ಆರು ವರ್ಷದ ಈ ಕಿಶೋರಿ ವಿಶ್ವದ ಅತಿ ಕಿರಿಯ ಯೋಗಶಿಕ್ಷಕಿ
ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಶಿಕ್ಷಕಿ ಎಂದು ಗಾದೆ ಹೇಳುತ್ತದೆ. ಮನೆ ಮತ್ತು ತಾಯಿಯಿಂದ ಶಿಕ್ಷಣ ಪಡೆದ ಮಗು ಸ್ವತಃ ಶಿಕ್ಷಕಿಯಾಗುವಾಗ ವರ್ಷಗಳೇ ಕಳೆದಿರುತ್ತವೆ. ಆದರೆ ಉತ್ತರ ಪ್ರದೇಶದ ಅಲಹಾಬಾದ್ ನಗರದ ಶೃತಿ ಪಾಂಡೆ ಎಂಬ ಕಿಶೋರಿ ಕೇವಲ ಆರು ವರ್ಷದ ವಯಸ್ಸಿಯಲ್ಲಿಯೇ ಯೋಗಾಭ್ಯಾಸ ತರಬೇತಿ ನೀಡುವ ಶಿಕ್ಷಕಿಯಾಗಿ ವಿಶ್ವದಾಖಲೆ ಸ್ಥಾಪಿಸಿದ್ದಾಳೆ.
ಅಲಹಾಬಾದಿನಲ್ಲಿ ಸುಮಾರು ಮೂವತೈದು ವರ್ಷಗಳ ಹಿಂದೆ 'ಸ್ವಾಮಿ ಬ್ರಹ್ಮಾನಂದ ಸರಸ್ವತಿ ಕೈವಲ್ಯ ಧಾಮ್ ಆಶ್ರಮ' ಎಂಬ ಹೆಸರಿನ ಆಶ್ರಮವನ್ನು ತೆರೆದ ಹರಿ ಚೇತನ್ ರವರೇ ಶೃತಿ ಪಾಂಡೆಯ ಶಿಕ್ಷಕರು. ಆಕೆಗೆ ಕೇವಲ ನಾಲ್ಕು ವರ್ಷ ವಯಸ್ಸಾಗಿದ್ದಾಗ ಅವಳ ಮನೆಯವರೊಂದಿಗೆ ಆಶ್ರಮದ ಬೆಳಗ್ಗಿನ ಯೋಗಾಭ್ಯಾಸದ ತರಗತಿಗಳಿಗೆ ಹಾಜರಾಗುತ್ತಿದ್ದಳು. ಕೆಲವೇ ದಿನಗಳಲ್ಲಿ ಯೋಗಾಭ್ಯಾಸದ ವಿವಿಧ ಆಸನಗಳನ್ನು ಲೀಲಾಜಾಲವಾಗಿ ಅನುಸರಿಸಲು ಕಲಿತುಕೊಂಡ ಅವಳ ಪ್ರತಿಭೆಯನ್ನು ಗಮನಿಸಿದ ಹರಿ ಚೇತನ್ ರವರು ವಿಶೇಷ ಕಾಳಜಿ ವಹಿಸಿ ಹೆಚ್ಚಿನ ತರಬೇತಿ ನೀಡಿದರು. ಕೇವಲ ಎರಡು ವರ್ಷಗಳಲ್ಲಿ ಯೋಗಾಭ್ಯಾಸದ ಬಹುತೇಕ ಆಸನಗಳನ್ನು ಕಲಿತುಕೊಂಡಿದ್ದೂ ಮಾತ್ರವಲ್ಲದೇ ಕಳೆದ ಸುಮಾರು ಆರು ತಿಂಗಳುಗಳಿಂದ ಹಿರಿಯರಿಗೂ ಯೋಗಾಭ್ಯಾಸ ಕಲಿಸುತ್ತಿದ್ದಾಳೆ. ಬೆಳಿಗ್ಗೆ ಐದೂವರೆಗೆ ಪ್ರಾರಂಭವಾಗುವ ಶೃತಿ ಪಾಂಡೆಯ ತರಗತಿಗಳಲ್ಲಿ ಹಿರಿಯರೇ ಹೆಚ್ಚಾಗಿದ್ದಾರೆ. ಅಷ್ಟೇ ಅಲ್ಲದೇ ಅತಿ ಕ್ಲಿಷ್ಟಕರವಾದ ಆಸನಗಳಿಗೆ ಕೊಂಚ ಮಾರ್ಪಾಡು ಮಾಡಿ ಹಿರಿಯರೂ ಲೀಲಾಜಾಲವಾಗಿ ಅನುಸರಿಸುವಂತೆ ಸಲಹೆ ನೀಡುವುದು ಈ ಕಿಶೋರಿಯ ಹೆಗ್ಗಳಿಕೆ. ಕೇವಲ ಕೈಗಳ ಮೇಲೆ ಇಡಿಯ ಮೈಭಾರವನ್ನು ಅಡ್ಡಲಾಗಿ ಭೂಮಿಗೆ ಸಮಾನಾಂತರವಾಗಿರುಸುವ, ಎರಡೂ ಕಾಲುಗಳನ್ನು ಹಿಂಭಾಗದಿಂದ ತಲೆಯ ಮೇಲೆ ಕೊಂಡೊಯ್ಯುವಂತಹ ಅತಿ ಕ್ಲಿಷ್ಟಕರವಾದ ಆಸನಗಳನ್ನೂ ಆಕೆ ಲೀಲಾಜಾಲವಾಗಿ ನಿಭಾಯಿಸುತ್ತಾಳೆ. ಆಕೆಯ ಉತ್ಸಾಹವನ್ನು ನೋಡಿಯೇ ಅವಳ ವಿದ್ಯಾರ್ಥಿಗಳ ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಯೋಗಾಭ್ಯಾಸದ ಮೂಲಕ ತಮ್ಮ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಸುಧಾರಿಸಿದೆ ಎಂದು ಅವರು ಮುಕ್ತಕಂಠದಿಂದ ಶೃತಿಯನ್ನು ಶ್ಲಾಘಿಸುತ್ತಾರೆ.
ಶೃತಿ ಪಾಂಡೆಯ ಮನೆಯೇ ಒಂದು ಯೋಗಾಭ್ಯಾಸ ಕೇಂದ್ರ. ಆಕೆಯ ಅಣ್ಣ ಹರ್ಷ್ ಕುಮಾರ್ ಸಹಾ ಅತ್ಯುತ್ತಮ ಯೋಗಪಟು. ಆತ ಐದು ವರ್ಷದವನಿದ್ದಾಗ ಯೋಗಾಭ್ಯಾಸದ ಎಲ್ಲಾ ಎಂಭತ್ತನಾಲ್ಕು ಆಸನಗಳನ್ನು ಸಾಧಿಸಿ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ದಾಖಲೆ ಪಡೆದಿದ್ದ. ಆದರೆ ಆತನೆಂದೂ ಯೋಗಶಿಕ್ಷಕನಾಗಲಿಲ್ಲ. ಆದರೆ ತಂಗಿಯ ಯೋಗಶಿಕ್ಷಣಕ್ಕೆ ತನ್ನ ಸಲಹೆ ಮತ್ತು ತರಬೇತಿಯನ್ನು ನೀಡುತ್ತಾ ಬಂದಿದ್ದಾನೆ. ಈಕೆಯ ಯೋಗಶಿಕ್ಷಣವನ್ನು ಗಮನಿಸಿದ 'worlds records academy' ಸಂಘಟನೆ "ವಿಶ್ವದ ಅತಿ ಕಿರಿಯ ಯೋಗಶಿಕ್ಷಕಿ' ಎಂಬ ಬಿರುದನ್ನು ಕಳೆದ ಜನವರಿ ೨೪ ರಂದು ನೀಡಿದೆ.
ಅಂದ ಹಾಗೆ ಜಗತ್ತಿನ ಅತಿ ಹಿರಿಯ ಯೋಗ ಶಿಕ್ಷಕರೆಂಬ ಹೆಗ್ಗಳಿಕೆ ಪಡೆದವರು ಮಾತ್ರ ಭಾರತೀಯರಲ್ಲ. ಆಸ್ಟ್ರೇಲಿಯಾದ ವಿಕ್ಟೋರಿಯಾ ನಗರದಲ್ಲಿರುವ ವಿಲಿಯಂಸ್ ಟೌನ್ ಯೋಗ ಸೆಂಟರ್ ನ ಯೋಗ ಶಿಕ್ಷಕರಾದ ಬೆಟ್ಟೆ ಕ್ಲಾಮನ್ (Bette Claman) ಈ ಬಿರುದು ಪಡೆದಿದ್ದಾರೆ. ಈಗಲೂ ಚಟುವಟಿಕೆಯಿಂದ ಯೋಗಶಿಕ್ಷಣವನ್ನು ನೀಡುತ್ತಿರುವ ಅವರ ವಯಸ್ಸು ಕೇವಲ 83!
- ಅರ್ಶದ್ ಹುಸೇನ್ ಎಂ.ಹೆಚ್, ಕೊಪ್ಪ.