ಭಕ್ತ -ಭಗವಂತ
ಕವನ
ಕಲಿಯುಗದಲೊಂದು ಕ್ಷಣ ಬ್ರಹ್ಮ ಬಯಸಿ ಸೃಷ್ಟಿಸಿದ, ಭಗವಂತನ ಭಕ್ತನೊಬ್ಬನ.
ಚಂದ್ರನ ಚಂದ, ಕಮಲದ ಕಲ್ಪ, ಹೃದಯದಲಿ ಸ್ವಾಮಿಯ ಜಪ...
ತೃಪ್ತಿಯ ನಗೆಯಿತ್ತು ತನ್ನ ಸೃಷ್ಟಿಯ ಕಂಡು.
ಬುವಿಯಲ್ಲಿ ನೆಲೆಸಿ, ಭಗವಂತನ ಸ್ಮರಿಸಿ, ಭಾಗ್ಯವಂತನಾಗೆಂದು ಹರಸಿ ಕಳುಹಿಸಿದನಿಲ್ಲಿ.
ಕಲಿಯಾಟ ಬಿಡಲಿಲ್ಲ, ಭಕ್ತನ ಬಾಳಲ್ಲಿ ಕತ್ತಲಾಗಿ ಹೋಯ್ತೆಲ್ಲ.
ಕಲಿ ನಕ್ಕು ನಿಂತಾಗ,
ನುಡಿದನಾತ - ಅಂತರಂಗದ ಬೆಳಕು ಇನ್ನು ಬತ್ತಿಲ್ಲ, ಸ್ವಾಮಿ ನಾಮವೇ ಸಾಕು,
ಅದರಿಂದಲೇ ಶಾಶ್ವತ ಶಾಂತಿ ಸುಖ ಎಲ್ಲಾ.
ಕಲಿ ಸರಿದು ನಿಂತ, ಭಕ್ತನ ಭರವಸೆಯ ನೋಡಿ.
ಬ್ರಹ್ಮ ಸಂತಸ ಪಟ್ಟ ತನ್ನ ಸೃಷ್ಟಿಯ ಸಾಕಾರ ನೋಡಿ .
ಅರೆ ಇದೇನು?
ಕಲಿ ಯಾರಿಗೆ ತಲೆ ಬಾಗಿಹನು?
ಬ್ರಹ್ಮ ಕಂಡದ್ದೇನು?
ಭಕ್ತನ ಹಿಂದೆ ಭಗವಂತ ನಿಂತಿದ್ದ .
ಭಕ್ತನ ಪ್ರಾಣ, ಜೊತೆಗೆ ಅದರೊಡೆಯ.
ಭಕ್ತ- ಭಗವಂತನ ಜೋಡಿ,
ಮಾಡಿತು ಬ್ರಹ್ಮನಿಗೂ ಮೋಡಿ.
-- ಗೀತಾ