ಹೇಳು ಬೆಂಗ್ಳೂರ್ ನೀನ್ಯಾಕೆ ಹಿಂಗೆ?? ಅರ್ಥವಾಗದ ಮಾಯಾಂಗನೆ ನೀನೇನಾ ???

ಹೇಳು ಬೆಂಗ್ಳೂರ್ ನೀನ್ಯಾಕೆ ಹಿಂಗೆ?? ಅರ್ಥವಾಗದ ಮಾಯಾಂಗನೆ ನೀನೇನಾ ???

ನಮ್ ಬೆಂಗ್ಳೂರು ಒಂತರ ಮಾಯಾ ಲೋಕ , ಒಬ್ಬೊಬ್ಬರಿಗೆ ಒಂದೊಂತರ ಕಾಣಿಸುವ ಮಾಯಾಂಗನೆ ಇದ್ದಂಗೆ, ಈ ಊರು.ಒಬ್ಬರಿಗೆ , ಗಾರ್ಡನ್ ಸಿಟಿ , ಮತ್ತೊಬ್ಬರಿಗೆ ಇದು ಗಾರ್ಬೇಜ್ ಸಿಟಿ,ಒಬ್ಬರಿಗೆ ಸಿಲಿಕಾನ್ ಸಿಟಿ,ಇನ್ನೊಬ್ಬರಿಗೆ ಇದು ಬಯೋಕಾನ್ ಸಿಟಿ,ಹಲವರಿಗೆ ಇದು  ಬ್ಲಾಗರ್ಸ್ ನಗರ, ಸೂಪರ್ ಫಾಸ್ಟ್ ನಗರ, ಫೋಟೋಗ್ರಾಫರ್ಸ್ ನಗರ, ಇತ್ಯಾದಿ,ಇತ್ಯಾದಿ, ಬಳಷ್ಟು ಜನರಿಗೆ ಬಹಳಷ್ಟುತರಾ  ಕಾಣುವ ಈ ಊರು ಮಯಾನಗರವೇ ಸರಿ .ಆದ್ರೆ ಯಾಕೋ ಕಾಣೆ ನನಗೆ  ಈ ಮಾಯಾನಗರಿ  ವಿಭಿನ್ನ ದರ್ಶನ ಮಾಡಿಸುತ್ತಾ  ಅರ್ಥವಾಗದ ನಗರ ಅನ್ನಿಸಿತು.. ಬನ್ನಿ ಒಂದು ಸುತ್ತು ಅರ್ಥವಾಗದ ನಗರದ ಲೋಕದೊಳಗೆ  ಒಂದು ಸುತ್ತು ಹಾಕೋಣ.                                                           ದೃಶ್ಯ...1  :-)  ಮೊನ್ನೆ "'ಕುಮಾರ ಸ್ವಾಮೀ "ಬಡಾವಣೆ ಯಲ್ಲಿ ಒಂದು ಮದುವೇ ನಿಶ್ಚಿತಾರ್ಥ  ಕಾರ್ಯಕ್ರಮವಿತ್ತು. ನಾನೂ ಹೋಗಿದ್ದೆ. ಕಾರ್ಯಕ್ರಮ ಸಂಜೆ ಇದ್ದ ಕಾರಣ ,ಮಧ್ಯಾಹ್ನ ಕೆಲಸವಿಲ್ಲದ ನಾನು ಹಾಗೆ ಅಡ್ಡಾಡುತ್ತಾ ಬಡಾವಣೆ ಪರಿಚಯ ಆಗ್ಲಿ ಅಂತಾ  ಹೊರಗೆ ಬಂದೆ ಅರೆ ಮನೆಯ ಪಕ್ಕ ಖಾಲಿ ಸೈಟ್ ನಲ್ಲಿ  ಮೇಕೆಗಳು ಮೆಯ್ತಿದ್ವು.                                                                                                  


                                                                                                                                                                                                                                                      