ತಂಗಳು ಬದುಕಿನ ಮಳೆ
ತುಂಬಾ ಸುಂದರಿಯಲ್ಲ. ವಯಸ್ಸು ಹತ್ತೊಂಭತ್ತಾಗಿತ್ತು. ಇಪ್ಪತ್ತಿನ್ನು ಹತ್ತಿರದಲ್ಲಿತ್ತು. ರಾತ್ರಿ ಕಾಲೇಜಿನಲ್ಲಿ ಪದವಿಯ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಳು. ಮನೆಯಲ್ಲಿದ್ದ ಆರ್ಥಿಕ ಸ್ಥಿತಿ, ಅವಳಿಗೆ ಈ ಆಯ್ಕೆಯನ್ನು ನೀಡಿತ್ತು. ಅವಳಪ್ಪ ಇಪ್ಪತ್ನಾಲ್ಕು ಘಂಟೆ ಕುಡಿಯುವ ಚಟವಾದಿಯಾಗಿದ್ದ. ಸರಕಾರಿ ಕಚೇರಿಯಲ್ಲಿ ಪಿಯೋನ್ ಆಗಿದ್ದ. ಅವನಿಗೆ ತಿಳಿಯದ ಯಾವ ಸಾಲಗಳೂ ಈ ಪ್ರಪಂಚದಲ್ಲಿ ಇನ್ನೂ ಸ್ರಷ್ಟಿಯಾಗಿರಲಿಲ್ಲ. ತಿಂಗಳ ವೇತನದಲ್ಲಿ, ವೇತನದಿಂದಲೇ ಸೀದಾ ಮುರಿಯಲ್ಪಡುವ ವಿವಿಧ ಸಾಲಗಳ ಕಂತುಗಳದೇ ದೊಡ್ಡ ಪಟ್ಟಿ ಇರುತ್ತಿತ್ತು. ಇತರ ಉದ್ಯೋಗಿಗಳಿಗೆ ಎಲ್ಲೆಲ್ಲಿ ಸಾಲ ಎತ್ತಲು ಸಾಧ್ಯವಿದೆ? ಎಂಬುದನ್ನು ತಿಳಿಯಲು ರೆಡಿ ರೆಕನರ್ ಆಗಿದ್ದ. ಅವರೆಲ್ಲರಿಂದಲೂ ಸಾಲ ಪಡೆದಿದ್ದ. ಪಡೆದ ಸಾಲ ತೀರಿಸದೇ ಇದ್ದರೂ, ಅವರಿಂದ ಮತ್ತೆ ಮತ್ತೆ ಸಾಲ ಎತ್ತುವುದರಲ್ಲಿ ಯಶಸ್ವಿಯೂ ಆಗುತ್ತಿದ್ದ. ಶರಾಬು ಅಂಗಡಿಯವರು ಯಾರಿಗೂ ಸಾಲ ಕೊಟ್ಟು ವ್ಯಾಪಾರ ಮಾಡುವುದಿಲ್ಲ. ಅಲ್ಲೂ ಕೂಡಾ ತಿಂಗಳ ಮೊದಲ ದಿನ ಪಾವತಿಯ ಆಧಾರದ ಮೇಲೆ ಅಕೌಂಟು ಹೊಂದಿದ್ದ. ಪಗಾರದಿಂದ ಕಡಿತವಾಗಿ ಕೈ ಸೇರುತ್ತಿದ್ದ ಹಣದಲ್ಲಿ, ಶರಾಬು ಅಂಗಡಿಯ ಲೆಕ್ಕ ಚುಕ್ತಾ ಮಾಡಿಕೊಳ್ಳುತ್ತಿದ್ದ. ಆ ಮೂಲಕ ಮತ್ತೊಂದು ಪೂರ್ತಿ ತಿಂಗಳು ದುಡ್ಡಿಲ್ಲದೆಯೇ ಕುಡಿಯುವ ಪರವಾನಿಗೆಯನ್ನು ನವೀಕರಿಸುತ್ತಿದ್ದ. ಇಂತಹ ತಂದೆಯ ಮಗಳು. ತಂದೆಯನ್ನು ತುಂಬಾ ಪ್ರೀತಿಸುತ್ತಿದ್ದಳು. ಅವನಿಗೂ ಮಗಳೆಂದರೆ ತುಂಬಾ ಪ್ರೀತಿಯಿತ್ತು. ಅವಳು