“ತಾಯ್ ಚೀ” ಇರಲಿ...“ಎರ್ ನಾಯ್” ಬೇಡ
“ತಾಯ್ ಚೀ” ಬಗ್ಗೆ ಹೇಳುವುದೇನೂ ಬೇಡವಲ್ಲ? ಚೀನಾದ ಅಥವಾ ಇಂಪೋರ್ಟೆಡ್ ವ್ಯಾಮೋಹಕ್ಕೆ ಬಿದ್ದ ಭಾರತೀಯರು ನಮ್ಮದೇ ಆದ ಯೋಗಾಸನವನ್ನು ನಿರ್ಲಕ್ಷಿಸಿ ತಾಯ್ ಚೀ ಕಲಿಯುತ್ತಿದ್ದಾರಂತೆ. ಚೀನಾದ ಅಲಾರಂ ಗಡಿಯಾರ, ಮಕ್ಕಳ ಆಟಿಕೆ ಮಾತ್ರ ಏಕೆ ಅವರ ಸಾಮಾಜಿಕ ಅಭ್ಯಾಸಗಳೂ ಇರಲಿ ಎನ್ನುವ ಧೋರಣೆ ಇರಬಹುದು ಚೀನಾದ ಈ ವ್ಯಾಯಮದ ಕುರಿತ ಆಸಕ್ತಿಯ ಹಿಂದೆ. ಇರಲಿ ಬಿಡಿ, ‘ತಾಯ್ ಚಿ’ ಶರೀರದ ಆರೋಗ್ಯಕ್ಕೆ ಒಳ್ಳೆಯದೇ, ಆದರೆ, ಎರ್ ನಾಯ್ ಮಾತ್ರ ಶರೀರಕ್ಕೆ ಒಳ್ಳೆಯದಾದರೂ, ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ ಎನ್ನುವುದಂತೂ ನಿಜವೇ.
ಅಲ್ರೀ, ಏನೀ ‘ಎರ್ ನಾಯ್’?
‘ಎರ್ ನಾಯ್’ ಎಂದರೆ ಚೀನೀ ಭಾಷೆಯಲ್ಲಿ “ಎರಡನೇ ಹೆಂಡತಿ” ಅಂತ. ಚೀನೀ ಸಮಾಜ ಇದನ್ನು ಒಪ್ಪದಿದ್ದರೂ ಬಹುತೇಕ, ಮೊದಲ ಪತ್ನಿಯರೂ ಸೇರಿ, ಚೀನೀಯರು ಇದರ ವಿರುದ್ಧ ದೊಡ್ಡ ಸ್ವರ ಎತ್ತದೆ ಕಂಡೂ ಕಾಣದಂತೆ ತಮ್ಮ ದೃಷ್ಟಿಯನ್ನು ಬೇರೆಡೆ ನೆಡುತ್ತಾರೆ. “ಎರ್ ನಾಯ್” ಯನ್ನು ಸಾಕುವುದು ಒಂದು ರೀತಿಯ ಪ್ರತಿಷ್ಠೆ ಚೀನಾದಲ್ಲಿ. ಮೇಲ್ಮಧ್ಯಮ ವರ್ಗದ ಗಂಡಸರು ಕಾಸು ಹೆಚ್ಚಿದ್ದರೆ ಈ ಸೌಲಭ್ಯ ಹೊಂದಿರುತ್ತಾರೆ. “ಎರ್ ನಾಯ್” ಗಳು ಅವಸರದಿಂದ ಹೆಕ್ಕಲ್ಪಟ್ಟ ಅಂತಿಂಥ ಸ್ತ್ರೀಯರಲ್ಲ. ಇವರು ಸುಶಿಕ್ಷಿತರೂ, ಆಧುನಿಕ ಮನೋಭಾವದವರೂ ಆದ ಚೆಂದುಳ್ಳಿ ಹೆಣ್ಣುಗಳು. ಇವರ ಉಪಯೋಗ ಬರೀ “ವೀಕೆಂಡ್” ಗಾಗಿಯೋ ಅಥವಾ boredom ಕಳೆಯಲಿಕ್ಕೋ ಅಲ್ಲ. ಇವರು ತಮ್ಮ ಪುರುಷರೊಂದಿಗೆ business meeting ಗಳಲ್ಲಿ ಪಾಲುಗೊಳ್ಳುತ್ತಾರೆ. ಇವರನ್ನು ನೋಡಿ business partner ಗಳು ಪ್ರಭಾವಿತರಾಗುತ್ತಾರೆ. ಗಟ್ಟಿ ಕುಳ ಎಂದುಕೊಳ್ಳುತ್ತಾರೆ. ಒಂದು ರೀತಿಯ ಷೋ ಪೀಸು. ಕೆಲವರು louis vuitton ಬ್ರೀಫ್ ಕೇಸು, “ಗುಚ್ಚಿ” ಪರ್ಫ್ಯೂಮು, “ಫ್ಲೋರ್ ಶೈಮ್” ಶೂ ಹಾಕಿಕೊಂಡು ಕ್ಲಯಂಟ್ ಗಳನ್ನು ಇಂಪ್ರೆಸ್ಸ್ ಮಾಡಲು ಹೊರಟರೆ ಇವರದು ಬೇರೆಯದೇ ಆದ ವಿಧಾನ. ತಮ್ಮ ಮಡದಿಯರ ಉದರಕ್ಕೆ ಬೆಂಕಿ ಹಾಕಿ ಇಂಪ್ರೆಸ್ ಮಾಡೋ ವಿಧಾನ.
ವಿವಾಹದ ಬಗ್ಗೆ ಚೀನಿಯರದು ಟೇಕ್ ಇಟ್ ಈಜಿ attitude. ರೋಷದಿಂದ ಸಂಪತ್ತಿನ ಹಿಂದೆ ಬಿದ್ದ ಪರಿಣಾಮವಿರಬೇಕು. ಒಬ್ಬ ಪಾಶ್ಯಾತ್ಯ ವ್ಯಕ್ತಿಯ ಪ್ರಕಾರ ಇಲ್ಲಿ ಚೀನಾದಲ್ಲಿ ವಿವಾಹ ಎನ್ನುವುದು ಎರಡು ಹೃದಯಗಳ ಬೆಸುಗೆ ಅಲ್ಲ. ಒಂದು ರೀತಿಯ ಎರಡು ಕುಟುಂಬಗಳ ಮಧ್ಯೆಯ ಒಪ್ಪಂದ. ಅದರ ಮೇಲೆ ಬೇರೆ ದೇಶಗಳ ರೀತಿ ಚೀನಾದಲ್ಲಿ ಮಾನವೀಯ ಕ್ರಾಂತಿ (humanist revolution) ಆಗಿಲ್ಲವಂತೆ. ಹಾಗಾಗಿ ವಿವಾಹ ತಲೆ ಕೆಡಿಸಿ ಕೊಳ್ಳುವಂಥ ವ್ಯವಸ್ಥೆಯಲ್ಲ. ವ್ಯವಸ್ಥೆ ಹೀಗಿರುವಾಗ ಜಾಣ, ಚೆಂದುಳ್ಳಿ ಹೆಣ್ಣುಗಳು “ಎರ್ ನಾಯ್” ಪಟ್ಟಕ್ಕೆ ಮೋಹಿತರಾಗುತ್ತಾರೆ. ಇರುವವನು ತಾನೇ ಈ ರೀತಿಯ ಎರಡನೇ ಹೆಣ್ಣನ್ನು ಇಟ್ಟು ಕೊಳ್ಳಲು ಸಾಧ್ಯ? ಮುಂದುವರಿದ ನಗರ ಗಳಲ್ಲಂತೂ ಶೇಕಡ ೮೦ ಶ್ರೀಮಂತ ಪುರುಷರಿಗೆ ಈ ತೆರನಾದ ಸಂಗಾತಿಗಳಿರುತ್ತಾರಂತೆ. ಮಹಿಳೆಯರೂ ಸಹ ಧನದ ಹಿಂದೆ ಓಡುವುದರಿಂದ ಯಾವುದೇ arrangement (ವಿವಾಹ ಅಥವಾ ಎರ್ ನಾಯ್) ನಲ್ಲಿ ಧನವಂತನನ್ನೇ ಇಷ್ಟ ಪಡುತ್ತಾಳೆ. ಈ ಧೋರಣೆಯ ಹಿಂದೆ economic interest ಸಹ ಇದೆ. ಒಬ್ಬ ಮಹಿಳೆಯ ಈ ಮಾತನ್ನು ಕೇಳಿ; “ ನಾನು ನನ್ನವನಿಂದ ತ್ಯಜಿಸಲ್ಪಟ್ಟಾಗ ಸೈಕಲ್ಲಿನ ಮೇಲೆ ಕೂತು ಕಣ್ಣೀರು ಹಾಕುವುದಕ್ಕಿಂತ BMW ಕಾರಿನಲ್ಲಿ ಕೂತು ಕಣ್ಣೀರು ಹಾಕಲು ಇಷ್ಟಪಡುತ್ತೇನೆ”. ಅಂದರೆ ಅವನು ನನ್ನನ್ನು ಬಿಟ್ಟರೂ BMW ನನ್ನ ಪಾಲಾದರೆ ಸಾಕು ಎಂದು. ‘crass materialism’ ತರುವ ಧೋರಣೆ ಇದು.