ಅಚ್ಚರಿಯಿಂದ  ಮನೆ  ಒಳಗಡೆ  ಹೋಗಿ ನನ್ನ ಕ್ಯಾಮರ ತಂದು ನೋಟ ನೋಡಲು ನಿಂತೇ.ಆಗ ಕಂಡಿದ್ದು  ಈ ವಿಚಾರ.  ಮಧ್ಯವಯಸ್ಸಿನ ಒಬ್ಬ ಗಂಡಸು ಹಾಗು ಹೆಂಗಸು  ಆಡುಗಳ[ಮೇಕೆ] ಹಿಂಡಿನೊಂದಿಗೆ ಬಡಾವಣೆಯ ಬೀದಿ ಬೀದಿಗಳಲ್ಲಿಕಂಡು ಬರುವ ಖಾಲಿ ನಿವೇಶನಗಳನ್ನು ಹುಡುಕುತ್ತಾ                                                                                                                                                                                                                                                                                                                 ಹೊರಟಿದ್ದರು.  ಅಲ್ಲಾ ಈ ಬೆಂಗ್ಳೂರ್ ನಲ್ಲಿ ಆಡು ಮೆಯಿಸುವವರೂ ಇದ್ದಾರ. ಅನ್ನಿಸಿ ಸ್ವಲ್ಪ ಹೊತ್ತು ಅವರನ್ನು ಗಮನಿಸಿದೆ.ಕನ್ನಡ ತೆಲುಗು ಮಾತಾಡುತ್ತಿದ್ದರು  ಸುಮಾರು ಹತ್ತು ಆಡುಗಳ[ಮೇಕೆ] ಗುಂಪು,  ಹಾಗೆ ಅವರನ್ನು ಮಾತಾಡಿಸಿದೆ. "ಹೌದು ಸ್ವಾಮೀ, ನಾವಿಲ್ಲೆಯೇ ಹತ್ತಿರದ ಸ್ಲಂನಲ್ಲಿ ಇದೀವಿ,. ಜೀವನಕ್ಕೆ ಆಡು ಸಾಕ್ತೀವಿ , ಬೆಳಿಗ್ಗೆ ಒಂಬತ್ತು ಘಂಟೆಯಿಂದ ಸಂಜೆ ನಾಲ್ಕು ಘಂಟೆವರೆಗೆ ಇದೆ ಕೆಲಸ . ಮಾಂಸಕ್ಕಾಗಿ ಮೇಕೆ ಮಾರಿ ಜೀವನ ನಡೆಸ್ತೀವಿ".ಅಂತಾ ಹೇಳಿದ್ರೂ                                                       ಮುಂದೆ ನಾನು ಮಾತಾಡಿ "ಅದ್ಸರೀ ನೀವು ಬೆಳಿಗ್ಗೆ ಯಿಂದ ಹಿಂಗೆ ಆಡು [ಮೇಕೆ] ಮೆಯಿಸುತ್ತೀರಲ್ಲಾ ಅವಕ್ಕೆ ಹೊಟ್ಟೆ ತುಂಬುತ್ತಾ??" ಅಂತಾ ಕೇಳ್ದೆ.                                  ಅದಕ್ಕೆ ಅವರು ಲ್ಲಾ ಸಾ ನಮ್ ಮೇಕೆ ಎಲ್ಲಾನೂ ತಿನ್ತವೆ ಸಾ , ಖಾಲಿ ಸೈಟಿನಲ್ಲಿ ಸಿಗುವ ಬಾಳೆಲೆ, ಗಿಡ ,ಹುಲ್ಲು, ಅರ್ಧ ತಿಂದು ಬಿಸಾಕಿದ ತಿಂಡಿ, ಕಾಜಗ,[ಕಾಗದ], ಯಾವ್ದು ಬಿಡಾಕಿಲಾ" ಅಂತಾ ಹೆಮ್ಮೆಯಿಂದ ಹೇಳಿದ್ರೂ ,"ನೀರ್ಕುಡ್ಸೋಕೆ ಏನ್ ಮಾದಿತೀರಾ?? " ಅಂದೇ ನೋಡಿ  "ಅದ್ಕೆನಂತೆ ಅಲ್ಲೇ ಅರೀತಿಲ್ವ್ರಾ ಮೋರಿ ಅಲ್ಲೇ ಆಯ್ತುದೆ ಬುಡಿ" ಅಂತಾ ಮುಂದಕ್ಕೆ  ಮೇಕೆ ಹೊಡ್ಕೊಂಡ್  ಹೋದರು.ಅಲ್ಲೇ ಇದ್ದ ಒಬ್ಬರು  ಈ ಕಾಲದಲ್ಲಿ ಯಾರ್ನೂ ನಂಬೋ ಹಂಗಿಲ್ಲ  ಬೆಳಿಗ್ಗೆ ಹಿಂಗೆ ಬಾರೋ ಇವ್ರು ರಾತ್ರಿ ಮನೆಗಳಿಗೆ ಖನ್ನ ಹಾಕಲು ಸೂಕ್ತವಾದ ಮನೆ ಹುಡುಕ್ತಾರೆ ಅಂದ್ರೂ. ಆದ್ರೆ ಇವರನ್ನು ನೋಡಿದ ಮನಸ್ಸು ಈ ವಾದ ಒಪ್ಪೋ ಸ್ಥಿತಿಯಲ್ಲಿ  ಇರಲಿಲ್ಲ.                                                                                                                                            ದೃಶ್ಯ..2 :-) ಕಳೆದ ಶನಿವಾರ ಹೈಕೋರ್ಟ್ ನಲ್ಲಿ ಕೆಲ್ಸಾ ಇತ್ತು . ನಮ್ಮ ವಕೀಲರ ಬರುವಿಗಾಗಿ ಕಾಯುವ ಕೆಲಸ ಸರಿ ಅಲ್ಲೇ ಸಿಕ್ಕ ಪರಿಚಯದವರೋಬ್ಬರೊಡನೆ  ಹಾಲು ಹೀರಿ ಪಕ್ಕದ ಪಾರ್ಕ್ ನಲ್ಲಿ ಅಡ್ಡಾಡಲು ಆರಂಭಿಸಿದೆ. ಅಲ್ಲಿ ಕಂಡ ಲೋಕ ಬೆರಗು ಹುಟ್ಟಿಸಿತ್ತು.ವಿಧಾನ ಸೌಧ ಹಾಗು ಹೈಕೋರ್ಟ್ ಮಧ್ಯ ಮೆಟ್ರೋ ಕೆಲಸಕ್ಕೆ ತಡೆ ಗೋಡೆ ನಿರ್ಮಿಸಿ ನಿರ್ಮಾಣ ಕಾಮಗಾರಿ ನಡೆಸಿದ್ದರು. ಪಾರ್ಕಿನಲ್ಲಿ ನಡೆಯುತ್ತಾ ಮುಂದುವರೆದೆ  ಪಾಪ ಹೈ ಕೋರ್ಟಿನಲ್ಲಿ ಅಷ್ಟೊಂದು ಮೂತ್ರಾಲಯ ಸೌಲಭ್ಯ  ಕಲ್ಪಿಸಿದ್ದರೂ  ಪಾರ್ಕಿನಲ್ಲಿದ್ದ  ಮರಗಳಿಗೆ  ನಾಗರೀಕ ಮಂದಿಯ ಮೂತ್ರ ಸಿಂಚನ ನಡೆದಿತ್ತು.ಮತ್ತೊಂದೆಡೆ ಪರಿಸರಕ್ಕೆ ನಾಗರೀಕ ಸಮಾಜ ನೀಡುತ್ತಿರುವ ಕಸದ ಉಡುಗೊರೆ ರಾಶಿಯಾಗಿ ಬಿದ್ದಿತ್ತು. ಹೈ ಟೆಕ್  ಮಂದಿ ತಮ್ಮ ಲೋ ಟೆಕ್  ಚಾಳಿಯನ್ನು ಹೀಗೆ ಮುಂದುವರೆಸಿದ್ದರು. ವಾಸನೆ ತಡೆಯಲಾರದೆ  ಮುಂದೆ ಬಂದು ಶುದ್ದಗಾಳಿ  ಪಡೆಯಲು ಮುಂದೆ ಬಂದೆ .