ತಂಗಳು ಬದುಕಿನ ಮಳೆ
ಆಕೆಗೆ ಸ್ನೇಹಿತರೇ ಇರಲಿಲ್ಲ. ಚೂಪು ಮೂತಿಯ ಇಲಿಯ ಹಾಗೇ ಅವಳ ಮುಖವಿತ್ತು. ಸರಕಾರಿ ಶಾಲೆಗೆ ಪಾಠ ಕಲಿಯಲು ಹೋಗುತ್ತಿದ್ದಳು. ದಡ್ಡಿಯೆಂದರೆ ದಡ್ಡಿ. ಸಿಂಬಳ ಅವಳ ಮೂಗಿನಲ್ಲಿ ಹೆಪ್ಪುಗಟ್ಟಿರುತ್ತಿತ್ತು. ಸುರಿಯುವ ಸಿಂಬಳ ಒರೆಸಿಕೊಳ್ಳುವ ಗೋಜಿಗೆ ಅವಳು ಹೋಗುತ್ತಿರಲಿಲ್ಲ. ಯಾರೋ ಧರಿಸಿ ದಾನ ಮಾಡಿದ ಬಣ್ಣ ಕಳೆದುಕೊಂಡ ಕೊಳೆಯಾದ ಮಾಸಲು ಬಟ್ಟೆ ಧರಿಸುತ್ತಿದ್ದಳು. ಸ್ಲೇಟು ಒಡೆದು ಹೋಗಿತ್ತು. ಒಂದನೇ ತರಗತಿಯಲ್ಲಿ ಎರಡು ವರ್ಷ ಅಭ್ಯಾಸ ಮಾಡಿದರೂ ಅವಳು ಅಕ್ಷರಗಳನ್ನು, ಅಂಕೆಗಳನ್ನು, ಗುರುತಿಸಿ ಉಚ್ಚರಿಸಲು ಪ್ರಯಾಸ ಪಡುತ್ತಿದ್ದಳು. ಹರಿದ ಖಾಕಿ ಬಣ್ಣದ ಚೀಲದಲ್ಲಿ ಸ್ಲೇಟು ಇರುತ್ತಿತ್ತು. ಯಾರೋ ಬಳಸಿ ದಾನ ನೀಡಿದ ಪಠ್ಯ ಪುಸ್ತಕವೂ ಇರುತ್ತಿತ್ತು. ಒಂದು ರಾಶಿ ತುಂಡು ತುಂಡಾದ ಕಡ್ಡಿಗಳು, ಅವಳ ಬೆರಳಿನ ಗಾತ್ರದ ಪೆನ್ಸಿಲುಗಳು ಒಂದು ಚಪ್ಪಟೆ ಡಬ್ಬದಲ್ಲಿ ಸಂಗ್ರಹಿಸಿದ್ದಳು, ಅದನ್ನೂ ಅವಳು ಚೀಲದಲ್ಲಿ ತುರುಕಿ ಇಡುತ್ತಿದ್ದಳು. ನಡೆಯುವಾಗ ಡಬ್ಬ ಗಿಜಿಗಿಜಿ ಶಬ್ದ ಮಾಡುತ್ತಿತ್ತು. ಕುಮುಟು ವಾಸನೆ ಅವಳ ಪರಮ ಸಂಗಾತಿ. ಅವಳು ಯಾರ ಬಳಿಯೂ ಮಾತು ಆಡುತ್ತಿರಲಿಲ್ಲ. ಮಾತನಾಡಿಸಿದರೆ ಉಗ್ಗುತ್ತಿದ್ದಳು. ಅವಳೇನು ಮಾತನಾಡಿದಳು ಎಂಬುದು ಗೊತ್ತಾಗುತ್ತಿರಲಿಲ್ಲ. ಹಾಗಗೀ ಯಾರು ಅವಳನ್ನು ಮಾತನಾಡಿಸುತ್ತಲೇ ಇರಲಿಲ್ಲ. ಎಷ್ಟು ಗದರಿಸಿದರೂ ಅವಳಿಗೆ ನಾಟುತ್ತಲೇ ಇರಲಿಲ್ಲ. ಅಕ್ಷರಗಳು, ಅಂಕೆಗಳು ಕೂಡ ಅವಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಹಾಗಾಗಿ ಟೀಚರುಗಳೂ ಅವಳ ಇರುವಿಕೆಯನ್ನೇ ಮರೆತ್ತಿದ್ದರು. ಆಟ ಅವಳಿಗೇ ಇಷ್ಟವಿರಲಿಲ್ಲ. ಉಳಿದವರು ಆಡುವುದನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಾ ಕುಳಿತಿರುತ್ತಿದ್ದಳು. ಅವಳು ಮತ್ತು ಅವಳಮ್ಮ ಗ್ಯಾರೇಜ್ ಒಂದರ ಹಿಂಬದಿಯಲ್ಲಿ ಹಲಗೆ ತಗಡು ಜೋಡಿಸಿದ ಕೋಣೆಯಂಥಹ ಗೂಡಿನಲ್ಲಿ ವಾಸಿಸುತ್ತಿದ್ದರು. ಮೂತ್ರದ ಮೂರಿ ಸದಾ ಅಲ್ಲಿರುತ್ತಿತ್ತು.ಯಾರೂ ಅವರ ಗೋಜಿಗೆ ಹೋಗುತ್ತಿರಲಿಲ್ಲ. ಅವಳಮ್ಮ ಮೂರು ನಾಲ್ಕು ಮನೆಯ ಬಟ್ಟೆ ಒಗೆಯುವ, ಕಸಗುಡಿಸಿ, ನೆಲಒರೆಸುವ ಕೆಲಸ ಮಾಡುತ್ತಿದ್ದಳು. ವಯಸ್ಸಾಗದಿದ್ದರೂ ಗೂರಲು ರೋಗ, ಪೌಷ್ಟಿಕ ಆಹಾರದ ಕೊರತೆಯಿಂದ ಮಾಸಿ ಮಂಕಾಗಿ ಮುದುಕಿಯ ಹಾಗೇ ಒಣಗಿ ಹೋಗಿದ್ದಳು. ಭವಿಷ್ಯವೇ ಇಲ್ಲದ ಪೇಲವ ಮುಖ ಅವಳದಾಗಿತ್ತು. ಕೆಲಸ ಮುಗಿಸಿ ರಾತ್ರಿ ಮಲಗುವ ಮುನ್ನ ಅವಳು ಹೆಕ್ಕಿ ಇಟ್ಟುಕೊಂಡ, ಯಾರೋ ಸೇದಿ ಎಸೆದ ಮೋಟು ಬೀಡಿ, ಸಿಗರೇಟುಗಳ ಎರಡು ಮೂರು ತುಣುಕುಗಳನ್ನು ಸೇದುತ್ತಿದ್ದಳು. ಸುಮಾರು ಹೊತ್ತು ಕೆಮ್ಮಿ ಕೆಮ್ಮಿ ಸಗಣಿ ಸಾರಿಸಿದ ಮಣ್ಣಿನ ನೆಲದಲ್ಲಿ ಮಗಳನ್ನು ತಬ್ಬಿಕೊಂಡು ಮಲಗುತ್ತಿದ್ದಳು. ಭಾನುವಾರದ ರಾತ್ರಿ ಬೇಗ ಮನೆಗೆ ಬಂದು ಮೂರು ನಾಲ್ಕು ಬಿಂದಿಗೆ ನೀರನ್ನು ಸುಮಾರು ದೂರದಲ್ಲಿದ್ದ ಸರಕಾರಿ ನಲ್ಲಿಯಿಂದ ಹಿಡಿದು ತರುತ್ತಿದ್ದಳು. ಗ್ಯಾರೇಜು ಭಾನುವಾರ ಮುಚ್ಚಿರುತ್ತಿತ್ತು. ಮಗಳನ್ನು ಕತ್ತಲಿನ ಮರೆಯಲ್ಲಿ ನಿಲ್ಲಿಸಿ, ಸೀರೆಯುಟ್ಟಿರುವ ಹಾಗೇ ಸ್ನಾನ ಮಾಡಿಕೊಳ್ಳುತ್ತಿದ್ದಳು. ಮಗಳನ್ನೂ ಮೀಯಿಸುತ್ತಿದ್ದಳು. ಚೂಪು ಇಲಿಯ ಮೂತಿಯ ಮಗಳ ಮುಖದಿಂದ ಸಿಂಬಳ ಸೀಟಿ ತೆಗೆಯುತ್ತಿದ್ದಳು. ಬದುಕು ಗುಟುಕು ಗುಟುಕಿನಲ್ಲಿ ಮುಂದುವರಿಯುತ್ತಿತ್ತು. ಒಂದನೇ ತರಗತಿಯಲ್ಲಿ ಎರಡು ವರ್ಷ, ಎರಡನೇ ತರಗತಿಯಲ್ಲಿ ಎರಡು ವರ್ಷ, ಹೀಗೇ ಪ್ರತೀವರ್ಷ ಅವಳ ಓದು ಕುಂಟುತ್ತಾ ಕುರುಡಾಗುತ್ತಾ ಸಾಗಿ, ಐದನೇ ತರಗತಿಯ ನಂತರ ಸಾಧ್ಯವೇ ಇಲ್ಲದ ಹಾಗೇ ಮುಗ್ಗರಿಸಿತು. ಅವಳು ಶಾಲೇ ಬಿಟ್ಟಳು. ಅಮ್ಮನ ಜೊತೆಯಲ್ಲಿ ಕೆಲಸದ ಮನೆಯಲ್ಲಿ ಪಾತ್ರೆ ತಿಕ್ಕುವ, ಕಸ ಗುಡಿಸುವ ಕೆಲಸದಲ್ಲಿ ಸಹಾಯ ಮಾಡತೊಡಗಿದಳು. ಸ್ವಲ್ಪ ದಿನಗಳಷ್ಟೇ ಆಗಿತ್ತು. ಅವಳು ಇದ್ದಕ್ಕಿದ್ದ ಹಾಗೇ ಮಾಯವಾದಳು. ಅವಳಮ್ಮ ಅವಳು ಮಾಯವಾದ ದಿನ ಹತ್ತು ಹನ್ನೆರಡು ಬೀಡಿ, ಸಿಗರೇಟಿನ ತುಣುಕು ಸೇದಿದ್ದಳು. ಸೇದುತ್ತಾ ಕೆಮ್ಮುತ್ತಲೂ ಇದ್ದಳು. ಅವಳ ಕಣ್ಣಿನಲ್ಲಿ ಎರಡು ಹನಿ ದಪ್ಪದ ಕಣ್ಣೀರು ಹರಿದಿತ್ತು. ಕೆಮ್ಮಿದ್ದಕ್ಕೆ ಇದ್ದರೂ ಇರಬಹುದಿತ್ತು, ಮಗಳು ಇಲ್ಲದ ಶೂನ್ಯಕ್ಕೂ ಇರಬಹುದಾಗಿತ್ತು. ಕೆಲಸದ ಮನೆಯಲ್ಲಿಯಾಗಲೀ, ಗ್ಯಾರೇಜು ಬಾಗಿಲಿನಲ್ಲಿಯಾಗಲೀ ಗುಲ್ಲಾಗಲೇ ಇಲ್ಲ. ಆ ಹುಡುಗಿ ಅಸ್ಥಿತ್ವದಲ್ಲಿ ಇರುವ ಬಗ್ಗೇ ಅವರಾರಿಗೂ ಗಮನವೇ ಇರಲಿಲ್ಲ. ಅದರ ನಂತರ ನಾಲ್ಕು ವರ್ಷ ಬಿಟ್ಟು, ಸಂಜೆಯಾಗುವಾಗ ಬಂದಳು. ಭಾನುವಾರವಾಗಿತ್ತು. ಅವಳು ಹೊಳೆಯುವ ಜರೀ ಅಂಚಿರುವ ಹಸಿರು ಬಣ್ಣದ ಸೀರೆಯಲ್ಲಿದ್ದಳು. ಮುಡಿತುಂಬಾ ಹೂ ಮುಡಿದಿದ್ದಳು. ಸಪೂರದ ಚಿನ್ನದ ಸರವೂ, ಕೈಗಳಲ್ಲಿ ಘಲ್ ಘಲ್ ಅನ್ನುತ್ತಿದ್ದ ಹಸಿರು ಬಳೆಗಳು ಚಿನ್ನದ ಎರಡೆರಡು ಬಳೆಗಳ ನಡುವೆ ಹೊಳೆಯುತ್ತಿದ್ದವು. ಅವಳು ವರ್ಷ ತುಂಬಿರುವ ಗಂಡು ಮಗುವನ್ನು ತಂದಿದ್ದಳು. ಸಣ್ಣದೊಂದು ಬ್ಯಾಗು ಹೆಗಲಲ್ಲಿತ್ತು. ಇನ್ನೊಮ್ಮೆ ನೋಡುವ ಅನಿಸುವಷ್ಟು ಸುಂದರಳಾಗಿದ್ದಳು. ಅಮ್ಮ ಮಗಳು ತುಂಬಾ ಹೊತ್ತು ಮಾತನಾಡಿದರು. ಅವಳೀಗ ಉಗ್ಗುತ್ತಿರಲಿಲ್ಲ.ಅದ್ಭುತವಾದದ್ದೊಂದು ಆಗಿತ್ತು. ಆ ದಿನ ರಾತ್ರಿಯೇ ಅವಳು ಅಮ್ಮನನ್ನು ಸ್ನಾನ ಮಾಡಿಸಿ, ಅವಳೇ ತಂದಿದ್ದ ಹೊಸ, ಶುಭ್ರವಾದ, ಕೆಂಪು ಬಣ್ಣದ ಚೌಕುಳಿ ಸೀರೆ ಉಡಿಸಿ, ಗ್ಯಾರೇಜಿನ ಹಿಂದಿನ ಜೋಪಡಿಯ ತಗಡು ಬಾಗಿಲನ್ನು ಎಳೆದು, ರಾತ್ರಿಯ ಬಸ್ಸಿನಲ್ಲಿ ಕರೆದುಕೊಂಡು ಹೋದಳು. ಅವಳಮ್ಮನಿಗೆ ಆ ದಿನ ರಾತ್ರಿ ಮೋಟು ಬೀಡಿ ಎಳೆಯದಿರುವುದಕ್ಕೆ ಸುಮಾರು ಹೊತ್ತು ಚಡಪಡಿಕೆಯಾಗಿತ್ತು. ಬಸ್ಸಿನ ಕಿಟಕಿಯಿಂದ ಬೀಸಿ ಬರುತ್ತಿದ್ದ ತಂಗಾಳಿಗೆ ಕಣ್ಣು ಮುಚ್ಚಿ ನಿದ್ದೆ ಬಂದಿತ್ತು. ಸೋತ ಜೀವ ಮಗಳ ಭುಜಕ್ಕೆ ತಲೆಯಾನಿಸಿ ನಿದ್ದೆ ಹೋಗಿತ್ತು. ಮೈ ಕೈ ತುಂಬಿ ಕೊಂಡು ಸುಂದರವಾಗಿದ್ದ ಅವಳ ಮಗು ಅವಳ ತೊಡೆಯಲ್ಲಿ ಕನವರಿಸುತ್ತಾ ನಕ್ಕಿತ್ತು