ಮರವೊಂದರ ಒಗಟು [ಮಕ್ಕಳ ಕವನ]

ಮರವೊಂದರ ಒಗಟು [ಮಕ್ಕಳ ಕವನ]

ಕವನ

ಗುಡ್ಡದಂಚಿನ  ತಂಪು ಬಯಲಲಿ

ಹರಿವ ಕಿರುಹೊಳೆ ಬದಿಯಲಿ

ಹರಡಿ ನಿಂತಿಹೆ  ಹಚ್ಚ ಹಸುರಿನ

ಫಲಭರಿತ ಮೃತ್ತಿಕೆಯಲಿ         [೧]

ಸಿರಿಯ ಮಾನವ ಕೊಡುವೆ ರೈತಗೆ

ಒಳ್ಳೆ ಕಾಲವು ಬಂದರೆ

ಆನೆಯಿತ್ತರು ಸಿಗದು ಮಾನವು

ನನ್ನ ದೆಸೆಯಲಿ ಹೋದರೆ      [೨]

ಬೊಚ್ಚು ಬಾಯಿಯ ಅಜ್ಜಿ ಅಜ್ಜರ

ಕುಟ್ಟಣದಿ  ಪುಡಿಯಾಗುವೆ

ತರುಣ ಜನತೆಯ ತುಟಿಗೆ  ರಂಗನು

ನೀಡಿ ಮನವನು ಸೆಳೆಯುವೆ   [೩]

ಬಡ ಜನರ ಮನೆ ಮಾಡಿಗೊದಗುವೆ

ತಂಪು ಹಂದರವಾಗುವೆ

ಕೊಡಿ ಮರದಿ ಸಂಭ್ರಮದಿ ತೂಗುವ

ಫಲದ ತೋರಣವಾಗುವೆ      [೪]

ತೆಂಕು ಭಾಗದ ಬಿಸಿಲನೊಲ್ಲೆನು

ನೀರ ಕೊರತೆಯ ಸಹಿಸೆನು

ಬೀಸುಗಾಳಿಗೆ ಗೋಣು ಮುರಿದರೆ

ಭುವಿಗೆ ತಲೆಯನು ಕೊಡುವೆನು   [೫]

ಪ್ರಖರ ಶಾಖವು ,ಸತತ ವೃಷ್ಟಿಯು

ನನಗೆ ತರುವುದು ರೋಗವ

ಹಿತಮಿತದ ಹವೆ,ಶುದ್ಧ ನೀರಿನ

ಒದಗುವಿಕೆಯಾರೋಗ್ಯವ         [೬]

ಶಿರಕೆ ಸಿಂಗಾರವನು ಕೊಡುವೆನು

ಕರಕೆ ಹೊನ್ನಿನ ತಳಿಗೆಯ

ರಣಕೆ ವೀಳ್ಯವು ಸಭೆಗೆ ಯೋಗ್ಯವು

ಆದ ನಾನಾರೆಂಬೆಯಾ?        [೭]

 

Comments