ಚೀನಾದ ಮಾಜಿ ಅಧ್ಯಕ್ಷ Jiang Zemin ಗೂ ಒಬ್ಬ ‘ಎರ್ ನಾಯ್’ ಇತ್ತಂತೆ. ಆಕೆ ಹಾಡುಗಾರ್ತಿ ಕೂಡಾ.
ನಮ್ಮ ದೇಶದ ಧೋರಣೆ ಏನು?
ನಮ್ಮ ದೇಶದಲ್ಲಿ ಈ ರೀತಿಯಾಗಿ ಪತ್ನಿಯಿದ್ದೂ ಮತ್ತೊಬ್ಬ ಸ್ತ್ರೀಯನ್ನು ಸಂಗಾತಿಯಾಗಿ ಇಟ್ಟುಕೊಳ್ಳುವುದಕ್ಕೆ ಇಟ್ಟು ಕೊಂಡವಳು, ಎಂದೂ ಸ್ವಲ್ಪ ತುಂಟ ತಮಾಷೆಯಾಗಿ “ಕೀಪ್” ಮತ್ತು “ಸ್ಟೆಪ್ನಿ” ಎಂದೂ ಕರೆಯುತ್ತಾರೆ. ಈ ರೀತಿಯಾಗಿ ವಿವಾಹದ ಹೊರಗೆ ಸಂಬಂಧ ಇಟ್ಟುಕೊಂಡ ಪುರುಷನನ್ನು ಸಮಾಜ ಅಸೂಯೆ ಮಿಶ್ರಿತ ಮೆಚ್ಚುಗೆಯಿಂದ ನೋಡಿದರೆ ಆ ಸೌಲಭ್ಯ ಮಹಿಳೆಗೆ ಇಲ್ಲ. ಇಟ್ಟು ಕೊಂಡವಳು, ಕೀಪ್ ಅಥವಾ ಸ್ಟೆಪ್ನಿ ಎಂದು ಕರೆಯುವುದರ ಬಗ್ಗೆಯೂ ಜನರಲ್ಲಿ ವಿಶೇಷವಾಗಿ ಫೆಮಿನಿಸ್ಟ್ ಪೈಕಿಯವರಿಗೆ ಭಾರೀ ವಿರೋಧವಿದೆ. ಈ ರೀತಿಯಾಗಿ ಕರೆಯುವುದು ಹೆಣ್ಣನ್ನು ನಿಕೃಷ್ಟವಾಗಿ ಕಂಡಂತೆ ಎನ್ನುವುದು ಇವರ ಅಭಿಪ್ರಾಯ. ದಾರಿ ಹೋಕರು ಸ್ಟೆಪ್ನಿ ಎಂತಲೋ, ಇಟ್ಟುಕೊಂಡವಳು ಎಂತಲೋ ಕರೆದುಕೊಳ್ಳಲಿ, ಆದರೆ ನಮ್ಮ ಸರ್ವೋಚ್ಚ ನ್ಯಾಯಾಲಯವೇ ಹಾಗೆ ಸಂಬೋಧಿಸಿದರೆ ಹೇಗಿರಬಹುದು?
