ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು

ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು

 ಈ ಅಂಕಣದಲ್ಲಿ ಸಾಹಿತ್ಯ ಲೋಕದ ಅನೇಕ ರಸಮಯ ಸನ್ನಿವೇಶಗಳನ್ನು ಸಂಪದಿಗರಲ್ಲಿ ಹಂಚಿಕೊಳ್ಳುವಾಸೆ."ಹೂ ಹಂಚಿ ಮುಡಿ ಹಣ್ಣು ಹಂಚಿ ತಿನ್ನು" ಎಂಬಂತೆ ಕಾವ್ಯಗಳನ್ನು ,ಉತ್ತಮ ಗ್ರಂಥಗಳನ್ನು ,ಸದಭಿರುಚಿಯ ಹಿನ್ನೆಲೆಯಲ್ಲಿ ಓದಿದಾಗ ನಮಗಾದ ಅನಂವನ್ನು ವೈಯುಕ್ತಿಕಕ್ಕಾಗಿ ಮೀಸಲಿಡದೇ ಸಾರ್ವತ್ರಿಕವಾಗಿ ಅನುಭವಿಸುವ ಹೆಬ್ಬಯಕೆಯೇ ಈ ಬರಹದ ಉದ್ದೇಶ.ಭಾಷೆಗಳ,ಧರ್ಮಗಳ,ದೇಶಕಾಲಗಳ ಪರಿಧಿಗೆ ಒಳಪಡದೇ,ಸಾಹಿತ್ಯದ ರಸಾಸ್ವಾದನೆಯನ್ನೇ ಮುಖ್ಯ ಧ್ಯೇಯವಾಗಿಟ್ಟು ಬರೆಯುವ ಪ್ರಯತ್ನ.

 
ನಮ್ಮೆಲ್ಲರನ್ನು ಬೆಸೆದಿರುವ ಎಕೈಕ ಸೂತ್ರ ಸಾಹಿತ್ಯವಲ್ಲವೇ ?
 
ಸಂಪದಿಗರು-ಸಂಗಡಿಗರು,ಸಂಘಟಿಸಿಹರಿಲ್ಲಿ
ಸಂಪದವನು ಸವಿಯಲೆಂದು ಬರಹಲೋಕದಲ್ಲಿ
ನನಗೆ ರಸಮಯವಾಗಿ ಕಾಣಿಸಿದ್ದನ್ನು ಹಾಳೆಗಳಲ್ಲಿ ಮೂಡಿಸುವ ಯತ್ನ.
 
ಪುರುಷನಾದರೆ ತೋರು ಪೌರುಷ ಪುರುಷೋತ್ತಮನೇ
 
ಗೋಪಿಕೆಯರ ಭಕ್ತಿಯನ್ನು ಯಾರು ತಾನೇ ಅರಿಯರು.ಆ ನಂದನಂದನನಲ್ಲಿ ಅನುರಕ್ತರಾಗಿದ್ದ ಗೋಪಿಕೆಯರಿಗೆ ಜಗತ್ತೇ ಕೃಷ್ಣನಂತೆ ಕಾಣಿಸುತ್ತಿತ್ತು.                                                                          
 
ವಿಕ್ರೇತು ಕಾಮಾಃ ಕಿಲ ಗೋಪಕನ್ಯಾಃ.....
ಗೋವಿಂದ ದಾಮೋದರ ಮಾಧವೇತಿ
 
   ಮೊಸರನ್ನು ಮಾರಲು ಹೊರಟ ಗೋಪಿಕೆಯರು ನಿಮಗೆ ಮೊಸರು ಬೇಕೇ?ಎಂದು ಕೂಗುವ ಬದಲು ಕೃಷ್ಣ ಧ್ಯಾನ ತತ್ಪರರಾಗಿ ನಿಮಗೆ ಗೋವಿಂದ ಬೇಕೆ?ದಾಮೋದರ ಬೇಕೆ?ಎಂಬುದಾಗಿ ಕೂಗುತ್ತಿದ್ದರೆ ಜನತೆ ಆಶ್ಚರ್ಯದಿಂದ ಅವರನ್ನೇ ನೋಡುತ್ತಿದ್ದಿರಬೇಕಲ್ಲವೇ?
 
  ಗೋಪಿಕೆಯೋರ್ವಳು ಕೃಷ್ಣನ ಕೈ ಹಿಡಿದಿದ್ದಾಳೆ ಕೃಷ್ಣನಾದರೋ ತುಂಟತನದಿಂದ ಬಲವಂತವಾಗಿ ಕೈಯನ್ನು ಕೊಡವಿ ತನ್ನ ಕಮಲನಯನಗಳಿಂದ ಆ ಗೊಪಿಕೆಯ ಮೇಲೆ ಮೋಹಕ ಕಟಾಕ್ಷವನ್ನು ಬೀರುತ್ತ ಹಿಂತಿರುಗಿ ನೋಡಿ ಮುಗುಳ್ನಗುತ್ತ ಓಡುತ್ತಿದ್ದಾನೆ.ಆ ಗೊಪಿಕೆಗಾದರೋ ಮಾಧವನ ಈ ತುಂಟತನವನ್ನು ನೋಡಿ ಒಂದೆಡೆ ನಗು, ಇನ್ನೊಂದೆಡೆ ನಿರಾಶೆ, ಮಗದೊಂದೆಡೆ ತಪ್ಪಿಸಿಕೊಂಡು ಓಡಿದನೆಂದು ಕೋಪ.ಮುಖದಲ್ಲಿ ಮಂದಹಾಸ ಹಾಗೂ ನಿರಾಶೆ,ರೋಷಗಳನ್ನು ವ್ಯಕ್ತಪದಿಸುತ್ತ ಗೋಪಿಕೆ ಕೃಷ್ಣನನ್ನು ಕುರಿತು ಹೇಳುತ್ತಾಳೆ.
 
ಹಸ್ತಮುತ್ಕ್ಷಿಪ್ಯ ಯಾತೋಸಿ ಬಲಾದ್ಕೃಷ್ಣ ಕಿಮದ್ಭುತಮ್
ಹೃದಯಾದ್ಯದಿ ನಿರ್ಯಾಸಿ ಪೌರುಷಂ ಗಣಯಾಮಿ ತೇ
 
ಅಬಲೆಯಾದ ನನ್ನಿಂದ ಬಲವಂತವಾಗಿ ಕೈಗಳನ್ನು ಸೆಳೆದುಕೊಂಡು ನಿರ್ಬಲಳಾದ ನನ್ನ ಮೇಲೆ ಸಬಲನಾದ ನೀನು ಜಯವನ್ನು ಸಾಧಿಸಿದೆನೆಂದು ಹೆಮ್ಮೆ ಪಡದಿರು.ಲೋಕದಲ್ಲಿ ದುರ್ಬಲರಮೇಲೆ ಪರಾಕ್ರಮಿಗಳು ವಿಜಯ ಸಾಧಿಸುವುದರಲ್ಲಿ
ಏನು ವಿಶೇಷತೆಯಿದೆ?(ಕಿಮದ್ಭುತಮ್)?
 
ನಾನಾದರೋ ನನ್ನ ಭಕ್ತಿಯ ಶಕ್ತಿಯಿಂದ ನಿನ್ನನ್ನು ನನ್ನ ಹೃದಯದಲ್ಲಿ ಬಂಧಿಸಿದ್ದೇನೆ.ನನ್ನ ಹೃದಯ ಮಂದಿರದಲ್ಲಿ ಪ್ರತಿಷ್ಠಾಪಿತನಾದ ನಿನ್ನನ್ನು ಅಲುಗಾಡಿಸಲು ಸಹ ಯಾರಿಂದಲೂ ಸಾಧ್ಯವಿಲ್ಲ.ಹೆಚ್ಚೇಕೆ ನೀನು ಗಂಡೇ ಆದಲ್ಲಿ ನನ್ನ ಹೃದಯದಿಂದ ಓಡಿಹೋಗು ನೋಡೋಣ.ಆಗ ನಿನ್ನ ಪೌರುಷವನ್ನು ನಾನು ಪರಿಗಣಿಸುತ್ತೇನೆ.
ಈ ಪ್ರಶ್ನೆಗೆ ಆ ಜಗನ್ನಿಯಾಮಕನೂ ನಿರುತ್ತರನಾದನಲ್ಲವೇ?
ಇಂತಹ ಭಕ್ತಿ,ಜಗದ್ವಿರಕ್ತಿ, ಅನುರಕ್ತಿ,ಭಗವದಾಸಕ್ತಿ,ಭಗವಂತನನ್ನೂ ಕಟ್ಟಿ ಹಾಕುವುದಲ್ಲವೇ?
 
ಈ ಗೋಪಿಕೆಯ ಸನ್ನಿವೇಶವನ್ನು ಹಿಂದಿ ಭಾಷೆಯಲ್ಲಿ ಬಹಳ ಸುಂದರವಾಗಿ ವರ್ಣಿಸಿದ್ದಾರೆ
 
ಬಾಹ್ ಛುಡಾಯಿಕೆ ಜಾತ್ ಹೈ
ನಿಬಲ ಜಾನಿಕೈ ಮೋಹಿ
ಹಿರ್ ದಯ ಸೇ ಯದಿ ಜಾವೋಗೇ
ಮರ್ದ್ ಬದೌಂಗೀ ತೋಹಿ
 
ಇದನ್ನು ಕನ್ನಡೀಕರಿಸುವ ಸಾಹಸಕ್ಕೆ(ದುಃ) ಕ್ಷಮೆಯಿರಲಿ 
 
ಅಬಲೆಯೆಂದು ನನ್ನ ಕೈಯ್ಯ ಕೊಡವಿ ಓಡುತಿರುವೆ ಹರಿಯೆ
ಸಬಲನೆಂದು ಗರ್ವಪಡೆ ಮುಕುಂದ ನ್ಯಾಯವೇ?
ಪೌರುಷವನು ಗಣಿಪೆ ಎನ್ನ ಹೃದಯದಿಂದ ಹೋಗೆನುತ್ತ
ರೊಷದಿಂದ ಹರಿಗೆ ಸವಾಲಿಡಲು ಗೋಪಿಕೆ.