದ ವ್ಯಕ್ತಿಗಳು ಉಳಿದ ಆರು ಮನೆಯಲ್ಲಿ ಒಬ್ಬರಲ್ಲ ಒಬ್ಬರು ಇದ್ದರು. ತಾವಾಗಿ ಸಹಾಯ ಹಸ್ತ ನೀಡಲು ಹೋದರೆ ತಮಗೇ ಆಪತ್ತು ಬರುವ ಮಾತುಗಳನ್ನು ಕೇಳುವ ಹಾಗಾಗುತ್ತದೆ ಎಂಬುದು ಅವರ ನಿಲುವಾಗಿತ್ತು. ನಂಬಿಕೆ, ವಿಚಾರಶೀಲತೆ, ಸಹೋದರತನ, ಸ್ವತಂತ್ರತೆ, ಸಹಾಯ, ಶಿಸ್ತು,ಶಿಕ್ಷಣ ಇವುಗಳು ಸಮಾಜ ಸುಧಾರಣೆಯ ಅಂಗವಾಗಿದೆ. ಹಾಗಂತ ಯೋಚಿಸುವ ಗುಂಪು ಒಂದರ ಸಕ್ರಿಯ ಸದಸ್ಯನಾಗಿದ್ದ. ಗುಂಪಿನ ವಿಚಾರವನ್ನು ಪುಂಖಾನುಪುಂಖಾವಾಗಿ ತಿಳಿಸುವ ಮಾತುಗಾರನಾಗಿದ್ದ. ಗುಂಪಿಗೆ ವಾರಕ್ಕೊಮ್ಮೆ ಪ್ರವಚನ ನೀಡುತ್ತಿದ್ದ. ಬರೆದಿಟ್ಟಿದ್ದ ಡೈರಿಯಿಂದ ಯಾವುದಾದರೊಂದು ವಾಕ್ಯ ಎತ್ತಿಕೊಂಡು ಒಂದಿಡೀ ಘಂಟೆ ಪ್ರವಚನ ನೀಡುತ್ತಿದ್ದ. ಆ ವಾಕ್ಯಕ್ಕೆ ಅವನದೇ ಅರ್ಥ ನೀಡುತ್ತಿದ್ದ. ಹೆದರಿಸುತ್ತಿದ್ದ. ತನಗೆ ಪೂರ್ತಿ ಅರ್ಥವಾಗಬೇಕಾದರೆ ಏನೆಲ್ಲಾ ಒದ್ದಾಟಗಳು ನಡೆಸಬೇಕಾಯಿತು, ವಿವರಿಸುತ್ತಿದ್ದ. ಕೇಳುಗರಿಗೆ ಅರ್ಥವಾಗದ ಭಾಗಗಳನ್ನು ಸವಾಲು ಹಾಕುವ ಮೂಲಕ ಕೇಳಿ ಪರಿಹರಿಸಿಕೊಳ್ಳಲು ತಿಳಿಸುತ್ತಿದ್ದ. ಪ್ರಶ್ನೆ ಕೇಳಿದರೆ, ಕೇಳಿದ ಪ್ರಶ್ನೇಯೇ ತಪ್ಪು ಅನ್ನುವ ಹಾಗೇ ಮಾತು ಉರುಳಿಸುತ್ತಿದ್ದ. ವ್ಯಂಗ್ಯದ ಮೆಲುನಗು, ತುಂಟ ಕಣ್ಣಾಟದ ಮೂಲಕ ಗಲಿಬಿಲಿಗೊಳಿಸುತ್ತಿದ್ದ. ಪ್ರಶ್ನೆಯೊಂದು ಬಂತು. ನೇರವಾಗಿತ್ತು. ಓದಿದ ವಾಕ್ಯ ಯಾವ ಪುಸ್ತಕದಲ್ಲಿ, ಯಾವ ಸಂಧರ್ಭದಲ್ಲಿ ಇತ್ತು? ಅವನಿಗದು ತಿಳಿದಿರಲಿಲ್ಲ. ಸಿಟ್ಟಾದ, ಇನ್ನು ಪ್ರವಚನವನ್ನೇ ಮಾಡುವುದಿಲ್ಲ ಎಂದು ಎದ್ದು ಹೋದ. ಮಾತುಗಳ ನಡುವೆ ಸಿಕ್ಕಿದ.

Rating
No votes yet

Comments