ಚಿಲ್ಲರೆ ಮಿಲಿಯನೇರ್

ಚಿಲ್ಲರೆ ಮಿಲಿಯನೇರ್

ಎಲ್ಲರಿಗೂ ಚಿಕ್ಕಂದಿನಲ್ಲಿ ಏನಾದರೊಂದು ಸಂಗ್ರಹಿಸುವ ಅಭ್ಯಾಸವಿರುತ್ತದೆ. ಆದರೆ ದಿನಕಳೆದಂತೆ ಆ ವಸ್ತುವಿನ ಬಗ್ಗೆ ಮೋಹ ಕಡಿಮೆಯಾಗಿ ಅಥವಾ ಸಂಗ್ರಹಿಸಿರುವ ಮೌಲ್ಯ ನಗಣ್ಯವೆಂದು ಅನಿಸತೊಡಗಿದನೆ ಸಂಗ್ರಹಭ್ಯಾಸ ನಿಲ್ಲುತ್ತದೆ. ಸಂಗ್ರಹಿಸಿದ ವಸ್ತುಗಳು ಅಟ್ಟಕ್ಕೂ ಕಸದಬುಟ್ಟಿಗೋ ಸೇರುತ್ತವೆ.

 

 

ರಷ್ಯಾದ ಸೈಬೀರಿಯಾ ಜಗತ್ತಿನ ಅತ್ಯಂತ ಶೀತಲ ಜನವಸತಿಯಿರುವ ಪ್ರದೇಶ. ಸೈಬೀರಿಯಾದ ಅತ್ಯಂತ ದೊಡ್ಡ ಮತ್ತು ರಷ್ಯಾದ ಮೂರನೆಯ ಅತಿದೊಡ್ಡ ನಗರ ನೋವೋಸಿಬಿರ್ಸ್ಕ್ (Novosibirsk). ಈ ನಗರದ ಯೂರಿ ಬಾಬಿನ್ ಎಂಬ ನಾಗರಿಕರು ಸುಮಾರು ಹದಿಮೂರು ವರ್ಷಗಳ ಹಿಂದೆ ರಷ್ಯಾದ ನಾಣ್ಯಗಳಾದ ಕೋಪೆಕ್ ಗಳನ್ನು ಸಂಗ್ರಹಿಸಲು ತೊಡಗಿದರು. 1998 ರಲ್ಲಿ ರಷ್ಯಾದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆದ ಕ್ರಾಂತಿಯಿಂದಾಗಿ ಈ ನಾಣ್ಯಗಳ ಮೌಲ್ಯ ನಗಣ್ಯವಾಗಲಿತ್ತು. ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ನಾಣ್ಯಗಳನ್ನು ಬದಲಿಸಿಕೊಳ್ಳುವ ಚಡಪಡಿಕೆಯಲ್ಲಿದ್ದರೆ ಯೂರಿ ಮಾತ್ರ ತದ್ವಿರುದ್ಧವಾಗಿ ಕೋಪೆಕ್ ನಾಣ್ಯಗಳನ್ನು ಸಂಗ್ರಹಿಸುತ್ತಾ ಹೋದರು. (ರಷ್ಯಾದ ಹಣ ರೂಬಲ್ - 1 ರೂಬಲ್ - 100 ಕೋಪೆಕ್). ಎಲ್ಲರೂ ನೋಟುಗಳನ್ನೇ ಕೇಳಿದರೆ ಇವರು ಮಾತ್ರ ಎಲ್ಲರಿಂದ ನಾಣ್ಯಗಳನ್ನೇ ಬಯಸತೊಡಗಿದರು.

 

ಹೀಗೇ ನಾಣ್ಯಗಳನ್ನು ಕೂಡಿಡುವ ಗೀಳು ಹದಿಮೂರು ವರ್ಷಗಳ ಬಳಿಕ ಅವರನ್ನು ಓರ್ವ ಮಿಲಿಯನೇರ್ ನನ್ನಾಗಿಸಿದೆ. ಅಂದರೆ ಅವರ ಬಳಿ ಈಗ ಬರೋಬ್ಬರಿ ಐದು ಮಿಲಿಯನ್ (ಐವತ್ತು ಲಕ್ಷ) ಕೋಪೆಕ್ ನಾಣ್ಯಗಳಿವೆ! ಈ ನಾಣ್ಯಗಳ ಒಟ್ಟು ತೂಕ ಏಳುವರೆ ಟನ್. ವಿಪರ್ಯಾಸವೆಂದರೆ ಅಷ್ಟೂ ನಾಣ್ಯಗಳ ಇಂದಿನ ಬೆಲೆ ಕೇವಲ ಸಾವಿರದೈನೂರು ಡಾಲರ್ ಮಾತ್ರ (ಸುಮಾರು ಎಪ್ಪತ್ತೈದು ಸಾವಿರ ರೂಪಾಯಿಗಳು). ಆದರೆ ಯೂರಿ ಬಾಬಿನ್ ರವರಿಗೆ ಈ ನಾಣ್ಯಗಳನ್ನು ಹೊಂದಿರುವುದೇ ಒಂದು ಹೆಮ್ಮೆಯ ವಿಷಯ. ಈ ನಾಣ್ಯಗಳಿಂದ ಆವೃತವಾಗಿರುವಂತೆ ತಮ್ಮ ಓವರ್ ಕೋಟ್ ಒಂದನ್ನೂ ಹೊಸಿಕೊಂಡಿದ್ದಾರೆ. ಈ ನಾಣ್ಯಗಳಿಂದ ಸ್ನಾನ ಮಾಡುವುದು, ಸರ ಮಾಡಿಕೊಂಡು ಧರಿಸುವುದು ಅವರಿಗೆ ಸಂತೋಷ ಕೊಡುವ ಪ್ರಕ್ರಿಯೆಗಳು.

 

 

ಅಂದ ಹಾಗೆ ಈ ನಾಣ್ಯಗ ಗೀಳು ಅವರಿಗೆ 'ಕೋಪೆಕ್ ಕಿಂಗ್ 'ಎಂಬ ಅನ್ವರ್ಥನಾಮವನ್ನೂ ಗಳಿಸಿಕೊಟ್ಟಿದೆ. 

Rating
No votes yet