ಅತ್ತು ಕರೆದು, ಸಿಟ್ಟು ಮಾಡಿ, ಉಪವಾಸ ಮುಷ್ಕರ ಹೂಡಿ, ಬೈದು ನೋಡಿಯಾಗಿತ್ತು. ಅವನ ಅಪ್ಪಟ ಪ್ರೀತಿ ಅವಳ ಮೇಲೆ ಎಷ್ಟಿತ್ತೋ, ಅಷ್ಟೇ ಪ್ರೀತಿ ಅವನಿಗೆ ಶರಾಬಿನ ಮೇಲೆಯೂ ಇತ್ತು. ಈಗ ಅವಳು ಅವನನ್ನು ಅವನು ಇರುವ ರೀತಿಯಲ್ಲೇ ಪ್ರೀತಿಸುವುದನ್ನು ಕಲಿತ್ತಿದ್ದಾಳೆ. ಪಿಯೋನು ಕೆಲಸದಲ್ಲಿ ವಂಚನೆಯಿರಲ್ಲಿಲ್ಲ. ಕುಡಿದೇ ಇರುತ್ತಿದ್ದರೂ ಯಾವ ಅಧಿಕಾರಿಯೂ ಅವನನ್ನು ಬೈದಿರಲಿಲ್ಲ. ಎಲ್ಲಾ ಅಧಿಕಾರಿಗೂ ಅವನು ಕುಡಿದೇ ಇರುತ್ತಾನೆ ಎಂದು ತಿಳಿದಿದ್ದರೂ, ಬುದ್ಧಿ ಹೇಳಿದ್ದರೂ, ಶರಾಬು ಅವನನ್ನು ಬಿಡಲಿಲ್ಲ. ಅವನನ್ನು ಶರಾಬು ಅಷ್ಟು ಪ್ರೀತಿಸುತ್ತಿತ್ತು. ಅವನಿಲ್ಲದೆ ಶರಾಬಿನಂತಹ ಶರಾಬಿಗೇ ಅಸ್ಥಿತ್ವವಿರಲಿಲ್ಲ. ಎನ್ಕ್ಯಾಷ್ ಮಾಡಬಹುದಾದ ರಜೆಯನ್ನೂ ಕೂಡಲೇ ಮಾಡಿಸಿಕೊಳ್ಳುತ್ತಿದ್ದ. ಉಳಿದ ರಜೆಗಳನ್ನು ಅಧಿಕಾರಿಗಳ ಖಾಸಗೀ ಕೆಲಸಗಳಿಗೇ ಅವರ ಬೇಡಿಕೆಯ ಮೇರೆಗೆ ಉಪಯೋಗಿಸಿ, ಅವರಿಂದ ಬಹುಮಾನದ ಹಣ, ಕೆಲವೊಮ್ಮೆ ಸಾಲ ಗಳಿಸುತ್ತಿದ್ದ. ಕುಡುಕ ಅನ್ನುವುದನ್ನು ಬಿಟ್ಟರೆ ಸಜ್ಜನ ಅಂಥ ಮೆಚ್ಚಿಕೊಳ್ಳುಬಹುದಾದ ವ್ಯಕ್ತಿಯಾಗಿದ್ದ. ಹುಡುಗಿಯನ್ನು ವಿವರಿಸಲು ಅವಳಪ್ಪನನ್ನು ವಿವರಿಸುವುದು ಹುಡುಗಿಯ ಚೆಲುವಿಕೆಯ ಅನಿವಾರ್ಯತೆಯಾಗಿತ್ತು. ಅವಳನ್ನು ಎಲ್ಲರೂ ಸ್ವಾಗತಿಸುತ್ತಿದ್ದರು. ಅವಳಮ್ಮನ ಬಲಬದಿ ದೇಹಕ್ಕೆ, ಹುಡುಗಿ ಹೈಸ್ಕೂಲ್ ನಲ್ಲಿರುವಾಗ, ಲಕ್ವ ಹೊಡೆಯಿತು. ಮಾತು ಬಾರದ ಸ್ಥಿತಿಯಲ್ಲಿ ಬಾಯಿ ಸೊಟ್ಟಗಾಯಿತು. ಆಯುರ್ವೇದದ ಔಷಧಿಯಿತ್ತು. ಹುಡುಗಿ ಅಪ್ಪನಿಗೂ, ಅಮ್ಮನಿಗೂ ಅಮ್ಮನಾದಳು. ಲಕ್ವ ಹೊಡೆಯುವ ಮುನ್ನ ಅವಳಮ್ಮ ಮನೆಕೆಲಸ ಮಾಡಿಕೊಂಡು ಮನೆಯಲ್ಲಿರುತ್ತಿದ್ದಳು. ಕೊಳಕು ಕೊಳಕು ಆಗಿ ಇರುತ್ತಿದ್ದಳು. ಮನೆಯನ್ನು ಸ್ವಚ್ಚವಾಗಿ ಇಡುತ್ತಿರಲಿಲ್ಲ. ಅವಳ ಬಾಯಿ ತುಂಬಾ ಕೆಟ್ಟ ವಾಸನೆಯಿಂದ ಇರುತ್ತಿತ್ತು. ಹರಟೆಯಲ್ಲಿ ವಿಪರೀತ ಆಸಕ್ತಿಯಿತ್ತು. ಯಾವುದನ್ನು ತಲೆಗೇ ಹಚ್ಚಿಕೊಂಡವಳಲ್ಲ. ಈಗ ಮನೆಯ ಮೂಲೆಯಲ್ಲಿ, ಚಾಪೆಯ ಮೇಲೆ ಮಲಗಿಯೇ ಇರುತ್ತಿದ್ದಳು. ಕನ್ನಡ ಮಾಧ್ಯಮದಲ್ಲಿ ಒಂದು ತರಗತಿ ಕಡ್ಡಾಯವಾಗಿ ಇರಲೇಬೇಕಾದ ಅಪ್ಪಣೆಯಲ್ಲಿ ನಡೆಯುವ, ಇಂಗ್ಳೀಷ್ ಭಾಷಾ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸುವ ಕಾನ್ವೆಂಟಿನಲ್ಲಿ ಈ ಹುಡುಗಿ ಕಲಿಯುತ್ತಿದ್ದಳು. ಶುಲ್ಕವಿಲ್ಲದೇ ಕನ್ನಡ ಮಧ್ಯಾಮದ ತರಗತಿಯಲ್ಲಿ ಕಲಿಯುತ್ತಿದ್ದಳು. ಎಲ್ಲರನ್ನು ಪ್ರೀತಿಸುವ ಕಲೆ ಅವಳಿಗೆ ಸಹಜ ಗುಣವಾಗಿತ್ತು. ಇಡೀ ಕಾನ್ವೆಂಟಿನ ಎಲ್ಲರೂ ಅವಳಿಗೆ ಸ್ನೇಹಿತರು. ಇಂಗ್ಳೀಷ್ ಮಾಧ್ಯಮದ ಗೆಳತಿಯರು, ತರಗತಿಯ ಶಿಕ್ಷಕರುಗಳ ಪ್ರಭಾವದಿಂದ ಎಲ್ಲರೂ ನಿಬ್ಬೆರಗಾಗುವ ಹಾಗೇ ಅವಳಿಗೆ ಇಂಗ್ಳೀಷ್ ಬರುತ್ತಿತ್ತು. ಮನೆಯ ಬಾಡಿಗೆಯನ್ನು ಅವಳಪ್ಪ ಸಲ್ಲಿಸದೇ ತುಂಬಾ ಕಾಲವಾಗಿತ್ತು. ಪ್ರತೀ ತಿಂಗಳೂ ಮನೆಯ ಯಜಮಾನ ಈ ದಿನ ಮನೆಯಿಂದ ಒಕ್ಕಲೆಬ್ಬಿಸಿಯೇ ಬರುತ್ತೇನೆ ಅಂಥ ಹೊರಟು, ಒಕ್ಕಲೆಬ್ಬಿಸುವುದೂ ಸಾಧ್ಯವಾಗದೇ, ಮನೆಯೊಳಗಿನ ಪರಿಸ್ಥಿತಿ ನೋಡಿ ಹುಡುಗಿಗೆ ಪುಡಿಗಾಸು ನೀಡಿ ಬರುತ್ತಿದ್ದ. ಅವಳ ಉಪಸ್ಥಿತಿಯಲ್ಲಿ ಮೋಡಿಯಿತ್ತು. ಕಾನ್ವೆಂಟಿನಲ್ಲಿ ಪದವಿಯ ತರಗತಿಯಿರಲಿಲ್ಲ. ಶಿಕ್ಷಕಿಯೊಬ್ಬರ ಸಲಹೆಯಂತೇ, ಅವಳು ರಾತ್ರಿ ಕಾಲೇಜಿನಲ್ಲಿ ಪದವಿಗೆ ಓದುವೂದೂ, ಹಗಲಿನಲ್ಲಿ ಹಳದಿ ಪುಟದ ಜಾಹೀರಾತಿನಲ್ಲಿ ದುಡಿಯುವುದು ನಿಗಧಿಯಾಯಿತು. ಅಲ್ಲಿಂದ ಅವಳು ಕಾಸಿಗಾಗಲೀ, ಸವಲತ್ತುಗಳಿಗಾಗಲೀ ಯಾರನ್ನೂ ಕಾಯಬೇಕಾಗಿ ಬರಲಿಲ್ಲ. ಹಳೇ ಮನೆಯ ಮಾಲೀಕರ ಬಾಡಿಗೆಯನ್ನು ಚುಕ್ತಾ ಮಾಡಿದಳು. ಮನೆಯನ್ನು ರಿಪೇರಿ ಸ್ವಂತ ಕಾಸಿನಲ್ಲಿ ಧಣಿಯ ಅಪ್ಪಣೆ ಪಡೆದು ಮಾಡಿಸಿದಳು. ಸುಣ್ಣ ಬಣ್ಣ ಹೊಡೆಸಿ, ಮನೆಗೆ ಕುರ್ಚಿ ಮೇಜು, ಅಮ್ಮನಿಗೊಂದು, ಮರದ ಮಂಚ ತನಗೊಂದು ನೈಲಾನ್ ಪಟ್ಟಿಗಳುಳ್ಳ ಅಗ್ಗದ ಮಂಚ ಅಪ್ಪ ಮಲಗುತ್ತಿದ್ದ ಮಂಚಕ್ಕೊಂದು ಹಾಸಿಗೆ. ಬಣ್ಣದ ಟಿ.ವಿ. ಎಲ್ಲಾ ಒಂದೊಂದಾಗಿ ಖರೀದಿಸುತ್ತಿದ್ದಳು. ಹಳದಿ ಪುಟದ ಎಲ್ಲಾ ಉದ್ಯೋಗಿಗಳ ಅಚ್ಚುಮೆಚ್ಚಿನ ಹುಡುಗಿಯಾಗಿದ್ದಳು. ವ್ಯಾಪಾರಿ ಗ್ರಾಹಕರನ್ನು ಹಳದಿ ಪುಟದಲ್ಲಿ ನೋಂದಾಯಿಸಲು ಕಷ್ಟವೇ ಇಲ್ಲದೆ ಯಶಸ್ವಿಯಾಗುತ್ತಿದ್ದಳು. ಅವಳ ಅಸ್ಥಿತ್ವದಲ್ಲಿ ಹೊಳಪಿತ್ತು. ಮುಗ್ಧತೆಯಿತ್ತು. ವೇಗವೂ ಇತ್ತು. ವೇಗಕ್ಕೆ ಸ್ಕೂಟರೂ ಸೇರಿಕೊಂಡಿತು. ಭಡ್ತಿಗಳು, ಪದವಿಯಿನ್ನೂ ಆಗಿರದಿದ್ದರೂ ಅವಳನ್ನುಹುಡುಕಿ ಹುಡುಕಿ ಬರುತ್ತಿತ್ತು. ಹಳದಿ ಪುಟ ಅವಳ ಮೂಲಕ ಅವಳಿದ್ದ ನಗರದಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಿತು. ಅದನ್ನು ಸ್ಮರಿಸಿಯೂ ಇತ್ತು. ಗೌರವಿಸಿಯೂ ಇತ್ತು. ಕೈತುಂಬಾ ಸಂಬಳವನ್ನೂ ನೀಡುತ್ತಿತ್ತು. ಈ ವಾರಂತ್ಯದಲ್ಲಿ ಅವಳ ಕಛೇರಿಯ ಎಲ್ಲರೂ ನಲ್ವತ್ತು ಮೈಲು ದೂರದ ಕಾಡಿನ ಮಧ್ಯೆ ಇರುವ ಝರಿಯೊಂದರ ಬುಡದಲ್ಲಿ ಇರುವ ಕೊಳದಲ್ಲಿ ಈಜಾಡುವ ಪ್ಲ್ಯಾನ್ ಹಾಕಿದ್ದರು. ಯುವಕ ಯುವತಿಯರ ದಂಡು ಬ್ಯಾಕ್ ಬ್ಯಾಗಿನಲ್ಲಿ, ಈಜಾಡಲಿಕ್ಕೆ ಬಟ್ಟೆ, ಕುರುಕಲು ತಿಂಡಿ, ಪಲಾವ್, ಹಸಿಹಣ್ಣು , ಒಣ ಹಣ್ಣು , ಒಂದಿಷ್ಟು ಸಿಗರೇಟು, ಬಿಯರ್, ಹಾಡು ಕೇಳಲು ಪ್ಲೇಯರು, ಸಿ.