ಪಾರ್ಕಿನ ಮತ್ತೊಂದೆಡೆ  ಸುಂದರ ಮರಗಳ ಸಾಲುಗಳು ಕಾಣಿಸಿದವು. ಹಾಗು ಮರಗಳ ನೆರಳಿನಲ್ಲಿ ಆರು ನಾಯಿಗಳು   ಮಲಗಿದ್ದವು. ಮರಗಳ ಒಂದು ಸಾಲಿನಲ್ಲಿ ಹಸಿನಿಂದ ಮರಗಳಿದ್ದರೆ, ಮತ್ತೊಂದು ಸಾಲಿನಲ್ಲಿ ಬೋಳು ಬೋಳಾದ ಮರಗಳಿದ್ದವು.  ಯಾಕೋ ಕಾಣೆ ಈ ದೃಶ್ಯ ನೋಡಿದ ಕೂಡಲೇ  ಹಸಿರಮರಗಳು ಜ್ಞಾನವನ್ನೂ ,ಬೋಳು ಮರಗಳು ಅಜ್ಞಾನವನ್ನೂ  ಮಧ್ಯೆ ಮಲಗಿರುವ ನಾಯಿಗಳು  ಜ್ಞಾನ ಅಜ್ಞಾನ ದ ಅರಿವಿಲ್ಲದೆ  ನಿದ್ದೆಯ ಅಮಲಿನಲ್ಲಿರುವ   ಮಾನವರನ್ನೂ  ಬಿಂಬಿಸುತ್ತಿರುವಂತೆ ಭಾಸವಾಯಿತು.ನನ್ನ ಸ್ನೇಹಿತನಿಗೆ ಇದು ಕಂಡ ರೀತಿ  ಹೀಗೆ, ಹಸಿರಮರಗಳು  ಕೆಟ್ಟ ತನದಿ ಸಂಪಾದಿಸಿ  ಕೊಬ್ಬಿರುವ ಜನರು,[ ನೋಡಲು ಹಸಿರಾಗಿ ಕಂಡರೂ ಜೀವನ ಶೂನ್ಯವಾಗಿರುವ ಜನ. ] ಬೋಳುಮರಗಳು  ನ್ಯಾಯವಾಗಿ ಬದುಕಲು ಆಗದೆ ಶೋಷಣೆಗೆ ಒಳಗಾಗಿ [ನೋಡಲು ಒಣಗಿಹೊಗಿದ್ದರೂ  ಮನದಲ್ಲಿ ಜೀವನ ಮೌಲ್ಯ ಉಳಿಸಿಕೊಂಡಿರುವ ಜನ.] ದಿನವೂ ಸತ್ತು ಬದುಕುತ್ತಿರುವ ಜನ. ಈ ತಾರತಮ್ಯವನ್ನು ತೊಲಗಿಸಲಾಗದೆ  ಘಾಡ ನಿದ್ದೆಯಲ್ಲಿ ಮಲಗಿರುವ ಸಮಾಜವನ್ನು ಆ ನಾಯಿಗಳು ಸೂಚಿಸುತ್ತವೆ ಅಂದಾ. ಯಾವುದು ಸುಳ್ಳೋ ಯಾವುದು ನಿಜವೋ ನೀವೇ ತೀರ್ಮಾನಿಸಿ. ಬನ್ನಿ ಮುಂದಿನ ದೃಶ್ಯಕ್ಕೆ.                                                                                                                                                        ದೃಶ್ಯ ...3 :-) ಮುಂದೆ ಬಂದ ನನಗೆ ಪಾರಿವಾಳಗಳ ಗುಂಪು ಕಾಣಿಸಿತು.ಮರದ ಮೇಲಿಂದ ಗುಂಪಾಗಿ  ಪುರ್ ಅಂತಾ ಹಾರಿ ಆಗಸದಲ್ಲಿ ಅಡ್ಡಾಡಿ ಭೂಮಿಗಿಳಿದು ಕಸಕ್ದ್ದಿಯಲ್ಲಿ ಕೀಟಗಳನ್ನು ಹೆಕ್ಕಿ ತಿನ್ನುವ  ಬೆಂಗಳೂರಿನ ಪಾರಿವಾಳಗಳಿಗೆ ತಿನ್ನಲು ಕಾಳುಗಳು ಎಲ್ಲಿ ಸಿಗಬೇಕು. ಪಾರ್ಕಿನಲ್ಲಿ ಸಿಗುವ ಹುಳು ಹುಪ್ಪಟ್ಟೆ ಗಳನ್ನೂ ತಿಂದು ನಲಿದಿರುವ ಈ ಪಾರಿವಾಳಗಳಿಗೆ ಜೈ ಅನ್ನಬೇಕು. 

