ಕನ್ನಡ ಇರಲೆಂಬ “ಭೀಷ್ಮ ವಾಣಿ”!
ಕನ್ನಡ ನಾಡಿನಲ್ಲಿ ಕನ್ನಡ ಇರಬೇಕು ಎಂದು ಹಿಂದಿನೆಲ್ಲಾ ಸಮ್ಮೇಳನಾಧ್ಯಕ್ಷರುಗಳಂತೆ, ಹಾಲೀ ಅಧ್ಯಕ್ಷರೂ “ಭಿಷ್ಮವಾಣಿ” ಮೊಳಗಿಸಿದ್ದು (ದ್ರೊಣ, ಅರ್ಜುನ, ಅಭಿಮನ್ಯುಗಳು ಕನ್ನಡಕ್ಕಿಲ್ಲವಲ್ಲ!) ಸ್ವಾಗತಾರ್ಹ. ಆದರದು ನಿಸ್ಸಹಾಯಕವಾಗಿ, ಪ್ರತಿಕ್ರಿಯಾತ್ಮಕವಾಗಿ ಇಂಗ್ಲಿಷ್ ವಿರುದ್ಧ ಹರಿಹಾಯುವ ಅಗತ್ಯವಿರಲಿಲ್ಲ.
ನಮ್ಮದೆಂಬ ಭಾಷೆಗಿರುವ ಅದರದೇ ವಾಸನೆ, ರುಚಿಗಳನ್ನು ಕಂಡುಕೊಳ್ಳುವ, ಉಳಿಸಿಕೊಳ್ಳಲು ಹಂಬಲಿಸುವ ಉತ್ಕಟತೆಯನ್ನು ವ್ಯಾಪಕವಾಗಿ ಪ್ರಚೋದಿಸುವ ಕೆಲಸ, ನಮ್ಮಲ್ಲಿ ಹಿಂದಿಂದಲೂ ನಡೆದಿಲ್ಲ; ಇಂದಿನ ಸಮ್ಮೇಳನವೆಂಬ ಅಬ್ಬರ, ಆರ್ಭಟ ಮತ್ತು ರಾಜಕಾರಣಿಗಳ ಡೌಲಿನಲ್ಲೂ ನಡೆಯುತ್ತಿಲ್ಲ. ನಡೆದಿದ್ದರೆ, ಕನ್ನಡತನವೆಂಬುದು ಹಿಂದೆಲ್ಲಾ ಸಂಸ್ಕೃತಕ್ಕೂ, ನವೋದಯ ಯುಗದಲ್ಲಿ ಇಂಗ್ಲಿಷಿಗೂ ಈಗೀಗ ವ್ಯಾಪಾರೀ ಜನಾಂಗದ ವ್ಯಾವಹರಿಕ ಹಿಂದಿಗೂ ಅಡಿಯಾಳಾಗಿ ಮುಂದುವರೆಯಬೇಕಾದ್ದಿರಲಿಲ್ಲ!
ನೆಲದ ಮಣ್ಣಿಗೆ ಕನ್ನಡದ ಕಸುವನ್ನೂ, ಕುಡಿಯುವ ನೀರಿಗೆ ಕನ್ನಡತನವನ್ನೂ ಊಡದಿರುವುದರಿಂದಲೇ ನಾವು, ಕನ್ನಡಿರು, ಸಂಸ್ಕೃತಕ್ಕೆ ಭಕ್ತರಾಗಿ, ಇಂಗ್ಲಿಷನ್ನು ಹೀಯಾಳಿಸುತ್ತಾ, ಹಿಂದಿಯನ್ನೋ, ತಮಿಳನ್ನೊ ನೋಡಿ ಹೊಟ್ಟೆ ಉರಿದುಕೊಳ್ಳುತ್ತಾ ಬದುಕುವುದು ಅನಿವಾರ್ಯವಾಗಿರುವುದು!
ಈಗಲಾದರೂ ಮಣ್ಣಿನ ವಿಶಿಷ್ಟತೆ ಉಳಿಸಿಕೊಳ್ಳುವ ಪ್ರಾಮಾಣಿಕತೆ ಮೊಳೆತಿದ್ದರೆ, ಅದಕ್ಕೆಂದು ಕಪಟ ಹೊರಾಟದ ಆರ್ಭಟ ಕೈಬಿಡೋಣ. ಕನ್ನಡ ನಾಡಿನ ಮಕ್ಕಳು, ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಮಾತ್ರಾ ಕಲಿಯುವಂತೆ ಮಾಡೋಣ; ಇಲ್ಲದವರಿಗೆ ಕಲಿತವರೆಂಬ ಅಧೀಕೃತ ಮಾನ್ಯತೆ ನೀಡದಿರೋಣ: ಭೂಗೋಳ, ಚರಿತ್ರೆ, ಗಣಿತ ವಿಜ್ಞಾನಗಳನ್ನು ಕನ್ನಡದಲ್ಲಿ ಮತ್ರಾ ಕಲಿಯುವುದು ಅನಿವರ್ಯವಾದರೂ ಭಾಷೆ ಮತ್ತು ಸಾಹಿತ್ಯದ ಓದಿಗೆ, ಅವರವರ ಅಭಿರುಚಿ, ಅಗತ್ಯಗಳಿಗೆ ತಕ್ಕಂತೆ ಕನ್ನಡ, ಉರ್ದು, ಸಂಸ್ಕೃತ, ಇಂಗಿಷ್ಗಳಲ್ಲಿ ಅವಕಾಶ ಕಲ್ಪಿಸೋಣ!