ಡಿ. ಸಕಲ ಸಿದ್ಧತೆಯೊಂದಿಗೆ ದ್ವಿಚಕ್ರಗಳಲ್ಲಿ ತಲುಪಿತ್ತು. ಹದಿಹರೆಯದ ಕೇಕೇ ಸಂಜೆಯವರೆಗೆ ಕೊಳದಲ್ಲಿ ತೇಲುತ್ತಿತ್ತು. ಬಿಸಿಲು ಆರತೊಡಗುವಾಗ ಮನೆಗೆ ಹೊರಟ್ಟಿತ್ತು. ಹಗುರವಾಗಿತ್ತು.ಖುಷಿ ಎಲ್ಲರ ಹೊಟ್ಟೆಯಲ್ಲಿ ಹೆಪ್ಪುಗಟ್ಟಿತ್ತು. ಉಸಿರಾಟದಲ್ಲಿ ಹೊಸ ರಿಚಾರ್ಜಿತ್ತು. ಹುಡುಗಿ ತಿರುವಿನ ರಸ್ತೆಯಲ್ಲಿ ಯಾಮಾರಿದಳು, ಒಂದು ಭಯಾನಕ ಚೀತ್ಕಾರದಲ್ಲಿ ಏನು ಮಾಡುವುದೆಂದು ಹೊಳೆಯದ ಹುಡುಗಿ ಎದುರಿನಿಂದ ಬಂದ ಲಾರಿಯೊಂದರ ಹಿಂದಿನ ಚಕ್ರದಡಿಯಲ್ಲಿ ಅಪ್ಪಚಿಯಾದಳು. ಸ್ಕೂಟರು ಮುದ್ದೆಯಾಗಿತ್ತು. ಲಾರಿ ನಿಲ್ಲದೆ ಓಡಿತ್ತು. ಉಳಿದ ಹಳದಿ ಪುಟ ಬಿಳಿಚಿಕೊಂಡಿತ್ತು. ಮರುದಿನ ಸಂಜೆಯವರೆಗೆ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಅಪ್ಪಚ್ಚಿಯಾಗಿದ್ದ ದೇಹ ಕೊಳೆಯತೊಡಗಿತ್ತು. ನೆರೆಮನೆಯ ಹುಡುಗರಿಬ್ಬರು ಸುದ್ಧಿ ತಿಳಿದು ರಾತ್ರಿಯೇ ವ್ಯಾನೊಂದರಲ್ಲಿ ಧಾವಿಸಿದ್ದರು. ಸರಿಯಾಗಿ ಇಪ್ಪತ್ನಾಲ್ಕು ತಾಸುಗಳ ನಂತರ ಹಳದಿ ಪುಟದವರ ನೆರವು ಪಡೆದು ಕಪ್ಪು ಪ್ಲ್ಯಾಸ್ಟಿಕ್ ಬ್ಯಾಗಿನಲ್ಲಿ ಗುರುತಿಸಲಾಗದ ಮಾಂಸದ ಮುದ್ದೆಯಾಗಿ ಬಂದಳು. ಇಬ್ಬರೂ ಯುವಕರು ಅಷ್ಟು ಹೊತ್ತು ಹೇಗೆ ಸಹಿಸಿಕೊಂಡಿದ್ದರೋ ? ಯಾರೂ ಕಾಣದ ಹಾಗೆ ದೂರ ಸರಿದು, ಯಾರಿಗೂ ಗೊತ್ತಾಗದಂತೆ, ಇಬ್ಬರೂ ಕರುಳೇ ಹೊರಬರುವ ಹಾಗೇ ಕಾರಿಕೊಂಡಿದ್ದರು. ಅವಳಮ್ಮನ ಬಾಯಿಯ ವಾಸನೆಯಂಥಹದೇ ಗಬ್ಬು, ಬ್ಯಾಗಿನ ಹತ್ತಿರವಿತ್ತು.
Comments
ಉ: ತಂಗಳು ಬದುಕಿನ ಮಳೆ