                                                                                                                                                                     ಹಾಗೆ ನೋಡುತ್ತಾ ನಿಂತ ನನಗೆ .ಪಾರಿವಾಳಗಳ ಚಿನ್ನಾಟ ಚಂದವಾಗಿ ನೋಡುತ್ತಾನಿಂತೆ .ಅರೆ ಇದೇನಿದು ಒಂದು ಗುಂಪು ಪಾರಿವಾಳಗಳು ಮೆಟ್ರೋ ಬೋರ್ಡಿನ ಕಡೆ ಗುಂಪಾಗಿ ನಡೆದಿದ್ದವು,ಸುಮಾರು ಹೊತ್ತು ಯಾವ ಚರ್ಚೆ ಮಾಡಿದವೋ ಕಾಣೆ  ಯಾವುದೇ ಗುದ್ದಾಟ, ತಳ್ಳಾಟ, ಕಂಡುಬರಲಿಲ್ಲ  ಶಿಸ್ತಿನಿಂದ ಮೆಟ್ರೋ ಗೋಡೆಯ  ಬೋರ್ಡಿನ ಮುಂದೆ ತಮ್ಮ ಅಹವಾಲನ್ನು ಇಟ್ಟ ಆ ಪಾರಿವಾಳಗಳು  ಮೆಟ್ರೋ ರೈಲಿನಿಂದ ಮುಂದೆ ತಮಗೆ ಯಾವುದೇ ಹಾನಿ ಆಗದಿರಲಿ ಅಂತಾ ಪ್ರಾರ್ಥಿಸಿದಂತೆ
  ಕಂಡು ಬಂದಿದ್ದು ಸುಳ್ಳಲ್ಲಾ.  ಹಾಗೆ ಅನ್ನಿಸುತ್ತಿದ್ದಂತೆ  ನನ್ನನ್ನು ವೈರಿ ತರಾ ನೋಡಿ ಪುರ್ ಅಂತಾಹಾರಿ ಹೋದವು.  ಅಷ್ಟರಲ್ಲಿ ಎಲ್ಲಿದ್ದೀರಾ ಬಾಲೂ?  ಬನ್ನಿ ಕೋರ್ಟಿಗೆ ಹೊತ್ತಾಗುತ್ತೆ ಅಂತಾ ನಮ್ಮ ವಕೀಲರು ಮೊಬೈಲ್ನಲ್ಲಿ  ಕರೆದ್ರೂ. ಭಾರವಾದ ಹೃದಯದಿಂದ ನಿರ್ಗಮಿಸಿದೆ..ಆಗಾ ಅನ್ಸಿದ್ದು ಹೇಳು ಬೆಂಗ್ಳೂರು  ನೀನ್ಯಾಕೆ ಹಿಂಗೆ?? ಅರ್ಥವಾದ ಮಾಯಾಂಗನೆ ನೀನೇನಾ ಅನ್ನಿಸಿತ್ತು. ನಿಮಗೆ ಏನನ್ನಿಸಿತು ಹೇಳುವಿರಾ ??