ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

ಆಕೆ ನಗರದ ಪ್ರಸಿದ್ಧ ಡಾಕ್ಟರ್ ಒಬ್ಬರ ಪತ್ನಿ. ಆರ್ವತ್ತು ವರ್ಷ ವಯಸ್ಸಾದರೂ ಹಾಗೇ ಕಾಣಿಸುವುದಿಲ್ಲ. ತುಂಬಾ ಚೆಲುವೆಯಾಗಿದ್ದಿರಬೇಕು. ಈಗಲೂ ಮುಖದಲ್ಲಿ ಹೊಳಪಿದೆ. ಮುಟ್ಟಿದರೆ ರಕ್ತ ಚಿಮ್ಮುವಷ್ಟು ಬೆಳ್ಳಗಿದ್ದಳು. ಸಾತ್ವಿಕ ಕುಟುಂಬದ ಹಿನ್ನೆಲೆ, ಶ್ರೀಮಂತಿಕೆ, ಉಚ್ಚ ಶಿಕ್ಷಣ ಅವಳ ಚೆಲುವಿಕೆಗೆ ರಂಗು ತುಂಬಿತ್ತು. ಆಕೆಗೆ ಇಬ್ಬರು ಹೆಣ್ಮಕ್ಕಳು. ಇಬ್ಬರೂ ಹೆಣ್ಮಕ್ಕಳೂ, ಡಾಕ್ಟರ್ ಆಗಿದ್ದರು. ಅವರ ಪತಿಯಂದಿರೂ ಡಾಕ್ಟರ್ ಆಗಿದ್ದರು. ಇಬ್ಬರೂ ಹೆಣ್ಮಕ್ಕಳಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿತ್ತು. ಸಮ್ರದ್ಧಿಯಿತ್ತು. ತುಂಬಾ ಪುಸ್ತಕಗಳನ್ನು ಓದುತ್ತಿದ್ದಳು. ಆಕೆ ಮತ್ತು ಡಾಕ್ಟರ್ ಇಬ್ಬರೇ ದೊಡ್ಡ ಫ್ಲಾಟ್ ಒಂದರಲ್ಲಿದ್ದರು. ರುಚಿಕಟ್ಟಾದ ಅಡಿಗೆ ಮಾಡುತ್ತಿದ್ದಳು. ಮನೆಯ ಇತರ ಕೆಲಸಕ್ಕೆ ಕೆಲಸದ ಆಳೊಬ್ಬಳಿದ್ದಳು. ಒಳ್ಳೆ ಸಿನೇಮಾ, ನಾಟಕ, ಸಂಗೀತದಲ್ಲಿ ಅಭಿರುಚಿಯಿತ್ತು. ದುಬಾರಿ ಬೆಲೆಯ, ನಾಜೂಕಿನ ಸುಂದರ ಸೀರೆಗಳ ಕಲೆಕ್ಷನ್ ಅವಳ ಬಳಿಯಿತ್ತು. ಆಭರಣಗಳು ಇದ್ದೂ ಇಲ್ಲದ ಹಾಗೇ ,ಅವಳ ವ್ಯಕ್ತಿತ್ವದ ಹೊಳಪಿಗೆ ಸಾಕಾಗುವಷ್ಟು ಮಾತ್ರ ಧರಿಸುತ್ತಿದ್ದಳು. ಮಾತು ನಡೆ ನುಡಿ ಅತ್ಯಂತ ಸುಂದರವಾಗಿರುತ್ತಿತ್ತು. ಸರಳತೆ, ಪರಿಶುದ್ಧತೆ ಅವಳ ಸಹಜ ನಡವಳಿಕೆಯೇ ಆಗಿತ್ತು. ಯಾರನ್ನು ಮಾತನಾಡಿಸುವುದಕ್ಕೂ ಅಳುಕುತ್ತಿರಲಿಲ್ಲ. ಅವಳೊಡನೆ ಮಾತನಾಡುವವರಿಗೂ ಅಳುಕಾಗುತ್ತಿರಲಿಲ್ಲ. ಅಷ್ಟು ಸಹಜತೆ ಅಪರೂಪವೇ. ಅವಳ ಬಳಿ ಅಪರೂಪದ ಪುಸ್ತಕಗಳೂ ಇದ್ದವು. ನಿರಂತರ ಅಧ್ಯಯನದಿಂದಾಗಿ ಯಾವ ವಿಷಯ ಮಾತನಾಡಿದರೂ ಅವಳಿಗೆ ಅದರ ಸಮಗ್ರ ವಿವರಗಳು ತಿಳಿದಿರುತ್ತಿದ್ದವು. ಅವಳ ತವರು ಮನೆಯ ಹಿರಿಯರು ವಿದ್ಯಾಭ್ಯಾಸದ ಮಹತ್ವ ತಿಳಿದಿದ್ದರು. ತುಂಬಾ ಸಿರಿವಂತರೂ ಆಗಿದ್ದರು.  ಪ್ರಕ್ರತಿಯನ್ನು ತೀವ್ರವಾಗಿ ಜೀವಿಸುತ್ತಿದ್ದ,  ವಿಚಾರವಾದಿ ಹಿನ್ನೆಲೆಯಿರುವ ವಿನೂತನ ವ್ಯಕಿತ್ವದ ಯೋಗಿಯಲ್ಲದ, ಆದರೂ ಯೋಗಿಯ ಹಾಗಿರುವ ವ್ಯಕ್ತಿಯೊಬ್ಬರ ಆಕರ್ಷಣೆ ಅವಳ ತವರಿನ ಹಿರಿಯರಿಗಿತ್ತು. ಇವಳಿಗೂ ಅದರ ಮೇಲೆ ಆಸಕ್ತಿಯಿತ್ತು.ಯೋಗಿಯ ಭಾಷಣಗಳನ್ನು, ಅವರ ಜೊತೆಗಿದ್ದವರು, ಅವರ ಅನುಮತಿಯಿಂದ ಪ್ರಕಟಿಸಿದ್ದರು. ಈಕೆ ಆ ಎಲ್ಲಾ ಪುಸ್ತಕಳನ್ನು ಓದಿದ್ದಳು. ಅವಳ ಸಂಗ್ರಹದಲ್ಲಿ ಆ ಎಲ್ಲಾ ಪುಸ್ತಕಗಳೂ ಇದ್ದವು. ಅವಳು ಆ ವ್ಯಕ್ತಿಯ ಮಾತುಗಳನ್ನು ಪುಟ ಸಂಖ್ಯೆ ಸಹಿತವಾಗಿ, ಇಡೀ ವಾಕ್ಯಗಳನ್ನು ಯಾವಾಗ ಬೇಕಾದರೂ ಹೇಳ ಬಲ್ಲವಳಾಗಿದ್ದಳು. ಅವಳ ಫ್ಲಾಟಿನ ಸಮೀಪದಲ್ಲಿ ಆಧ್ಯಾತ್ಮಿಕ ಪುಸ್ತಕಗಳ ಅಧ್ಯಯನ ನಡೆಸುವ ಸಹಕಾರಿ ಕೇಂದ್ರವೊಂದಿತ್ತು. ಸ್ವಂತ ಕಟ್ಟಡವಿತ್ತು. ಅವಳು ಸದಸ್ಯಳಾಗಿದ್ದಳು. ಖಜಾಂಜಿಯೂ ಆಗಿದ್ದಳು. ಅವಳು ಖಜಾಂಜಿಯಾದ ನಂತರ ಕೇಂದ್ರದ ಆರ್ಥಿಕ ಸ್ಥಿತಿ ಸುಧಾರಿಸಿತು. ಹೊಸ ಕಪಾಟುಗಳು, ಹೊಸ ಪುಸ್ತಕಗಳು, ಹೊಸ ಉಪನ್ಯಾಸಕರು, ಹೊಸ ಸದಸ್ಯರು ಸೇರ್ಪಡೆಯಾದರು. ಕೇಂದ್ರ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿತ್ತು. ಕಳೆದ ಹತ್ತು ವರ್ಷಗಳಿಂದ ಅವಳೇ ಖಜಾಂಜಿಯಾಗಿದ್ದಳು. ಸೆಕ್ರೆಟರಿ, ಪ್ರೆಸಿಡೆಂಟರು ಅವಳ ಅನುಮತಿ, ಒಪ್ಪಿಗೆ ಪಡೆದೇ ಕಾರ್ಯ ನಿರ್ವಹಿಸುತ್ತಿದ್ದರು. ಆ ಕೇಂದ್ರ ಅವಳಿಗೆ ಎರಡನೆಯ ಮನೆಯ ಹಾಗಿತ್ತು. ಅವಳು ಸಜ್ಜು ಗೊಳಿಸುವ ಕಾರ್ಯಕ್ರಮಗಳು ತುಂಬಾ ಅಭಿರುಚಿಯದಾಗಿರುತ್ತಿದ್ದವು. ಪ್ರಸಿದ್ಧ ಭಾಷಣಕಾರರು, ಅವಳ ಕರೆಯನ್ನು ಮನ್ನಿಸಿ ಕೇಂದ್ರಕ್ಕೆ ಬರುತ್ತಿದ್ದರು. ಉಪನ್ಯಾಸಗಳನ್ನು ಕೊಡುತ್ತಿದ್ದರು. ಅವಳ ಡಾಕ್ಟರ್ ಪತಿ ವ್ರತ್ತಿಯಿಂದ ನಿವ್ರತ್ತರಾಗಿದ್ದರು. ಮರೆವು, ನಿಶ್ಚಕ್ತಿ, ವ್ರದ್ದಾಪ್ಯ ಅವರನ್ನು ಆವರಿಸಿತ್ತು. ಅವರ ಹಿರಿಯ ಮಗಳು ತಂದೆ ಮತ್ತು ತಾಯಿ ಇಬ್ಬರನ್ನು ತಾನು ವಾಸವಿರುವ ನಗರಕ್ಕೇ ಬಂದು ಇರಲು ಒಪ್ಪಿಸಿದಳು. ಅವರಿಬ್ಬರನ್ನು ಕ್ಷಣ ಮಾತ್ರದಲ್ಲಿ ಭೇಟಿಯಾಗಲು ಸಾಧ್ಯವಿರುವ ಒಂದು ಫ್ಲಾಟ್ ಅವಳಿರುವ ನಗರದಲ್ಲೇ ಖರೀಧಿಸಿದ್ದಳು. ಹಾಗಾಗೀ ಈಕೆ ಊರು ಬಿಟ್ಟು ಹೋಗುವ ಮುನ್ನ ಖಜಾಂಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆಲಸವನ್ನು ಇನ್ಯಾರಿಗೋ ವಹಿಸಿದಳು. ಕೇಂದ್ರದ ಕೀಲಿಕೈಗಳನ್ನು ಪ್ರೆಸಿಡೆಂಟರಿಗೆ ಒಪ್ಪಿಸಿದಳು. ಅವಳು ಹಾಗೇ ಒಪ್ಪಿಸುವಾಗ ಏನೋ ನೀರಿಕ್ಷೆಯಲ್ಲಿರುವ ಹಾಗಿದ್ದಳು. ಪ್ರೆಸಿಡೆಂಟರು ಕೀಲಿಕೈಗಳನ್ನು ಸುಮ್ಮನೇ ಇಸಿದುಕೊಂಡರು. ಕೀಲಿ ಕೈ ಒಪ್ಪಿಸಿದ ರಾತ್ರಿ ಅವಳು ಅವಳ ಆಪ್ತೇ ಸದಸ್ಯಳೊಬ್ಬಳಿಗೆ ಫೋನು ಮಾಡಿದ್ದಳು. ಪ್ರೆಸಿಡೆಂಟ್ ಕೊನೆಯ ಪಕ್ಷ ಒಂದು ಕ್ರತಜ್ಣತೆಯನ್ನು ಸಲ್ಲಿಸಲಿಲ್ಲ ಎಂಬುದು ಅವಳ ದು:ಖವಾಗಿತ್ತು. ಆ ಜೀವ ಜುಜುಬಿ ಕ್ರತಜ್ಣತೆಯೊಂದರ ಮಾತಿಗೆ ಆಸೆ ಪಟ್ಟದ್ದು ಯಾಕಿರಬಹುದು? ಎಂಬುದು ನನಗೆ ಅರಗಿಸಲಾಗದ ಒಗಟಾಗಿತ್ತು.      

 

Rating
No votes yet