ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ

ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ

ಕವನ

 ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ.

ನಲ್ಲನೊಲವಿನ ಸುಧೆಯ  ನೆನಪ ತರಿಸಿ
ಕಲ್ಲ ಹೃದಯವದೇಕೆ ? ಬಳಲಿಸುವೆ ಮರೆಯದೆಲೆ
ಪಲ್ಲವಿಸಿದೊಲವ ಸಿರಿಯನು ನೆನಪಿಸಿ
 
 ಇನಿಯನಿರದಾಗೆನ್ನ ಹಾಡದಿರು ಕೋಗಿಲೆಯೆ
 ಸನಿಯವಿಲ್ಲದೆ ಬೆಂದೆ ವಿರಹದುರಿಯಲ್ಲಿ
 ತನುಮನಗಳಲ್ಲೇಕೊ ಹಿಂಡುತಿಹ ನೋವಿದೆಯೆ
 ಮನದನ್ನನಿಲ್ಲ ಮೀಯಲು ಗಾನ ಸುಧೆಯಲ್ಲಿ
 
ಒಲವನಿರದಾಗೆಲ್ಲ ಅರಳದಿರಿ ಪುಷ್ಪಗಳೆ
ಚೆಲುವನೊಲವಿನ ಪರಿಯ ಬಲ್ಲಿರೇನು?
ಕಲೆತ ಮಧು ಹೀರಿ ಮೇಲಕೆ ಹಾರುವಂಥ ಕಲೆ
ಕಲಿತ ಆರಡಿಯಲ್ಲ ನನ್ನ ಪ್ರಿಯತಮನು
 
ಪ್ರೇಮಿಯಿರದಾಗೆನ್ನ ಝೇಂಕರಿಸದಿರು ಭ್ರಮರ
ಪ್ರೇಮಿಸುವ ಪರಿಯ ನೀನೇನು ಬಲ್ಲೆ?
ಸುಮದಿಂದ ಸುಮಕೆ ಹಾರದೆ ಅರಸದೆಲೆ ಮಧುರ
ಅಮೃತವನು ಸವಿವನೆನ್ನಧರಗಳಲಿ
 
 
ಮನದನ್ನ ನಿರದಾಗ ಕಾಣದಿರಿ ಹಂಸಗಳೆ
ನನ್ನವಲ್ಲಭನ ಮನ ನಿಮಗಿಂತ ಧವಳ
ಕ್ಷಣ ದೂರವಾಗಲು ನಾನವಗಿದೊ ತಳಮಳ
ಎಣೆಯಿಲ್ಲವವಗೆ ಇಂಥವರು ವಿರಳ
 
ಪ್ರಿಯನೂರ ಹೊರಗಿರಲು ಬಾರದಿರು ಪೌರ್ಣಿಮೆಯೆ
ಪ್ರಿಯವಿವಲ್ಲವು ನಿನ್ನ ಜೊನ್ನ ಕಿರಣಗಳು
ಪಯಣಿಸಿಹ ಬಿಡಲಾರದೆನ್ನವನು ಕಾಯಕವೆ
ಕೈಲಾಸ ಎನ್ನುತ್ತ ನಿನ್ನಿನಿರುಳು
 
ದೇವನೂಲಿದಿಹ ಜೀವ ಭಾವ ಭಕ್ತಿಯ ಭಾವ
ಬೇವಸವಿದರು ನಗುತ ಸವಿಯನೀಯುತಲಿ
ಪಾವನವು ಇವನೊಲವು ಭಾವನೆಗಳವು ಹಲವು
ಯಾವ ಸಿರಿ ಸೊಗಸದು ನಲ್ಲ ನಿರದಲ್ಲಿ
 
 
 
 
 
 
 
 
 

Comments