ಹೊತ್ತು ಸಾಗುತಿರೆ
ಕವನ
ಹೊತ್ತು ಸಾಗುತಿರೆ ಸತ್ತ ದೇಹ
ಅದು ನಕ್ಕ೦ತಾಯಿತು,ನಮ್ಮ ನೋಡಿ ||
ಇಂದು ನಾನು ಮಗದೊಮ್ಮ ನೀನು
ಅವ ಕರೆವ ಮುನ್ನ ಗುರಿ ಸಿಗುವುದೇನು?
ಯಶವೆ೦ದರೇನು? ಸಾಧನೆಗಳೇನು?
ನಿನ್ನತನವೆ ಕಳೆದ ನೀ ವಿಜಯಿಯೇನು? |1|
ಕಳೆದ ಭೂತ, ಬರದ ಭವಿಷ್ಯದ
ಯೋಚನೆಯಲೇ ದಿನ ಕಳೆವೆ ನೀನು
ಕಷ್ಟಗಳ್ಯಾರಿಗಿಲ್ಲ? ಬೇವೊಡನೆ ಬೆಲ್ಲ
ಅವಗುಣವ ಮರೆತು, ಜನರೊಡನೆ ಬೆರೆತು
ನಿನ್ನಿ೦ದ ನಕ್ಕರೆ ನಾಲ್ವರು
ಸಂಕಷ್ಟದಲೂ ನಿನ್ನ ಪೊರೆವರು |2|
ಇ೦ದು ಸಮಯ ಕಡಿಮೆ, ಅನವರತ ದುಡಿಮೆ
ನಿನ್ನ ಸುಖವೆ ಪರಮ ಗುರಿಯಾದರೆ
ನಿನ್ನ ಹೆತ್ತು ಹೊತ್ತ, ನೀಡೊ೦ದ ಮುತ್ತ
ನಿನ್ನ ಸುತ್ತ ಮುತ್ತ ತಮ್ಮ ಸಮಯವಿತ್ತ
ಏಳಿಗೆಗೆ ಕಾರಣರ ಮರೆತರೆ
ನೀನೆರಿದ ಏಣಿಯನೊದ್ದರೆ
ಬರುವುದೂ ನಿನಗು ನನ್ನಂತ ಗತಿಯೆ
ಎ೦ದತ್ತಂತಾಯಿತು ನನ್ನ ನೋಡಿ |3|
ಮಿ೦ಚಿಲ್ಲ ಕಾಲ, ತಿಳಿದಿಹುದು ನೋಡ
ಜಯವೊ೦ದು ಪಯಣ, ಗುರಿಯೇ ಅದಲ್ಲ
ಪ್ರತಿ ಕ್ಷಣವು ಸುಖವು, ಎಲ್ಲೆಲ್ಲು ನಗುವು
ನಿನ ಸುತ್ತಲಿದೆ ಕಣ್ತೆರೆದು ನೋಡು
ಇರುವಷ್ಟು ದಿನವು ಸಾರ್ಥಕತೆ ಕಾಣು
ಎಂದು ಹರಸಿತೇ ನನ್ನ ನೋಡಿ? |4|