ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

ಮಾತುಗಳ ಮೂಲಕ ಜೀವನವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಗುಂಪೊಂದು ಮಾಡುತ್ತಿತ್ತು. ವಿಚಾರವಾದಿಯೊಬ್ಬರ ಭಾಷಣಗಳ ವೀಡಿಯೋ, ಮತ್ತು ಪುಸ್ತಕದ ಆಧಾರದಲ್ಲಿ, ಚರ್ಚೆ ನಡೆಯುತ್ತಿತ್ತು. ಸದಸ್ಯರು ತಮ್ಮ ಜೀವನಕ್ಕೆ ಎಟುಕಿದ ಸತ್ಯವನ್ನು ತುಲನೆಗೆ ಹಾಕುತ್ತಿದ್ದರು. ತುಲನೆ ಜೀವನವನ್ನು ಅದರ ಮೂಲ
 ಕಾರಣದಿಂದ ಬೇರ್ಪಡಿಸುತ್ತದೆ. ಹಾಗಂತ ಅವರು ನೋಡಿದ ವೀಡಿಯೋದ ಸಾರಂಶವಾಗಿತ್ತು. ಸುಮ್ಮನೆ ಬದುಕುವುದು, ಬದುಕಿನಲ್ಲಿ ಬಂದದ್ದನ್ನು ಸ್ವೀಕರಿಸುತ್ತಾ ಸಾಗುವುದು, ಜೀವನದ ದಾರಿಯಾಗಿದೆ ಅಂತಲೂ ವೀಡಿಯೋದಲ್ಲಿದ್ದ ಭಾಷಣಕಾರ ತಿಳಿಯಪಡಿಸುತ್ತಿದ್ದ. ಅದು ಅಲ್ಲಿದ್ದ ಯಾರಿಗೂ ತಿಳಿಯಲಾಗದ ಒಗಟಾಗಿತ್ತು. ಪ್ರೀತಿಯ ಬಗ್ಗೆ ಇರುವ ಎಲ್ಲಾ ಅಸಂಭದ್ದತೆಯನ್ನುವಿವರಿಸುತ್ತಾ ಯಾವುದು ಪ್ರೀತಿಯಲ್ಲ ಎಂಬುದನ್ನು ತುಂಬಾ ತಾಳ್ಮೆಯಿಂದ ತಿಳಿಸಲು ಶಬ್ದಗಳನ್ನು ಉಪಯೋಗಿಸಿದ್ದ. ಸದಸ್ಯರ ಚರ್ಚೆ ಪ್ರೀತಿಯ ಸುತ್ತಾ ಘನವಾಗುತ್ತಿತ್ತು.ಅಮ್ಮನ ಪ್ರೀತಿ ಪ್ರಪಂಚದಲ್ಲಿರುವ ಅತೀ ಶುದ್ಧ ಪ್ರೀತಿ ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿತ್ತು. ಸದಸ್ಯರು ಉತ್ಸಾಹದಿಂದ ತಮ್ಮ
ಅಮ್ಮನ ಪ್ರೀತಿಯ ಘನತೆಯನ್ನು ಉದಾಹರಣೆಗಳ ಮೂಲಕ ವ್ಯಕ್ತ ಪಡಿಸತೊಡಗಿದ್ದರು. ಮುದುಕ ಸದಸ್ಯನೊಬ್ಬ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದ. ಅವನಿಗೆ ಅಮ್ಮನಷ್ಟು ಸ್ವಾರ್ಥಿ ಪ್ರಪಂಚದಲ್ಲೇ ಯಾರೂ ಇರಲಿಕ್ಕಿಲ್ಲ ಅನಿಸಿತು. ಅವಳು ತನ್ನ ಮಗುವನ್ನು ಪ್ರೀತಿಸುವ ರೀತಿಯಲ್ಲೇ ದೋಷವಿದೆ ಅನಿಸಿತು. ಅವಳು ಜನ್ಮ ಕೊಟ್ಟ ಮಗುವನ್ನು ಅಸಾಧರಣ ಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಾಳೆ. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ. ಪಕ್ಕದ ಮನೆಯ ಮಗುವನ್ನು ಸೋಲಿಸುವ ವಿಚಾರವೂ, ತನ್ನ ಮಗುವಿನ ಮೇಲೆ ತನಗಿರುವ ಪ್ರೀತಿಯೇ ಅಂದುಕೊಳ್ಳುತ್ತಾಳೆ ಅನಿಸಿತು. ಸಣ್ಣ ಕಿರುನಗು ಮುದುಕ ಸದಸ್ಯನ ಸುಕ್ಕು ಮುಖದಲ್ಲಿ ಅರಳಿತ್ತು.

 

Rating
No votes yet