ಸವಿ ಸವಿ ರಂಜಲ ಹಣ್ಣು
ರಂಜಲ ಹಣ್ಣು:
ರಂಜಲು ಮರ ಎಂದರೆ ನಾವು ಚಿಕ್ಕವರಿದ್ದಾಗ ಇದು ಕೋಯ್ದ ನಂತರ ಬಾಗು ಬರುವ ಮರ, ಸೀಳು ಬರುವ ಮರ ಆದ್ದರಿಂದ ಇದು ಕೆತ್ತನೆಗಳಿಗೆ ಯೋಗ್ಯವಲ್ಲ ಎಂಬ ಕಳಂಕ ಹೊತ್ತಿದ್ದಾಗಿತ್ತು. ಆದರೆ ಡಿಸೆಂಬರ್ - ಜನವರಿ ತಿಂಗಳು ಬಂತೆಂದರೆ ಸಾಕು ಈ ಮರಗಳಿಗೆ ಮಂಗಗಳು ತುಂಬಿರುತ್ತಿದ್ದವು. ಹಾಗೆಯ ಈ ಕಾಲದಲ್ಲಿ ಮಕ್ಕಳಿಗೂ ಇದು ಅತ್ಯಂತ ಪ್ರಿಯವಾದ ಮರ. ಮಕ್ಕಳು ಶಾಲೆಗೆ ಹೋಗುವಾಗ - ಶಾಲೆಯಿಂದ ಬರುವಾಗ ಈ ರಂಜಲು ಮರಗಳ ಬಳಿ ಸುತ್ತಾಡಿ ಬರುವುದನ್ನು ನೋಡಬಹುದಾಗಿತ್ತು. ಮರದ ಸುತ್ತ ಸುತ್ತಿ ಬಂದ ಮಕ್ಕಳ ಕೈ ತುಂಬ ಹಸಿರು - ಕೇಸರಿ ಬಣ್ಣದ ಮೊಟ್ಟೆ ಚಿಪ್ಪಿನಂತಹ ಮೇಲು ಹೊದಿಕೆ ಹೊಂದಿದ ಬುಡದಲ್ಲಿ ಗುಂಡಾಗಿ ತುದಿ ಸ್ವಲ್ಪ ಚೂಪಾಗಿಯೂ ಸುಮಾರು ಹೆಬ್ಬೆರಳು ಗಾತ್ರದ ಒಳಗಡೆ ಹಳದಿ - ಕೇಸರಿ ಬಣ್ಣದ ಕಲಸಿದ ಹಿಟ್ಟಿನಂತಹ ಸ್ವಲ್ಪ ತೊಗರು - ಸಿಹಿಯಾದ ರುಚಿಯ ಗುಳ ( ಹಣ್ಣಿನ ತಿರುಳು) ವನ್ನು ಸುಮಾರು ಚಿಕ್ಕು ಹಣ್ಣಿನ ಬೀಜವನ್ನೇ ಹೋಲುವ ಬೀಜವನ್ನೇ ಹೋಲುವ ಕಂದು ಬಣ್ಣದ ಬೀಜವನ್ನು ಹೊಂದಿದ ಹಣ್ಣುಗಳನ್ನು ಸಂಗ್ರಹಿಸಿಕೊಂಡು ಅದರ ಸವಿಯನ್ನು ಸವಿಯುತ್ತಾ ಬರುವುದು ವಾಡಿಕೆ.
ಕೆಲವೊಮ್ಮೆ ಇಡಿಯಾದ ಹಣ್ಣು ಸಿಗದಿದ್ದಾಗ ಮಂಗಗಳು ಒಡೆದು ಹಾಕಿದ ಹಣ್ಣನ್ನೆ ಅವು ಕಚ್ಚಿದ ಭಾಗವನ್ನು ತೆಗೆದು ಹಾಕಿ ಉಳಿದ ಭಾಗವನ್ನು ತಿನ್ನುವುದೂ ಇತ್ತು. ಈಗಲಾದರೆ ಇವೆಲ್ಲಾ ಹೊಲಸು! ಇಸ್ಸಿ !
ಇದರ ಒಡೆದ ಮತ್ತು ಸ್ವಲ್ಪ ಒಣಗಿದ ಹಣ್ಣುಗಳಿಗಂತೂ ಎಲ್ಲಿಲ್ಲದ ರುಚಿ. ಇತ್ತೀಚೆಗೆ ಈ ಮರಗಳೂ ನಾಟಾಕ್ಕಾಗಿ ಕಡಿಯಲ್ಪಡುತ್ತಿವೆ ಹಾಗೇ "ಕಿಟಾಣು" (ಕೀಟಾಣು) ಎಂಬ ಜಾಹೀರಾತು ನೋಡಿ ಮಕ್ಕಳು, ಅಂದು ಇವುಗಳನ್ನೇ ಅರಸಿ ತಿಂದ ಪೋಷಕರು ಇದನ್ನು ತಿನ್ನದಷ್ಟು ಸೂಕ್ಷ್ಮವಾಗಿದ್ದಾರೆ. ನಾಗರೀಕರಾಗಿದ್ದಾರೆ
ಹಾಗಿದ್ದರೂ ಅಂತರಂಗದಲ್ಲಿ ತಿಂದ, ಸವಿದ ರುಚಿಯ ನೆನಪು ಮಾಸಲು ಸಾಧ್ಯನಾ?
Comments
ಉ: ಸವಿ ಸವಿ ರಂಜಲ ಹಣ್ಣು
ಉ: ಸವಿ ಸವಿ ರಂಜಲ ಹಣ್ಣು