ಪ್ರವಾದಿ
’ನಿಮ್ಮ ಮಕ್ಕಳೆಂದರೆ, ನಿಮ್ಮನ್ನು ಬಿಲ್ಲಾಗಿ ಬಳಸಿ ನಿಮ್ಮಿಂದ ಚಿಮ್ಮಿಸಿಲ್ಪಟ್ಟ ಜೀವಂತ ಬಾಣಗಳು.’
ಸ್ಯಾನ್ ಹೋಸೆ ಲೈಬ್ರರಿಯಲ್ಲಿ ಹಳೇ ಪುಸ್ತಕಗಳ ಮಾರಾಟವಿತ್ತು. ಹಿಂದೆ ಕೆಲವು ಒಳ್ಳೊಳ್ಳೆ ಪುಸ್ತಕಗಳು ತೀರ ಕಡಿಮೆ ಬೆಲೆಗೆ ಸಿಕ್ಕಿವೆ ಇಂಥ ಸೇಲುಗಳಲ್ಲಿ. ಈ ಬಾರಿ ಕೊಂಡ ಪುಸ್ತಕಗಳಲ್ಲೊಂದು ಖಲೀಲ್ ಗಿಬ್ರಾನನ ’The Prophet'. ಖಲೀಲ್ ಗಿಬ್ರಾನನ ಹೆಸರು ಕೇಳಿದ್ದೆ, ಅಲ್ಲೊಂದು ಇಲ್ಲೊಂದು ಎನ್ನುವಂತೆ ಆತನ ಪುಸ್ತಕಗಳ ಕೆಲವು ಸಾಲುಗಳನ್ನು ಎಲ್ಲೋ ಓದಿದ್ದೆ. ಮೇಲೆ ಬರೆದದ್ದು ಅಂತಹದೊಂದು ಸಾಲು. ಈ ಸಾಲು ಅದೇ ಪುಸ್ತಕದ್ದು ಎಂದು ಗೊತ್ತಿರಲಿಲ್ಲ. ಈ ಸಾಲೇ ಎಷ್ಟು ಚನ್ನಾಗಿದೆ ಅನಿಸಿತ್ತು. ಅದರ ನಂತರದ ಸಾಲುಗಳಂತೂ ಇನ್ನಷ್ಟು ಮನಸ್ಸಿನಲ್ಲುಳಿದಿವೆ. ಆ ಸಾಲುಗಳ ಜೊತೆಗೆ ಆತನೇ ಬಿಡಿಸಿದ ಚಿತ್ರವೂ ಸೆಳೆಯುತ್ತದೆ.
’ಅನಂತದ ಹಾದಿಯಲ್ಲೊಂದು ಗುರಿಯ ನೋಡುತ್ತಾನೆ ಬಿಲ್ಗಾರ. ಅವ ಬಿಡುವ ಬಾಣಗಳು ಪಡೆಯಬೇಕಾದ ವೇಗಕ್ಕಾಗಿ, ಅವು ಚಲಿಸಬೇಕಾದ ದೂರಕ್ಕಾಗಿ,ತನ್ನ ಬಲದಿಂದ ನಿಮ್ಮನ್ನು ಮಣಿಸುತ್ತಾನೆ. ಆ ಬಿಲ್ಗಾರನ ಕೈಯಲ್ಲಿ ಮಣಿಯುವದರಲ್ಲಿ ನಿಮ್ಮ ಖುಷಿಯಿರಲಿ. ಅವ ಮುನ್ನುಗ್ಗುವ ಬಾಣವನ್ನು ಪ್ರೀತಿಸುತ್ತಾನೆ, ಅದೇ ರೀತಿ ಅವ ಸುಧೃಢವಾದ ಬಿಲ್ಲನ್ನೂ ಪ್ರೀತಿಸುತ್ತಾನೆ.’
