ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

ಜೀವನೋತ್ಸಾಹಕ್ಕೆ ಮಾದರಿಯಾಗುವ ಹಾಗಿದ್ದ.ಅವನು ನಗಿಸದೆ ಇರುವ ವ್ಯಕ್ತಿ ಇಲ್ಲ. ಕಡು ಗಂಭೀರದ ವ್ಯಕ್ತಿಯನ್ನು ಮಾತನಾಡಿಸುವ ಕಲೆ ಗೊತ್ತಿದೆ. ಸಣ್ಣ ಪುಟ್ಟ ಜೋಕುಗಳನ್ನು ಸಂಧರ್ಭಕ್ಕೆ ಸರಿಯಾಗಿ ಸ್ರಷ್ಟಿಸಬಲ್ಲವಾನಾಗಿದ್ದ. ಹಳಸಲು ಜೋಕುಗಳನ್ನು ಹೊಸದಾಗಿಸುತ್ತಿದ್ದ. ಹೆಂಗಸರು, ಮಕ್ಕಳು, ಮುದುಕರು, ಯುವಕರು ಎಲ್ಲಾ ವಯಸ್ಸಿನವರ ಜೊತೆ ಸಹಜವಾಗಿ ಬೆರೆಯುವ, ಸ್ಪಂಧಿಸುವ ಗುಣವಿತ್ತು. ಕಲಾಪ್ರೇಮಿಯಾಗಿದ್ದ. ವಿದ್ಯಾರ್ಥಿಯಾಗಿರುವಾಗ ಪ್ರತಿಯೊಂದು ಸ್ಪರ್ಧೆಯಲ್ಲಿ ಬಹುಮಾನ ಗಳಿಸುತ್ತಿದ್ದ. ಇಂಥವನಿಗೆ ವೈರಿಗಳೂ ಇದ್ದರು. ಕುಡಿಯುತ್ತಿದ್ದ, ಸಿಗರೇಟು ಸೇದುತ್ತಿದ್ದ. ಸಾವಿರ ಮೀಟರ್ ಮೇಲಿನ ಓಟದ ಸ್ಪರ್ದೆಯಲ್ಲಿ ಹಾಟ್ ಫೇವರಿಟ್ ನಾಗಿದ್ದ. ಓದುವುದರಲ್ಲಿ ತುಂಬಾ ಬುದ್ಧಿವಂತ ಅಲ್ಲದಿದ್ದರೂ, ಭರಪೂರ ಅಂಕ ಗಳಿಸುತ್ತಿದ್ದ. ಸಮಾಜ ಸೇವೆ, ರಕ್ತದಾನ ಶಿಬಿರ, ಸಾಂಸ್ಕ್ರತಿಕ ಚಟುವಟಿಕೆ, ರಾಜಕೀಯ, ಕ್ರಿಕೆಟ್, ಕಬಡ್ಡಿ, ಅನ್ನದಾನ ಎಲ್ಲದರಲ್ಲೂ ಅವನದೇ ಆದ ವಿಶಿಷ್ಟ ಛಾಪು ಇರುತ್ತಿತ್ತು. ವಿಮೆ ಮಾರುವ ಉದ್ಯೋಗದಲ್ಲಿ, ಸಖತ್ ಸಕ್ಸೆಸ್ ಆದ. ಮನೆಯಲ್ಲಿ ಅಂಥ ಹೇಳಿಕೊಳ್ಳುವ ಶ್ರೀಮಂತಿಕೆಯಿರಲಿಲ್ಲ. ಶರೀರವನ್ನು ಹುರಿಯಾಗಿಟ್ಟಿದ್ದ. ತಿನ್ನುವುದಕ್ಕೆ, ಉಣ್ಣುವುದಕ್ಕೆ ಯಾವ ಕಟ್ಟುಪಾಡು ಇಟ್ಟುಕೊಂಡಿರಲಿಲ್ಲ. ದೈಹಿಕ ಶ್ರಮಕ್ಕೆ ಅಂಜುವವನಲ್ಲ. ದೇವರು, ಭಕ್ತಿ ಇದರ ಬಗ್ಗೆ ತುಂಬಾ ತಲೆಕೆಡಿಸಿದವನಲ್ಲ. ವಿರೋಧಿಯೂ ಅಲ್ಲ. ಭಡ್ತಿಗಳು ಅವನಿಗೆ ಮಾಮುಲೀ. ಅವನ ಕೈ ಕೆಳಗೆ ನೂರಾರು ಯುವಕರು, ಯುವತಿಯರು ತರಬೇತಾಗಿ ಮಾರಿದ ವಿಮೆಗಳು ದಾಖಲಿಸಲು ಯೋಗ್ಯವಾಗುವಷ್ಟಿತ್ತು. ಮದುವೆಯಾಗಿದ್ದ. ಹೆಂಡತಿಯ ಮುಖದಲ್ಲಿ ನಗುವರಳಿಸುವುದಕ್ಕೆ ಅವನಿಗಾಗಲಿಲ್ಲ. ಹೆಂಡತಿಯ ಜೊತೆ ಕಾಣಿಸುತ್ತಿದ್ದದ್ದು ಅತೀ ಕಡಮೆಯೇ. ಮಗ ಬೆಳೆದು ನಿಂತರು ದಡ ಮುಟ್ಟುವ ನೌಕರಿ ಸಿಕ್ಕಿಲ್ಲ. ವಿಮೆ ಮಾರುವ ಚಾಲಾಕಿತನವೂ ಮಗನಿಗೆ ಇದ್ದ ಹಾಗೇ ಕಾಣಿಸುತ್ತಿಲ್ಲ. ಮಗನನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದ. ಆಗೊಮ್ಮೆ ಮಂಕಾದವನ ಹಾಗೇ ಕಾಣಿಸುತ್ತಿದ್ದ. ತಕ್ಷಣ ಎಚ್ಚರಗೊಂಡು ನಗಿಸುವ ಸಹಜ ಪ್ರವ್ರತಿಗೆ ಮರಳುತ್ತಿದ್ದ. ವ್ರದ್ಧೆ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ. ಅವಳೊಡನೆ ಜಗಳವೂ ಮಾಡುತ್ತಿದ್ದ, ಸಮಾಧಾನಿಸುತ್ತಲೂ ಇದ್ದ. ದೇಹ ದಂಡನೆ ಅವನಿಗೆ ಇಷ್ಟ. ಹತ್ತಿಪ್ಪತ್ತು ಕಿಲೋ ಮೀಟರ್ ಒಬ್ಬನೇ ದಿಕ್ಕು ದೆಸೆಯಿಲ್ಲದೇ ನಡೆಯುತ್ತಿದ್ದ. ಕಾರು ಕೊಂಡಿದ್ದ. ಎರಡೆರಡು ಫ್ಲ್ಯಾಟ್ ಖರೀಧಿಸಿದ್ದ. ಸಪೂರ ದೇಹದ ಅವನ ಫೋಟೋ ದಿನಪತ್ರಿಕೆಯಲ್ಲಿ ಅಚ್ಚಾಗಿತ್ತು. ಹಿರಿಯರ ರಾಷ್ಟ್ರಮಟ್ಟದ ಭಾರ ಎತ್ತುವ ಸ್ಪರ್ಧೆಗೆ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಆಯ್ಕೆಯಾಗಿದ್ದ. ಭಾರವನ್ನು ಅವನೇ ಎತ್ತಿದನೇ? ಅವನನ್ನು ಯಾರದರು ಎತ್ತಿದರೇ?,ಪರಿಚಿತರೊಬ್ಬರು ಕೇಳಿದ ಪ್ರಶ್ನೆ ತಮಾಷೆಗಾಗಿದ್ದರೂ, ಅವನ ಒಣಕಲು ಶರೀರ ಸ್ಥಿತಿ ಆ ಪ್ರಶ್ನೆಯನ್ನು ಸಹಜವಾಗಿಸಿತ್ತು. ಹದಿನೈದು ಜನರ ತಂಡದೊಂದಿಗೆ ನಾಲ್ನುರು ಕಿಲೋಮೀಟರ್ ನಡೆದು ತಲುಪುವ ಸತ್ಯದೇವತೆಯ ದರ್ಶನಕ್ಕೆ ವ್ರತಧಾರಿಯಾಗಿದ್ದ. ತಣ್ಣೀರು ಸ್ನಾನ, ಮಿತ ಆಹಾರ, ಸ್ವಚ್ಚ ನಡವಳಿಕೆ, ಸತ್ಯದೇವತೆಯ ಗುಣಗಾನ ಮಾಡುತ್ತಾ, ತಿಂಗಳು ಪೂರ್ತಿ ವ್ರತ ಮುಗಿಸಿದ್ದ. ಇಂದು ಯಾತ್ರೆ ಹೊರಟ್ಟಿದ್ದ. ಸತ್ಯದೇವತೆಯ ಗಮ್ಯ ತಲುಪಲು ಇಪ್ಪತ್ತು ದಿನಗಳ ಕಾಲ್ನಡಿಗೆ ಪ್ರಯಾಣದ ಲೆಕ್ಕಾಚಾರವಿತ್ತು. ವ್ರತಧಾರಿಗಳು ಅನ್ನದಾನವೂ ಮಾಡಿದರು.ಅವನು ರಜೆ ಹಾಕಿರಲಿಲ್ಲ. ಹದಿನೈದು ದಿನಗಳ ಕಾಲ ಗ್ರಾಮ ವಿಮೆ ಮಾರಟಗಾರರ ತರಬೇತು ಮತ್ತು  ಯೋಜನೆಯ ಮಾರಾಟ ಅಭಿವ್ರದ್ಧಿಗೆ ತೆರಳುತ್ತಿರುವುದಾಗಿ ಸುಳ್ಳು ಅರ್ಜಿ ಹಾಕಿ ಹೊರಟ್ಟಿದ್ದ. ಸತ್ಯ ದರ್ಶನವಾಯಿತು.

Rating
No votes yet

Comments