“ಶಾಕಾಯ-ಲವಣಾಯ ಮಾಮೂಲಿ” ಶತಸಹಸ್ರ ಕೋಟಿಯಾಗುವ ಕತೆ!
ಗ್ಯಾಸ್ ಹುಡುಗನಿಗೆ ಐದು ರೂಪಾಯಿ ಎಕ್ಸ್ಟ್ರಾ ಕೊಡುವ, ಗುಡಿಸುವ ಕಾರ‍್ಮಿಕನಿಗೆ ಆಗೊಮ್ಮೆ ಈಗೊಮ್ಮೆ ಹತ್ತು-ಇಪ್ಪತ್ತು ಕೈಲಿಡುವ, ಹೊಟೆಲ್ ಬಿಲ್ ಕಟ್ಟಿದ ಮೇಲೆ ಚಿಲ್ಲರೆ ತಟ್ಟೆಯಲ್ಲಿ ಎರಡು ರೂಪಾಯಿನದೋ, ಐದು ರೂಪಾಯಿನದೋ ಬಿಲ್ಲೆ ಬಿಟ್ಟು ಎದ್ದೇಳುವ ರೂಢಿಗಳೂ, ಸಾವಿರ ಕೋಟಿ-ನೂರು ಸಾವಿರ ಕೋಟಿಗಟ್ಟಲೆ ಭ್ರಷ್ಟ ಹಣಕ್ಕೆ ಬೀಜವೇ? “ಹೌದು” ಎಂಬ ಚಿಂತನೆಯೊಂದು ಪ್ರಕಟವಾಗಿತ್ತು. ಓದಿ ಬೆಚ್ಚಿಬಿದ್ದೆ! ಇದು ನಾನು ಸಹ ದಿನ-ನಿತ್ಯ ಆಚರಿಸುವ “ಭ್ರಷ್ಟಾಚಾರ”! ನಾಳೆ ಈ ಜನ ಇನ್ನೂ ಹೆಚ್ಚಿನ ಆದರದ “ಸರ‍್ವಿಸ್” ಕೊಡಲಿ ಎಂಬ “ಹಿಡನ್’ ಉದ್ದೇಶವೂ ಇದೆಯೋ ಏನೊ; ಆದರೆ ನನ್ನ ಮೇಲ್ಮನಸ್ಸಿನಲ್ಲಿರುವುದು ಮಾನವೀಯತೆಯ ದೃಷ್ಟಿಕೋನವೇ ಎಂದುಕೊಂಡಿದ್ದೇನೆ.
ಇಂತಹ ಚಿಂತನೆ ಸಂಪೂರ್ಣವಾಗಿ ನಿಜವೇ ಅಲ್ಲ ಎಂದೆನೂ ಅಲ್ಲ; ಆದರೂ ನನಗನ್ನಿಸಿದ ಇನ್ನೂ “ನಿಜ”ವಾದ ಸತ್ಯವೆಂದರೆ ನಮ್ಮನ್ನಾಳುವ, ಪ್ರತಿನಿಧಿಸುವ ಪ್ರಜಾಪ್ರಭುಗಳು, ವಿದ್ಯೆ, ಸಂಸ್ಕಾರ ಮತ್ತು ಸಾಂಸ್ಕೃತಿಗಳಲ್ಲಿ, ಬೀದಿ ಗುಡಿಸುವ, ಹೊಟೆಲ್‌ನಲ್ಲಿ ದೊಸೆ ಸಪ್ಲೈ ಮಾಡುವ, ಗ್ಯಾಸ್ ಹೊತ್ತು ತಂದು ಹಾಕುವ ಅಣ್ಣಗಳಿಗಿಂತಾ ಎಷ್ಟೂ ಮೇಲ್ಮಟ್ಟದವರಾಗಿರುವುದಿಲ್ಲ, ಎನ್ನುವುದು!