ಅಲ್ಲಿದೆ ನಮ್ಮ ಮನೆ ಇಲ್ಲಿಹೆ ಸುಮ್ಮನೆ ಎಂದುಕೊಂಡಿದ್ದಾತ ತನ್ನ ಮನೆಗೆ ಹೋಗುವ ಘಳಿಗೆ ಹತ್ತಿರ ಬಂದಿದೆ. ಕಡಲ ಮೇಲೆ ದೂರದಲ್ಲಿ ಕಂಡ ಹಡಗು ದಡ ಹತ್ತಿದೆ. ತನ್ನವರು, ತನ್ನೂರಿನವರು ತಮ್ಮೊಡನೆ ತನ್ನನ್ನು ಕರೆದೊಯ್ಯಲು ಬಂದಿರುವದನ್ನು ನೋಡಿ ಆ ಹಡಗಿನೆಡೆಗೆ ಹೊರಟಿದ್ದಾನೆ. ಹಲವು ಕಾಲದಿಂದ ಕಾಯುತ್ತಿದ್ದ ಘಳಿಗೆ, ಹೋಗುವ ಕಾತುರ ಎಲ್ಲ ಇದೆ. ಜೊತೆಗೆ ಇದ್ದ ನೆಲದ, ಜನದ ನೆನಪುಗಳೂ ಕಾಡುತ್ತಿವೆ. ಹೋಗುವ ಕಾತುರದಲ್ಲಿ ಇಲ್ಲಿನದನೆಲ್ಲ ಥಟ್ಟನೆ ಮರೆತು ಹೋಗುವದೆಂತು?
ಅವನು ಹೊರಟಿದ್ದಾನೆ ಎನ್ನುವದು ಎಲ್ಲರಿಗೂ ಗೊತ್ತಾಗಿದೆ. ಸುದ್ದಿ ಹರಡಿದೆ. ಎಲ್ಲರೂ ತಾವು ಮಾಡುತ್ತಿದ್ದ ಕೆಲಸಗಳನ್ನು ಅಲ್ಲಲ್ಲಿಯೇ, ಅಷ್ಟಷ್ಟಕ್ಕೇ ನಿಲ್ಲಿಸಿ ಹಡಗಿನೆಡೆಗೆ ಹೊರಟಿದ್ದಾರೆ. ಹಾಗೆ ಹೊರಟವರನ್ನು ಅವನೂ ಕಂಡಿದ್ದಾನೆ. ಅವರೆಲ್ಲರಿಂದ, ಅಲ್ಲಿಂದ, ಅವ ಬೇರ್ಪಡುವ ಕಾಲ, ಎಲ್ಲರೂ ಒಂದೆಡೆ ಸೇರುವ ಕಾಲವೆ? ತನ್ನ ಆ ಸಂಜೆ ನಿಜವಾಗಿಯೂ ಬೆಳಗೇ? ಅವ ಹೊರಟಿದ್ದು ಇದ್ದೂರಿನಿಂದ ತನ್ನೂರಿಗೋ ಅಥವಾ ಇಲ್ಲಿಂದ ಅಲ್ಲಿಗೋ? ಬೇರ್ಪಡುವ ಕಾಲ ಸುಗ್ಗಿಯಾಗುವದೆಂತು? ಸಂಜೆ ಬೆಳಗಾಗುವದೆಂತು? ವಸತಿಕಾರ ಹೊತ್ತಾರೆದ್ದು ಹೊರಟಂತಿದೆಯಲ್ಲ.
ಅವನೊಬ್ಬ ಪ್ರವಾದಿ. ಅವ ಹೋಗುವ ಕಾಲ ಬಂದಿದೆ. ನೆರೆದ ಜನರಿಗವನ ಬೀಳ್ಕೋಡುವ ಮನಸ್ಸಿಲ್ಲ. ಆದರೆ ಬೇರೆ ಮಾರ್ಗವಿಲ್ಲ. ಅವನನ್ನವರು ಅಪಾರವಾಗಿ ಪ್ರೀತಿಸಿದ್ದಾರೆ, ಆದರೆ ಮೌನವಾಗಿ. ಈಗ ಧ್ವನಿ ಸಿಕ್ಕಿದೆ, ತಮ್ಮ ಒಳಗನ್ನು ತೆರೆದು ನಿಂತಿದ್ದಾರೆ. ಬೇರ್ಪಡುವ ಹೊತ್ತು ಹತ್ತಿರವಾಗದ ಹೊರತು ಪ್ರೀತಿಗೂ ಅದರ ಆಳದ ಅರಿವು ಇರುವುದಿಲ್ಲ.
