ಮಾನಸ ಮೇಘ
ಕವನ
ಹಾವಾಗಿ ಸುಳಿದಿದ್ದೆ ಕ್ಷಿತಿಜದಲ್ಲಿ,
ಮರುಗಳಿಗೆಯೆ ಗರುಡನಾಗಿ ಆವರಿಸಿದೆ ಬಾ೦ದಳದಲ್ಲಿ,
ನಾನ್ ಪಡೆದಿದ್ದೇ ಅಕಾರ,
ಕಾಣಿಸಿದ್ದೇ ರೂಪ,
ನಾನು ಅಮೋಘ, ಮೇಘ.
ತೇಲುವೆನು ತರುಣರ ಹೊ೦ಗನಸಿನ
ರಾಜಕುಮಾರಿಯ ಹೊತ್ತು,
ಧರಣಿಯ ಒಡಲಿಗೂ ಕೊಡುವೆನು ಮುತ್ತು.
ಈ ಕ್ಷಣ ಇಲ್ಲಿ ಕ೦ಡನೆ೦ದು,
ಅಲ್ಲೇ ಇರುವವನಲ್ಲ,
ನನ್ನ ಕಾಯಕವೇ ಅ೦ಥದು -
ಮಲೆ ಮಲೆ ಅಲೆತ.
ಭಾರವಾದುದು ನನ್ನೊಳಗೂ ಇತ್ತು.
ಒಮ್ಮೆ, ಅನ್ಯರೇನೆ೦ಬುವರೆ೦ಬ
ಗೊಡವೆಗೆಡೆಗೊಡದೇ, ಧೋ..! ಎ೦ದು
ಮೈಛಳಿ ಬಿಟ್ಟು ಸುರಿದು ಬಿಟ್ಟೆ.
ಅ೦ದಿನಿ೦ದ ನಾನು ಪಾರದರ್ಶಕ,
ಅರಳೆಗಿ೦ತ ಹಗುರ.