ಬಡವ, ಮಕ್ಕಳೊಂದಿಗ ಜವಾನನೋ, ಕೆಳ ಗುಮಾಸ್ತಾನೊ ಹತ್ತಿಪ್ಪತ್ತು ಬೇಡಿದಾಗ ಅನುಕಂಪಿಸಿದರೆ ನೀವೇನೂ ಕಳಕೊಳ್ಳುವುದಿಲ್ಲ; ಸ್ವಲ್ಪ ಮೇಲ್ಮಟ್ಟದವರ ಇಪ್ಪತ್ತೈದು-ಐವತ್ತರ ಲಂಚವೂ ಸಹಿಸಿಕೊಳ್ಳಲಾರದ್ದಲ್ಲ. ನಮ್ಮ ನೈತಿಕತೆಯ ಲೂಟಿಯಾಗುತ್ತಿರುವುದು ಅನಾದಿ ಕಾಲದ ಈ “ಮಾಮೂಲಿ”ಯಿಂದಲೂ ಅಲ್ಲ. ಅದು ಸಹಸ್ರಗಟ್ಟಲೆ, ಲಕ್ಷಗಟ್ಟಲೆ ಆಗಿ ಮ್ಯಾನೆಜರು, ಚಿಕ್ಕ ಸಹೇಬರು, ದೊಡ್ಡ ಸಾಹೇಬರು, ಅತಿ ದೊಡ್ಡ ಸಾಹೇಬರ ಮುಖಾಂತರ ಮೂಲಕ ಮಂತ್ರಿ ಮಹೊದಯರ ಪದತಲದವರೆಗೂ ತಲುಪುವುದು! ಈ ಜೇನಳೆದವರು ಕೈ ನೆಕ್ಕಿಕೊಳ್ಳುತ್ತಾರೆ; ಅಲ್ಲಿ ಆ ಅವರು, ತಮ್ಮ ಮತ್ತು ತಮ್ಮವರ ಹಿತರಕ್ಷಣೆಯ ಖಾಸಗೀ ಸೇನೆಯನ್ನೂ, ಸಲಹೆಗಾರ ಹಿತಚಿಂತಕರನ್ನೂ ಇದರಿಂದಲೇ ಸಾಕಿಕೊಳ್ಳಬೇಕಾಗುತ್ತದೆ; ಅಲ್ಲದೆ ಚುನಾವಣೆಯಲ್ಲಿ ಪ್ರತಿ ವೋಟಿಗೆ ಹೂಡುವ ಬಂಡವಾಳವೇನೂ ಕಡಿಮೆ ಮೊತ್ತದ್ದಾಗಿರುವುದಿಲ್ಲ! ಇಷ್ಟಾದಮೇಲೆ ಕುದುರೆ ವ್ಯಾಪಾರ, ರೆಸಾರ್ಟ್ ವ್ಯವಹಾರ ಇತ್ಯಾದಿಗಳಿಗಾಗಿ ಪಾರ್ಟಿ ಫಂಡಿಗೂ ಲಕ್ಕಕ್ಕೆ ಸಿಗದಷ್ಟು, ಲೆಕ್ಕಕ್ಕೆ ಸಿಗದಂತೆ ವಂತಿಕೆ ಸಲ್ಲಿಸಬೇಡವೇ?!
ಈ ಪ್ರಜಾಭುತ್ವದಲ್ಲಿ, ಪ್ರಜಾಕೊಟಿಯಲ್ಲದೆ ಇದನ್ನೆಲ್ಲಾ ಇನ್ನು ಯಾರು ತಾನೇ ಭರಿಸಬೇಕು! ಹೀಗೆನ್ನುವ ತರ್ಕ, ಕೈಲಾಗದ ಹೇಡಿಗಳ ಪಲಾಯನವಾದವಲ್ಲ; ರಾಜಕಾರಣಿಗಳು ಮಾಡಿಟ್ಟಿರುವ “ಕಾಯ್ದೆಬದ್ಧ ಕರಾಮತ್ತೇ” ಆಗಿದೆ!