ಬಚ್ಚಿಡಲು ಬರುವುದಿಲ್ಲ...

ಬಚ್ಚಿಡಲು ಬರುವುದಿಲ್ಲ...

ಕವನ

ಬಚ್ಚಿಡಲು ಬರುವುದಿಲ್ಲ ನನಗೆ

ಹಳೆಯ ಕಹಿ ನೆನಪುಗಳ

ಮನದ ಕೋಣೆಗೆ ಸದ್ದಿಲ್ಲದೆ

ಬರುವ ಆ ಕೆಟ್ಟ ಕನಸುಗಳ...

 

ಮುಚ್ಚಿಡಲು ಬರುವುದಿಲ್ಲ

ಒತ್ತರಿಸುವ ಕಂಬನಿಯ

ಕಷ್ಟಗಳ ಸರಮಾಲೆಗಳ ನಡುವೆ

ಬರುವ ಇಷ್ಟಗಳ ಸಿಂಚನವ....

 

ಸುಮ್ಮನಿರುವುದಿಲ್ಲ ಮನಸು

ಇಂದು ನಾಳಿನ ಚಿಂತೆಯಲಿ

ವರ್ತಮಾನದ ಬೇಗುದಿಯಿದೆ

ಉಸಿರಾಡುವ ಜೀವದಲಿ

 

 

ಮರೆಯಲಾಗುವುದಿಲ್ಲ ಅತ್ತರೂ

ನೋವು ನಲಿವಿನ ದಿನಗಳ

ತೊರೆದು ಹೋಗಲಾರೆನು ಬದುಕು

ನಾನಷ್ಟು ಹೇಡಿಯಲ್ಲ!

 

ಸೋಲುವುದಿಲ್ಲ...ದೂರುವುದಿಲ್ಲ

ಯಾರು ಏನೇ ಬಗೆದರೂ

ಈ ಕ್ಷಣವು ಕ್ಷಣಿಕ ಎನ್ನುತಿರೆ ಮನ

ಮತ್ತೆ ನಡೆವೆನು ಹೊಸ ಛಲದಲಿ.

Comments