ಕಾಗದದ ನಿರೀಕ್ಷೆಯಲಿ

ಕಾಗದದ ನಿರೀಕ್ಷೆಯಲಿ

   ಕಾಗದದ ನಿರೀಕ್ಷೆಯಲಿ 
 
   ಮನದೊಳು ಮನೆಮಾಡಿದೆ ಚಡಪಡಿಕೆ   
   ಪ್ರತಿ ಅವಧಿಗೊಮ್ಮೆ ಮುಂಬಾಗಿಲ ಪಕ್ಕದ 
   ಕಿಟಕಿಯ ಬಳಿ ನಿಂದು ಇಣುಕುವ ಕುತೂಹಲ, 
   ಬಂದಿರಬಹುದೇ ನನ್ನ ಇನಿಯನ ಕಾಗದ  
 
   ಅಂಚೆಯು ಬರುವವರೆಗೂ ಕಾಯಲೊಲ್ಲದು  
   ತುದಿಗಾಲಲಿ ನಿಂತಿರುವ ನನ್ನೀ ಕಾತರವು, 
   ಮನೆಯ ಮುಂದಿನ ಕಾಗದದ ಪೆಟ್ಟಿಗೆಯ 
   ಮತ್ತೊಮ್ಮೆ ತೆರೆದು ಪತ್ರ ಹುಡುಕುವ ಹಂಬಲ
 
   ಅಪರಾಹ್ನದ ವೇಳೆಗೆ ತೀವ್ರವಾಯಿತು ಪತ್ರದ 
   ತವಕವು, ಆ ವೇಳೆಗೆ ಹರಿದುಬರುವ ಕಾಗದ 
   ಎಂಬುವ ಕೂಗು ಎನ್ನ ಶ್ರವಣಕೆ ಘಂಟೆ ನಾದ,
   ಕೇಳಿ ಬರುವುದೇ ನನಗೆ ಆ ಅಮೃತ ನಾದ 
 
   ಮಧ್ಯಾಹ್ನದಿ ತುಸು ಸಮಯದ ಬಳಿಕ ಟಪಾಲಿನ
   ಕೂಗು ಕೇಳಿ ಅದು ನನ್ನೀ ಶ್ರವಣಕೆ ಗಾನವಾಗಲು
   ನನ್ನೀ ಹೃದಯವು ಸಂಭ್ರಮದಿ ನರ್ತನವಾಡಲು  
   ಇನಿಯನ ವಿರಹದ ನೋವ ಕಡಿಮೆಮಾಡಲು
 
  - ತೇಜಸ್ವಿ.ಎ.ಸಿ 

Rating
No votes yet

Comments