ಸೇರಿದವರಲ್ಲಿ ಸಂತಳೊಬ್ಬಳಿದ್ದಾಳೆ. ಅವ ಮೊದಲು ಅಲ್ಲಿಗೆ ಬಂದಾಗ ಪ್ರೀತಿಯಿಂದ ಅವನನ್ನು ಬರಮಾಡಿಕೊಂಡವಳು. ಸೇರಿದವರ ಧ್ವನಿಯಾಗಿ ಅವಳು ನುಡಿಯುತ್ತಾಳೆ. ಹೊರಡುವ ಹೊತ್ತು ಬಂದಿದೆ. ನಿಲ್ಲು ಎನ್ನುವದಿಲ್ಲ ನಾವು. ಆದರೆ ಹೊರಡುವ ಮುಂಚೆ ನಿನ್ನ ಅರಿವನ್ನು ಹಂಚಿ ಹೋಗು. ನಮ್ಮನ್ನು ನಮಗೇ ತೋರಿಸಿ ಹೋಗು. ಹುಟ್ಟು ಸಾವುಗಳ ಮಧ್ಯೆ ಇರುವದನ್ನ, ನಿನಗೇನೆಲ್ಲ ತೋರಿಸಲ್ಪಟ್ಟಿದೆಯೋ ಅದನ್ನು ಹೇಳು.
ಪ್ರೀತಿಯ ಬಗ್ಗೆ ಹೇಳುವೆಯಾ?
ನೆರೆದ ಜನರನ್ನು ನೋಡುತ್ತ ಅವ ನುಡಿಯುತ್ತಾನೆ. ಪ್ರೀತಿ ನಿಮ್ಮನ್ನು ಕೈ ಬೀಸಿ ಕರೆದಾಗ ಅದನ್ನು ಹಿಂಬಾಲಿಸಿ, ಅದರ ಹಾದಿ ದುರ್ಗಮವಾಗಿದ್ದರೂ. ಪ್ರೀತಿ ನಿಮಗೆ ಕಲಶವಿಡಬಹುದು, ಹಾಗೇ ಶಿಲುಬೆಗೂ ಏರಿಸಬಲ್ಲದು. ನಿಮ್ಮ ಎತ್ತರಕ್ಕೇರಿ ನಿಮ್ಮ ರೆಂಬೆ ಕೊಂಬೆಗಳನ್ನು ಸ್ಪರ್ಶಿಸಬಲ್ಲದು, ಅಂತೇ ನಿಮ್ಮ ಬೇರುಗಳಿಗಿಳಿದು ಅವನ್ನಲ್ಲಾಡಿಸಲೂ ಬಹುದು.
ಕಾಳುಗಳ ತೆನೆಗಳಂತೆ ನಿಮ್ಮನ್ನದು ಎತ್ತಿಕೊಳ್ಳುತ್ತದೆ.
ತೆನೆ ಬಡಿದು ಕಾಳು ಬಿಡಿಸುತ್ತದೆ.
ಹೊಟ್ಟ ಬೇರ್ಪಡಿಸುತ್ತದೆ.
ಬೀಸಿ ಬಿಳಿಯಾಗಿಸುತ್ತದೆ.
ಮತ್ತೆ ನಾದಿ ನಾದಿ ಮೆತ್ತಗಾಗಿಸುತ್ತದೆ.
ಅಲ್ಲಿಂದ ಮುಂದೆ ತನ್ನ ಪವಿತ್ರಾಗ್ನಿಯಲ್ಲಿ ಬೇಯಿಸುತ್ತದೆ; ಆ ದೇವನ ಪವಿತ್ರ ಔತಣದಿ ಅರ್ಪಿತವಾಗುವ ಪವಿತ್ರ ರೊಟ್ಟಿಯಾಗಲಿ ಎಂದು. ಇಷ್ಟೆಲ್ಲ ಕಷ್ಟವೇಕೆ? ನಿಮ್ಮ ಎದೆಯಾಳದ ರಹಸ್ಯಗಳನ್ನು ನೀವು ತಿಳಿದೊಳ್ಳಲಿ ಎಂದು. ಅದರ ಅರಿವಿನಲ್ಲಿ ಪರಮಾತ್ಮನ ತುಣುಕಾಗಲಿ ಎಂದು.
ಮತ್ತೊಬ್ಬರಿಂದ ಮತ್ತೊಂದು ಪ್ರಶ್ನೆ, ಅವನ ಉತ್ತರ. ಪ್ರಶ್ನೋತ್ತರಗಳ ಸರಣಿ ಸಾಗುತ್ತದೆ.
ಇವತ್ತಿಗಿಷ್ಟು. ಸಾಗುವ ಪ್ರಶ್ನೋತ್ತರಗಳ ಸರಣಿಯನ್ನು ನಿಧಾನವಾಗಿ ಓದಿಕೊಂಡಂತೆ ತಿಳಿದಷ್ಟು, ಮನಸ್ಸಿನಲ್ಲಿ ಉಳಿದಷ್ಟು ಬರೆಯುವೆ...
Comments
ಉ: ಪ್ರವಾದಿ