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಗಾದೆ ಸರ್ವೋಚ್ಚ ನ್ಯಾಯಾಲಯದ ಕಟ್ಟೆ ಹತ್ತಿತು. ಇಟ್ಟು ಕೊಂಡ ವಳು ಖರ್ಚು ವೆಚ್ಚಕ್ಕೆ ಅರ್ಹಳೋ ಎಂದು. ಆ ಸಂದರ್ಭದಲ್ಲಿ ನ್ಯಾಯಾಲಯ “ಕೀಪ್” ಜೀವನಾಂಶಕ್ಕೆ ಅರ್ಹಳಲ್ಲ ಎನ್ನುವ ತೀರ್ಪು ನೀಡಿತು. ಕೀಪ್ ಪದವನ್ನು ಸಾಕ್ಷಾತ್ ನ್ಯಾಯ ಮೂರ್ತಿಗಳ ಬಾಯಲ್ಲಿ ಕೇಳಿದ ‘ಸೋಲಿಸಿಟರ್ ಜನರಲ್’ ಇಂದಿರಾ ಜೈಸಿಂಗ್ ತಮ್ಮ ಕಿವಿಗಳನ್ನೇ ನಂಬಲಾಗಲಿಲ್ಲ. ಈ ೨೧ ನೆ ಶತಮಾನದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಗೆ ತಾನೇ ಓರ್ವ ಮಹಿಳೆಗೆ ಈ ಪದವನ್ನ ಉಪಯೋಗಿಸಬಲ್ಲುದು ಎಂದು ಗುಡುಗಿದರು. ಈ ಪದವನ್ನು ಕಡತದಿಂದ ತೆಗೆದು ಹಾಕಲು ನಾನು ಅರ್ಜಿ ಸಲ್ಲಿಸುತ್ತೇನೆ, ಅಲ್ಲಿಯವರೆಗೆ ಈ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಭಟಿಸಿದರು. ಕೊನೆಗೆ keep ಬದಲಿಗೆ concubine ಪದ ಆಗಬಹುದೋ ಎಂದು ಕೇಳಿ ಜೈಸಿಂಗ್ ರನ್ನು ಸಮಾಧಾನ ಪಡಿಸಿತು ನ್ಯಾಯಾಲಯ. ಸುಪ್ರೀಂ ಕೋರ್ಟೇ ಈ ರೀತಿ ಪದ ಪ್ರಯೋಗ ಮಾಡಿರುವಾಗ ನಾವು ಯಾವ ಲೆಕ್ಕ ಎನ್ನುತ್ತೀರೋ? ಸಂಬಂಧ ಇಟ್ಟು ಕೊಂಡ ಹೆಣ್ಣಿಗೆ ಜೀವನಾಂಶ ಇಲ್ಲ, ಅದರಲ್ಲೂ “ಒಂದು ರಾತ್ರಿಯ ನಿಲುಗಡೆ” (one night stand) ಯವರಿಗಂತೂ ಈ ಸೌಲಭ್ಯ ಇಲ್ಲವೇ ಇಲ್ಲ ಎಂದು ತೀರ್ಪ ಹೊರಬಿದ್ದಿತು ಸರ್ವೋಚ್ಚ ನ್ಯಾಯಾಲಯದಿಂದ.
ಜಿಜ್ಞಾಸೆ: ಎರಡನೆಯ, ಅನಧಿಕೃತ ಹೆಣ್ಣು ಕೀಪ್ ಆಗುವುದಾದರೆ, ಮೊದಲನೆಯವಳು ಗಂಡಿನ ಮೇಲೆ “ಹೇರಲ್ಪಟವಳು” ಎಂದೋ?
Comments
ಉ: “ತಾಯ್ ಚೀ” ಇರಲಿ...“ಎರ್ ನಾಯ್” ಬೇಡ
ಉ: “ತಾಯ್ ಚೀ” ಇರಲಿ...“ಎರ್ ನಾಯ್” ಬೇಡ
ಉ: “ತಾಯ್ ಚೀ” ಇರಲಿ...“ಎರ್ ನಾಯ್” ಬೇಡ